ಶಿವಮೊಗ್ಗ: ‘ಎನ್.ಬಿ.ಸಿ ಕೋಡ್ (ನ್ಯಾಷನಲ್ ಬಿಲ್ಡಿಂಗ್ ಕೋಡ್) ಪ್ರಕಾರ ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಗಳಿಗೆ ಒಂದೇ ನಿಯಮ ಇದೆ. ಹಾಗಾಗಿ ಫೈರ್ ಕ್ಲಿಯರೆನ್ಸ್ ವಿಚಾರದಲ್ಲಿ ಸರ್ಕಾರಿ ಹಾಗೂ ಖಾಸಗಿ ಆಸ್ಪತ್ರೆಗಳಿಗೆ ಸಮಾನ ಕಾಲಾವಕಾಶ ಕೊಡಿ’ ಎಂದು ಸೋಮವಾರ ವಿಧಾನ ಪರಿಷತ್ ಕಲಾಪದಲ್ಲಿ ಸದಸ್ಯ ಡಾ.ಧನಂಜಯ ಸರ್ಜಿ ಅವರು, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಚಿವ ದಿನೇಶ್ ಗುಂಡೂರಾವ್ ಅವರಿಗೆ ಕೇಳಿದರು.
‘ರಾಜ್ಯದಲ್ಲಿ 2,878 ಸರ್ಕಾರಿ ಆಸ್ಪತ್ರೆಗಳಲ್ಲಿ ಕೇವಲ 14 ಮಾತ್ರ ಫೈರ್ ಕ್ಲಿಯರೆನ್ಸ್ ಆಗಿದೆ. ಅಂದರೆ ಶೇ 0.005% ಮಾತ್ರ. 5,850 ಖಾಸಗಿ ಆಸ್ಪತ್ರೆಗಳಲ್ಲಿ 315 ಮಾತ್ರ ಫೈರ್ ಕ್ಲಿಯರೆನ್ಸ್ ಇದ. ಅಂದರೆ ಶೇ 0.05% ಮಾತ್ರ ಆಗಿದೆ. ಎಲ್ಲ ಸರ್ಕಾರಿ ಆಸ್ಪತ್ರೆಗಳಿಗೆ ಫೈರ್ ಸೇಫ್ಟಿ ಕ್ಲಿಯರೆನ್ಸ್ ತೆಗೆದುಕೊಳ್ಳಲು ಎಷ್ಟು ಕಾಲಾವಕಾಶ ಬೇಕು ಎಂದು’ ಪ್ರಶ್ನಿಸಿದರು.
‘ಕೇವಲ 2 ವರ್ಷಗಳಲ್ಲಿ ರಾಜ್ಯದ 5 ಜಿಲ್ಲಾ ಆಸ್ಪತ್ರೆಗಳಲ್ಲಿ ಅಗ್ನಿ ಅವಘಡ ಸಂಭವಿಸಿದೆ. ಈ ಹಿಂದೆ 2014ರಲ್ಲೂ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಯಲ್ಲಿ ಅಗ್ನಿ ಅವಘಡ ಸಂಭವಿಸಿದ ಸಂದರ್ಭದಲ್ಲಿ ತೀವ್ರ ನಿಗಾ ಘಟಕದಲಿದ್ದ 46 ಮಕ್ಕಳನ್ನು ಶಿವಮೊಗ್ಗದ ಸರ್ಜಿ ಆಸ್ಪತ್ರೆಗೆ ಸ್ಥಳಾಂತರಿಸಿ ಜೀವ ರಕ್ಷಿಸಲಾಗಿತ್ತು. ಮುಂದೆ ಇಂತಹ ಘಟನೆ ಮರುಕಳಿಸದಂತೆ ಎಲ್ಲ ಸರ್ಕಾರಿ ಆಸ್ಪತ್ರೆಗಳಲ್ಲೂ ಫೈರ್ ಸೇಫ್ಟಿ ಕ್ಲಿಯರೆನ್ಸ್ ಮಾಡಬೇಕು’ ಎಂದು ಒತ್ತಾಯಿಸಿದರು.
ಅದಕ್ಕೆ ಉತ್ತರಿಸಿದ ಸಚಿವ ದಿನೇಶ್ ಗುಂಡೂರಾವ್, ‘ರಾಜ್ಯದಲ್ಲಿ 40ರಿಂದ 50 ವರ್ಷಗಳ ಹಳೆಯ ಸರ್ಕಾರಿ ಆಸ್ಪತ್ರೆಗಳಿವೆ. ಅಂತಹ ಆಸ್ಪತ್ರೆಗಳಿಗೆ ಈಗೀರುವ ಮಾನದಂಡದ ಪ್ರಕಾರ ಫೈರ್ ಸೇಫ್ಟಿ ಕ್ಲಿಯರೆನ್ಸ್ ಸಿಗುವುದು ಕಷ್ಟ. ಇದಕ್ಕೆ ಅಂದಾಜು ₹550 ಕೋಟಿ ಅನುದಾನ ಬೇಕಾಗುತ್ತದೆ. ಏಕಕಾಲದಲ್ಲಿ ಎಲ್ಲವನ್ನು ಮಾಡುವುದಕ್ಕಾಗುವುದಿಲ್ಲ. ಹಂತಹಂತವಾಗಿ ಮಾಡುತ್ತೇವೆ’ ಎಂದು ಉತ್ತರಿಸಿದರು.
‘ಖಾಸಗಿ ಮತ್ತು ಸರ್ಕಾರಿ ಆಸ್ಪತ್ರೆಗಳಲ್ಲಿ ಹಳೆಯ ಕಟ್ಟಡಗಳಿಗೆ ಸ್ವಲ್ಪ ವಿನಾಯಿತಿ ನೀಡಿ, ನಿಯಮ ಸಡೀಲೀಕರಣಗೊಳಿಸಲು ಮನವಿ ಮಾಡಿದ್ದೇವೆ. ಈ ಬಗ್ಗೆ ಗೃಹ ಇಲಾಖೆ ಜೊತೆಯಲ್ಲೂ ಸಭೆ ನಡೆಸುತ್ತೇನೆ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.