ADVERTISEMENT

ಕೋಳಿ ಫಾರಮ್‌ಗೆ ಆಧುನಿಕತೆಯ ಸ್ಪರ್ಶ; ಇಲ್ಲ ಅಮೋನಿಯಾ ವಾಸನೆ

​ಪ್ರಜಾವಾಣಿ ವಾರ್ತೆ
Published 4 ಫೆಬ್ರುವರಿ 2026, 4:09 IST
Last Updated 4 ಫೆಬ್ರುವರಿ 2026, 4:09 IST
ತಾಪಮಾನ ಕಂಟ್ರೋಲರ್‌ ಮತ್ತು ಸೈಲರ್‌ ಸಿಸ್ಟಂ ತೋರಿಸುತ್ತಿರುವ ನಿಶಾಂತ್‌ ಎ.ಎಸ್.
ತಾಪಮಾನ ಕಂಟ್ರೋಲರ್‌ ಮತ್ತು ಸೈಲರ್‌ ಸಿಸ್ಟಂ ತೋರಿಸುತ್ತಿರುವ ನಿಶಾಂತ್‌ ಎ.ಎಸ್.   

ತೀರ್ಥಹಳ್ಳಿ: ಪೌಲ್ಟ್ರಿ ಫಾರಂ ಎಂದಾಗ ಅಮೋನಿಯಾದ ವಾಸನೆ ಸಾಮಾನ್ಯ. ಕೋಳಿ ಶೆಡ್‌ ಇರುವ ಕಡೆ ನೊಣ ಹೆಚ್ಚಾಗಿರುತ್ತವೆ. ಅಕ್ಕಪಕ್ಕದ ಮನೆಯವರಿಗೂ ತೊಂದರೆ. ಇಂತಹ ಹಲವು ಸವಾಲು ಎದುರಿಸಿದ್ದ ರೈತರೊಬ್ಬರು ಅತ್ಯಾಧುನಿಕ ತಂತ್ರಜ್ಞಾನ ಬಳಸಿ 15,000 ಕೋಳಿಗಳ ಹವಾ ನಿಯಂತ್ರಣ (ಎಸಿ) ಘಟಕ ಆರಂಭಿಸಿದ್ದಾರೆ.

ಸಾಂಪ್ರದಾಯಿಕ ಫಾರಂಗೆ ಹೋಲಿಸಿದರೆ ಇಲ್ಲಿ ಕೇವಲ 35 ದಿನಗಳಲ್ಲಿ ಕೋಳಿಗಳು ಮಾರಾಟಕ್ಕೆ ಸಿದ್ಧಗೊಳ್ಳುತ್ತವೆ. ಅಲ್ಲದೆ 500ರಿಂದ 600 ಗ್ರಾಂ ಹೆಚ್ಚುವರಿ ತೂಕ ಲಭಿಸುತ್ತದೆ. ಜಾಗದ ಬಳಕೆಯ ಪ್ರಮಾಣವೂ ಕಡಿಮೆ. ಕಾರ್ಮಿಕರ ಅಗತ್ಯ ಇಲ್ಲದೇ ಒಬ್ಬರೇ ಕೋಳಿ ಸಾಕಾಣಿಕೆಯನ್ನು ಯಶಸ್ವಿಯಾಗಿ ನಿರ್ವಹಿಸಬಹುದು ಎಂದು ತೋರಿಸಿಕೊಟ್ಟಿದ್ದಾರೆ ದೊಗ್ರೆ ಗ್ರಾಮದ ನಿಶಾಂತ್‌‌ ಎ.ಎಸ್.

ಸಮೀಪದ ನಾಲೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ದೊಗ್ರೆ ಗ್ರಾಮದ ಸತ್ಯನಾರಾಯಣ ಗೌಡ ಅಂದಾಜು 18 ವರ್ಷಗಳಿಂದ ಪೌಲ್ಟ್ರಿ ಫಾರಂ ನಡೆಸುತ್ತಿದ್ದಾರೆ. ಡಿಪ್ಲೊಮಾ ಓದಿರುವ ಅವರ ಮಗ ನಿಶಾಂತ್‌‌ ಫಾರಂ ವ್ಯವಹಾರವನ್ನು ನಡೆಸುತ್ತಿದ್ದು, ಒಂದೂವರೆ ವರ್ಷದಿಂದ ಆಧುನಿಕ ತಂತ್ರಜ್ಞಾನ ಬಳಕೆ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.

ADVERTISEMENT

‘ಸಾಮಾನ್ಯವಾಗಿ ಮರಿಗಳಿಗೆ 34 ಡಿಗ್ರಿ ತಾಪಮಾನ ಬೇಕು. ಬೆಳೆದ ಕೋಳಿಗಳಿಗೆ 22 ಡಿಗ್ರಿ ಸಾಕಾಗುತ್ತದೆ. ಇವುಗಳನ್ನು ಸಾಂಪ್ರದಾಯಿಕ ಫಾರಂನಲ್ಲಿ ನಿಭಾಯಿಸುವುದು ಕಷ್ಟ. ನಾವು ತಾಪಮಾನ ನಿಯಂತ್ರಣಕ್ಕೆ ಸೆನ್ಸಾರ್‌ ಬಳಕೆ ಮಾಡಿಕೊಳ್ಳುತ್ತಿದ್ದು, ನಿತ್ಯ ವಿವಿಧ ತಾಪಮಾನದಲ್ಲಿ ಕೋಳಿಗಳ ಬೆಳವಣಿಗೆಯಾಗುತ್ತದೆ. ವಾರ್ಷಿಕವಾಗಿ ಆರು ಬ್ಯಾಚ್‌ ಕೋಳಿ ಕಳುಹಿಸಬಹುದು. ಇದು ಲಾಭದಾಯಕ’ ಎಂದು ನಿಶಾಂತ್‌ ಹೇಳುತ್ತಾರೆ.

ಮಳೆಗಾಲ, ಬೇಸಿಗೆಯಲ್ಲಿಯೂ ಒಂದೇ ರೀತಿಯ ತಾಪಮಾನವನ್ನು ನಿರ್ವಹಿಸಬಹುದು. ಉಷ್ಣಾಂಶ ಹೆಚ್ಚಾದರೆ ಕೂಲಿಂಗ್‌ ಮಾಡಬಹುದು. ಕಡಿಮೆಯಾದರೆ ಹೀಟರ್‌ ಬಳಕೆ ಮಾಡಿಕೊಳ್ಳಬಹುದಾಗಿದೆ. ಮುಖ್ಯವಾಗಿ 24 ಗಂಟೆಗಳ ಕಾಲ ವಿದ್ಯುತ್‌ ಅವಶ್ಯಕತೆ ಇರುತ್ತದೆ. ಅದಕ್ಕಾಗಿ ಆಟೋ ಚೇಂಜ್‌ ಓವರ್‌, ಜನರೇಟರ್‌ ಬಳಕೆ ಮಾಡಿಕೊಳ್ಳಲಾಗುತ್ತಿದೆ ಎಂದು ಅವರು ವಿವರಿಸುತ್ತಾರೆ.

‘ಕೋಳಿಗಳಿಗೆ ನೀರು ಕುಡಿಯಲು ನಿಪ್ಪಲ್‌ ವ್ಯವಸ್ಥೆ ಮಾಡಿರುವುದರಿಂದ ಕೆಳಗೆ ತೇವಗೊಳ್ಳುವ ಸಂಭವ ಇರುವುದಿಲ್ಲ. ಇದರಿಂದ ಉಮಿ (ಭತ್ತದ ಹೊಟ್ಟು) ಥಂಡಿಯಾಗುವುದಿಲ್ಲ. ಸೈಲರ್‌ ಸಿಸ್ಟಂ ಅಳವಡಿಸಿಕೊಂಡಿದ್ದು, ಆಟೋಮ್ಯಾಟಿಕ್‌ ಆಗಿ ಆಹಾರ ಸರಬರಾಜು ಮಾಡಲಾಗುತ್ತದೆ. ನೀರಿನ ಮೂಲಕವೇ ದ್ರಾವಣಗಳನ್ನು ಮರಿಗಳಿಗೆ ನೀಡುತ್ತೇವೆ. ಉತ್ತಮ ನಿರ್ವಹಣೆಯಿದ್ದರೆ ಲಾಭ ಚೆನ್ನಾಗಿ ಪಡೆಯಬಹುದು’ ಎಂದು ಹೇಳುತ್ತಾರೆ.

‘ಕೋಳಿ ಮಾರಾಟಕ್ಕೆ ಕಳಿಸಿದ ನಂತರ ಆರಂಭದ ದಿನಗಳಲ್ಲಿ ಒಂದು ವಾರ ಸ್ವಚ್ಛತೆ ಮಾಡುತ್ತಿದ್ದೆವು. ಅದಕ್ಕಾಗಿ ನಿತ್ಯ 7 ಕಾರ್ಮಿಕರ ಅವಶ್ಯಕತೆ ಇತ್ತು. ಅಂದಾಜು ₹ 25,000 ವೆಚ್ಚ ತಗಲುತ್ತಿತ್ತು. ಈಗ ಮಿನಿ ಟ್ರ್ಯಾಕ್ಟರ್‌, ಹಾಪರ್‌ ಬಳಕೆ ಮಾಡುತ್ತಿದ್ದು, ಒಂದೂವರೆ ದಿನದಲ್ಲಿ ಒಬ್ಬರೇ ಸ್ವಚ್ಛತೆ ಕಾರ್ಯ ಪೂರೈಸುತ್ತಾರೆ’ ಎಂದು ಅವರು ಹೇಳುತ್ತಾರೆ.

ಆಧುನಿಕ ತಂತ್ರಜ್ಞಾನ ಬಳಸಿ ನಿರ್ಮಿಸಿದ 15000 ಸಾಮರ್ಥ್ಯದ ಕೋಳಿ ಫಾರಂ 
ರೈತ ದೊಗ್ರೆ ಸತ್ಯನಾರಾಯಣ ಗೌಡ ಮತ್ತು ಅವರ ಕುಟುಂಬ
ಕೋಳಿಗಳು ನಿಪ್ಪಲ್‌ ಹಿಡಿದು ನೀರು ಕುಡಿಯುತ್ತಿರುವುದು 
ನಾಲೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ದೊಗ್ರೆ ಆಧುನಿಕ ಕೋಳಿ ಫಾರಂನಲ್ಲಿ ಬೃಹತ್‌ ಗಾತ್ರದ ವೆಂಟಿಲೇಟರ್‌ ಬಳಕೆ ಮಾಡಿರುವುದು.
ನಾಲೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ದೊಗ್ರೆ ಆಧುನಿಕ ಕೋಳಿ ಫಾರಂನಲ್ಲಿ ಬೃಹತ್‌ ಗಾತ್ರದ ವೆಂಟಿಲೇಟರ್‌ ಬಳಕೆ ಮಾಡಿರುವುದು.

ಆಗ ಮನೆಗೆ ಬರಲು ಅಂಜುತ್ತಿದ್ದರು… ‘

18 ವರ್ಷಗಳ ಹಿಂದೆ ಕೋಳಿ ಫಾರಂ ಮಾಡಿದಾಗ ವಾಸನೆ ನೊಣಗಳ ಹಾವಳಿ ಹೆಚ್ಚಿತ್ತು. ಸ್ಥಳೀಯರು ಮನೆಗೆ ಬರುವುದಕ್ಕೂ ಹಿಂದೆ ಮುಂದೆ ಯೋಚಿಸುತ್ತಿದ್ದರು. ಮಗ ಆಧುನೀಕರಣಗೊಳಿಸಿದ ನಂತರ ಜನ ಬರುತ್ತಿದ್ದಾರೆ. ಇದು ಖುಷಿ ಕೊಟ್ಟಿದೆ’ ಎಂದು ಸತ್ಯನಾರಾಯಣ ಗೌಡ ಹರ್ಷ ವ್ಯಕ್ತಪಡಿಸುತ್ತಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.