ಶಿವಮೊಗ್ಗ: ಜಿಲ್ಲಾ ಪೊಲೀಸ್ ಇಲಾಖೆ ವತಿಯಿಂದ ‘ನಮ್ಮ ಪೊಲೀಸ್ ನಮ್ಮ ಹೆಮ್ಮೆ’, ‘ಎಲ್ಲರಿಗಾಗಿ ಫಿಟ್ ನೆಸ್’ ಮತ್ತು ‘ಮಾದಕ ದ್ರವ್ಯ ಮುಕ್ತ ಕರ್ನಾಟಕ’ ಧ್ಯೇಯ ವಾಕ್ಯದೊಂದಿಗೆ ಭಾನುವಾರ ನಗರದಲ್ಲಿ ಮ್ಯಾರಥಾನ್ ನಡೆಯಿತು.
ಡಿಎಆರ್ ಪೊಲೀಸ್ ಕವಾಯತು ಮೈದಾನದಲ್ಲಿ ಶಾಸಕ ಎಸ್.ಎನ್.ಚನ್ನಬಸಪ್ಪ ಹಾಗೂ ಡಾ.ಧನಂಜಯ ಸರ್ಜಿ ಅವರು ಹಸಿರು ನಿಶಾನೆ ತೋರುವ ಮೂಲಕ ಮ್ಯಾರಥಾನ್‌ಗೆ ಚಾಲನೆ ನೀಡಿದರು. ಮುಂಜಾನೆಯೇ ಪೊಲೀಸ್ ಅಧಿಕಾರಿಗಳು-ಸಿಬ್ಬಂದಿ ಜೊತೆ, ಹಿರಿಯ ನಾಗರಿಕರು, ಯುವಕ-ಯುವತಿಯರು ಮ್ಯಾರಥಾನ್ ನಲ್ಲಿ ಹೆಜ್ಜೆ ಹಾಕಿದರು.
5 ಕಿ.ಮೀ ಓಟದ ಸ್ಪರ್ಧೆಯು ಕವಾಯತು ಮೈದಾನದಿಂದ ಪ್ರಾರಂಭವಾಗಿ ಅಶೋಕ ವೃತ್ತ, ಅಮೀರ್ ಅಹಮ್ಮದ್ ವೃತ್ತ, ಶಿವಪ್ಪ ನಾಯಕ ವೃತ್ತ, ಕರ್ನಾಟಕ ಸಂಘ ವೃತ್ತ, ಡಿವಿಎಸ್ ವೃತ್ತ, ಮಹಾವೀರ ವೃತ್ತ, ಶಿವಮೂರ್ತಿ ವೃತ್ತ, ಜೈಲ್ ವೃತ್ತ, ಐಬಿ ವೃತ್ತದ ಮೂಲಕ ಮತ್ತೆ ಕವಾಯತು ಮೈದಾನಕ್ಕೆ ಬಂದು ತಲುಪಿತು. ಪುರುಷರಿಗೆ ಇದೇ ಮಾರ್ಗದಲ್ಲಿ 10 ಕೆ ಮ್ಯಾರಥಾನ್ 2 ಸುತ್ತುಗಳಲ್ಲಿ ನಡೆಯಿತು.
10 ಹಾಗೂ 5 ಕಿಮೀ ಕಿ.ಮೀ ದೂರ ಕ್ರಮಿಸುವ ಓಟದಲ್ಲಿ ಸುಮಾರು 500ಕ್ಕೂ ಹೆಚ್ಚು ಮಂದಿ ಭಾಗಿಯಾಗಿದ್ದರು. ಪ್ರಮುಖ ವೃತ್ತಗಳಲ್ಲಿ ಇರಿಸಿದ್ದ ನೀರು-ಜ್ಯೂಸ್ ಬಾಟಲಿಗಳನ್ನು ಪಡೆಯುತ್ತಲೇ ಓಟಗಾರರು ತಮ್ಮ ವೇಗ ಹೆಚ್ಚಿಸಿಕೊಳ್ಳುತ್ತಿದ್ದರು.
ಇದೇ ಸಂದರ್ಭದಲ್ಲಿ ವ್ಯಸನ ಮುಕ್ತ ಸಮಾಜ ನಿರ್ಮಾಣ, ಸೈಬರ್ ಸುರಕ್ಷತಾ ಕ್ರಮ ಮತ್ತು ಸಂಚಾರ ನಿಯಮಗಳ ಕಡ್ಡಾಯ ಪಾಲನೆಯ ಕುರಿತ ಪ್ರತಿಜ್ಞಾವಿಧಿ ಸ್ವೀಕರಿಸಲಾಯಿತು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿ.ಕೆ.ಮಿಥುನ್ ಕುಮಮಾರ್, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಅನಿಲ್ ಕುಮಾರ್ ಭೂಮರಡ್ಡಿ, ಎ.ಜಿ. ಕಾರಿಯಪ್ಪ, ಜಿಲ್ಲಾ ಪಂಚಾಯಿತಿ ಸಿಇಒ ಎನ್.ಹೇಮಂತ್, ಮಾಚೇನಹಳ್ಳಿಯ ಕಮಾಂಡೆಂಟ್ ಯುವಕುಮಾರ್, ಶಿವಕುಮಾರ್, ಬಾಬು ಆಂಜನಪ್ಪ, ಟಿ.ಸಂಜೀವ್ ಕುಮಾರ್, ನಾಗರಾಜ್, ಗೋಪಾಲ ಕೃಷ್ಣ ಟಿ ನಾಯಕ್, ಕೃಷ್ಣ ಮೂರ್ತಿ ಪಾಲ್ಗೊಂಡಿದ್ದರು.
ಮ್ಯಾರಥಾನ್‌ನಲ್ಲಿ ಹೆಜ್ಜೆ ಹಾಕಿದ ಪೊಲೀಸರು ಹಾಗೂ ಸಾರ್ವಜನಿರು
ಮ್ಯಾರಥಾನ್; ವಿಜೇತರಿಗೆ ಬಹುಮಾನ
ಪುರುಷರ ವಿಭಾಗದ 10 ಕಿ.ಮೀ ಓಟದ ಸ್ಪರ್ಧೆಯಲ್ಲಿ ಕಿರಣ್ ಪ್ರಥಮ ನಂದನ್ ದ್ವಿತೀಯ ಭರತ್ ತೃತೀಯ ಸ್ಥಾನ ಪಡೆದರು. ಅದೇ ರೀತಿ ಪುರುಷರ ವಿಭಾಗದ 5 ಕಿ.ಮೀ ಓಟದ ಸ್ಪರ್ಧೆಯಲ್ಲಿ ಬಾಲು ಪ್ರಥಮ ಧನರಾಜ್ ದ್ವಿತೀಯ ಧನುಷ್ ತೃತೀಯ ಸ್ಥಾನ ಪಡೆದರು. ಮಹಿಳಾ ವಿಭಾಗದ 5 ಕಿ.ಮೀ.ಓಟದ ಸ್ಪರ್ದೆಯಲ್ಲಿ ಧೀಕ್ಷಾ ಪ್ರಥಮ ಸಾನಿಕ ದ್ವಿತೀಯ ಸೋನಿಯಾ ತೃತಿಯ ಸ್ಥಾನ ಪಡೆದರು. ಮ್ಯಾರಥಾನ್ ಓಟದಲ್ಲಿ ಪ್ರಥಮ ಸ್ಥಾನ ಪಡೆದವರಿಗೆ ತಲಾ ₹ 10 000 ದ್ವಿತೀಯ ಸ್ಥಾನ 8000 ತೃತೀಯ ಸ್ಥಾನ 5 000 ನಗದು ಬಹುಮಾನದೊಂದಿಗೆ ಪದಕ ಮತ್ತು ಪ್ರಶಸ್ತಿ ಪತ್ರ ನೀಡಿ ಗೌರವಿಸಲಾಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.