ADVERTISEMENT

ಶಿವಮೊಗ್ಗ: ‘ಮಾಲ್ಗುಡಿ ಮ್ಯೂಸಿಯಂ’ ಕಲಾವಿದನಿಗೆ ದೊರಕದ ಸಂಭಾವನೆ

​ಪ್ರಜಾವಾಣಿ ವಾರ್ತೆ
Published 16 ಜುಲೈ 2021, 6:59 IST
Last Updated 16 ಜುಲೈ 2021, 6:59 IST
ಜಾನ್‌ ದೇವರಾಜ್‌
ಜಾನ್‌ ದೇವರಾಜ್‌   

ಶಿವಮೊಗ್ಗ: ನಟ ಶಂಕರ್‌ನಾಗ್ನಿರ್ದೇಶನದ ಧಾರಾವಾಹಿ ‘ಮಾಲ್ಗುಡಿ ಡೇಸ್’ ಚಿತ್ರೀಕರಣಗೊಂಡ ಹೊಸನಗರ ತಾಲ್ಲೂಕಿನ ಅರಸಾಳು ರೈಲು ನಿಲ್ದಾಣದಲ್ಲಿ ‘ಮ್ಯೂಸಿಯಂ ಮಾಲ್ಗುಡಿ’ ಸೃಷ್ಟಿಸಿದ ಹಿರಿಯ ಕಲಾವಿದ ಜಾನ್‌ ದೇವರಾಜ್ ಅವರಿಗೆ ಬಾಕಿ ಸಂಭಾವನೆ ನೀಡಲುರೈಲ್ವೆ ಇಲಾಖೆ ಅಧಿಕಾರಿಗಳು ಅಲೆದಾಡಿಸುತ್ತಿದ್ದಾರೆ.

ಆರ್.ಕೆ.ನಾರಾಯಣ್ ಅವರ ಪ್ರಸಿದ್ಧ ಕಾದಂಬರಿ ‘ಮಾಲ್ಗುಡಿ ಡೇಸ್‌’ ಆಧಾರಿತ ಧಾರಾವಾಹಿಯನ್ನು ಶಂಕರ್‌ನಾಗ್ ಅವರು ದೂರದರ್ಶನಕ್ಕಾಗಿ 1986–89ರ ಅವಧಿಯಲ್ಲಿ ನಿರ್ದೇಶಿಸಿದ್ದರು. ಹಿಂದಿ ಹಾಗೂ ಇಂಗ್ಲಿಷ್‌ನಲ್ಲಿ ಮೂಡಿಬಂದ ಈ ಧಾರಾವಾಹಿ ವಿಶ್ವದ ಗಮನ ಸೆಳೆದಿತ್ತು. ಅರಸಾಳು ನಿಲ್ದಾಣ ಈಗಲೂ ಜನರ ಮನದಲ್ಲಿ ‘ಮಾಲ್ಗುಡಿ ನಿಲ್ದಾಣ’ವೆಂದೇ ಪ್ರಸಿದ್ಧಿಯಾಗಿದೆ. 130 ವರ್ಷ ಹಳೆಯದಾದ ಬ್ರಿಟಿಷರ ಕಾಲದ ಈ ನಿಲ್ದಾಣವನ್ನು ₹1.03 ಕೋಟಿ ವೆಚ್ಚದಲ್ಲಿ ವರ್ಷದ ಹಿಂದೆ ನವೀಕರಿಸಲಾಗಿದೆ.

ಶಂಕರ್‌ನಾಗ್ ಅವರ ಜತೆ ದುಡಿದಿದ್ದ ಜಾನ್‌ ದೇವರಾಜ್ ಅವರಿಗೆ ಮ್ಯೂಸಿಯಂ ಮಾಲ್ಗುಡಿ ಸಿದ್ಧಪಡಿಸಲು ರೈಲ್ವೆ ಇಲಾಖೆ ಆಹ್ವಾನ ನೀಡಿತ್ತು. ₹ 38 ಲಕ್ಷಕ್ಕೆ ಒಪ್ಪಂದ ಮಾಡಿಕೊಂಡಿತ್ತು. ದೇವರಾಜ್ ಸ್ಥಳೀಯ ಕಲಾವಿದರನ್ನು ಬಳಸಿಕೊಂಡು ₹ 32 ಲಕ್ಷ ವೆಚ್ಚದಲ್ಲೇ ಎಲ್ಲ ಕಾರ್ಯ ಪೂರ್ಣಗೊಳಿಸಿದ್ದರು. ಮಲೆನಾಡಿನ ಸಂಸ್ಕೃತಿಯ ಪ್ರತೀಕವಾಗಿ ಮ್ಯೂಸಿಯಂ ರೂಪಿಸಲಾಗಿದೆ. ಧಾರಾವಾಹಿಯಲ್ಲಿ ಬರುವ ಮೂರ್‍ನಾಲ್ಕು ದೃಶ್ಯಗಳನ್ನು ಸಂಯೋಜಿಸಲಾಗಿದೆ. ಮಲೆನಾಡಿನ ಸಂಸ್ಕೃತಿ, ಪರಿಸರ, ಸಮಗ್ರತೆ, ಕೃಷಿ, ಬಳಕೆ ಸಾಮಗ್ರಿಗಳು, ಪ್ರಾಚೀನ ಕಲಾಕೃತಿಗಳನ್ನು ನೆಲೆಗೊಳಿಸಲಾಗಿದೆ. ಶಂಕರ್‌ನಾಗ್ ಪ್ರತಿಮೆ ಸ್ಥಾಪಿಸಲಾಗಿದೆ. ಮಾಲ್ಗುಡಿಯಲ್ಲಿ ಬರುವ ನಿಲ್ದಾಣದ ಒಂಟಿ ಮರ, ಪ್ಲಾಟ್‌ಫಾರ್ಮ್‌, ಕಲ್ಲು ಬೆಂಚುಗಳು, ನಿಲ್ದಾಣದ ಸಾಲು ಕಂಬಿಗಳಿಗೂ ಜೀವ ತುಂಬಲಾಗಿದೆ.

ADVERTISEMENT

‘ಇದುವರೆಗೆ ₹ 22 ಲಕ್ಷ ನೀಡಿದ್ದಾರೆ. ಬಾಕಿ ₹ 10 ಲಕ್ಷ ಬರಬೇಕಿದೆ. ಚೆಕ್‌ ಸಿದ್ಧವಾಗಿದೆ. ಕರೆ ಮಾಡುತ್ತೇವೆ ಎಂದು ಮೈಸೂರು ರೈಲ್ವೆ ವಿಭಾಗೀಯ ಅಧಿಕಾರಿ ಅರ್ಪಣಾ ಗಾರ್ಗ್ ಹೇಳಿದ್ದರು. ವರ್ಷವಾದರೂ ನೀಡಿಲ್ಲ’ ಎಂದು ‘ಪ್ರಜಾವಾಣಿ’ ಜತೆ ನೋವು ತೋಡಿಕೊಂಡರು ಜಾನ್‌ ದೇವರಾಜ್.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.