
ಸಾಗರ: ‘ಕಾನೂನಿನ ನಿಯಮಗಳು ಇರುವುದೇ ಬಡವರಿಗೆ ಸಹಾಯವಾಗಲೆಂದು. ಎಲ್ಲದಕ್ಕೂ ಕಾನೂನಿನ ಹೆಸರು ಹೇಳಿ ಜನರಿಗೆ ತೊಂದರೆ ಕೊಡುವ ಮನೋಭಾವವನ್ನು ಬದಲಿಸಿಕೊಳ್ಳಬೇಕು. ಬಡವರಿಗೆ ಅನುಕೂಲವಾಗುವ ರೀತಿಯಲ್ಲಿ ಕಾನೂನು ಪಾಲಿಸಿ’ ಎಂದು ಅಧಿಕಾರಿ, ನೌಕರರಿಗೆ ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಕಿವಿಮಾತು ಹೇಳಿದರು.
ತಾಲ್ಲೂಕಿನ ತಾಳಗುಪ್ಪ ಗ್ರಾಮದಲ್ಲಿ ಮಂಗಳವಾರ ನಡೆದ ತಾಳಗುಪ್ಪ ಹೋಬಳಿ ವ್ಯಾಪ್ತಿಯ ಜನಸಂಪರ್ಕ ಸಭೆಯಲ್ಲಿ ಸಾರ್ವಜನಿಕರಿಂದ ಅಹವಾಲು ಸ್ವೀಕರಿಸಿ ಮಾತನಾಡಿದ ಅವರು, ‘ಸಂಧ್ಯಾ ಸುರಕ್ಷಾ, ವಿಧವಾ ವೇತನ, ವೃದ್ಧಾಪ್ಯ ವೇತನದಂತಹ ಸವಲತ್ತುಗಳನ್ನು ಮಂಜೂರು ಮಾಡುವಾಗ ಉದಾರ ಮನೋಭಾವ ತೋರಬೇಕು’ ಎಂದು ಅವರು ಸೂಚಿಸಿದರು.
‘ತಾಳಗುಪ್ಪ ಹೋಬಳಿಯಲ್ಲಿ ಸಂಧ್ಯಾ ಸುರಕ್ಷಾ, ವೃದ್ಧಾಪ್ಯ ವೇತನಕ್ಕೆ ಸಲ್ಲಿಸಿದ ಬಹುತೇಕ ಅರ್ಜಿಗಳು ವಜಾ ಆಗುತ್ತಿವೆ’ ಎಂಬ ದೂರಿನ ಬಗ್ಗೆ ಪ್ರತಿಕ್ರಿಯಿಸಿದ ಸಚಿವರು, ‘ಅನವಶ್ಯಕವಾಗಿ ಅರ್ಜಿಗಳನ್ನು ವಜಾ ಮಾಡಿದ್ದರೆ ಅಂತಹ ಗ್ರಾಮ ಲೆಕ್ಕಿಗರನ್ನು, ಕಂದಾಯ ಅಧಿಕಾರಿಗಳನ್ನು ವಜಾ ಮಾಡಿ’ ಎಂದು ಉಪವಿಭಾಗಾಧಿಕಾರಿಗೆ ತಾಕೀತು ಮಾಡಿದರು.
‘ಶರಾವತಿ ಹಿನ್ನೀರಿನ ಪ್ರದೇಶದಿಂದ ಸಾಗರ ನಗರಕ್ಕೆ ಕುಡಿಯುವ ನೀರು ಪೂರೈಸಲಾಗುತ್ತಿದೆ. ಇದೇ ಮಾರ್ಗದಲ್ಲಿ ತಾಳಗುಪ್ಪ ಹೋಬಳಿಯ 28 ಗ್ರಾಮಗಳಿಗೆ ಬಹುಗ್ರಾಮ ಕುಡಿಯುವ ನೀರಿನ ಯೋಜನೆಯಡಿ ನೀರು ಪೂರೈಸಬೇಕು ಎಂಬ ಬೇಡಿಕೆ ಬಹುಕಾಲದಿಂದ ಈಡೇರಿಲ್ಲ’ ಎಂದು ಮರತ್ತೂರು ಗ್ರಾಮಸ್ಥರು ಅರ್ಜಿ ಸಲ್ಲಿಸಿದರು.
‘ಈ ಸಂಬಂಧ ಸಾಗರದ ನಗರಸಭೆ ಹಾಗೂ ಗ್ರಾಮೀಣ ಕುಡಿಯುವ ನೀರು ಹಾಗೂ ನೈರ್ಮಲ್ಯ ಇಲಾಖೆ ನಡುವೆ ತಿಳಿವಳಿಕೆಯ ಒಡಂಬಡಿಕೆ ಆಗಬೇಕಿದೆ. ಸಾಗರ ನಗರಕ್ಕೆ ಈಗ ಪೂರೈಕೆಯಾಗುತ್ತಿರುವ ನೀರಿನ ಪ್ರಮಾಣ ಕಡಿಮೆಯಾಗದಂತೆ ನೋಡಿಕೊಳ್ಳಬೇಕಿದೆ’ ಎಂದು ಎಂಜಿನಿಯರ್ ಗುರುಕೃಷ್ಣ ಶೆಣೈ ತಿಳಿಸಿದರು.
‘ಈ ಕುರಿತು ಸಾಗರದ ಶಾಸಕ ಗೋಪಾಲಕೃಷ್ಣ ಬೇಳೂರು ಅವರ ಜೊತೆ ಚರ್ಚಿಸಿ ಈ ಭಾಗದ 28 ಹಳ್ಳಿಗಳಿಗೆ ಕುಡಿಯುವ ನೀರು ಪೂರೈಕೆ ಆಗುವಂತೆ ನೋಡಿಕೊಳ್ಳಲಾಗುವುದು. ಈ ಬೇಡಿಕೆ ಈಡೇರಿಸಲು ಒತ್ತಾಯಿಸಿ 2010ರಲ್ಲಿ ಮಾಜಿ ಸಚಿವ ಕಾಗೋಡು ತಿಮ್ಮಪ್ಪ ಅವರೊಂದಿಗೆ ತಾಳಗುಪ್ಪದಿಂದ ಸಾಗರದವರೆಗೆ ನಡೆದ ಪಾದಯಾತ್ರೆಯಲ್ಲಿ ನಾನೂ ಪಾಲ್ಗೊಂಡಿದ್ದೆ’ ಎಂಬುದನ್ನು ಮಧು ಬಂಗಾರಪ್ಪ ನೆನಪಿಸಿದರು.
ತಾಳಗುಪ್ಪದ ಆಸ್ಪತ್ರೆಯನ್ನು ಮೇಲ್ದರ್ಜೆಗೆ ಏರಿಸಬೇಕು. ಮಾರುತಿ ನಗರದಲ್ಲಿರುವ ನೆಮ್ಮದಿ ಕೇಂದ್ರವನ್ನು ತಾಳಗುಪ್ಪ ಪೇಟೆ ಪ್ರದೇಶಕ್ಕೆ ವರ್ಗಾಯಿಸಬೇಕು. ಆಶಾ ಕಾರ್ಯಕರ್ತೆಯರ ಬಾಕಿ ಗೌರವ ಧನ ಬಿಡುಗಡೆ ಮಾಡಬೇಕು. ತಾಳಗುಪ್ಪಕ್ಕೆ ಸರ್ಕಾರಿ ಪದವಿಪೂರ್ವ ಕಾಲೇಜು ಮಂಜೂರು ಮಾಡಬೇಕು ಎಂಬ ಮನವಿ ಸಲ್ಲಿಸಲಾಯಿತು.
ತಾಳಗುಪ್ಪದಲ್ಲಿ ಈ ಹಿಂದೆ ನಡೆಯುತ್ತಿದ್ದ ಫ್ಲೈವುಡ್ ಫ್ಯಾಕ್ಟರಿ ಮಾಲೀಕರಿಂದ ಸರ್ಕಾರಿ ಭೂಮಿ ಒತ್ತುವರಿಯಾಗಿದೆ ಎಂಬ ದೂರಿಗೆ ಪ್ರತಿಕ್ರಿಯಿಸಿದ ಸಚಿವರು, ಸರ್ವೇ ಕಾರ್ಯ ನಡೆಸಿ ಒತ್ತುವರಿಯಾಗಿದ್ದಲ್ಲಿ ಕೂಡಲೇ ತೆರವುಗೊಳಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.
ಹುಣಸೂರು ಗ್ರಾಮದ ಸರ್ವೆ ನಂ. 44, 52ರಲ್ಲಿ ಬಗರ್‌ಹುಕುಂ ಸಾಗುವಳಿ ಮಾಡುತ್ತಿರುವವರಿಗೆ, ಕುಗ್ವೆ– ಅಂಬಾಪುರ ಗ್ರಾಮದಲ್ಲಿ ಮನೆ ಕಟ್ಟಿಕೊಂಡಿರುವವರಿಗೆ ಹಕ್ಕುಪತ್ರ ನೀಡಬೇಕು. ಹೊಸ ಕಂದಾಯ ಗ್ರಾಮಗಳ ಸೂಚನೆಗೆ ಅಗತ್ಯ ಕ್ರಮ ಕೈಗೊಳ್ಳಬೇಕು. ಬಗರ್‌ಹುಕುಂ ಅರ್ಜಿಗಳನ್ನು ಡಿಜಿಟಲೀಕರಣಗೊಳಿಸಬೇಕು ಎಂಬ ವಿಷಯ ಸೇರಿ ಹಲವು ಬೇಡಿಕೆಗಳ ಕುರಿತು ಅಹವಾಲು ಮಂಡಿಸಲಾಯಿತು.
ಉಪವಿಭಾಗಾಧಿಕಾರಿ ವೀರೇಶ್ ಕುಮಾರ್, ತಹಶೀಲ್ದಾರ್ ರಶ್ಮಿ, ಕಾರ್ಯ ನಿರ್ವಹಣಾಧಿಕಾರಿ ಶಿವಪ್ರಕಾಶ್, ಗ್ರಾಮ ಪಂಚಾಯಿತಿ ಅಧ್ಯಕ್ಷ ಲಕ್ಷ್ಮಿನಾರಾಯಣ ಬ್ಯಾಕೋಡು, ಡಿವೈಎಸ್ ಪಿ ಕೇಶವಮೂರ್ತಿ, ಪ್ರಮುಖರಾದ ಮಂಡಗಳಲೆ ಹುಚ್ಚಪ್ಪ, ಶೇಖರಪ್ಪ, ಪ್ರಸನ್ನ, ಶಾಂತಕುಮಾರ್, ಅನಿಲ್ ಗೌಡ್ರು, ಶರಾವತಿ ಉಮೇಶ್, ಸುಮಾ ರಾಮಪ್ಪ, ಮೋಹಿನಿ ನಾಗರಾಜ್, ರೇವತಿ ಸುರೇಶ್ ಇದ್ದರು.
ಸಾಗರ ಜಿಲ್ಲೆ ರಚನೆ ಬೇಡಿಕೆಗೆ ಬೆಂಬಲ
‘ಸಾಗರ ತಾಲ್ಲೂಕಿಗೆ ಜಿಲ್ಲಾ ಕೇಂದ್ರದ ಮಾನ್ಯತೆ ನೀಡಬೇಕು ಎಂಬ ಬೇಡಿಕೆಗೆ ನನ್ನ ಬೆಂಬಲವಿದೆ’ ಎಂದು ಸಚಿವ ಮಧು ಬಂಗಾರಪ್ಪ ಸ್ಪಷ್ಟಪಡಿಸಿದರು. ಸಾಗರ ಜಿಲ್ಲಾ ಹೋರಾಟ ಸಮಿತಿಯ ಪ್ರಮುಖರಿಂದ ಸಭೆಯಲ್ಲಿ ಮನವಿ ಸ್ವೀಕರಿಸಿ ಪ್ರತಿಕ್ರಿಯಿಸಿದ ಅವರು ‘ಜಿಲ್ಲೆಯ ಬೇಡಿಕೆಗೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಬಳಿ ನಿಯೋಗ ತೆರಳಲು ಅವಕಾಶ ಕಲ್ಪಿಸಲಾಗುವುದು’ ಎಂದು ಭರವಸೆ ನೀಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.