ವಿಧಾನಸೌಧ
ಶಿವಮೊಗ್ಗ: ‘ಸರ್ಕಾರಿ ಕಾಮಗಾರಿಗಳಲ್ಲಿ ಹಿಂದಿನ ಸರ್ಕಾರಕ್ಕಿಂತ ಈಗಿನ ಸರ್ಕಾರದಲ್ಲೇ ಕಮಿಷನ್ ಪ್ರಮಾಣ ಹೆಚ್ಚಾಗಿದೆ’ ಎಂದು ರಾಜ್ಯ ಗುತ್ತಿಗೆದಾರರ ಸಂಘದ ಅಧ್ಯಕ್ಷ ಆರ್.ಮಂಜುನಾಥ್ ಆರೋಪಿಸಿದರು.
ಮಲೆನಾಡು ಗುತ್ತಿಗೆದಾರರ ಸಂಘದಿಂದ ಬುಧವಾರ ಇಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ‘₹ 32,000 ಕೋಟಿ ಬಾಕಿ ಪಾವತಿಯಾಗದೇ ರಾಜ್ಯದಲ್ಲಿ ಈಗ ಗುತ್ತಿಗೆದಾರರು ಸಂಕಷ್ಟದಲ್ಲಿದ್ದಾರೆ. ನಮ್ಮ (ಗುತ್ತಿಗೆದಾರರ) ಸಹಾಯ ಪಡೆದು ಅಧಿಕಾರಕ್ಕೆ ಬಂದ ಸರ್ಕಾರ ಈಗ ನಮ್ಮನ್ನೇ ಮರೆತಿದೆ’ ಎಂದು ದೂರಿದರು.
‘ಹಿಂದಿನ ಸರ್ಕಾರದಲ್ಲಿ ಪೂಜೆಯಿಂದ ಮೊದಲುಗೊಂಡು ಬಿಲ್ ಪಡೆಯುವವರೆಗೂ ಶೇ 40 ಕಮಿಷನ್ ಕೊಡಬೇಕಿತ್ತು. ಈಗ ಅದಕ್ಕಿಂತ ಹೆಚ್ಚಾಗಿದೆ’ ಎಂದು ಹೇಳಿದ ಮಂಜುನಾಥ್, ಅದು ಎಷ್ಟು ಹೆಚ್ಚಾಗಿದೆ ಎಂದು ಸ್ಪಷ್ಟಪಡಿಸಲಿಲ್ಲ. ‘ಸ್ಥಳೀಯ ಜನಪ್ರತಿನಿಧಿಗಳನ್ನು ಆಧರಿಸಿ ಕಮಿಷನ್ ಪ್ರಮಾಣ ನಿಗದಿ ಆಗುತ್ತದೆ. ಕೆಲವರಂತೂ ಕಮಿಷನ್ ನಿರ್ಧಾರವಾದ ನಂತರವೇ ಕಾಮಗಾರಿ ಪೂಜೆಗೆ ಬರುತ್ತಾರೆ’ ಎಂದು ಸಂಕಷ್ಟ ತೋಡಿಕೊಂಡರು.
‘ಗುತ್ತಿಗೆದಾರರ ವಿರುದ್ಧ ಮೂಗರ್ಜಿ ಹೆಚ್ಚಾಗಿವೆ. ಹೀಗಾಗಿ ಕೆಲಸ ಮಾಡುವುದೇ ಕಷ್ಟ. ಯಾವುದೇ ಗುತ್ತಿಗೆದಾರರೂ ಕಳಪೆ ಕಾಮಗಾರಿ ಮಾಡುವುದಿಲ್ಲ. ಟೆಂಡರ್ ಆಗದೇ ಎಂಜಿನಿಯರ್‌ಗಳ ಭರವಸೆ ಮೇಲೆ ಕೆಲವು ಕಾಮಗಾರಿ ಆಗಿರುತ್ತವೆ. ಕೆಲಸ ಆದ ನಂತರ ಅಧಿಕಾರಿಗಳು ನುಣುಚಿಕೊಳ್ಳುತ್ತಾರೆ. ಈ ವೇಳೆ ಹೋರಾಟ ಮಾಡಿಯೇ ನಾವು (ಗುತ್ತಿಗೆದಾರರು) ಬಿಲ್ ಪಡೆಯಬೇಕಿದೆ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.