ADVERTISEMENT

ಶಿವಮೊಗ್ಗ: 136 ಶಾಲೆಗಳಲ್ಲಿಲ್ಲ ಕಾಯಂ ಶಿಕ್ಷಕರು! - ಅಚ್ಚರಿಗೊಳಗಾದ ಸಚಿವ ಮಧು ಬಂಗಾರಪ್ಪ

​ಪ್ರಜಾವಾಣಿ ವಾರ್ತೆ
Published 3 ಜೂನ್ 2023, 14:37 IST
Last Updated 3 ಜೂನ್ 2023, 14:37 IST
ಮಧು ಬಂಗಾರಪ್ಪ
ಮಧು ಬಂಗಾರಪ್ಪ   

ಶಿವಮೊಗ್ಗ: ‘ಜಿಲ್ಲೆಯ ಮಲೆನಾಡು ಭಾಗದ 136 ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಗಳಲ್ಲಿ ಕಾಯಂ ಶಿಕ್ಷಕರೇ ಇಲ್ಲ. ಅವೆಲ್ಲವೂ ಶೂನ್ಯ ಶಿಕ್ಷಕರ ಶಾಲೆಗಳು’ ಎಂಬ ಸಂಗತಿ ತಿಳಿದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಸಚಿವ ಮಧು ಬಂಗಾರಪ್ಪ ಅಚ್ಚರಿಗೊಳಗಾದರು.

ಇಲ್ಲಿನ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಶನಿವಾರ ನಡೆದ ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಡಿಡಿಪಿಐ ಸಿ.ಆರ್. ಪರಮೇಶ್ವರಪ್ಪ ಅವರು ಕಾಯಂ ಶಿಕ್ಷಕರಿಲ್ಲದ ಶಾಲೆಗಳ ಮಾಹಿತಿ ನೀಡಿದರು.

ಈ ಶಾಲೆಗಳಲ್ಲಿ ಕೆಲಸ ಮಾಡಲು ಯಾವುದೇ ಶಿಕ್ಷಕರು ಮುಂದಾಗುತ್ತಿಲ್ಲ. ವರ್ಗಾವಣೆ ವೇಳೆ ಕೌನ್ಸಿಲಿಂಗ್‌ನಲ್ಲೂ ಈ ಶಾಲೆಗಳನ್ನು ಆಯ್ಕೆ ಮಾಡಿಕೊಳ್ಳುವುದಿಲ್ಲ. ಇದರಿಂದಾಗಿ ಆ ಶಾಲೆಗಳ ವಿದ್ಯಾರ್ಥಿಗಳು ಅತಿಥಿ ಶಿಕ್ಷಕರನ್ನು ಅವಲಂಬಿಸಿದ್ದಾರೆ ಎಂದು ಡಿಡಿಪಿಐ ಅಸಹಾಯಕತೆ ವ್ಯಕ್ತಪಡಿಸಿದರು.

ADVERTISEMENT

ತಲೆತಗ್ಗಿಸುವ ಸಂಗತಿ: ‘ಜಿಲ್ಲೆಯಲ್ಲಿ ಇಷ್ಟೊಂದು ಪ್ರಮಾಣದ ಶಾಲೆಗಳಲ್ಲಿ ಕಾಯಂ ಶಿಕ್ಷಕರ ಕೊರತೆ ಇದೆಯೆಂದರೆ, ಇನ್ನು ಹಿಂದುಳಿದ ಜಿಲ್ಲೆಗಳ ಕಥೆಯೇನು? ಇದು ತಲೆ ತಗ್ಗಿಸುವ ಸಂಗತಿ’ ಎಂದು ಸಚಿವರು ಹೇಳಿದರು.

‘ಈ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳಲು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೊಂದಿಗೆ ಚರ್ಚಿಸಿ ಶಿಕ್ಷಕರ ವರ್ಗಾವಣೆ ನಿಯಮಗಳಿಗೆ ತಿದ್ದುಪಡಿ ತರಲು ಪ್ರಯತ್ನಿಸುವೆ’ ಎಂದ ಅವರು, ‘ಶಿವಮೊಗ್ಗ, ಭದ್ರಾವತಿ ತಾಲ್ಲೂಕುಗಳಲ್ಲಿರುವ ಹೆಚ್ಚುವರಿ ಶಿಕ್ಷಕರನ್ನು ಆ ಶಾಲೆಗಳಿಗೆ ವರ್ಗಾಯಿಸಿ. ಈ ವಿಚಾರದಲ್ಲಿ ಯಾರ ಪ್ರಭಾವಕ್ಕೂ ಮಣಿಯದೆ ಮುಂದುವರಿಯಿರಿ’ ಎಂದು ಡಿಡಿಪಿಐಗೆ ಸೂಚಿಸಿದರು.

‘ಪಠ್ಯಪುಸ್ತಕ ಪರಿಷ್ಕರಣೆ ಖಚಿತ’ 

ಶಿವಮೊಗ್ಗ: ‘ಪಠ್ಯಪುಸ್ತಕಗಳನ್ನು ಪರಿಷ್ಕರಿಸುವುದು ಖಚಿತ. ಅದರಲ್ಲಿ ಯಾವುದೇ ಗೊಂದಲವಿಲ್ಲ’ ಎಂದು ಸಚಿವ ಮಧು ಬಂಗಾರಪ್ಪ ಸ್ಪಷ್ಟಪಡಿಸಿದರು. ‘ಪಠ್ಯ ಪರಿಷ್ಕರಣೆಗೆ ಸ್ವಲ್ಪ ಸಮಯ ಬೇಕು. ಹಂತ ಹಂತವಾಗಿ ಎಲ್ಲವನ್ನೂ ನಿರ್ವಹಿಸುತ್ತೇವೆ. ಯಾವ ಯಾವ ಭಾಗವನ್ನು ಪರಿಷ್ಕರಣೆಗೆ ಒಳ‍ಪಡಿಸಬೇಕು ಎಂಬುದರ ಬಗ್ಗೆ ಪರಿಶೀಲನೆ ನಡೆಯುತ್ತಿದೆ’ ಎಂದು ಸುದ್ದಿಗಾರರಿಗೆ ತಿಳಿಸಿದರು. ‘ನಾನು ಅಧಿಕಾರ ವಹಿಸಿಕೊಳ್ಳುವ ಹೊತ್ತಿಗೆ ಪಠ್ಯಪುಸ್ತಕ ಮುದ್ರಣ ಪೂರ್ಣಗೊಂಡು ಶಾಲೆಗಳಿಗೆ ಕಳುಹಿಸಲಾಗಿತ್ತು. ಮಕ್ಕಳ ಶಿಕ್ಷಣಕ್ಕೆ ಯಾವುದೇ ತೊಂದರೆ ಆಗದಂತೆ ಮುಂಜಾಗ್ರತೆ ವಹಿಸಿ ಪಠ್ಯ ಪರಿಷ್ಕರಣೆ ಮಾಡಬೇಕಿದೆ. ಈಗಾಗಲೇ ಪಠ್ಯಪುಸ್ತಕ ವಿತರಣೆಯಾಗಿದ್ದರೂ ಪರಿಷ್ಕರಣೆಗೆ ಅವಕಾಶವಿದೆ. ಅದನ್ನು ಕಾನೂನುಬದ್ಧವಾಗಿ ಮಾಡಲಾಗುವುದು’ ಎಂದು ಹೇಳಿದರು. ‘ಪರಿಷ್ಕರಣೆ ವಿಚಾರದಲ್ಲಿ ನನ್ನ ಸ್ವಾರ್ಥ ಏನೂ ಇಲ್ಲ. ಮಕ್ಕಳ ಹಿತ ಭವಿಷ್ಯ ಗಮನದಲ್ಲಿಟ್ಟುಕೊಂಡು ಈ ಕಾರ್ಯಕ್ಕೆ ಕೈ ಹಾಕಿದ್ದೇವೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.