ADVERTISEMENT

14ರಂದು ಉಡುಪಿಯಲ್ಲಿ ಸಾಮರಸ್ಯ ನಡಿಗೆ-ಸಹಬಾಳ್ವೆ ಸಮಾವೇಶ

ರೈತ ಸಂಘದ ರಾಜ್ಯ ಉಪಾಧ್ಯಕ್ಷ ಶಿವಾನಂದ ಕುಗ್ವೆ

​ಪ್ರಜಾವಾಣಿ ವಾರ್ತೆ
Published 11 ಮೇ 2022, 2:38 IST
Last Updated 11 ಮೇ 2022, 2:38 IST
ಶಿವಾನಂದ ಕುಗ್ವೆ
ಶಿವಾನಂದ ಕುಗ್ವೆ   

ಸಾಗರ: ಈ ನೆಲದ ಸಹಜ ಸಂಸ್ಕೃತಿಯಾಗಿರುವ ಬಹುತ್ವವನ್ನು ಕಾಪಾಡುವ ನಿಟ್ಟಿನಲ್ಲಿ ಮೇ 14ರಂದು ಉಡುಪಿಯಲ್ಲಿ ರಾಜ್ಯಮಟ್ಟದ ಸಾಮರಸ್ಯ ನಡಿಗೆ-ಸಹಬಾಳ್ವೆ ಸಮಾವೇಶ ನಡೆಯಲಿದೆ. ಈ ಭಾಗದಿಂದ ಹೆಚ್ಚಿನ ಸಂಖ್ಯೆಯಲ್ಲಿ ಜನರು ಸಮಾವೇಶದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ರೈತ ಸಂಘದ ರಾಜ್ಯ ಉಪಾಧ್ಯಕ್ಷ ಶಿವಾನಂದ ಕುಗ್ವೆ ತಿಳಿಸಿದ್ದಾರೆ.

ಇಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಕರ್ನಾಟಕದ ಸೌಹಾರ್ದ ಪರಂಪರೆಯನ್ನು ಉಳಿಸಿಕೊಳ್ಳಲು ನಾಡಿನ ವಿವಿಧ ಭಾಗಗಳಿಂದ ಆಗಮಿಸುವ ಹಲವು ಪ್ರಮುಖರು ಸಮಾವೇಶದಲ್ಲಿ ಭಾಗಿಯಾಗಲಿದ್ದಾರೆ’ ಎಂದು ಮಾಹಿತಿ ನೀಡಿದರು.

ಮೇ 14ರಂದು ಮಧ್ಯಾಹ್ನ 2ಕ್ಕೆ ಉಡುಪಿಯ ಅಜ್ಜರಕಾಡು ಹುತಾತ್ಮ ಚೌಕದಿಂದ ಸಾಮರಸ್ಯ ನಡಿಗೆ ಆರಂಭವಾಗಲಿದೆ. ಸಂಜೆ 4ಕ್ಕೆ ಅಲ್ಲಿನ ಕ್ರಿಶ್ಚಿಯನ್ ಶಾಲಾ ಮೈದಾನದಲ್ಲಿ ಸಮಾವೇಶ ಏರ್ಪಡಿಸಲಾಗಿದ್ದು, ಎಂ.ಡಿ. ಪಲ್ಲವಿ ಮತ್ತು ತಂಡದವರಿಂದ ಸೌಹಾರ್ದ ಗೀತೆ ಗಾಯನ ಕಾರ್ಯಕ್ರಮವಿದೆ. ನಂತರ ವಿವಿಧ ಧರ್ಮಗುರುಗಳು ಸಮಾವೇಶಕ್ಕೆ ಚಾಲನೆ ನೀಡಲಿದ್ದಾರೆ ಎಂದು ತಿಳಿಸಿದರು.

ADVERTISEMENT

ಸುಗುಣೇಂದ್ರತೀರ್ಥ ಸ್ವಾಮೀಜಿ, ಗುರುಬಸವ ಪಟ್ಟದೇವರು, ಝೈನುಲ್ ಉಲಮಾ ಎಂ., ಅಬ್ದುಲ್ ಹಮೀದ್, ಕ್ಯಾಥೊಲಿಕ್ ಚರ್ಚ್‌ನ ಬಿಷಪ್ ವರ್ಗೀಸ್ ಮಾರ್ ಮಕರಿಯೋಸ್, ಮಾತೆ ಬಸವಾಂಜಲಿ ದೇವಿ ಸೇರಿ ವಿವಿಧ ಧರ್ಮಗುರುಗಳು ಸಮಾವೇಶದಲ್ಲಿ ಭಾಗಿಯಾಗುತ್ತಿದ್ದಾರೆ ಎಂದು ಶಿವಾನಂದ ಹೇಳಿದರು.

ವಿಶೇಷ ಅತಿಥಿಗಳಾಗಿ ಯೋಗೇಂದ್ರ ಯಾದವ್, ಶಶಿಕಾಂತ್ ಸೆಂಥಿಲ್, ರೊನಾಲ್ಡ್ ಕೊಲಾಸೊ, ಮಾವಳ್ಳಿ ಶಂಕರ್, ಆರ್. ಮೋಹನ್ ರಾವ್, ಎಚ್.ಆರ್. ಬಸವರಾಜಪ್ಪ, ಚಾಮರಸಮಾಲಿ ಪಾಟೀಲ್, ಚುಕ್ಕಿ ನಂಜುಂಡಸ್ವಾಮಿ, ಕೆ. ನೀಲಾ, ಸಬೀಹಾ ಫಾತಿಮಾ, ನಜ್ಮಾ ಚಿಕ್ಕನೇರಲೆ ಮೊದಲಾದವರು ಪಾಲ್ಗೊಳ್ಳಲಿದ್ದಾರೆ ಎಂದರು.

ಸಾಗರದಿಂದ ಉಡುಪಿಗೆ ಹೊರಡಲು ಅಂದು ಬೆಳಿಗ್ಗೆ 9ಕ್ಕೆ ಬಸ್ ವ್ಯವಸ್ಥೆ ಕಲ್ಪಿಸಲಾಗಿದೆ. ಆಸಕ್ತರು 9663653263 ಅಥವಾ 9448082158 ಈ ಸಂಖ್ಯೆಯನ್ನು ಸಂಪರ್ಕಿಸಬಹುದು. ಸಮಾವೇಶದಲ್ಲಿ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು ಎಂದರು.

ಪ್ರಮುಖರಾದ ಮೋಹನ್ ಮೂರ್ತಿ, ಫೆಡ್ರಿಕ್ ಸಲ್ಡಾನ, ಮಂಜುನಾಥ ಬಳಸಗೋಡು, ರಮೇಶ್ ಐಗಿನಬೈಲ್, ಶಶಿಕಾಂತ್ ಎಂ.ಎಸ್. ಎಜಾಜ್ ಬಾಷಾ, ಸೈಯದ್ ಸುಹೇಲ್, ಆರಿಫ್ ಸಾಗರ ಅವರೂ ಸುದ್ದಿಗೋಷ್ಠಿಯಲ್ಲಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.