ADVERTISEMENT

ಶಿವಮೊಗ್ಗ | ಇಂದಿನಿಂದ ಹಾಲು, ಹಾಲಿನ ಉತ್ಪನ್ನ ದರ ₹ 3ಕ್ಕೆ ಏರಿಕೆ

ಶಿವಮೊಗ್ಗ, ದಾವಣಗೆರೆ, ಚಿತ್ರದುರ್ಗ ಜಿಲ್ಲಾ ಸಹಕಾರ ಹಾಲು ಒಕ್ಕೂಟದ ಆಡಳಿತ ಮಂಡಳಿ

​ಪ್ರಜಾವಾಣಿ ವಾರ್ತೆ
Published 31 ಜುಲೈ 2023, 14:00 IST
Last Updated 31 ಜುಲೈ 2023, 14:00 IST
ಎನ್.ಎಚ್. ಶ್ರೀಪಾದರಾವ್
ಎನ್.ಎಚ್. ಶ್ರೀಪಾದರಾವ್   

ಶಿವಮೊಗ್ಗ: ಪ್ರತಿ ಲೀಟರ್ ನಂದಿನಿ ಹಾಲು ಮತ್ತು ಮೊಸರಿನ ಮಾರಾಟ ದರ ₹3 ಏರಿಕೆ ಮಾಡಲಾಗಿದೆ. ಪರಿಷ್ಕೃತ ದರ ಆ.1ರಿಂದ ಜಾರಿಗೆ ಬರಲಿದೆ‌ ಎಂದು ಶಿವಮೊಗ್ಗ, ದಾವಣಗೆರೆ, ಚಿತ್ರದುರ್ಗ ಜಿಲ್ಲಾ ಸಹಕಾರ ಹಾಲು ಒಕ್ಕೂಟ (ಶಿಮುಲ್)ದ ಅಧ್ಯಕ್ಷ ಎನ್.ಎಚ್. ಶ್ರೀಪಾದರಾವ್ ಹೇಳಿದರು.

ಹಾಲು ಉತ್ಪಾದಕರ ಸಹಕಾರ ಸಂಘಗಳಿಂದ ಖರೀದಿಸುವ ಹಾಲಿನ ಖರೀದಿ ದರ ₹ 3ಕ್ಕೆ ಪರಿಷ್ಕರಿಸಿದೆ. ಸರ್ಕಾರದ ಆದೇಶದಂತೆ ರಾಜ್ಯದ 14 ಒಕ್ಕೂಟಗಳಲ್ಲೂ ದರ ಪರಿಷ್ಕೃತವಾಗಿದೆ. ಹೆಚ್ಚಿಸಿದ ₹ 3 ರೈತರಿಗೆ ದೊರೆಯಲಿದೆ ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.

ಶಿಮುಲ್ ವ್ಯಾಪ್ತಿಯಲ್ಲಿ ಪ್ರತಿನಿತ್ಯ ರೈತರಿಂದ 6,70,000 ಲೀಟರ್ ಹಾಲು ಬರುತ್ತಿದೆ. ಶಿವಮೊಗ್ಗ, ದಾವಣಗೆರೆ ಮತ್ತು ಚಿತ್ರದುರ್ಗ ಜಿಲ್ಲೆಯ ಸಹಕಾರ ಒಕ್ಕೂಟ 1,253 ಹಾಲು ಉತ್ಪಾದಕರ ಸಹಕಾರ ಸಂಘಗಳಿಂದ ಮತ್ತು 144 ಬಿಎಂಸಿಗಳಿಂದ ದಿನ ನಿತ್ಯ ಸರಾಸರಿ 6.30 ಲಕ್ಷ ಲೀಟರ್ ಹಾಲು ಶೇಖರಿಸುತ್ತಿದ್ದು, ಇದರಿಂದ 1.50 ಲಕ್ಷ ರೈತ ಕುಟುಂಬಗಳು ಹೈನುಗಾರಿಕೆಯಿಂದ ಜೀವನೋಪಾಯ ಕಂಡುಕೊಂಡಿವೆ ಎಂದರು.

ADVERTISEMENT

ಪ್ರತಿದಿನ ಸರಾಸರಿ 3.30 ಲಕ್ಷ ಲೀಟರ್‌ನಷ್ಟು ಉತ್ಕೃಷ್ಟ ಗುಮಟ್ಟದ ಹಾಲು, ಮೊಸರು, ಹಾಲಿನ ಉತ್ಪನ್ನ ಸ್ಪರ್ಧಾತ್ಮಕ ದರಗಳಲ್ಲಿ ಗ್ರಾಹಕರಿಗೆ ಮಾರಾಟ ಮಾಡಲಾಗುತ್ತಿದೆ. ಒಕ್ಕೂಟಗಳಿಗೆ ದಿನನಿತ್ಯ 1.30 ಲಕ್ಷ ಕೆಜಿ. ಹಾಲು ಮಾರಾಟ ಮಾಡಿ, ಉಳಿದ 1.70 ಲಕ್ಷ ಕೆ.ಜಿ ಹಾಲು ಪರಿವರ್ತನೆಗೆ ರವಾನಿಸಲಾಗುತ್ತಿದೆ. ಕ್ಷೀರಭಾಗ್ಯ ಯೋಜನೆಯಡಿ ಅಂಗನವಾಡಿ, ಶಾಲಾ ಮಕ್ಕಳಿಗೆ ಕೆನೆಭರಿತ ಹಾಲಿನ ಪುಡಿ ಸರ್ಕಾರ ನಿಗದಿಪಡಿಸಿದ ದರದಲ್ಲಿ ಪೂರೈಕೆ ಆಗುತ್ತಿದೆ ಎಂದರು.

ಬೇರೆ ರಾಜ್ಯಗಳಿಗೆ ಹೋಲಿಸಿದರೆ ಕರ್ನಾಟಕದಲ್ಲಿ ಹಾಲಿನ ದರ ಕಡಿಮೆ ಇದೆ. ದರ ಹೆಚ್ಚಳದ ನಂತರ ಒಕ್ಕೂಟದಿಂದ ಸಂಘಗಳಿಗೆ ಹಾಲಿ ನೀಡುತ್ತಿರುವ ದರ ₹33.71ರಿಂದ ₹36.83 ಹೆಚ್ಚಳವಾಗಲಿದೆ. ಸಂಘದಿಂದ ಉತ್ಪಾದಕರಿಗೆ ಹಾಲಿ ನೀಡುತ್ತಿರುವ ದರ ₹31.85 ರಿಂದ ₹ 34.97ಕ್ಕೆ ಹೆಚ್ಚಳವಾಗಲಿದೆ ಎಂದು ತಿಳಿಸಿದರು.

ಶಿಮುಲ್ ಒಕ್ಕೂಟದ ಉಪಾಧ್ಯಕ್ಷ ಎಚ್.ಕೆ. ಬಸಪ್ಪ, ನಿರ್ದೇಶಕರಾದ ವೀರಭದ್ರ ಬಾಬು, ಡಿ. ಆನಂದ, ವಿದ್ಯಾಧರ, ಟಿ.ಶಿವಶಂಕರಪ್ಪ, ಎಚ್.ಬಿ. ದಿನೇಶ್, ತಾರಾನಾಥ್, ಬಿ.ಬಿ. ಬಸವರಾಜಪ್ಪ, ಕೆ.ಎನ್. ಸೋಮಶೇಖರಪ್ಪ, ಜಿ.ಪಿ.ಯಶವಂತರಾಜು, ಎನ್.ಎಚ್. ಭಾಗ್ಯ, ಎನ್.ಡಿ. ಹರೀಶ್, ಕೆ.ಪಿ. ರುದ್ರಗೌಡ, ಎಸ್.ಜಿ.ಶೇಖರ್ ಇದ್ದರು.

Cut-off box - ಹಾಲು ಹಾಲಿನ ಉತ್ಪನ್ನ ದರ ಏರಿಕೆ ದರ ಪರಿಷ್ಕರಣೆಯ ನಂತರ ಟೋನ್ಡ್ ಮಿಲ್ಕ್ ಲೀಟರ್‌ಗೆ ₹ 39–42 ಅರ್ಧ ಲೀ.ಗೆ ₹ 20-22 ಶುಭಂ ಸ್ಟಾಂಡರ್ಡ್ ಲೀ.ಗೆ ₹ 45-48 ಅರ್ಧ ಲೀ.ಗೆ ₹ 23-25 ಹೋಮೋಜೀನೈಜ್ಡ್ 1 ಲೀ.ಗೆ ₹ 46-49 ಅರ್ಧ ಲೀ.ಗೆ ₹ 23-25 200 ಮಿ.ಲೀ.ಗೆ ₹ 11-12 ಮೊಸರು ಅರ್ಧ ಲೀ.ಗೆ ₹ 24-26 200 ಮಿಲೀ.ಗೆ ₹ 11-12 ಮಜ್ಜಿಗೆ 200 ಮಿ.ಲೀ.ಗೆ ₹ 8-9 ಸ್ವೀಟ್ ಲಸ್ಸೀ 200 ಮಿ.ಲೀ.ಗೆ ₹12ರಿಂದ 13 ಹೆಚ್ಚಳ ಆಗಲಿದೆ. ಇದರಿಂದ ಮಾರಾಟಗಾರರಿಗೂ ಕಮಿಷನ್ ಹೆಚ್ಚಳ ಆಗಲಿದೆ ಎಂದು ಶ್ರೀಪಾದರಾವ್ ಹೇಳಿದರು.

Cut-off box - ಚಿಲ್ಲರೆ ಸಮಸ್ಯೆಗೆ 10 ಎಂ.ಎಲ್‌. ಪರಿಹಾರ ಹಾಲು ಪ್ರತಿ ಲೀಟರ್‌ಗೆ ₹ 3 ಹೆಚ್ಚಳವಾಗಲಿದೆ. ಅರ್ಧ ಲೀಟರ್‌ಗೆ ₹1.50 ಏರಿಕೆಯಾಗಬೇಕು. ಒಂದು ವೇಳೆ ₹ 1.50 ಹೆಚ್ಚಳ ಮಾಡಿದರೆ 50 ಪೈಸೆ ಚಿಲ್ಲರೆ ಸಮಸ್ಯೆ ಉಂಟಾಗಲಿದೆ. ಈ ಕಾರಣ ಹಾಲು ಒಕ್ಕೂಟ ಅರ್ಧ ಲೀಟರ್‌ ಪ್ಯಾಕೆಟ್‌ನಲ್ಲಿ 10 ಎಂ.ಎಲ್‌ ಹೆಚ್ಚು ಭರ್ತಿ ಮಾಡಿ ದರವನ್ನು ₹2 ಏರಿಕೆ ಮಾಡಿದೆ. ಹಾಗಾಗಿ ಅರ್ಧ ಲೀಟರ್‌ ಪ್ಯಾಕೆಟ್‌ನಲ್ಲಿ 510 ಎಂ.ಎಲ್‌ ಹಾಲು ದೊರೆಯಲಿದೆ ಎಂದು ಶ್ರೀಪಾದರಾವ್ ಮಾಹಿತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.