ಶಿವಮೊಗ್ಗ: 'ಶೋಭಾ ಕರಂದ್ಲಾಜೆ ಗೆ ಹಠ ಹಿಡಿದು ಟಿಕೆಟ್ ಕೊಡಿಸಿದ ಯಡಿಯೂರಪ್ಪ, ನನ್ನ ಪುತ್ರ ಕಾಂತೇಶಗೆ ಹಾವೇರಿ ಕ್ಷೇತ್ರದಿಂದ ಟಿಕೆಟ್ ಕೊಡಿಸಲಿಲ್ಲ. ಬಸವರಾಜ ಬೊಮ್ಮಾಯಿ ಬೇಡ ಎಂದರೂ ಅವರಿಗೆ ಟಿಕೆಟ್ ಕೊಡಿಸಿದ್ದಾರೆ' ಎಂದು ಮಾಜಿ ಉಪಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ ಆಕ್ರೋಶ ವ್ಯಕ್ತಪಡಿಸಿದರು.
ನಗರದಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು,
'ಶೋಭಾ ಕರಂದ್ಲಾಜೆ ಅವರು ದೆಹಲಿಗೆ ಹೋಗಿ ಟಿಕೆಟ್ ಕೇಳಲಿಲ್ಲ. ಯಡಿಯೂರಪ್ಪ ಅವರ ಪರವಾಗಿ ಹೈಕಮಾಂಡ್ ಜೊತೆ ಮಾತನಾಡಿ ಟಿಕೆಟ್ ಕೊಡಿಸಿದ್ದಾರೆ' ಎಂದರು.
'ಹಿಂದುತ್ವದ ಪರ ಹಾಗೂ ಸಂಘ ನಿಷ್ಠ ಬಿಜೆಪಿ ಮುಖಂಡರನ್ನು ಯಡಿಯೂರಪ್ಪ ಬದಿಗೆ ಸರಿಸುವ ಕೆಲಸ ಮಾಡಿದ್ದಾರೆ. ಅದಕ್ಕೆ ನಾನು, ನಳಿನ್ ಕುಮಾರ ಕಟೀಲ್, ಪ್ರತಾಪಸಿಂಹ, ಸಿ.ಟಿ.ರವಿ, ಡಿ.ವಿ.ಸದಾನಂದಗೌಡ, ಬಸನಗೌಡ ಪಾಟೀಲ ಯತ್ನಾಳ ಸಾಕ್ಷಿ' ಎಂದು ವಾಗ್ದಾಳಿ ನಡೆಸಿದರು.
ಈ ವಿಚಾರದಲ್ಲಿ ನನ್ನ ಅಭಿಮಾನಿಗಳು ಏನು ಹೇಳುತ್ತಾರೊ ಅದನ್ನು ಕೇಳುತ್ತೇನೆ.
ಪಕ್ಷದ ನಿಷ್ಠಾವಂತ ಕಾರ್ಯಕರ್ತರನ್ನು ಬಿಜೆಪಿಯಲ್ಲಿ ಕಡೆಗಣಿಸುತ್ತಿದ್ದಾರೆ. ಪಕ್ಷ ಕರ್ನಾಟಕದಲ್ಲಿ ಒಂದು ಕುಟುಂಬದ ಹಿಡಿತದಲ್ಲಿದೆ. ಯಡಿಯೂರಪ್ಪ ವೈಯಕ್ತಿಕ ಹಿತಾಸಕ್ತಿಯಿಂದ ತಾಯಿಯ ಕುತ್ತಿಗೆ ಹಿಸುಕುತ್ತಿದ್ದಾರೆ
ಪಕ್ಷ ಉಳಿಸಬೇಕಿದೆ. ಹೀಗಾಗಿ ಅದರ ವಿರುದ್ಧ ನಾನು ಧ್ವನಿ ಎತ್ತಲಿದ್ದೇನೆ ಎಂದರು.
ಕಾಂತೇಶ್ ಗೆ ಪದವೀಧರ ಕ್ಷೇತ್ರದ ಟಿಕೆಟ್ ಕೊಡಿಸುತ್ತೇವೆ ಎಂದು ಕರ್ನಾಟಕ ಚುನಾವಣೆ ಉಸ್ತುವಾರಿ ರಾಧಾಮೋಹನ್ ಹೇಳಿದ್ದಾರೆ. ನಾನು ಇನ್ನು ಆ ಬಗ್ಗೆ ಏನು ತೀರ್ಮಾನ ಮಾಡಿಲ್ಲ.
'ನಾನು ಯಾವಾಗಲೂ ಮೋದಿ ಪರವಾಗಿಯೇ ಇರುತ್ತೇನೆ. ಪಕ್ಷೇತರನಾಗಿ ಸ್ಪರ್ಧೆ ಮಾಡಿದರೂ ನನ್ನ ಬೆಂಬಲ ಅವರಿಗೆ ಇರಲಿದೆ' ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.