
ತೀರ್ಥಹಳ್ಳಿ: ಗ್ರಾಮೀಣ ವಿದ್ಯಾರ್ಥಿಗಳ ಭವಿಷ್ಯಕ್ಕಾಗಿ ಕಂಪ್ಯೂಟರ್ ಕಲಿಕೆ ಅತ್ಯಗತ್ಯ. ಉಪಕರಣಗಳನ್ನು ಜೋಪಾನವಾಗಿ ಬಳಕೆ ಮಾಡಿಕೊಂಡು ಅದರ ನಿರ್ವಹಣೆಯನ್ನು ಕಾಲಕಾಲಕ್ಕೆ ಮಾಡಬೇಕು ಎಂದು ಲಯನ್ಸ್ ಕ್ಲಬ್ ಬೆಂಗಳೂರು ಮೆಟ್ರೊ ಅಧ್ಯಕ್ಷ ರಾಮಚಂದ್ರಯ್ಯ ಹೇಳಿದರು.
ಲಯನ್ಸ್ ಕ್ಲಬ್ ಹೊಸನಗರ ಸಹಯೋಗದಲ್ಲಿ ಕಲ್ಕೊಪ್ಪ ತಿಪ್ಪೇಸ್ವಾಮಿ ಕನ್ನಡ ಮಾಧ್ಯಮ ಪ್ರೌಢಶಾಲೆ, ಕನ್ನಂಗಿ ಸರ್ಕಾರಿ ಕನ್ನಡ ಮಾಧ್ಯಮ ಪ್ರೌಢಶಾಲೆ, ಕುಡುಮಲ್ಲಿಗೆ ಸರ್ಕಾರಿ ಕನ್ನಡ ಮಾಧ್ಯಮ ಪ್ರೌಢಶಾಲೆಗಳಿಗೆ ಕಂಪ್ಯೂಟರ್ ವಿತರಣೆ ಮತ್ತು ದಂತ ತಪಾಸಣಾ ಶಿಬಿರ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
‘ಸರ್ಕಾರಿ ಶಾಲಾ ವಿದ್ಯಾರ್ಥಿಗಳ ಬೆಳವಣಿಗೆ ದೃಷ್ಟಿಯಿಂದ ಈಗಾಗಲೇ ಅನೇಕ ಶಾಲೆಗಳಿಗೆ ಕಂಪ್ಯೂಟರ್ ವಿತರಣೆ ಮಾಡಿದ್ದೇವೆ. ಅದನ್ನು ಸುಸ್ಥಿತಿಯಲ್ಲಿ ಇಟ್ಟುಕೊಳ್ಳುವ ಜವಾಬ್ದಾರಿಯನ್ನು ಶಿಕ್ಷಕರು ಮತ್ತು ಶಾಲಾಭಿವೃದ್ಧಿ ಸಮಿತಿ ವಹಿಸಿಕೊಳ್ಳಬೇಕು. ಸದ್ಬಳಕೆ ಆಗುತ್ತಿದ್ದರೆ ಹೆಚ್ಚಿನ ಉಪಕರಣ ನೀಡಲು ಸಿದ್ಧರಿದ್ದೇವೆ’ ಎಂದರು.
ಸುಬ್ಬಯ್ಯ ವೈದ್ಯಕೀಯ ಕಾಲೇಜಿನ ಡಾ.ವಿವೇಕ್ ನೇತೃತ್ವದ ತಂಡದಿಂದ ದಂತ ತಪಾಸಣೆ ನಡೆಯಿತು.
ಧರ್ಮಪ್ಪ, ಬೇಗುವಳ್ಳಿ ಸತೀಶ್, ಸಾಲೇಕೊಪ್ಪ ರಾಮಚಂದ್ರ, ತೂದೂರು ಶಿವಾನಂದ, ಬೇಗುವಳ್ಳಿ ನಾಗರಾಜ್, ಕವಿರಾಜ್ ಇದ್ದರು.