ADVERTISEMENT

ಆನಂದಪುರ:ಹೆದ್ದಾರಿಯಲ್ಲಿ ಲಾರಿ ಪಲ್ಟಿ, ರಸ್ತೆಗೆ ಬಿದ್ದ ಕೋಳಿಗಳ ಹೊತ್ತೊಯ್ದ ಜನರು!

​ಪ್ರಜಾವಾಣಿ ವಾರ್ತೆ
Published 2 ಜುಲೈ 2025, 6:50 IST
Last Updated 2 ಜುಲೈ 2025, 6:50 IST
   

ಶಿವಮೊಗ್ಗ: ಸಾಗರ ತಾಲ್ಲೂಕಿನ ಆನಂದಪುರ-ಹೊಸೂರು ಹಾಗೂ ಸುತ್ತಲಿನ ನಿವಾಸಿಗಳಿಗೆ ಆದ್ರೆ ಮಳೆಯ ತಂಪಿನ ನಡುವೆ ಬುಧವಾರ ಕೋಳಿ ಊಟದ ಗಮ್ಮತ್ತು ಬಿಸಿಯಾಗಿಸಿತು.

ಹೊಸೂರು-ಆನಂದಪುರ ನಡುವಿನ ರಾಷ್ಟ್ರೀಯ ಹೆದ್ದಾರಿ 206ರ ತಿರುವಿನಲ್ಲಿ ಬೆಳಿಗ್ಗೆ ಕೋಳಿ ತುಂಬಿದ್ದ ಲಾರಿ ಪಲ್ಟಿಯಾಗಿ ರಸ್ತೆಗೆ ಬಿದ್ದ ಕೋಳಿಗಳನ್ನು ಸ್ಥಳೀಯರು, ರಸ್ತೆಯಲ್ಲಿ ಓಡಾಡುವವರು ಉಚಿತವಾಗಿ ಕೊಂಡೊಯ್ದರು.

ತುಮಕೂರಿನ ತಾಜ್ ಟ್ರೇಡರ್ಸ್ ಗೆ ಸೇರಿದ ಲಾರಿಯಲ್ಲಿ ನಾಲ್ಕೂವರೆ ಟನ್ ತೂಕದಷ್ಟು ಕೋಳಿಗಳನ್ನು ಸಾಗರಕ್ಕೆ ಸಾಗಣೆ ಮಾಡಲಾಗುತ್ತಿತ್ತು.

ADVERTISEMENT

ಅಪಘಾತದಿಂದ ಬಹಳಷ್ಟು ಕೋಳಿಗಳು ಸಾವಿಗೀಡಾಗಿದ್ದು, ಇನ್ನೂ ಕೆಲವು ಜೀವನ್ಮರಣದ ಸ್ಥಿತಿಯಲ್ಲಿದ್ದವು. ರಸ್ತೆಯಲ್ಲಿ ಸಾಗುತ್ತಿದ್ದ ವಾಹನಗಳ ನಿಲ್ಲಿಸಿ ಕೆಲವರು ಕೋಳಿಗಳ ಕೊಂಡೊಯ್ದರು.

'ಆದ್ರಿ ಮಳೆಗೆ ಥಂಡಿ ಹಿಡಿದಿದೆ. ಇವತ್ತು ಮನೆಯಲ್ಲಿ ಕೋಳಿ ಊಟದ ಗಮ್ಮತ್ತು. ಬಹಳಷ್ಟು ಖಾದ್ಯ ಮಾಡಬಹುದು ಕಣ್ರಿ' ಎಂದು ಕೋಳಿಗಳ ಹಿಡಿದು ಹೊರಟ ಆನಂದಪುರದ ಕೂಲಿ ಕಾರ್ಮಿಕ ಭಾಸ್ಕರ ನಕ್ಕರು.

'ತಿರುವಿನಲ್ಲಿ ದಿಢೀರನೆ ಕಾರಿನವನು ಅಡ್ಡಬಂದ ಕಾರಣ ನಿಯಂತ್ರಣ ತಪ್ಪಿತು. ಸತ್ತಿರುವ ಕೋಳಿಗಳ ಒಯ್ದು ಏನು ಮಾಡುವುದು. ಜನರು ಒಯ್ಯಲು ಬಿಡಿ. ಅಪಘಾತದಿಂದ ₹8 ಲಕ್ಷದಷ್ಟು ಹಾನಿಯಾಗಿದೆ' ಎಂದು ಲಾರಿ ಚಾಲಕ ಫಯಾಜ್ 'ಪ್ರಜಾವಾಣಿ' ಗೆ ಪ್ರತಿಕ್ರಿಯಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.