ADVERTISEMENT

ವನ್ಯಜೀವಿಗಳಿಗೆ ವರವಾದ ಲಾಕ್‌ಡೌನ್

ಕಾಡಿನಲ್ಲಿಯೇ ಉಳಿದ ಕಾಡುಪ್ರಾಣಿಗಳ ಪ್ರಮುಖ ಆಹಾರ ಹಲಸು

ಶಿವಾನಂದ ಕರ್ಕಿ
Published 2 ಮೇ 2021, 6:35 IST
Last Updated 2 ಮೇ 2021, 6:35 IST
ತೀರ್ಥಹಳ್ಳಿ ತಾಲ್ಲೂಕಿನ ಅರಣ್ಯ ಪ್ರದೇಶದಲ್ಲಿ ಸಹಜವಾಗಿ ಬೆಳೆದ ಹಲಸು
ತೀರ್ಥಹಳ್ಳಿ ತಾಲ್ಲೂಕಿನ ಅರಣ್ಯ ಪ್ರದೇಶದಲ್ಲಿ ಸಹಜವಾಗಿ ಬೆಳೆದ ಹಲಸು   

ತೀರ್ಥಹಳ್ಳಿ: ಕೊರೊನಾ ಎರಡನೇ ಅಲೆ ಕಾರಣ ಹೇರಿರುವ ಲಾಕ್‌ಡೌನ್ ಕಾಡು ಪ್ರಾಣಿಗಳಿಗೆ ವರವಾಗಿ ಪರಿಣಮಿಸಿದೆ. ಕಾಡಿನಲ್ಲಿ ಸಹಜವಾಗಿ ಬೆಳೆಯುವ ವನ್ಯಜೀವಿಗಳ ಪ್ರಮುಖ ಆಹಾರ ಹಲಸಿನ ಬೆಳೆ ಮಹಾನಗರ ಸೇರುವುದಕ್ಕೆ ತಡೆ ಬಿದ್ದಂತಾಗಿದೆ.

ನಗರ ಹಾಗೂ ಹೊರ ರಾಜ್ಯಗಳಿಗೆ ದೊಡ್ಡ ಪ್ರಮಾಣದಲ್ಲಿ ಸಾಗಣೆಯಾಗುತ್ತಿದ್ದ ಮಲೆನಾಡಿನ ಕಾಡು ಉತ್ಪನ್ನವಾದ ಹಲಸು ಮಾರಾಟಕ್ಕೆ ಲಾಕ್‌ಡೌನ್ ಅಡ್ಡಿಯಾಗಿದೆ. ಕಾಡಿನಲ್ಲಿ ಯಥೇಚ್ಛವಾಗಿ ಬೆಳೆಯುವ ಹಲಸಿನ ಹಣ್ಣನ್ನು ತಿಂದು ಕಾಡು ಪ್ರಾಣಿಗಳು ಹೊಟ್ಟೆ ತುಂಬಿಸಿಕೊಳ್ಳುತ್ತಿವೆ.

ಮಲೆನಾಡಿನ ಯಾವ ಭಾಗದ ರಸ್ತೆಯಲ್ಲಿ ಸಂಚರಿಸಿದರೂ ವಿವಿಧ ಬಗೆಯ ಹಲಸಿನ ಹಣ್ಣುಗಳ ಮಾರಾಟ ಏಪ್ರಿಲ್‌ನಿಂದ ಜೂನ್‌ವರೆಗೆ ಭರ್ಜರಿ ಯಾಗಿ ನಡೆಯುತ್ತದೆ. ಪ್ರಯಾಣಿಕರು ಮಲೆನಾಡಿನ ಹಲಸಿನ ಹಣ್ಣನ್ನು ಕೊಳ್ಳುತ್ತಿದ್ದರು. ಇದರಿಂದ ಸಣ್ಣ ಪುಟ್ಟ ವ್ಯಾಪಾರಸ್ಥರು, ಅಸಹಾಯಕ ವೃದ್ಧರು ತಮ್ಮ ದಿನದ ಆದಾಯವನ್ನು ಗಳಿಸುತ್ತಿದ್ದರು. ಈಗ ಪ್ರಯಾಣಿಕರು ಒಂದು ಊರಿನಿಂದ ಇನ್ನೊಂದು ಊರಿಗೆ ಸಂಚರಿಸುವುದು ಕಷ್ಟವಾಗಿ ರುವ ಕಾರಣ ಬೀದಿ ಬದಿಯ ಹಲಸಿನ ಮಾರಾಟ ಬಹುತೇಕ ಕಾಣದಂತಾಗಿದೆ.

ADVERTISEMENT

ಅಲ್ಲದೇ, ಕಾಡಿನಂಚಿಗೆ ದೊಡ್ಡ ದೊಡ್ಡ ವಾಹನಗಳನ್ನು ತೆಗೆದುಕೊಂಡು ಹೋಗಿ ಕಾಡಿ ನಲ್ಲಿರುವ ಹಲಸಿನ ಹಣ್ಣನ್ನು ಕಿತ್ತು ದೂರದ ಬೆಂಗಳೂರು, ಮುಂಬೈ ಮಹಾ ನಗರಗಳಿಗೆ ಸಾಗಿಸುವುದು ನಿಂತಿದೆ.

‘ಕಾಡಿನಲ್ಲಿ ಬೆಳೆಯುವ ಹಲಸಿನ ಫಸಲು ಮಂಗ, ಮುಷಿಯ, ಕಾಡುಹಂದಿ, ಕಾಡುಕೋಣ, ಕಾಡುಕುರಿ, ಬರ್ಕ, ಚಿಪ್ಪುಹಂದಿ, ನರಿ, ಕಡವೆ, ಜಿಂಕೆ ಹೀಗೆ ಆನೆಯಿಂದ ಹಿಡಿದು ಇರುವೆವರೆಗೂ ಆಹಾರವನ್ನು ನೀಡುತ್ತದೆ. ಅನೇಕ ಬಗೆಯ ಪ್ರಾಣಿ, ಪಕ್ಷಿಗಳು ಹಲಸಿನ ಹಣ್ಣನ್ನು ತಿಂದು ಬದುಕುತ್ತವೆ. ಅಸಂಖ್ಯ ಜೀವರಾಶಿಯ ಹೊಟ್ಟೆ ತುಂಬಿಸುವ ಕಾಡಿನ ಹಣ್ಣುಗಳ ಮಾರಾಟಕ್ಕೆ ಕಡಿವಾಣ ಹಾಕಬೇಕು. ಕಾಡಿನ ಹಣ್ಣುಗಳು ವನ್ಯಜೀವಿಗಳ ಆಹಾರ. ಅದನ್ನು ಯಾರೂ ಕಿತ್ತುಕೊಳ್ಳ ಬಾರದು’ ಎನ್ನುತ್ತಾರೆ ಪರಿಸರ ಪ್ರೇಮಿ ರಮೇಶ್.

‘ಬಿಸಿಲಿನ ಧಗೆಯಿಂದ ಬಾಯಾರಿದ ಕಾಡು ಪ್ರಾಣಿಗಳು ಸುಲಭವಾಗಿ ಸಿಗುವ ಹಲಸಿನ ಹಣ್ಣನ್ನು ತಿಂದು ಬಾಯಾರಿಕೆ, ಹಸಿವನ್ನು ನೀಗಿಸಿಕೊಳ್ಳುತ್ತವೆ. ಪ್ರಕೃತಿ ಕಾಡು ಪ್ರಾಣಿಗಳಿಗೆ ನೀಡಿದ ಆಹಾರವನ್ನು ನಾವು ಕಿತ್ತುಕೊಳ್ಳಬಾರದು. ಇದ ರಿಂದ ಎಷ್ಟೇ ಲಾಭ ಬಂದರೂ ನಾವು ಕಾಡು ಪ್ರಾಣಿಗಳಿಗೆ ಅನ್ಯಾಯ ಮಾಡಿದಂತಾಗುತ್ತದೆ. ಕಾಡುಪ್ರಾಣಿಗಳಿಗೆ ಕಾಡಿನಲ್ಲಿ ಆಹಾರ ಸಿಕ್ಕರೆ ಅವು ಕೃಷಿ ಜಮೀನಿನ ಮೇಲೆ ದಾಳಿ ಮಾಡುವುದು ಕಡಿಮೆಯಾಗುತ್ತದೆ’ ಎನ್ನುತ್ತಾರೆ ಕೃಷಿಕ ಕೊಪ್ಪಲು ಶ್ರೀನಾಥ್.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.