
ಹೊಸನಗರ: ‘ನಂದಿನಿ ಹಾಲು ಮತ್ತು ಅದರ ಉತ್ಪನ್ನಗಳಿಗೆ ದೇಶದಾದ್ಯಂತ ಬೇಡಿಕೆ ಇದೆ. ಅಮೂಲ್‌ಗೆ ಸರಿಸಾಟಿಯಾಗಿ ನಂದಿನಿಯನ್ನು ಕೊಂಡೊಯ್ಯುವ ಆಶಯವಿದೆ’ ಎಂದು ಕೆಎಂಎಫ್ ನೂತನ ನಿರ್ದೇಶಕ ಆರ್.ಎಂ.ಮಂಜುನಾಥಗೌಡ ಹೇಳಿದರು.
ತಾಲ್ಲೂಕಿನ ಚಿಕ್ಕಪೇಟೆಯಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ‘ಹಾಲು, ನೀರು ಸೇರಿ 165ಕ್ಕೂ ಹೆಚ್ಚು ಅತ್ಯುತ್ತಮ ಗುಣಮಟ್ಟದ ನಂದಿನಿ ಉತ್ಪನ್ನಗಳು ಮಾರುಕಟ್ಟೆಯಲ್ಲಿವೆ. ಇನ್ನಷ್ಟು ಅಗತ್ಯ ಉತ್ಪನ್ನಗಳನ್ನು ಹೆಚ್ಚಿಸಬೇಕಿದೆ’ ಎಂದು ಹೇಳಿದರು.
‘ಹೈನುಗಾರಿಕೆಯ ಬೆಳವಣಿಗೆ ಕೆಎಂಎಫ್‌ಗೆ ಅಗತ್ಯವಾಗಿದೆ. ರೈತರಿಗೆ ಎರಡು ಹಸುಗಳ ಖರೀದಿಗೆ ₹1.6 ಲಕ್ಷ ಸಾಲ ನೀಡಿ ಹೈನುಗಾರಿಕೆ ಅಭಿವೃದ್ಧಿಗೆ ಒತ್ತುನೀಡುವ ಚಿಂತನೆ ಇದೆ’ ಎಂದು ತಿಳಿಸಿದರು.
‘ಸಾವಯವ ಗೊಬ್ಬರದಲ್ಲಿ ಯೂರಿಯಾವನ್ನು ಯಥೇಚ್ಛವಾಗಿ ಮಿಶ್ರಣ ಮಾಡಿ ರೈತರನ್ನು ಕಂಪನಿಗಳು ಮೋಸ ಮಾಡುತ್ತಿವೆ. ಹೀಗಾಗಿ ಜಾನುವಾರುಗಳು ರೋಗರುಜಿನಕ್ಕೆ ತುತ್ತಾಗುತ್ತಿವೆ. ಅಡಿಕೆ ತೋಟಗಳು ಎಲೆಚುಕ್ಕೆ ರೋಗ, ಕೊಳೆರೋಗಕ್ಕೆ ತತ್ತರಿಸಿವೆ’ ಎಂದರು.
‘ನನಗೆ ಕೆಎಂಎಫ್‌ಗೆ ಹೋಗುವ ಇರಾದೆ ಇರಲಿಲ್ಲ. ಶಿಮುಲ್ ಅಧ್ಯಕ್ಷ ವಿದ್ಯಾಧರ ಗುರುಶಕ್ತಿ ಅವರ ಒತ್ತಾಸೆ ಮೇರೆಗೆ ನಿರ್ದೇಶಕನಾಗಿದ್ದೇನೆ. ಶಿವಮೊಗ್ಗ ಹಾಲು ಒಕ್ಕೂಟ ಕೂಡ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದು, ₹ 8 ಲಕ್ಷ ಲೀಟರ್ ಹಾಲು ಉತ್ಪಾದನೆಯಾಗುತ್ತಿದೆ. 120ಕ್ಕೂ ಹೆಚ್ಚು ಹೊಸ ನಂದಿನಿ ಪಾರ್ಲರ್‌ಗಳನ್ನು ಸ್ಥಪಿಸಿರುವುದು ವಿದ್ಯಾಧರ್ ಅವರ ಸಾಧನೆ’ ಎಂದು ತಿಳಿಸಿದರು.
ಕೆಎಂಎಫ್ ಅಧ್ಯಕ್ಷರಾಗಲಿ: ಶಿಮುಲ್ ಅಧ್ಯಕ್ಷ ವಿದ್ಯಾಧರ ಗುರುಶಕ್ತಿ ಮಾತನಾಡಿ, ‘ಮಂಜುನಾಥಗೌಡರು ಸಹಕಾರಿ ಕ್ಷೇತ್ರವನ್ನು ಬೆಳಸಿದ ರೀತಿ ಒಂದು ಸಾಹಸಗಾಥೆಯೇ ಸರಿ. ಅವರ ಸೇವೆ ಕೆಎಂಎಫ್‌ಗೂ ಬೇಕಿದೆ. ಅವರು ನೂತನ ನಿರ್ದೇಶಕರಾಗಿರುವುದರಿಂದ ಶಿಮುಲ್‌ಗೆ ಆನೆಬಲ ಬಂದಿದೆ. ಶಿಮುಲ್ ಅಭಿವೃದ್ಧಿಗೂ ಸಹಾಯವಾಗಲಿದೆ. ಅವರು ಕೆಎಂಎಫ್ ಅಧ್ಯಕ್ಷರಾಗಬೇಕು ಎಂಬ ಕಾರಣದಿಂದಲೇ ನಾವೆಲ್ಲ ಒಟ್ಟಾಗಿ ನಿರ್ದೇಶಕರನ್ನಾಗಿ ಆಯ್ಕೆ ಮಾಡಿದ್ದೇವೆ’ ಎಂದು ಹೇಳಿದರು.
ಕಾಂಗ್ರೆಸ್ ನಗರ ಘಟಕದ ಅಧ್ಯಕ್ಷ ಕರುಣಾಕರ ಶೆಟ್ಟಿ, ದೇವಗಂಗೆ ಚಂದ್ರಶೇಖರ ಶೆಟ್ಟಿ, ನಗರ ಸೊಸೈಟಿ ಅಧ್ಯಕ್ಷ ಅಂಬರೀಷ ಸಾದಗಲ್, ಉಪಾಧ್ಯಕ್ಷ ಗೋಪಾಲಶೆಟ್ಟಿ, ಗ್ರಾಮ ಪಂಚಾಯಿತಿ ಸದಸ್ಯ ನಗರ ಪವನ್, ಬಿದನೂರು ಫ್ರೆಂಡ್ಸ್ ಅಧ್ಯಕ್ಷ ಎ.ಚಂದ್ರ, ಸುಭಾಷ್, ಪಾಂಡು ಹಿರೀಮನೆ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.