ADVERTISEMENT

ಮಂಗನ ಕಾಯಿಲೆ ನಿಯಂತ್ರಣ, ನಿರ್ಲಕ್ಷ್ಯ ಸಲ್ಲ : ಡಿಸಿ

ವಿವಿಧ ಇಲಾಖೆಗಳ ನಡುವೆ ಸಮನ್ವಯಕ್ಕೆ ಗುರುದತ್ತ ಹೆಗಡೆ ಸೂಚನೆ

​ಪ್ರಜಾವಾಣಿ ವಾರ್ತೆ
Published 10 ಡಿಸೆಂಬರ್ 2025, 4:59 IST
Last Updated 10 ಡಿಸೆಂಬರ್ 2025, 4:59 IST
ಗುರುದತ್ತ ಹೆಗಡೆ
ಗುರುದತ್ತ ಹೆಗಡೆ   

ಶಿವಮೊಗ್ಗ: ಮಲೆನಾಡು ಭಾಗದಲ್ಲಿ ಬೇಸಿಗೆಯಲ್ಲಿ ಕಂಡುಬರುವ ಮಂಗನಕಾಯಿಲೆಯ ನಿಯಂತ್ರಣಕ್ಕೆ ವೈದ್ಯಾಧಿಕಾರಿಗಳು ನಿರ್ಲಕ್ಷ್ಯ ವಹಿಸಿದಲ್ಲಿ ಕ್ರಮ ಕೈಗೊಳ್ಳುವುದು ಅನಿವಾರ್ಯವಾಗಲಿದೆ ಎಂದು ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಎಚ್ಚರಿಕೆ ನೀಡಿದರು.  

ನಗರದಲ್ಲಿ ಮಂಗಳವಾರ ಆರೋಗ್ಯ ಇಲಾಖೆಯ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಕಾಯಿಲೆಯ ನಿಯಂತ್ರಣಕ್ಕೆ ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲು ಎಲ್ಲಾ ಪ್ರಾಥಮಿಕ ಆರೋಗ್ಯ ಕೇಂದ್ರಗಳ ವೈದ್ಯಾಧಿಕಾರಿಗಳಿಗೆ ನಿರ್ದೇಶನ ನೀಡಿದರು.

ADVERTISEMENT

ಮಂಗನ ಕಾಯಿಲೆ ಬಾಧಿತ ಪ್ರದೇಶಗಳಲ್ಲಿ ಉಣುಗುಗಳ ನಿಯಂತ್ರಣ, ಮಂಗಗಳ ಅಸಹಜ ಸಾವಿನ ಕುರಿತು ಸರ್ವೇಕ್ಷಣೆ ಹಾಗೂ ಎಲ್ಲಾ ಆರೋಗ್ಯ ಕೇಂದ್ರಗಳಲ್ಲಿ ಜ್ವರ ಸಮೀಕ್ಷೆ ಮತ್ತು ರಕ್ತದ ಮಾದರಿಯನ್ನು ಸಂಗ್ರಹಿಸಿ ವರದಿಯನ್ನಾಧರಿಸಿ ಕ್ರಮ ಕೈಗೊಳ್ಳುವಂತೆ ಸೂಚಿಸಿದರು.

ಅರಣ್ಯ ಪ್ರದೇಶಗಳಲ್ಲಿ ಸುತ್ತಾಡುವವರು ಸುರಕ್ಷತಾ ಕ್ರಮವಾಗಿ ಆರೋಗ್ಯ ಇಲಾಖೆ ಉಚಿತವಾಗಿ ಒದಗಿಸುವ ಡೀಪಾ ತೈಲ ಲೇಪಿಸಿಕೊಳ್ಳುವಂತೆ ಸೂಚಿಸಿದ ಅವರು, ಜ್ವರ, ಶೀತ, ತಲೆನೋವು, ವಾಂತಿ, ಮೈ–ಕೈ ನೋವು, ನವೆ ಮುಂತಾದ ಅಹಜವಾಗಿರುವ ಲಕ್ಷಣಗಳು ಕಂಡುಬಂದಲ್ಲಿ ಸಾರ್ವಜನಿಕರು ತಕ್ಷಣ ಸ್ಥಳೀಯ ವೈದ್ಯಾಧಿಕಾರಿಯನ್ನು ಸಂಪರ್ಕಿಸಿ ಸೂಕ್ತ ಚಿಕಿತ್ಸೆ ಪಡೆದುಕೊಳ್ಳುವಂತೆ ಹೇಳಿದರು.

ಯಾವುದೇ ವ್ಯಕ್ತಿ ಸೋಂಕಿಗೆ ತುತ್ತಾಗಿರುವ ಲಕ್ಷಣಗಳು ಕಂಡುಬಂದಲ್ಲಿ ಅಂತಹ ವ್ಯಕ್ತಿಯ ರಕ್ತದ ಮಾದರಿಗಳನ್ನು ಸಂಗ್ರಹಿಸಿ, 24 ಗಂಟೆಯೊಳಗಾಗಿ ವರದಿ ಪಡೆದು, ಸೂಕ್ತ ಚಿಕಿತ್ಸೆ ನೀಡುವಂತೆ ಎಲ್ಲಾ ವೈದ್ಯಾಧಿಕಾರಿಗಳಿಗೆ ಸೂಚಿಸಲಾಗಿದೆ. ಸೋಂಕಿನ ನಿಯಂತ್ರಣಕ್ಕೆ ಸ್ಥಳೀಯರು, ಆಶಾ, ಅಂಗನವಾಡಿ ಕಾರ್ಯಕರ್ತೆಯರ ಸಹಕಾರ ಪಡೆದುಕೊಳ್ಳಬೇಕು ಎಂದ ಅವರು, ಡೀಪಾ ತೈಲವು ಮಂಗನ ಕಾಯಿಲೆ ಮಾತ್ರವಲ್ಲ ಮಲೇರಿಯಾ ಮತ್ತಿತರ ಸಾಂಕ್ರಾಮಿಕ ರೋಗಗಳ ನಿಯಂತ್ರಣಕ್ಕೂ ಸಹಕಾರಿಯಾಗಲಿದೆ ಎಂದರು.

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ನಟರಾಜ್‌, ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ. ನಾಗರಾಜ ನಾಯ್ಕ, ಡಾ.ಸಿದ್ದನಗೌಡ ಪಾಟೀಲ, ಡಾ. ಮಲ್ಲಪ್ಪ, ಡಾ. ಸ್ಮೃತಿ ಸಿ.ರಾಜ್‌, ಡಾ.ಜಿ.ಕೆ.ಅನುಷಾ , ಡಾ. ಶಾಂತಕುಮಾರ್‌, ಡಾ.ಪ್ರಶಾಂತ್‌, ಡಾ. ನಾರಾಯಣ್‌ ಉಪಸ್ಥಿತರಿದ್ದರು.

ಎನ್.ಹೇಮಂತ್

ಉಚಿತ ಚಿಕಿತ್ಸೆಗೆ ವ್ಯವಸ್ಥೆ

ಮಂಗನ ಕಾಯಿಲೆಯನ್ನು ಜಿಲ್ಲಾಡಳಿತ ಗಂಭೀರವಾಗಿ ಪರಿಗಣಿಸಿದೆ. ರೋಗದ ನಿಯಂತ್ರಣಕ್ಕೆ ಜಿಲ್ಲಾಡಳಿತವು ಅರಣ್ಯ ಆರೋಗ್ಯ ಕಂದಾಯ ಪಶುಸಂಗೋಪನೆ ಪಂಚಾಯತ್‌ರಾಜ್‌ ಇಲಾಖೆಗಳ ಸಹಯೋಗದೊಂದಿಗೆ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿದೆ. ಅಸಹಜವಾಗಿ 185 ಮಂಗಗಳು ಸಾವನ್ನಪ್ಪಿದ್ದು ಅದನ್ನು ಗುರುತಿಸಿ ಎಚ್ಚರಿಕೆ ಕ್ರಮ ವಹಿಸಲಾಗಿದೆ. ಅಲ್ಲದೇ ಸರ್ಕಾರದ ಮಾರ್ಗ ಸೂಚಿಯಂತೆ ಶಂಕಿತ ಪ್ರಕರಣಗಳು ಕಂಡುಬಂದಲ್ಲಿ ಜಿಲ್ಲಾ ಮೆಗ್ಗಾನ್‌ ಬೋಧನಾ ಆಸ್ಪತ್ರೆ ಸುಬ್ಬಯ್ಯ ಮೆಡಿಕಲ್‌ ಕಾಲೇಜು ಮತ್ತು ಮಣಿಪಾಲ್‌ನ ಕೆ.ಎಂ.ಸಿ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಾದ ಪ್ರಕರಣಗಳಿಗೆ ಉಚಿತವಾಗಿ ಚಿಕಿತ್ಸೆ ನೀಡಲು ವ್ಯವಸ್ಥೆ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ಗುರುದತ್ತ ಹಗಡೆ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.