ಶಿವಮೊಗ್ಗ: ವರ್ಷವಿಡೀ ಶ್ರಮ ಪಡುವ ಕೃಷಿಕರಲ್ಲಿ ಮುಂಗಾರು ಆರಂಭ ಹೊಸ ಹುರುಪು ಮೂಡಿಸುತ್ತದೆ. ಈ ಅವಧಿಯಲ್ಲಿ ರೈತರು ಕೃಷಿಯೊಂದಿಗೆ ಇತರೆ ಚಟುವಟಿಕೆಗಳಲ್ಲೂ ತೊಡಗಿಕೊಳ್ಳುತ್ತಾರೆ.
ಮಲೆನಾಡಿನಲ್ಲಿ ಮುಂಗಾರು ಬಿರುಸು ಪಡೆದಿದ್ದು ಕೆರೆ-ಕಟ್ಟೆ, ನದಿ ತೊರೆಗಳು ತುಂಬಿ ಹರಿಯುತ್ತಿವೆ. ಇಲ್ಲಿ ಹಿಂದಿನಿಂದಲೂ ಕೃಷಿಕರು ಸಂಸ್ಕೃತಿಯ ಭಾಗವಾಗಿಸಿಕೊಂಡು ಬಂದಿರುವ ‘ಹತ್ಮೀನು’ (ಹರಿವ ನೀರಿಗೆ ಹಿಮ್ಮುಖವಾಗಿ ಸಾಗುವ ಮೀನು) ಬೇಟೆ ಕೂಡ ಬಿರುಸಿನಿಂದ ಸಾಗಿದೆ.
ರಾತ್ರಿ ಸಮಯದಲ್ಲಿ ಹತ್ಮೀನು ಹಿಡಿಯುವ ಮೋಜು ಬಲು ಜೋರು. ಮಳೆ ಬಂದು ತೊರೆ ಹರಿದರೆ ಸಾಕು ಹಣೆಗೆ ಬ್ಯಾಟರಿ ಕಟ್ಟಿಕೊಂಡು ಕೃಷಿಕರು ಕೆರೆ ಅಂಗಳದತ್ತ ಹೆಜ್ಜೆ ಹಾಕುತ್ತಾರೆ. ಕೈಯಲ್ಲೊಂದು ಉದ್ದದ ಕತ್ತಿ, ಇರುಗುಣಿ ಹಿಡಿದು ನಾ ಮುಂದು ತಾ ಮುಂದು ಎಂದು ಸಾಗುತ್ತಾರೆ. ಬ್ಯಾಟರಿ ಬೆಳಕಿನಲ್ಲಿ ಕೆರೆ ಅಂಗಳವನ್ನು ನೋಡುವುದೇ ಕಣ್ಣಿಗೆ ಹಬ್ಬ.
ಮಲೆನಾಡು ತನ್ನದೇ ಆದ ಭೌಗೋಳಿಕತೆ, ಮಳೆಕಾಡು, ತಿಂಗಳುಗಟ್ಟಲೆ ಸುರಿಯುವ ಮಳೆ ಮತ್ತು ಹವಾಮಾನದಿಂದ ಪ್ರಸಿದ್ಧಿ ಪಡೆದಿದೆ. ಶರಾವತಿ ಜಲಾನಯನ ಪ್ರದೇಶಗಳಾದ ಮಡೆನೂರು, ಕರೂರು, ಮಾರಲಗೋಡು, ಹೆಸಿಗೆ, ಸಿಗ್ಗಲು, ಮಳೂರು ವ್ಯಾಪ್ತಿ ಸೇರಿದಂತೆ ಆಯನೂರು, ಕುಂಸಿ, ಆನಂದಪುರ ಸುತ್ತಮುತ್ತಲು ಹತ್ಮೀನು ಹಿಡಿಯುವುದನ್ನು ಕೃಷಿಕರು ಹೆಚ್ಚಾಗಿ ರೂಢಿಸಿಕೊಂಡಿದ್ದಾರೆ.
ಕೆರೆ- ಕಟ್ಟೆಗಳಲ್ಲಿ ಮಳೆ ನೀರಿನ ಸಂಗ್ರಹ ಏರಿದಂತೆಲ್ಲಾ ಮೀನುಗಳು ಮೊಟ್ಟೆ ಇಡಲು ಹೊಸ ನೀರು ಹರಿದು ಬರುವ ತೀರದ ಹಸಿರು ಹುಲ್ಲು ಹಾಸಿನ ಕಡೆಗೆ ಹಿಮ್ಮುಖವಾಗಿ ಸಾಗುತ್ತವೆ. ನೀರಿನ ಹರಿವು ಹೆಚ್ಚಿದಂತೆ ತಿಳಿ ನೀರಿಗೆ ಬರುವ ಮೀನುಗಳು ಹೆರಿಗೆ ನೋವಿನಿಂದ ಮುಕ್ತಿ ಪಡೆಯುತ್ತವೆ. ಈ ಸಂದರ್ಭದ ಪ್ರಯೋಜನ ಪಡೆಯುವ ಕೃಷಿಕರು ವಾಡಿಕೆಯಂತೆ ಹತ್ಮೀನಿನ ಬೇಟೆಗೆ ಇಳಿಯುತ್ತಾರೆ.
ಮಲೆನಾಡಿನಲ್ಲಿ ಹೆಚ್ಚಾಗಿ ಕಾಣ ಸಿಗುವ ಗೌರಿ, ಕಾಟ್ಲ, ಮುರುಗೋಡು, ಕುಸುಬಿ, ಹಾರ್ಸಿಡಿ, ಗಾಜು, ಗೊಜ್ಜಳೆ, ಕಲ್ಲುಗ, ಕೊರ್ಮ, ಬಿದಿರು ಜಬ್ಬು, ಅರಿಜಿನ ಜಬ್ಬು, ಸಿಗಡಿ ಮೀನುಗಳು ತತ್ತಿ ಇಟ್ಟು, ಸಂತಾನೋತ್ಪತ್ತಿ ಮಾಡುವ ಸಕಾಲವಿದು. ಸರ್ಕಾರ ನಿಷೇಧ ಹೇರಿದ್ದರೂ ಕೂಡ ಮೀನಿನ ಶಿಕಾರಿಯಿಂದ ಸಂತಾನವೃದ್ಧಿಗೆ ತೊಂದರೆಯಾಗಿಲ್ಲ ಎಂಬ ವಾದಗಳ ನಡುವೆ, ರೈತರು ಇರುಗುಣಿ (ಬಿದಿರ ತಟ್ಟಿ), ಬಲೆ ಪದ್ಧತಿ ಅನುಸರಿಸಿ ಮೀನು ಹಿಡಿಯುತ್ತಿದ್ದಾರೆ.
ಹಳ್ಳಗಳಿಗೆ ಅಡ್ಡಲಾಗಿ ನಿರ್ಮಿಸಿರುವ ಚೆಕ್ ಡ್ಯಾಂಗಳಲ್ಲಿ (ಒಡ್ಡು) ಕೆರೆ– ಕಟ್ಟೆಗಳಿಂದ ಹಿಮ್ಮುಖವಾಗಿ ಸಾಗಿ ಬಂದ ಮೀನುಗಳು ಸಿಮೆಂಟ್ ಕಟ್ಟೆ ಏರಲು ನೀರಿನ ವಿರುದ್ಧ ದಿಕ್ಕಿಗೆ ಜಿಗಿಯುತ್ತವೆ. ಈ ಸಂದರ್ಭವನ್ನು ಬಳಸಿಕೊಳ್ಳುವ ಕೃಷಿಕರು ಚೆಕ್ ಡ್ಯಾಂಗೆ ಮರದ ಕೋಲುಗಳನ್ನು ಅಡ್ಡಲಾಗಿ ನಿಲ್ಲಿಸಿ ಬಲೆ, ಸೀರೆ ಬಳಸಿ ಮೇಲಕ್ಕೆ ಹಾರುವ ಮೀನುಗಳನ್ನು ಹಿಡಿಯುತ್ತಾರೆ.
ಹತ್ಮೀನು ಹಿಡಿಯುವುದನ್ನು ಸಾಂಸ್ಕೃತಿಕ ನೆಲೆಗಟ್ಟಿನಲ್ಲಿ ರೈತರು ನೋಡುತ್ತಾರೆ. ಆದರೆ, ಕೆಲವರು ಅಪಾರ ಪ್ರಮಾಣದ ಮೀನುಗಳನ್ನು ಹಿಡಿದು ಮಾರಾಟ ಮಾಡಲು ಮುಂದಾಗುತ್ತಾರೆ. ಈ ವ್ಯಾವಹಾರಿಕ ಧೋರಣೆಯಿಂದ ಮೀನಿನ ಸಂತಾನವೃದ್ಧಿಗೆ ಖಂಡಿತ ತೊಂದರೆ ಆಗಲಿದೆ ಎಂದು ಸಂಸ್ಕೃತಿ ಚಿಂತಕ ಮೋಹನ ಚಂದ್ರಗುತ್ತಿ ‘ಪ್ರಜಾವಾಣಿ’ಗೆ ತಿಳಿಸಿದರು.
ಶಿವಮೊಗ್ಗ ಸಮೀಪದ ಶರಾವತಿ ಹಿನ್ನಿರಿನಲ್ಲಿ ಹಿಡಿದ ಹತ್ಮೀನು
ಕೃಷಿಕರು ಮೀನುಗಳ ಕುರಿತ ಅಪಾರ ಜ್ಞಾನ ಹೊಂದಿದ್ದಾರೆ. ಅವುಗಳನ್ನು ಗುರುತಿಸುವ ಹಿಡಿಯುವ ಪರಿಣತಿ ಹೊಂದಿದ್ದಾರೆಮೋಹನ್ ಚಂದ್ರಗುತ್ತಿ ಸಂಸ್ಕೃತಿ ಚಿಂತಕ
ಉತ್ತಮ ಮಳೆಯಾಗಿ ಹೊಸ ನೀರು ಹರಿದರೆ 10 ರಿಂದ 30 ಕೆಜಿಯಷ್ಟು ಮೀನುಗಳು ಸಿಗುವ ಸಾಧ್ಯತೆ ಇರುತ್ತದೆ. ಕೆಲವೊಮ್ಮೆ ಖಾಲಿ ಕೈಯಲ್ಲಿ ಹಿಂದಿರುಗಿದ್ದೂ ಇದೆ. ಮೀನುಗಳನ್ನು ಮನೆಗೆ ತಂದು ಶುಚಿಗೊಳಿಸಿ ಅಡಿಕೆ ಒಣಗಿಸುವ ಅಥವಾ ಹೊಗೆ ತಟ್ಟಿಯ ಮೇಲೆ ಹರಡಿ ಅದನ್ನು ಮೂರ್ನಾಲ್ಕು ಅಡಿ ಎತ್ತರಕ್ಕೆ ಕಟ್ಟಿ ಕೆಳಗಿನಿಂದ ಬೆಂಕಿ ಹಾಕುತ್ತಾರೆ. ಈ ರೀತಿಯಲ್ಲಿ ಬೆಂಕಿ ಮತ್ತು ಹೊಗೆಯ ಶಾಖದಿಂದ ಒಣಗುವ ಮೀನುಗಳು ಕಪ್ಪನೆಯ ಬಣ್ಣಕ್ಕೆ ತಿರುಗುತ್ತವೆ. ಹಾಗಾಗಿ ಈ ಮೀನುಗಳಿಗೆ ‘ಕರಿಮೀನು’ ಎಂಬ ಹೆಸರು ಬಂದಿದೆ. ಗೃಹಿಣಿಯರು ರಾತ್ರಿಯೆಲ್ಲ ಕಾದು ಮೀನುಗಳು ಒಣಗಿದ ಮೇಲೆ ಚೀಲದಲ್ಲಿ ಕಟ್ಟಿಡುತ್ತಾರೆ.
ಮುಂಗಾರು ಆರಂಭಗೊಂಡರೆ ಸಾಕು ಕೃಷಿಕರಿಗೆ ಹಬ್ಬ. ಜೂನ್-ಜುಲೈ ತಿಂಗಳಲ್ಲಿ ಕಾಡಿನಲ್ಲಿ ಬೆಳೆಯುವ ಕಳಲೆ (ಎಳೆ ಬಿದಿರು) ಅಣಬೆಗಳು ಹಳ್ಳದಲ್ಲಿ ಸಿಗುವ ಹತ್ಮೀನು ಏಡಿಗಳು ಹಲಸು ಕಾಡು ಹಣ್ಣುಗಳನ್ನು ತಂದು ಸೇವಿಸುವುದು ಮಲೆನಾಡಿಗರ ವಿಶಿಷ್ಟ ಸಂಸ್ಕೃತಿಗೆ ಹಿಡಿದ ಕನ್ನಡಿಯಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.