
ಶಿವಮೊಗ್ಗ: ‘ಕ್ರೀಡಾಂಗಣ, ಹಾಕಿ ಮೈದಾನ, ಬಾಸ್ಕೆಟ್‌ಬಾಲ್ ಅಂಕಣ ಸೇರಿದಂತೆ ಭದ್ರಾವತಿಯ ವಿಐಎಸ್‌ಎಲ್ ವ್ಯಾಪ್ತಿಯಲ್ಲಿರುವ ಕ್ರೀಡಾ ಸೌಕರ್ಯಗಳನ್ನು ಸುಸಜ್ಜಿತವಾಗಿ ಅಭಿವೃದ್ಧಿಪಡಿಸಲು ಅವುಗಳ ನಿರ್ವಹಣೆ ಜವಾಬ್ದಾರಿ ಭಾರತೀಯ ಕ್ರೀಡಾ ಪ್ರಾಧಿಕಾರಕ್ಕೆ ವಹಿಸಲು ನಿರ್ಧರಿಸಿದೆ. ಹಸ್ತಾಂತರ ಕಾರ್ಯಕ್ಕೆ ಶೀಘ್ರ ಚಾಲನೆ ನೀಡಲಾಗುತ್ತಿದೆ’ ಎಂದು ಸಂಸದ ಬಿ.ವೈ.ರಾಘವೇಂದ್ರ ಹೇಳಿದರು.
ಇಲ್ಲಿನ ಬೆಕ್ಕಿನಕಲ್ಮಠದಲ್ಲಿ ಶನಿವಾರ ನಡೆದ ಲಿಂಗೈಕ್ಯ ಗುರುಬಸವ ಮಹಾಸ್ವಾಮಿಗಳ 114ನೇ ಪುಣ್ಯಸ್ಮರಣೋತ್ಸವ, ಶಿವಾನುಭವಗೋಷ್ಠಿ ಹಾಗೂ ಶರಣ ಸಾಹಿತ್ಯ ಸಮ್ಮೇಳನದಲ್ಲಿ ಶ್ರೀಮಠದಿಂದ ಗುರುಬಸವಶ್ರೀ ಪ್ರಶಸ್ತಿ ಸ್ವೀಕರಿಸಿ ಅವರು ಮಾತನಾಡಿದರು.
ಗುಜರಾತ್‌ನಲ್ಲಿ 2028ಕ್ಕೆ ಆಯೋಜಿಸಲಾಗುತ್ತಿರುವ ಕಾಮನ್ವೆಲ್ತ್ ಕ್ರೀಡಾಕೂಟಕ್ಕೆ ಜಿಲ್ಲೆಯ ಕ್ರೀಡಾಪಟುಗಳನ್ನು ಸಜ್ಜುಗೊಳಿಸಲು ವಿಐಎಸ್‌ಎಲ್ ಕ್ರೀಡಾಂಗಣ ಸೇರಿದಂತೆ ಅಲ್ಲಿನ ಕ್ರೀಡಾ ಮೂಲಸೌಕರ್ಯ ಉತ್ತೇಜನಕ್ಕೆ ನಿರ್ಧರಿಸಿದ್ದು, ಅದಕ್ಕೆ ರಾಜ್ಯ ಸರ್ಕಾರವೂ ಸಹಕಾರ ನೀಡಿದೆ ಎಂದು ಹೇಳಿದರು.
ಚಿಕ್ಕ ವಯಸ್ಸಿಗೆ ರಾಜಕೀಯ ಸ್ಥಾನಮಾನ ಸಮಾಜ ನೀಡಿದೆ. ಸಮಾಜದಿಂದ ಪಡೆದದ್ದನ್ನು ವಾಪಸ್ ಸಮಾಜಕ್ಕೆ ಹಿಂದಿರುಗಿಸಿ ನನಗೆ ಪ್ರೀತಿ ಕೊಟ್ಟು ಬೆಳೆಸಿದ ಜನರ ಋಣ ತೀರಿಸುವ ಕೆಲಸ ಮಾಡಲಿದ್ದೇನೆ ಎಂದು ಭಾವುಕರಾದ ರಾಘವೇಂದ್ರ, ಅಪ್ಪನಿಂದ ಬಂದ ಗುಣ, ಜನರ ಆಶೀರ್ವಾದದ ಫಲವಾಗಿ ಅಭಿವೃದ್ಧಿ ಕಾರ್ಯಗಳ ಮಾಡುವ ಉಮೇದು ನನಗೆ ಸ್ವಲ್ಪ ಹೆಚ್ಚಾಗಿದೆ ಎಂದು ಹೇಳಿದರು.
ಕಳ್ಳತನ, ಕೊಲೆ, ಅಪಘಾತಗಳು ನಗರದಲ್ಲಿ ನಿತ್ಯದ ಮಾತಾಗಿದ್ದು, ಅದನ್ನು ತಡೆಯಲು ನಗರದಲ್ಲಿ ಹಾಕಿರುವ ಸಿಸಿ ಟಿವಿ ಕ್ಯಾಮೆರಾಗಳು ಕೆಲಸ ಮಾಡುತ್ತಿವೆಯೇ ಎಂಬುದನ್ನು ಪರಿಶೀಲಿಸಿ ಕ್ರಮ ಕೈಗೊಳ್ಳಿ ಎಂದು ಎಸ್ಪಿ ಅವರಿಗೆ ಸೂಚಿಸಿರುವುದಾಗಿ ಹೇಳಿದರು.
ಆಡುಮುಟ್ಟದ ಸೊಪ್ಪಿಲ್ಲ ಎಂಬ ಮಾತಿಗೆ ಪೂರಕವಾಗಿ ಅರ್ಥಪೂರ್ಣವಾಗಿ ಕೆಲಸ ಮಾಡಿದ ರಾಜಕಾರಣಿ ನಾಡಿನಲ್ಲಿ ಇದ್ದರೆ ಅದು ಸಂಸದ ಬಿ.ವೈ,.ರಾಘವೇಂದ್ರ. ಜಿಲ್ಲೆಗೆ ಏನು ಆಗಬೇಕು ಎಂದು ಕೇಳಿ ಅದನ್ನು ಮಾಡಿ ಚಿತ್ರಣವನ್ನೇ ಬದಲಾಯಿಸಿದ ಶ್ರೇಯ ಅವರದ್ದು ಎಂದು ಶಾಸಕ ಎಸ್.ಎನ್.ಚನ್ನಬಸಪ್ಪ ಶ್ಲಾಘಿಸಿದರು.
ಭದ್ರಾವತಿಯ ವಿಐಎಸ್‌ಎಲ್ ಪುನಶ್ಚೇತನ ಅಲ್ಲಿನ ಮೂಲ ಸೌಕರ್ಯಕ್ಕೆ ಮರುಜೀವ ನೀಡುವ ಕೆಲಸ ಸಂಸದರು ಮಾಡುತ್ತಿದ್ದು, ಇದು ಅವರ ಕೆಲಸದ ಬದ್ಧತೆಗೆ ಸಾಕ್ಷಿಯಾಗಿದೆ ಎಂದರು. ಇದೇ ವೇಳೆ ಮಠದ ದಿನದರ್ಶಿಕೆ ಬಿಡುಗಡೆ ಮಾಡಿದರು.
ಇದೇ ಸಂದರ್ಭದಲ್ಲಿ ಕಲಬುರಗಿಯ ಜಯಶ್ರೀದಂಡೆ ಅವರಿಗೆ ಬೆಕ್ಕಿನಕಲ್ಮಠದಿಂದ ಅಕ್ಕಮಹಾದೇವಿ ಪ್ರಶಸ್ತಿ ನೀಡಿ ಗೌರವಿಸಲಾಯಿತು
ಕನಕಪುರ ದೇಗುಲ ಮಠದ ಜಗದ್ಗುರು ಚನ್ನಬಸವ ಮಹಾಸ್ವಾಮೀಜಿ, ಬೆಕ್ಕಿನಕಲ್ಮಠದ ಜಗದ್ಗುರು ಮಲ್ಲಿಕಾರ್ಜುನ ಮುರುಘರಾಜೇಂದ್ರ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ವಿಧಾನಪರಿಷತ್ ಸದಸ್ಯ ಡಾ.ಧನಂಜಯ ಸರ್ಜಿ, ಕಾರ್ಯಕ್ರಮದ ಸಂಘಟಕರಾದ ತಾರಾನಾಥ್, ಮಹಾಲಿಂಗಶಾಸ್ತ್ರಿ, ಹರ್ಷ ರುದ್ರೇಗೌಡ, ಹಿರಿಯರಾದ ಡಿ.ಎಸ್.ಸುಬ್ಬಣ್ಣ, ಕಾಂಗ್ರೆಸ್ ಮುಖಂಡ ಎಚ್.ಸಿ.ಯೋಗೀಶ್, ಸಂಸದ ಬಿ.ವೈರಾಘವೇಂದ್ರ ಅವರ ಪತ್ನಿ ತೇಜಸ್ವಿನಿ, ಪುತ್ರರಾದ ಸುಭಾಷ್, ಭಗತ್, ಸೊಸೆ ಶ್ರಾವಣ ಹಾಜರಿದ್ದರು.
ವಿದ್ಯಾರ್ಥಿಗಳಿಗೆ ಉಚಿತ ದಾಸೋಹದ ಮೂಲಕ ಸರ್ಕಾರ ಮಾಡಲು ಆಗದ ಕೆಲಸವನ್ನು ಬೆಕ್ಕಿನಕಲ್ಮಠ ಆ ಕಾಲದಲ್ಲಿಯೇ ಮಾಡಿದೆ. ಮಠದ ಪರಂಪರೆಯಲ್ಲಿ ಬೆಳೆದ ಮಕ್ಕಳು ಇಂದು ನಾಡಿನಲ್ಲಿ ಉನ್ನತ ಸ್ಥಾನದಲ್ಲಿ ಇದ್ದಾರೆ.ಎಸ್.ಎಸ್.ಜ್ಯೋತಿಪ್ರಕಾಶ್ ಬಸವೇಶ್ವರ ವೀರಶೈವ ಸಮಾಜದ ಅಧ್ಯಕ್ಷ
ಪುರಸಭೆಯಿಂದ ಆರಂಭವಾದ ರಾಜಕೀಯ ದಿಲ್ಲಿಯ ಮಟ್ಟದವರೆಗೆ ಬೆಳೆಯಲು ರಾಘಣ್ಣ ದೊಡ್ಡ ಮಟ್ಟದಲ್ಲಿ ಸಾಧನೆ ಮಾಡಿದ್ದಾರೆ. ಕ್ಷೇತ್ರದ ಅಭಿವೃದ್ಧಿ ವಿಚಾರದಲ್ಲಿ ಅವರಿಗೆ ಯಡಿಯೂರಪ್ಪ ಅವರಿಗೆ ಮೀರಿದ ಬದ್ಧತೆ ಇದೆ.ಎಸ್.ಎಲ್.ಭೋಜೇಗೌಡ ವಿಧಾನಪರಿಷತ್ ಸದಸ್ಯ
50 ವರ್ಷದ ವಯಸ್ಸಿಗೆ ಒಬ್ಬ ಮನುಷ್ಯ ಏನೆಲ್ಲ ಮಾಡಬಹುದು ಎಂಬುದಕ್ಕೆ ಸಂಸದ ರಾಘವೇಂದ್ರ ಅವರ ಬದುಕು ಮಾದರಿ. ಬೇರೆ ಮುಖ್ಯಮಂತ್ರಿಗಳ ಮಕ್ಕಳ ಮಾಡದ ಕೆಲಸ ಕ್ಷೇತ್ರದ ಜನರ ಧಾರ್ಮಿಕ ಗುರುಗಳ ನಂಬಿಕೆಗೆ ಕುಂದು ಉಂಟಾಗದಂತೆ ಅವರು ಅಭಿವೃದ್ಧಿ ಕೆಲಸ ಮಾಡುತ್ತಿದ್ದಾರೆ.ಬಸವ ಮರುಳಸಿದ್ಧ ಸ್ವಾಮೀಜಿ ಬಸವತತ್ವಪೀಠ ಚಿಕ್ಕಮಗಳೂರು
50 ವರ್ಷದ ವಯಸ್ಸಿಗೆ ಒಬ್ಬ ಮನುಷ್ಯ ಏನೆಲ್ಲ ಮಾಡಬಹುದು ಎಂಬುದಕ್ಕೆ ಸಂಸದ ರಾಘವೇಂದ್ರ ಅವರ ಬದುಕು ಮಾದರಿ. ಬೇರೆ ಮುಖ್ಯಮಂತ್ರಿಗಳ ಮಕ್ಕಳ ಮಾಡದ ಕೆಲಸ ಕ್ಷೇತ್ರದ ಜನರ ಧಾರ್ಮಿಕ ಗುರುಗಳ ನಂಬಿಕೆಗೆ ಕುಂದು ಉಂಟಾಗದಂತೆ ಅವರು ಅಭಿವೃದ್ಧಿ ಕೆಲಸ ಮಾಡುತ್ತಿದ್ದಾರೆ.ಬಸವ ಮರುಳಸಿದ್ಧ ಸ್ವಾಮೀಜಿ ಬಸವತತ್ವಪೀಠ ಚಿಕ್ಕಮಗಳೂರು
ತೀರ್ಥಹಳ್ಳಿ ಸೊರಬ ಸೇರಿದಂತೆ ಶಿವಮೊಗ್ಗ ಕ್ಷೇತ್ರದ ಎಂಟೂ ತಾಲ್ಲೂಕುಗಳಲ್ಲೂ ರೈಲು ಓಡಿಸಬೇಕು ಎಂಬುದು ಸಂಸದನಾಗಿ ನನ್ನ ಕನಸು. ಅದು ನನಸಾಗುವ ಹಾದಿಯಲ್ಲಿ ತಿಂಗಳಲ್ಲಿಯೇ ಫಲಿತಾಂಶ ಸಿಗಲಿದೆಬಿ.ವೈ.ರಾಘವೇಂದ್ರ ಶಿವಮೊಗ್ಗ ಸಂಸದ