ADVERTISEMENT

ಸಚಿವ ಮಧು ಬಂಗಾರಪ್ಪ ಜನ್ಮದಿನ: 156 ಮಂದಿಗೆ ವಿಮಾನಯಾನ ಭಾಗ್ಯ!

ಪೌರ ಕಾರ್ಮಿಕರು, ವಿದ್ಯಾರ್ಥಿಗಳಿಗೆ ಗೌರವ

​ಪ್ರಜಾವಾಣಿ ವಾರ್ತೆ
Published 1 ಮಾರ್ಚ್ 2026, 21:49 IST
Last Updated 1 ಮಾರ್ಚ್ 2026, 21:49 IST
ಶಿವಮೊಗ್ಗದ ಸೋಗಾನೆ ವಿಮಾನ ನಿಲ್ದಾಣದಿಂದ ಬೆಂಗಳೂರಿಗೆ ತೆರಳಿದ ಸೊರಬದ ಪೌರ ಕಾರ್ಮಿಕರಿಗೆ ಸಚಿವ ಮಧು ಬಂಗಾರಪ್ಪ ನೇತೃತ್ವದಲ್ಲಿ ಭಾನುವಾರ ಬೀಳ್ಕೊಡಲಾಯಿತು
ಶಿವಮೊಗ್ಗದ ಸೋಗಾನೆ ವಿಮಾನ ನಿಲ್ದಾಣದಿಂದ ಬೆಂಗಳೂರಿಗೆ ತೆರಳಿದ ಸೊರಬದ ಪೌರ ಕಾರ್ಮಿಕರಿಗೆ ಸಚಿವ ಮಧು ಬಂಗಾರಪ್ಪ ನೇತೃತ್ವದಲ್ಲಿ ಭಾನುವಾರ ಬೀಳ್ಕೊಡಲಾಯಿತು   

ಶಿವಮೊಗ್ಗ: ಸೊರಬ ಪುರಸಭೆಯ 36 ಪೌರಕಾರ್ಮಿಕರು ಹಾಗೂ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಅತಿಹೆಚ್ಚು ಅಂಕ ಪಡೆದ ಜಿಲ್ಲೆಯ 120 ವಿದ್ಯಾರ್ಥಿಗಳು ಸೇರಿದಂತೆ 156 ಜನರನ್ನು ವಿಮಾನದಲ್ಲಿ ಬೆಂಗಳೂರಿಗೆ ಕರೆದೊಯ್ಯುವ ಮೂಲಕ ಮಾರ್ಚ್ 2 ರಂದು ತಮ್ಮ ಜನ್ಮದಿನವನ್ನು ಅರ್ಥಪೂರ್ಣವಾಗಿ ಆಚರಿಸಿಕೊಳ್ಳಲು ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ ಸಚಿವ ಮಧು ಬಂಗಾರಪ್ಪ ಮುಂದಾಗಿದ್ದಾರೆ.

ಇಲ್ಲಿನ ಸೋಗಾನೆ ವಿಮಾನ ನಿಲ್ದಾಣದಿಂದ ಭಾನುವಾರ ಮೊದಲ ಹಂತದಲ್ಲಿ 36 ಪೌರ ಕಾರ್ಮಿಕರು ಬೆಂಗಳೂರಿಗೆ ಪ್ರಯಾಣ ಬೆಳೆಸಿದರು. ಅವರನ್ನು ಸಚಿವರ ನೇತೃತ್ವದಲ್ಲಿ ಕಾಂಗ್ರೆಸ್‌ ಜಿಲ್ಲಾ ಘಟಕದ ಪದಾಧಿಕಾರಿಗಳ ಬೀಳ್ಕೊಟ್ಟರು. 

‘ಎಲ್ಲರಿಗೂ ಬೆಂಗಳೂರಿನಲ್ಲಿ ವಾಸ್ತವ್ಯಕ್ಕೆ ವ್ಯವಸ್ಥೆ ಮಾಡಲಾಗಿದೆ. ವಿದ್ಯಾರ್ಥಿಗಳಲ್ಲಿ 60 ಮಂದಿ ಮಂಗಳವಾರ ನಸುಕಿನಲ್ಲಿ ರೈಲಿನಲ್ಲಿ ಬೆಂಗಳೂರಿಗೆ ತೆರಳಿ, ಗುರುವಾರ ಮಧ್ಯಾಹ್ನ ವಿಮಾನದಲ್ಲಿ ಶಿವಮೊಗ್ಗಕ್ಕೆ ಮರಳುವರು. ಉಳಿದ 60 ವಿದ್ಯಾರ್ಥಿಗಳು ಮಂಗಳವಾರ ಮಧ್ಯಾಹ್ನ ಸಚಿವರ ಜೊತೆಗೆ ವಿಮಾನದಲ್ಲಿ ಪ್ರಯಾಣ ಬೆಳೆಸಲಿದ್ದಾರೆ. ಬುಧವಾರ ರೈಲಿನಲ್ಲಿ ಶಿವಮೊಗ್ಗಕ್ಕೆ ವಾಪಸ್ ಬರಲಿದ್ದಾರೆ. ಎಲ್ಲರೂ ಬೆಂಗಳೂರಿನಲ್ಲಿ ಮಧು ಬಂಗಾರಪ್ಪ ಅಭಿಮಾನಿಗಳು ಆಯೋಜಿಸಿರುವ ಜನ್ಮದಿನಾಚರಣೆ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವರು’ ಎಂದು ಕಾಂಗ್ರೆಸ್ ಹಿಂದುಳಿದ ವರ್ಗಗಳ ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ಜಿ.ಡಿ.ಮಂಜುನಾಥ್ ‘ಪ್ರಜಾವಾಣಿ’ಗೆ ತಿಳಿಸಿದರು.

ADVERTISEMENT

ಸಿಎಂ ಮೆಚ್ಚುಗೆ: ತರೀಕೆರೆಗೆ ತೆರಳಲು ಭಾನುವಾರ ಮಧ್ಯಾಹ್ನ ಮುಖ್ಯಮಂತ್ರಿ ಸಿದ್ದರಾಮಯ್ಯ ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ ಬಂದಿದ್ದರು. ಅಲ್ಲಿ ವಿಮಾನ ಹತ್ತಲು ಬಂದ ಪೌರ ಕಾರ್ಮಿಕರ ತಂಡವನ್ನು ಕಂಡು ಸಚಿವರ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು. ‘ಶ್ರಮಿಕ ವರ್ಗದವರನ್ನು ಈ ರೀತಿ ಸನ್ಮಾನಿಸಿರುವುದು ಅಪರೂಪದ ಹಾಗೂ ಶ್ಲಾಘನೀಯ ಕಾರ್ಯ’ ಎಂದರು.

ಮೊದಲ ಬಾರಿಗೆ ಲೋಹದ ಹಕ್ಕಿಯ ಬೆನ್ನೇರುವ ತವಕದಲ್ಲಿ ನಿಲ್ದಾಣದ ಲಾಂಜ್ ಒಳಗೆ ತೆರಳಿದ ಪೌರ ಕಾರ್ಮಿಕರಲ್ಲಿ ಸಂಭ್ರಮ ಮನೆ ಮಾಡಿತ್ತು.

ಸಚಿವ ಮಧು ಬಂಗಾರಪ್ಪ ಅವರ ಹುಟ್ಟುಹಬ್ಬ ಆಚರಣೆ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಭಾನುವಾರ ಶಿವಮೊಗ್ಗದಿಂದ ವಿಮಾನದಲ್ಲಿ ಬೆಂಗಳೂರಿಗೆ ಹೊರಟ ಸೊರಬದ ಪೌರ ಕಾರ್ಮಿಕರು ವಿಮಾನ ನಿಲ್ದಾಣದಲ್ಲಿ ಎದುರಾದಾಗ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೊಂದಿಗೆ ಚರ್ಚಿಸಿದರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.