
ಸಾಗರ: ಯಾವುದೆ ಪ್ರಕಾರದ ಸಂಗೀತಕ್ಕೆ ಮನಸೋಲುವುದು ಸಾಂಸ್ಕೃತಿಕ ಮನಸ್ಸಿನ ಸಂಕೇತವಾಗಿದೆ ಎಂದು ಶಾಸಕ ಗೋಪಾಲಕೃಷ್ಣ ಬೇಳೂರು ಹೇಳಿದರು.
ಇಲ್ಲಿನ ಅಜಿತ್ ಸಭಾಭವನದಲ್ಲಿ ಭಾನುವಾರ ನಡೆದ ಶಾರದಾ ಸಂಗೀತ ವಿದ್ಯಾಲಯದ ವಾರ್ಷಿಕೋತ್ಸವ ಸಮಾರಂಭದಲ್ಲಿ ಉತ್ತಮ ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ಪ್ರಮಾಣಪತ್ರ ವಿತರಿಸಿ ಮಾತನಾಡಿದರು.
ಸಂಗೀತ, ನೃತ್ಯ, ಸಾಹಿತ್ಯ, ಕಲೆಗಳಿಗೆ ಸಂಬಂಧಪಟ್ಟ ಚಟುವಟಿಕೆಗಳಲ್ಲಿ ಪಾಲ್ಗೊಳ್ಳಲು ಪೋಷಕರು ಮಕ್ಕಳಿಗೆ ಪ್ರೋತ್ಸಾಹ ನೀಡಿದರೆ ಅವರಲ್ಲಿ ಸೃಜನಶೀಲತೆ ಬೆಳೆಯುತ್ತದೆ. ಈ ಮೂಲಕ ಅವರ ವ್ಯಕ್ತಿತ್ವವು ವಿಕಸನಗೊಳ್ಳುತ್ತದೆ ಎಂದರು.
ಸಾಗರದಲ್ಲಿ ಶಾಸ್ತ್ರೀಯ ಸಂಗೀತ, ನೃತ್ಯವನ್ನು ಕಲಿಸುವ ಹಲವು ಸಂಸ್ಥೆಗಳು ಸಕ್ರಿಯವಾಗಿರುವುದು ಈ ಕ್ಷೇತ್ರದಲ್ಲಿ ಆಸಕ್ತಿಯುಳ್ಳ ಮಕ್ಕಳಿಗೆ ವರದಾನವಾಗಿದೆ. ಇಂತಹ ಸಂಸ್ಥೆಗಳಿಗೆ ಸಾರ್ವಜನಿಕರ ಪ್ರೋತ್ಸಾಹ ಅಗತ್ಯ ಎಂದು ಅವರು ಹೇಳಿದರು.
ಸಾಗರ ಟೌನ್ ಮಹಿಳಾ ಸಮಾಜದ ಅಧ್ಯಕ್ಷೆ ನಂದಾ ಗೊಜನೂರು ಅಧ್ಯಕ್ಷತೆ ವಹಿಸಿದ್ದರು. ಶಾರದಾ ಸಂಗೀತ ವಿದ್ಯಾಲಯದ ಗೀತಾ ಸೋಮೇಶ್, ಪ್ರಮುಖರಾದ ಡಾ.ಅರುಣ್ ಕುಮಾರ್, ಐ.ಎನ್.ಸುರೇಶ್ ಬಾಬು, ಮಂಜುಳಾ ಎಂ. ವಿದ್ವಾನ್ ಗುರುದತ್ತ, ವಿದ್ವಾನ್ ಅರುಣ್ ಕುಮಾರ್, ಮಧುಮುರಳಿ, ಯಶೋಧರ ಇದ್ದರು. ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.