
ಶಿಕಾರಿಪುರ: ಜಿಲ್ಲೆಯ ರೈತರ ಸಂಕಷ್ಟಕ್ಕೆ ಪರಿಹಾರ ಕಲ್ಪಿಸುವ ನಿಟ್ಟಿನಲ್ಲಿ ಕೃಷಿ ವಿಶ್ವವಿದ್ಯಾಲಯ ಕಾರ್ಯನಿರ್ವಹಿಸಬೇಕು. ಆಗ ವಿಶ್ವವಿದ್ಯಾಲಯ ಸ್ಥಾಪನೆ ಸಾರ್ಥಕವಾಗುತ್ತದೆ ಎಂದು ಶಾಸಕ ಬಿ.ವೈ.ವಿಜಯೇಂದ್ರ ಹೇಳಿದರು.
ತಾಲ್ಲೂಕಿನ ಚುರ್ಚಿಗುಂಡಿ ಗ್ರಾಮದಲ್ಲಿ ಸೋಮವಾರ ಕೆಳದಿ ಶಿವಪ್ಪನಾಯಕ ಕೃಷಿ, ತೋಟಗಾರಿಕೆ ವಿಶ್ವವಿದ್ಯಾಲಯ, ಕೃಷಿ ವಿಜ್ಞಾನಗಳ ಮಹಾವಿದ್ಯಾಲಯ ಇರುವಕ್ಕಿ ಆಯೋಜಿಸಿದ್ದ ಕೃಷಿ ವಸ್ತು ಪ್ರದರ್ಶನ ಉದ್ಘಾಟಿಸಿ ಮಾತನಾಡಿದರು.
ಕೃಷಿ ವಿವಿ ವಿದ್ಯಾರ್ಥಿಗಳು, ಉಪನ್ಯಾಸಕರು ಜಿಲ್ಲೆಯ ಪ್ರತಿಯೊಂದು ಹಳ್ಳಿಗೆ ತೆರಳಿ ರೈತನ ಪರಿಸ್ಥಿತಿ ಅಧ್ಯಯನ ನಡೆಸಿ ಪರಿಹಾರ ಕಲ್ಪಿಸುವ ಕೆಲಸ ಮಾಡಬೇಕು. ಅದು ವಿದ್ಯಾರ್ಥಿ, ರೈತನ ಭವಿಷ್ಯ ಉಜ್ವಲಕ್ಕೆ ಕಾರಣವಾಗುತ್ತದೆ ಎಂದರು.
ಜಿಲ್ಲೆಯಲ್ಲಿ ಕೃಷಿ ವಿವಿ ಸ್ಥಾಪನೆ ಮಾಡಿದ ಬಿ.ಎಸ್.ಯಡಿಯೂರಪ್ಪ ಅವರು ರೈತರಿಗೆ ಪ್ರತ್ಯೇಕ ಬಜೆಟ್ ಮಂಡಿಸಿದರಲ್ಲದೆ ಸಂಸದ ಬಿ.ವೈ.ರಾಘವೇಂದ್ರ ಪ್ರಯತ್ನದಿಂದಾಗಿ ತಾಲ್ಲೂಕಿನ ರೈತರ ಆದಾಯ ಹೆಚ್ಚಾಗುವುದಕ್ಕೆ ಅಗತ್ಯವಿರುವ ನೀರಾವರಿ ಸೌಲಭ್ಯ ಹೆಚ್ಚಳ ಸೇರಿ ಅಗತ್ಯ ಮೂಲ ಸೌಕರ್ಯ ಕಲ್ಪಿಸಿದ್ದಾರೆ. ಅವುಗಳ ಸದ್ಭಳಕೆ ಮಾಡಿಕೊಂಡು ರೈತರು ಪ್ರಗತಿ ಹೊಂದಬೇಕು. ಹೊಸ ತಂತ್ರಜ್ಞಾನ ಅಳವಡಿಕೆ, ಸಮಗ್ರ ಕೃಷಿ ಪದ್ಧತಿ ಮೂಲಕ ರೈತರು ತಮ್ಮ ಸಂಕಷ್ಟಕ್ಕೆ ಉತ್ತರ ಕಂಡಕೊಳ್ಳಬಹುದು. ಈ ನಿಟ್ಟಿನಲ್ಲಿ ರೈತರು ಚಿಂತನೆ ನಡೆಸಬೇಕು ಎಂದು ಹೇಳಿದರು.
ಬೀಜೋಪಚಾರ, ಬೀಜದ ಸ್ವಾವಲಂಭನೆ, ಸಾವಯವ ಪದ್ಧತಿ ಅಳವಡಿಕೆ, ರಸಗೊಬ್ಬರ ಕಳಪೆ ಪತ್ತೆಹಚ್ಚುವ ವಿಧಾನ ಕಲಿಯುವುದು, ರೈತರು ಸಂಘಟಿತರಾಗಿ ಅಗತ್ಯ ಮಾರುಕಟ್ಟೆ ಕಂಡುಕೊಳ್ಳುವ ಪ್ರಯತ್ನ ಮಾಡಬೇಕು ಎಂದು ಕೃಷಿಕ ಸಮಾಜದ ರಾಜ್ಯಘಟಕ ಅಧ್ಯಕ್ಷ ನಗರದ ಮಹಾದೇವಪ್ಪ ಸಲಹೆ ನೀಡಿದರು.
ವಿದ್ಯಾರ್ಥಿಗಳ ಕೃಷಿ ಕಾರ್ಯಾನುಭವ ಪ್ರಯುಕ್ತ ವಿದ್ಯಾರ್ಥಿಗಳು ಆಯೋಜಿಸಿರುವ ಕೃಷಿ ವಸ್ತು ಪ್ರದರ್ಶನ ಅತ್ಯುತ್ತಮವಾಗಿದೆ. ರೈತರ ಪಾಲ್ಗೊಳ್ಳುವಿಕೆ ವಸ್ತುಪ್ರದರ್ಶನ ಯಶಸ್ಸಿಗೆ ಸಾಕ್ಷಿಯಾಗಿದೆ. ರೈತರ ಜಮೀನಿಗೆ ತೆರಳಿ ಅವರ ಸಮಸ್ಯೆ ಅಧ್ಯಯನ ನಡೆಸಿರುವ ವಿದ್ಯಾರ್ಥಿಗಳು ಪ್ರಾತ್ಯಕ್ಷಿಕೆ ಮೂಲಕ ಸಮಸ್ಯೆಗೆ ಪರಿಹಾರ ನೀಡುವ ಪ್ರಯತ್ನ ನಡೆಸಿದ್ದಾರೆ. ರೈತರ ಅಭ್ಯುದಯಕ್ಕೆ ಇನ್ನಷ್ಟು ಶ್ರಮವಹಿಸುವ ಮೂಲಕ ರೈತರ ಕಷ್ಟಕ್ಕೆ ಪರಿಹಾರ ಒದಗಿಸುವ ಕೆಲಸ ಕೃಷಿ ವಿವಿ ಮಾಡುತ್ತದೆ ಎಂದು ಕೃಷಿ ವಿವಿ ಕುಲಪತಿ ಆರ್.ಸಿ.ಜಗದೀಶ್ ಭರವಸೆ ನೀಡಿದರು.
ಸಭೆಗೂ ಮುನ್ನ ಅತಿಥಿಗಳಿಗೆ ಪೂರ್ಣಕುಂಭ ಸ್ವಾಗತ ನಡೆಯಿತು. ಅಲಂಕೃತ ಎತ್ತುಗಳು ಗಮನ ಸೆಳೆದವು. ಸಮಗ್ರ ಕೃಷಿ ಪದ್ಧತಿ ಪ್ರಾತ್ಯಕ್ಷಿಕೆ, ಕೃಷಿ ಪರಿಕರ ಪ್ರದರ್ಶನ ಮತ್ತು ಮಾರಾಟ ಮಳಿಗೆ ವೀಕ್ಷಣೆ ಮಾಡಲಾಯಿತು. ತಾಲ್ಲೂಕಿನ ವಿವಿದೆಡೆಯಿಂದ ಆಗಮಿಸಿದ ರೈತರು ವಸ್ತುಪ್ರದರ್ಶನ ಮಳಿಗೆಗೆ ಭೇಟಿ ನೀಡಿ ಮಾಹಿತಿ ಪಡೆದರು.
ಚುರ್ಚಿಗುಂಡಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಲತಾ ರಾಘವೇಂದ್ರ ಕಾರ್ಯಕ್ರಮ ಅಧ್ಯಕ್ಷತೆ ವಹಿಸಿದ್ದರು. ಕೃಷಿ ಸಮಾಜ ತಾಲ್ಲೂಕು ಘಟಕದ ಅಧ್ಯಕ್ಷ ಹುಲ್ಮಾರ್ ಮಹೇಶ್, ಕೃಷಿ ವಿವಿ ನಿರ್ದೇಶಕ ಹೇಮ್ಲಾನಾಯಕ್, ಸಹಾಯಕ ಕೃಷಿ ನಿರ್ದೇಶಕ ಕಿರಣ್‌ಕುಮಾರ್ ಹರ್ತಿ, ರುದ್ರೇಗೌಡ, ಸುರೇಶ್ ಗುಡ್ಡಳ್ಳಿ, ಬಿ.ಎಂ.ಪಾಲಾಕ್ಷಪ್ಪ, ಬೇಗೂರು ಶಿವಪ್ಪ, ಎಸ್.ಟಿ.ವಿರೇಶ್, ಎಸ್.ಶಶಿಧರ, ಎ.ಪರಮೇಶ್ವರಪ್ಪ ರೈತರು, ವಿದ್ಯಾರ್ಥಿಗಳು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.