
ಶಿವಮೊಗ್ಗ: ಜಿಲ್ಲೆಯಲ್ಲಿ ಗಾಂಜಾ ಸೇರಿದಂತೆ ಮಾದಕ ವಸ್ತುಗಳ ಮಾರಾಟ, ಸೇವನೆ ಮಾಡುವವರ ವಿರುದ್ಧ ಬರೀ ಪ್ರಕರಣ ದಾಖಲಿಸುವುದು ಅಲ್ಲ. ಅವರಿಗೆ ಕಠಿಣ ಶಿಕ್ಷೆ, ದಂಡನೆಗೆ ಗುರಿಪಡಿಸಲು ಅಗತ್ಯ ಕ್ರಮ ವಹಿಸುವಂತೆ ಎಸ್‌ಪಿ ಬಿ. ನಿಖಿಲ್ ಅವರಿಗೆ ಸೂಚನೆ ನೀಡಿದ್ದೇನೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಹೇಳಿದರು.
ಇಲ್ಲಿನ ಸೋಗಾನೆ ವಿಮಾನ ನಿಲ್ದಾಣದಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜಿಲ್ಲೆ, ರಾಜ್ಯ ಮಾತ್ರವಲ್ಲ ದೇಶದಾದ್ಯಂತ ಮಾದಕ ವಸ್ತುಗಳ ಸರಬರಾಜು, ಸಾಗಾಣಿಕೆ ಮತ್ತು ಬಳಕೆ ನಿಯಂತ್ರಣವಾಗಬೇಕು. ಇಂತಹ ಅಕ್ರಮಗಳಲ್ಲಿ ತೊಡಗಿರುವವರ ವಿರುದ್ಧ ಕ್ರಮ ಕೈಗೊಳ್ಳಲು ಪೊಲೀಸ್ ಇಲಾಖೆಗೆ ನಿರ್ದೇಶನ ನೀಡಿದ್ದೇನೆ. ಅಲ್ಲದೇ ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನಾ ಸಭೆಗಳಲ್ಲೂ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಆ ಬಗ್ಗೆ ಮುಖ್ಯಮಂತ್ರಿಗಳೊಂದಿಗೆ ಸಮಾಲೋಚನೆ ನಡೆಸಲಾಗಿದೆ ಎಂದರು.
ಜಿಲ್ಲೆಯಲ್ಲಿ ಶಿಕ್ಷಕರೊಬ್ಬರ ಮೇಲೆ ಫೋಕ್ಸೋ ಪ್ರಕರಣ ದಾಖಲಾಗಿದೆ. ಅವರ ವಿರುದ್ಧ ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳಲಾಗುವುದು. ಶನಿವಾರ ಖಾಸಗಿ ಬಸ್ ಅಗ್ನಿ ಅವಘಡಕ್ಕೆ ತುತ್ತಾಗಿದೆ. ಇದು ಜಿಲ್ಲೆಯಲ್ಲಿ ಪದೇಪದೆ ಆಗುತ್ತಿರುವುದು ಕಂಡುಬಂದಿದೆ. ಖಾಸಗಿ ಬಸ್‌ಗಳಲ್ಲಿ ಸುರಕ್ಷಿತ ಪ್ರಯಾಣದ ಖಾತರಿಗೆ ಸಾರಿಗೆ ಅಧಿಕಾರಿಗಳು ಕ್ರಮ ಕೈಗೊಳ್ಳುವಂತೆ ಸೂಚನೆ ನೀಡುವೆ ಎಂದು ತಿಳಿಸಿದರು.
ಭರವಸೆ ಗುಂಪು ಹಲ್ಲೆಯಿಂದ ಮೃತಪಟ್ಟ ಊರಗಡೂರಿನ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿ ಸಂಕೇತ್‌ನ ಕುಟುಂಬಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ₹15 ಲಕ್ಷ ಪರಿಹಾರ ವಿತರಿಸಿದ್ದಾರೆ. ಸರ್ಕಾರದಿಂದ ಇನ್ನೂ ಅಗತ್ಯ ನೆರವು ನೀಡಲಾಗುವುದು ಎಂದು ಸಚಿವ ಮಧು ಬಂಗಾರಪ್ಪ ಭಾನುವಾರ ಇಲ್ಲಿ ಭರವಸೆ ನೀಡಿದರು. ಶೀಘ್ರ ಸಂಕೇತ್ ನಿವಾಸಕ್ಕೆ ಭೇಟಿ ನೀಡಿ ಪೋಷಕರಿಗೆ ಸಾಂತ್ವನ ಹೇಳುವುದಾಗಿ ತಿಳಿಸಿದ ಅವರು ಸಂಕೇತ್ ಸಹೋದರಿಯ ಶಿಕ್ಷಣಕ್ಕೂ ನೆರವು ಕಲ್ಪಿಸಲಾಗುತ್ತಿದೆ ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು. ಎಸ್ಸೆಸ್ಸೆಲ್ಸಿ ಮಕ್ಕಳ ಶೈಕ್ಷಣಿಕ ಹಿತದೃಷ್ಠಿಯಿಂದ ಸರ್ಕಾರಿ ಪ್ರೌಢಶಾಲೆಗಳಲ್ಲಿ ಪ್ರತಿದಿನ ಸಂಜೆ ವಿಶೇಷ ತರಗತಿಗಳ ನಡೆಸಲಾಗುತ್ತಿದೆ. ತರಗತಿಯ ನಂತರ ವಿದ್ಯಾರ್ಥಿಗಳು ಸಕಾಲದಲ್ಲಿ ಮನೆಗೆ ಸುರಕ್ಷಿತವಾಗಿ ಹಿಂದಿರುಗುವ ಬಗ್ಗೆ ಪೋಷಕರು ಗಮನಹರಿಸಬೇಕು ಎಂದು ಕಿವಿಮಾತು ಹೇಳಿದರು.
ಕರ್ನಾಟಕ ಪಬ್ಲಿಕ್ ಶಾಲೆಗಳಿಗೆ ಚಾಲನೆ ನೀಡವ ರಾಜ್ಯಮಟ್ಟದ ಕಾರ್ಯಕ್ರಮವನ್ನು ಬಜೆಟ್ ನಂತರ ಶಿವಮೊಗ್ಗದಲ್ಲಿ ಆಯೋಜಿಸುವ ಯೋಜನೆ ಹೊಂದಲಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಪಾಲ್ಗೊಳ್ಳಲಿದ್ದಾರೆ ಎಂದು ತಿಳಿಸಿದ ಮಧು ಬಂಗಾರಪ್ಪ ರಾಜ್ಯ ಸರ್ಕಾರದ ಇದೇ ಅವಧಿಯಲ್ಲಿ ಶರಾವತಿ ಮುಳುಗಡೆ ಸಂತ್ರಸ್ತರ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳಲಾಗುತ್ತಿದೆ ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು. ಹಣಕಾಸು ಮಂಜೂರಾತಿ ಉದ್ದೇಶದಿಂದ 1995ರ ನಂತರದ ಖಾಸಗಿ ಕನ್ನಡ ಶಾಲೆಗಳನ್ನು ಅನುದಾನದ ವ್ಯಾಪ್ತಿಗೊಳಪಡಿಸುವ ವಿಷಯವನ್ನು ಪ್ರಸಕ್ತ ಬಜೆಟ್‌ನಲ್ಲಿ ಸೇರ್ಪಡೆಗೊಳಿಸುವ ಸಂಬಂಧ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೊಂದಿಗೆ ಸಮಾಲೋಚನೆ ನಡೆಸಲಾಗಿದೆ. ಅಲ್ಲದೇ ಅದಕ್ಕೆ ಅಗತ್ಯವಿರುವ ಅನುದಾನವನ್ನು ಹಣಕಾಸು ಇಲಾಖೆಯಿಂದ ಬಿಡುಗಡೆಗೆ ಕ್ರಮ ವಹಿಸಬೇಕಾಗುವುದು. ಈ ಶಿಕ್ಷಕರ ನೇಮಕಾತಿಗೆ ಸಂಬಂಧಿಸಿದಂತೆ ವೇಗ ಹೆಚ್ಚಿಸಲು ಸೂಚಿಸಲಾಗಿದೆ. ಮುಂದಿನ ಶೈಕ್ಷಣಿಕ ವರ್ಷದ ಆರಂಭದಿಂದಲೇ ನೂತನ ಶಿಕ್ಷಕರ ಸೇವೆಯನ್ನು ಬಳಸಿಕೊಳ್ಳುವ ಆಶಯ ಹೊಂದಲಾಗಿದೆ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.