ADVERTISEMENT

ಮಹಿಳಾ ಉದ್ಯಮಿಗಳಿಗೆ ಪ್ರೋತ್ಸಾಹ ಅಗತ್ಯ: ಮೇಯರ್

-

​ಪ್ರಜಾವಾಣಿ ವಾರ್ತೆ
Published 16 ನವೆಂಬರ್ 2023, 15:40 IST
Last Updated 16 ನವೆಂಬರ್ 2023, 15:40 IST
ಶಿವಮೊಗ್ಗದಲ್ಲಿ ಮಹಾನಗರ ಪಾಲಿಕೆಯಿಂದ ಕೆ.ಆರ್. ಪುರಂ ಬಡಾವಣೆಯಲ್ಲಿ ನಿರ್ಮಿಸಿರುವ ಬೀದಿಬದಿ ವ್ಯಾಪಾರಿಗಳ ಮಾರಾಟ ವಲಯ ಮಹಿಳಾ ಬಜಾರ್‌ನಲ್ಲಿ ಪ್ರಾಯೋಗಿಕವಾಗಿ ಆಯೋಜಿಸಿದ್ದ ಮಹಿಳಾ ಸ್ವೇದ ಸಂತೆಯನ್ನು ಮೇಯರ್ ಶಿವಕುಮಾರ್ ಉದ್ಘಾಟಿಸಿದರು
ಶಿವಮೊಗ್ಗದಲ್ಲಿ ಮಹಾನಗರ ಪಾಲಿಕೆಯಿಂದ ಕೆ.ಆರ್. ಪುರಂ ಬಡಾವಣೆಯಲ್ಲಿ ನಿರ್ಮಿಸಿರುವ ಬೀದಿಬದಿ ವ್ಯಾಪಾರಿಗಳ ಮಾರಾಟ ವಲಯ ಮಹಿಳಾ ಬಜಾರ್‌ನಲ್ಲಿ ಪ್ರಾಯೋಗಿಕವಾಗಿ ಆಯೋಜಿಸಿದ್ದ ಮಹಿಳಾ ಸ್ವೇದ ಸಂತೆಯನ್ನು ಮೇಯರ್ ಶಿವಕುಮಾರ್ ಉದ್ಘಾಟಿಸಿದರು   

ಶಿವಮೊಗ್ಗ: ಸ್ವಾವಲಂಬಿ ಜೀವನ ರೂಪಿಸಿಕೊಳ್ಳಲು ಹಾಗೂ ಉದ್ಯಮ ಕ್ಷೇತ್ರದಲ್ಲಿ ಯಶಸ್ಸು ಗಳಿಸಲು ಮಹಿಳಾ ಉದ್ಯಮಿಗಳಿಗೆ ಸೂಕ್ತ ಪ್ರೋತ್ಸಾಹ ಅಗತ್ಯ ಎಂದು ಶಿವಮೊಗ್ಗ ಮೇಯರ್ ಎಸ್.ಶಿವಕುಮಾರ್ ಅಭಿಪ್ರಾಯಪಟ್ಟರು.

ಮಹಾನಗರ ಪಾಲಿಕೆಯಿಂದ ಶಿವಮೊಗ್ಗ ನಗರದ ಕೆ.ಆರ್. ಪುರಂ ಬಡಾವಣೆಯಲ್ಲಿ ನಿರ್ಮಿಸಿರುವ ಬೀದಿಬದಿ ವ್ಯಾಪಾರಿಗಳ ಮಾರಾಟ ವಲಯ ಮಹಿಳಾ ಬಜಾರ್‌ನಲ್ಲಿ ಪ್ರಾಯೋಗಿಕವಾಗಿ ಆಯೋಜಿಸಿದ್ದ ಮಹಿಳಾ ಸ್ವೇದ ಸಂತೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಸ್ಥಳೀಯವಾಗಿ ಉದ್ಯಮ ಕ್ಷೇತ್ರದಲ್ಲಿ ತೊಡಗಿಸಿಕೊಂಡಿರುವ ಮಹಿಳೆಯರಿಗೆ ಮಹಿಳಾ ಬಜಾರ್ ಯೋಜನೆ ಅತ್ಯಂತ ಸಹಕಾರಿಯಾಗಲಿದೆ. ಮುಂದಿನ ದಿನಗಳಲ್ಲಿ ಮಹಿಳಾ ಉದ್ಯಮಿಗಳಿಗೆ ಸೂಕ್ತ ಪ್ರೋತ್ಸಾಹ ನೀಡುವ ದಿಸೆಯಲ್ಲಿ ಅನುಕೂಲವಾಗಲಿದೆ ಎಂದು ತಿಳಿಸಿದರು.

ADVERTISEMENT

ವಾರ್ಡ್‌ನಲ್ಲಿ ಕನ್ಸರ್‌ವೆನ್ಸಿ ಅಭಿವೃದ್ಧಿಪಡಿಸಿ ಮಹಿಳಾ ಉದ್ಯಮಿಗಳನ್ನು ಪ್ರೋತ್ಸಾಹಿಸಲೆಂದೇ ವಿಶೇಷವಾಗಿ ಮಹಿಳಾ ಬಜಾರ್‌ ಯೋಜನೆ ಸಿದ್ಧಪಡಿಸಲಾಗಿದೆ. ಬೀದಿಬದಿ ಮಹಿಳಾ ವ್ಯಾಪಾರಿಗಳಿಗೆ ಅನುಕೂಲ ಒದಗಿಸಲು ಶೀಘ್ರದಲ್ಲೇ ಟೆಂಡರ್ ಪ್ರಕ್ರಿಯೆ ಕೈಗೊಳ್ಳಲಾಗುವುದು. ಪ್ರಸ್ತುತ ಪ್ರಾಯೋಗಿಕವಾಗಿ ಸಂತೆ ಹಮ್ಮಿಕೊಳ್ಳಲಾಗಿದೆ ಎಂದು ಮಹಾನಗರ ಪಾಲಿಕೆ ಸದಸ್ಯೆ ಸುನೀತಾ ಅಣ್ಣಪ್ಪ ಮಾಹಿತಿ ನೀಡಿದರು.

ನವೆಂಬರ್‌ 20ರವರೆಗೆ ಮಹಿಳಾ ಸ್ವೇದ ಸಂತೆ ಹಮ್ಮಿಕೊಂಡಿದ್ದು, ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಬಂದು ಮಹಿಳಾ ಉದ್ಯಮಿದಾರರಿಗೆ ಸೂಕ್ತ ಪ್ರೋತ್ಸಾಹ ನೀಡಬೇಕು ಎಂದು ಸ್ವೇದ ಸಂಸ್ಥೆಯ ಅಧ್ಯಕ್ಷೆ ಡಾ. ಬಿ.ವಿ. ಲಕ್ಷ್ಮಿದೇವಿ ಗೋಪಿನಾಥ್ ಕೋರಿದರು.

ಮಹಿಳಾ ಉದ್ಯಮಿಗಳನ್ನು ಪ್ರೋತ್ಸಾಹಿಸುವ ದೃಷ್ಟಿಯಿಂದ ಮಹಾನಗರ ಪಾಲಿಕೆಯಿಂದ ಕೈಗೊಂಡಿರುವ ವಿಶೇಷ ಯೋಜನೆ ಶ್ಲಾಘನೀಯ. ಉತ್ಪನ್ನಗಳ ತಯಾರಕರಿಗೂ ಮಳಿಗೆಗಳನ್ನು ನೀಡುವ ಕೆಲಸ ಆಗಬೇಕು. ಇದರಿಂದ ಹೊಸ ಉದ್ಯಮ ಆಕಾಂಕ್ಷಿಗಳಿಗೆ ಸ್ಫೂರ್ತಿ ದೊರೆಯುತ್ತದೆ ಎಂದು ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಅಧ್ಯಕ್ಷ ಎನ್.ಗೋಪಿನಾಥ್ ತಿಳಿಸಿದರು.

ಸ್ವೇದ ಸಂಸ್ಥೆಯ ಶಿಲ್ಪಾ ಗೋಪಿನಾಥ್, ಕೆ.ವಿ.ಅಣ್ಣಪ್ಪ, ಜಗದೀಶ್, ಸವಿತಾ ಮಾಧವ್ ಮತ್ತಿತರರು ಉಪಸ್ಥಿತರಿದ್ದರು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.