ಕಾರ್ಗಲ್: ಶರಾವತಿ ಕಣಿವೆ ಮತ್ತು ಲಿಂಗನಮಕ್ಕಿ ಜಲಾನಯನ ಪ್ರದೇಶದಲ್ಲಿ ನಿರಂತರವಾಗಿ ಸುರಿಯುತ್ತಿರುವ ಮಳೆಗೆ ಲಿಂಗನಮಕ್ಕಿ ಅಣೆಕಟ್ಟೆಯಲ್ಲಿ ಸಂಗ್ರಹವಾಗಿರುವ ನೀರಿನ ಮಟ್ಟ 1,804 ಅಡಿಗೆ ತಲುಪಿದ್ದು, ಸದ್ಯದಲ್ಲೇ ಜಲಾಶಯ ಭರ್ತಿಯಾಗಲಿದೆ.
ಗರಿಷ್ಠ 1,819 ಅಡಿ ಸಂಗ್ರಹ ಸಾಮರ್ಥ್ಯ ಹೊಂದಿರುವ ಅಣೆಕಟ್ಟೆಯು 156 ಟಿಎಂಸಿ ಅಡಿ ನೀರು ಹಿಡಿದಿಡಬಲ್ಲದು. ಪ್ರಸ್ತುತ ಜಲಾಶಯದಲ್ಲಿ 105 ಟಿಎಂಸಿ ಅಡಿ ನೀರು ಸಂಗ್ರಹವಾಗಿದ್ದು, ಒಟ್ಟಾರೆ ಸಾಮರ್ಥ್ಯದ ಶೇ ಶೇ 70ರಷ್ಟು ಭರ್ತಿಯಾಗಿದೆ.
ಅಣೆಕಟ್ಟೆಯ ಕೆಳದಂಡೆಯ ಪ್ರದೇಶಗಳಾದ ಮಳಲಿ, ಮರಳುಕೋರೆ, ಯಡ್ಡಳ್ಳಿ, ಗಿಳಾಲಗುಂಡಿ, ಸೀತಾಕಟ್ಟೆ, ಗೇರುಸೊಪ್ಪ ಮುಂತಾದ ಪ್ರದೇಶಗಳ ನದಿಪಾತ್ರದ ನಿವಾಸಿಗಳಿಗೆ ಪ್ರವಾಹದ ಮುನ್ಸೂಚನೆ ನೀಡಲಾಗಿದೆ ಎಂದು ಅಧೀಕ್ಷಕ ಎಂಜಿನಿಯರ್ ಆರ್. ಶಿವಕುಮಾರ್ ತಿಳಿಸಿದ್ದಾರೆ.
ಕಾರ್ಗಲ್ ಸಮೀಪದ ಲಿಂಗನಮಕ್ಕಿ ಜಲಾಶಯದ ರಮ್ಯ ನೋಟ
ಶರಾವತಿ ಕಣಿವೆಯಾದ್ಯಂತ ಹರಿಯುವ ಮಳೆ ನೀರನ್ನು ಬಳಸಿ ಕರ್ನಾಟಕ ವಿದ್ಯುತ್ ನಿಗಮ (ಕೆಪಿಸಿ) ವಿದ್ಯುತ್ ಉತ್ಪಾದನೆಯಲ್ಲಿ ತೊಡಗಿದೆ. ಅಣೆಕಟ್ಟೆಯ ನೀರಿನಿಂದ ಪ್ರಮುಖ 4 ಜಲ ವಿದ್ಯುದಾಗರಗಳಲ್ಲಿ 24 ವಿದ್ಯುತ್ ಘಟಕಗಳಿಂದ 1,530 ಮೆಗಾವಾಟ್ ವಿದ್ಯುತ್ ಉತ್ಪಾದನೆ ಮಾಡಲಾಗುತ್ತದೆ.
ಮಳೆ ನೀರನ್ನು ಸಮರ್ಥವಾಗಿ ಬಳಸುವಲ್ಲಿ ಕೆಪಿಸಿ ನಿಗಮದ ತಜ್ಞರ ತಂಡ ಕಾರ್ಯ ನಿರ್ವಹಿಸುತ್ತಿದೆ ಎಂದು ಸಿವಿಲ್ ವಿಭಾಗದ ಉಸ್ತುವಾರಿ ಮುಖ್ಯ ಎಂಜಿನಿಯರ್ ಮಾದೇಶ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.