ADVERTISEMENT

ಶಿವಮೊಗ್ಗ ನಗರ; ಈಶ್ವರಪ್ಪ ಹೊರತಾಗಿ ಬಿಜೆಪಿಯಿಂದ ಯಾರಿಗೆ ಟಿಕೆಟ್‌?

ವಿಧಾನಸಭೆ ಚುನಾವಣೆ: ಬಿಜೆಪಿಯ ಟಿಕೆಟ್‌ ಆಕಾಂಕ್ಷಿಗಳಲ್ಲಿ ಉತ್ಸಾಹ

ವೆಂಕಟೇಶ್ ಜಿ.ಎಚ್
Published 23 ಡಿಸೆಂಬರ್ 2022, 6:12 IST
Last Updated 23 ಡಿಸೆಂಬರ್ 2022, 6:12 IST
ಆಯನೂರು ಮಂಜುನಾಥ್
ಆಯನೂರು ಮಂಜುನಾಥ್   

ಶಿವಮೊಗ್ಗ: ವಿಧಾನಸಭೆ ಚುನಾವಣೆಗೆ ಜಿಲ್ಲೆಯಲ್ಲಿ ನಿಧಾನವಾಗಿ ರಂಗ ಸಜ್ಜಾಗುತ್ತಿದೆ. ಕಾಂಗ್ರೆಸ್‌, ಬಿಜೆಪಿ, ಜೆಡಿಎಸ್, ಎಎಪಿ ಸೇರಿದಂತೆ ಪ್ರಮುಖ ರಾಜಕೀಯ ಪಕ್ಷಗಳ ಅಭ್ಯರ್ಥಿಗಳಾಗಿ ಕಣಕ್ಕಿಳಿಯಲು ಆಕಾಂಕ್ಷಿಗಳು ಸಿದ್ಧತೆ ನಡೆಸಿದ್ದಾರೆ. ಅದಕ್ಕೆ ಶಿವಮೊಗ್ಗ ನಗರ ವಿಧಾನಸಭಾ ಕ್ಷೇತ್ರವೂ ಹೊರತಲ್ಲ. ಬಿಜೆಪಿಯಲ್ಲಿ ಹಾಲಿ ಶಾಸಕ ಕೆ.ಎಸ್‌. ಈಶ್ವರಪ್ಪ ಇದ್ದಾರೆ. ಆದರೂ, ‘ಮುಂಬರುವ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿ ಯಾರು’ ಎಂಬುದು ಕುತೂಹಲ ಉಂಟುಮಾಡಿದೆ.

ಮತ್ತೊಮ್ಮೆ ತಾವೇ ಸ್ಪರ್ಧಿಸಲು ಈಶ್ವರಪ್ಪ ಸಜ್ಜಾಗಿದ್ದು, ತಪ್ಪಿದಲ್ಲಿ ಪುತ್ರ ಕೆ.ಇ. ಕಾಂತೇಶ ಅವರಿಗೆ ಟಿಕೆಟ್ ಕೊಡಿಸುವ ವಿಚಾರದಲ್ಲಿದ್ದಾರೆ. ಈ ಮಧ್ಯೆ ಪಕ್ಷದ ‍ಪ್ರಮುಖರಾದ ಎಸ್‌. ದತ್ತಾತ್ರಿ, ಡಾ.ಧನಂಜಯ ಸರ್ಜಿ, ಜ್ಯೋತಿ ಪ್ರಕಾಶ್, ಆಯನೂರು ಮಂಜುನಾಥ್ ಕೂಡ ಟಿಕೆಟ್‌ಗಾಗಿ ಪೈಪೋಟಿಯಲ್ಲಿದ್ದಾರೆ.

‘ಇನ್ನೂ ನಾನು ಗಟ್ಟಿಮುಟ್ಟಾಗಿರುವೆ. 75 ವರ್ಷ ಆಗಿಲ್ಲ. ಪಕ್ಷದಲ್ಲೂ ಪ್ರಭಾವಿ. ರಾಯಣ್ಣ ಬ್ರಿಗೇಡ್ ಕಣ್ಣು ಮುಚ್ಚಿದರೂ ರಾಜ್ಯಮಟ್ಟದಲ್ಲಿ ಇನ್ನೂ ಹಿಂದುಳಿದ ವರ್ಗದ ಪ್ರಶ್ನಾತೀತ ನಾಯಕ. ಬಿಜೆಪಿಯ ಹಿಂದೂ ಟ್ರಂಪ್‌ ಕಾರ್ಡ್‌ನ ಕಟ್ಟಾಳು. ಹಿರಿತನ ಪರಿಗಣಿಸಿ ತಮಗೇ ಟಿಕೆಟ್ ಕೊಡಬೇಕು’ ಎಂಬುದು ಈಶ್ವರಪ್ಪ ಅವರ ಒತ್ತಾಸೆ.

ADVERTISEMENT

ಅಕಸ್ಮಾತ್‌ ಹೈಕಮಾಂಡ್‌ ‘ಗುಜರಾತ್ ಮಾದರಿ’ ಅನುಸರಿಸಿ ಹಿರಿಯರಿಗೆ ಟಿಕೆಟ್ ಕೊಡುವುದಿಲ್ಲ ಎಂದಾದರೆ, ಮಗ ಕಾಂತೇಶ ಅವರಿಗೆ ಕೊಡಲಿ ಎಂಬ ಅಶಯ. ಅದಕ್ಕೆ ಪೂರಕವಾಗಿ ಕಾಂತೇಶ್ ಈಗ ಶಿವಮೊಗ್ಗ ಕ್ಷೇತ್ರದಲ್ಲಿ ಹೆಚ್ಚು ಕ್ರಿಯಾಶೀಲರಾಗಿದ್ದಾರೆ. ಕಾರ್ಯಕ್ರಮಗಳ ಫ್ಲೆಕ್ಸ್‌ನಲ್ಲೂ ರಾರಾಜಿಸುತ್ತಿದ್ದಾರೆ. ಅಯ್ಯಪ್ಪಸ್ವಾಮಿ ಪೂಜೆಗೆ ಪಡಿ ಸಂಗ್ರಹ, ಓಂಶಕ್ತಿ ಕೇಂದ್ರಕ್ಕೆ ತೀರ್ಥಯಾತ್ರೆ ಆಯೋಜನೆ ಸೇರಿ ಹತ್ತು ಹಲವು ಸಾಮಾಜಿಕ ಚಟುವಟಿಕೆಯಲ್ಲಿ ತೊಡಗಿದ್ದಾರೆ.

ಹೊಸ ಮುಖದತ್ತ ಚಿತ್ತ ?: ‘ಬಿಜೆಪಿಯ ದ್ರೋಣಾಚಾರ್ಯ ಯಡಿಯೂರಪ್ಪ ಚುನಾವಣಾ ರಾಜಕೀಯದಿಂದ ನೇಪಥ್ಯಕ್ಕೆ ಸರಿದಾಯ್ತು. ರಾಜಕೀಯ ರಣರಂಗದಲ್ಲಿ ಪದೇ ಪದೇ ‘ಅಶ್ವತ್ಥಾಮ ಹತಃ’ ಎಂದು ಹೇಳಿಸಲು ಇನ್ನೂ ಧರ್ಮರಾಯ ಈಶ್ವರಪ್ಪನವರ ಅಗತ್ಯ ಪಕ್ಷಕ್ಕಾಗಲೀ, ಸಂಘಕ್ಕಾಗಲೀ ಇಲ್ಲವೇ ಇಲ್ಲ. ಜೊತೆಗೆ ಹಿಂದೂ ಮತಗಳ ಧ್ರುವೀಕರಣದ ಹಾದಿಯಲ್ಲಿ ಶಿವಮೊಗ್ಗ ನಗರಕ್ಕೆ ಆಗಿರುವ ಹಾನಿ ನಿಯಂತ್ರಿಸಲು ಪಕ್ಷ ಹೊಸಬರ ಹುಡುಕಾಟದಲ್ಲಿದೆ’ ಎಂಬ ಮಾತು ಕಮಲದ ಪಡಸಾಲೆಯಲ್ಲಿ ಕೇಳಿ ಬರುತ್ತಿದೆ. ಇದು ಉಳಿದ ಆಕಾಂಕ್ಷಿಗಳಲ್ಲೂ ಉತ್ಸಾಹ ಮೂಡಿಸಿದೆ.

‘ನಾನೂ ಟಿಕೆಟ್‌ ಕೇಳುತ್ತಿದ್ದೇನೆ’

ಹಾಲಿ ವಿಧಾನಪರಿಷತ್ ಸದಸ್ಯ, ಸಾದರ ಲಿಂಗಾಯತ ಸಮುದಾಯಕ್ಕೆ ಸೇರಿದ ಆಯನೂರು ಮಂಜುನಾಥ್ ಅವರೂ ನಗರದಿಂದ ಟಿಕೆಟ್‌ ಆಕಾಂಕ್ಷಿಯಾಗಿದ್ದಾರೆ.

‘ಶಿವಮೊಗ್ಗದಲ್ಲಿ ಸಣ್ಣ ಸಂಘರ್ಷ ಆದರೂ ಹೊಡೆತ ಬೀಳುತ್ತಿರುವುದು ಬಡವರಿಗೆ. ದಿನನಿತ್ಯ ದುಡಿದು ತಿನ್ನವವರಿಗೆ. ಶಿವಮೊಗ್ಗವನ್ನು ತಣ್ಣಗಿಡದೆ ಇದ್ದರೆ ಬಡವರು ಬದುಕಲು ಆಗುವುದಿಲ್ಲ. ನಗರದ ಹಿತದೃಷ್ಟಿಯಿಂದ ಎಂಎಲ್‌ಎ ಆಗಬೇಕು ಎಂದು ನಿರ್ಧರಿಸಿದ್ದೇನೆ. ಟಿಕೆಟ್‌ ಕೇಳುತ್ತಿದ್ದೇನೆ’ ಎಂದು ಆಯನೂರು ಮಂಜುನಾಥ್ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.

‘ಶಿವಮೊಗ್ಗ ನಾನು ಬೆಳೆದ ನಗರ. ಇಲ್ಲಿಯೇ ಆಟೊ ಓಡಿಸಿದ್ದೇನೆ. ಸಂಘಟನೆಯ ನೆಲೆಯಿಂದ ಬಂದಿದ್ದೇನೆ. ಜೊತೆಗೆ ಈ ಹಿಂದೆ ಗ್ರಾಮೀಣ ಕ್ಷೇತ್ರದ ಶಾಸಕನಾಗಿದ್ದೆ. ಆಗ ಶಿವಮೊಗ್ಗ ನಗರದ 13 ವಾರ್ಡ್‌ಗಳು ನನ್ನ ವ್ಯಾಪ್ತಿಗೆ ಬರುತ್ತಿದ್ದವು. ಹೀಗಾಗಿ ನಗರದಲ್ಲಿ ಪರಿಚಿತನಿದ್ದೇನೆ. ಈಶ್ವರಪ್ಪ ಅವರಿಗೆ ಪರ್ಯಾಯವಾಗಿ ಸಮರ್ಥ ವ್ಯಕ್ತಿ ನಾನು‘ ಎಂದು ಮಂಜುನಾಥ್ ತಮ್ಮ ಹಕ್ಕು ಪ್ರತಿಪಾದಿಸುತ್ತಾರೆ.

‘2 ಅವಧಿಗೆ ಬ್ರಾಹ್ಮಣರಿಗೆ ಕೊಡಲಿ’

ಬಿಜೆಪಿ ವಲಯದಲ್ಲಿ ದತ್ತಣ್ಣ ಎಂದೇ ಪರಿಚಿತ ಎಸ್‌. ದತ್ತಾತ್ರಿ ಅವರು ಬ್ರಾಹ್ಮಣ ಸಮುದಾಯದವರು.

‘ಶಿವಮೊಗ್ಗ ಮೂಲತಃ ಬ್ರಾಹ್ಮಣ ಸಮುದಾಯದ ಪ್ರಾತಿನಿಧ್ಯದ ಕ್ಷೇತ್ರ. ಇದನ್ನು ರಾಜಕೀಯ ಇತಿಹಾಸ ಕೂಡ ದೃಢೀಕರಿಸುತ್ತದೆ. ಈ ಹಿಂದೆ ಆನಂದರಾವ್ ಸೋತರು ಎಂಬ ಕಾರಣಕ್ಕೆ ಕಾರ್ಯತಂತ್ರ ಬದಲಿಸಿ ಈಶ್ವರಪ್ಪ ಅವರನ್ನು ನಿಲ್ಲಿಸಲಾಗಿತ್ತು. ವಯೋಮಿತಿಯ ಕಾರಣಕ್ಕೆ ಈಶ್ವರಪ್ಪ ಅವರಿಗೆ ಟಿಕೆಟ್ ಕೊಡುವುದಿಲ್ಲ ಎಂಬ ಮಾತು ಕೇಳಿ ಬಂದಿದೆ. ಹೀಗಾಗಿ ಮುಂದಿನ ಎರಡು ಅವಧಿಗೆ ಬ್ರಾಹ್ಮಣರಿಗೆ ಕೊಡಿ ಎಂಬ ಬೇಡಿಕೆ ನಮ್ಮದು’ ಎಂದು ದತ್ತಾತ್ರಿ ಪ್ರತಿಕ್ರಿಯಿಸಿದರು.

‘ಕಳೆದ 35ರಿಂದ 40 ವರ್ಷಗಳಲ್ಲಿ ಪಕ್ಷದ ಎಲ್ಲ ಹುದ್ದೆಗಳಲ್ಲೂ ಕೆಲಸ ಮಾಡಿದ್ದೇನೆ. ತಳಮಟ್ಟದಿಂದ ಪಕ್ಷ ಸಂಘಟಿಸಲು ಶ್ರಮಿಸಿದ್ದೇನೆ. ನಾನೊಬ್ಬ ಸ್ವಯಂ ಸೇವಕ. ಸಂಘದ ಕೆಲಸದಿಂದಲೇ ಪಕ್ಷಕ್ಕೆ ಬಂದಿರುವೆ. ಪರಿವಾರದ ಉಳಿದ ಸಂಘಟನೆಗಳ ಜೊತೆಗ ಉತ್ತಮ ಸಂಬಂಧವಿದೆ. ಸಾಮಾಜಿಕ ಚಟುವಟಿಕೆಯಲ್ಲೂ ತೊಡಗಿದ್ದೇನೆ. ಶಿವಮೊಗ್ಗದಲ್ಲೂ ಬದಲಾವಣೆ ಬೇಕಿದೆ. ಹೀಗಾಗಿ ಟಿಕೆಟ್ ಕೇಳುತ್ತಿದ್ದೇನೆ’ ಎನ್ನುತ್ತಾರೆ ಅವರು.

‘ಪಕ್ಷದ ನಿರ್ಧಾರಕ್ಕೆ ಬದ್ಧ’

ಕೆ.ಇ. ಕಾಂತೇಶ್ ಅವರು ಶಾಸಕ ಕೆ.ಎಸ್. ಈಶ್ವರಪ್ಪ ಅವರ ಪುತ್ರ. ಹಾಲುಮತ ಸಮಾಜಕ್ಕೆ ಸೇರಿದವರು.

‘ಅಪ್ಪ (ಈಶ್ವರಪ್ಪ) ಪಕ್ಷಕ್ಕಾಗಿ 35ರಿಂದ 40 ವರ್ಷ ದುಡಿದಿದ್ದಾರೆ. ಅವರಿಗೆ ಇನ್ನೂ 75 ವರ್ಷ ಆಗಿಲ್ಲ. ಹೀಗಾಗಿ ಗುಜರಾತ್ ಮಾದರಿ ಅನ್ವಯವಾಗುವುದಿಲ್ಲ. ಅವರಿಗೆ ಟಿಕೆಟ್ ಇಲ್ಲ ಎಂಬ ಪರಿಸ್ಥಿತಿಯೂ ಬರುವುದಿಲ್ಲ. ಅವರನ್ನೇ ಪರಿಗಣಿಸಲಿದ್ದಾರೆ ಅಂದುಕೊಂಡಿದ್ದೇವೆ. ಅಕಸ್ಮಾತ್ ಅವರಿಗೆ ಟಿಕೆಟ್ ಇಲ್ಲ ಎಂದಾದರೆ ಪಕ್ಷ ಏನು ಹೇಳುತ್ತದೆಯೋ ಅದಕ್ಕೆ ಬದ್ಧನಾಗಿದ್ದೇನೆ’ ಎಂದು ಕೆ.ಇ. ಕಾಂತೇಶ್ ಪ್ರತಿಕ್ರಿಯಿಸಿದರು.

‘ನಾನು ಸ್ವಯಂ ಸೇವಕ. ಸಂಘದಲ್ಲಿ ಎರಡನೇ ವರ್ಷದ ಒಟಿಸಿ ಮುಗಿಸಿದ್ದೇನೆ. ಪಕ್ಷದ ನಿಷ್ಠ ಕಾರ್ಯಕರ್ತ. ತಾಲ್ಲೂಕು ಪಂಚಾಯಿತಿ ಅಧ್ಯಕ್ಷ, ಜಿಲ್ಲಾ ಪಂಚಾಯಿತಿ ಸದಸ್ಯನಾಗಿ ಕೆಲಸ ಮಾಡಿದ ಅನುಭವವೂ ಇದೆ. ಜೊತೆಗೆ ಸಂಘಟನೆಯಲ್ಲಿ ತೊಡಗಿದ್ದೇನೆ. ಹೀಗಾಗಿ ಟಿಕೆಟ್ ವಿಚಾರದಲ್ಲಿ ಪಕ್ಷ ತೆಗೆದುಕೊಳ್ಳುವ ನಿರ್ಧಾರಕ್ಕೆ ಬದ್ಧನಿದ್ದೇನೆ’ ಎಂದು ಕಾಂತೇಶ್ ತಿಳಿಸಿದರು.

‘ನಾನೂ ಪ್ರಬಲ ಆಕಾಂಕ್ಷಿ’

ಡಾ.ಧನಂಜಯ ಸರ್ಜಿ ಅವರು ಚಿಕ್ಕಮಕ್ಕಳ ತಜ್ಞ. ಸಾದರ ಲಿಂಗಾಯತ ಸಮುದಾಯಕ್ಕೆ ಸೇರಿದ್ದಾರೆ. ಸರ್ಜಿ ಫೌಂಡೇಶನ್‌ ಮೂಲಕ ಸಾಮಾಜಿಕ ಕ್ಷೇತ್ರದಲ್ಲಿ ಸಕ್ರಿಯರಾಗಿದ್ದಾರೆ. ಸರ್ಜಿ ಕಳೆದ ಆರು ತಿಂಗಳಿನಿಂದಲೂ ಚುನಾವಣೆಗೆ ಸಿದ್ಧತೆ ನಡೆಸಿದ್ದರು. ಸಾಮರಸ್ಯ ನಡಿಗೆ, ಆರೋಗ್ಯ ಶಿಬಿರ, ಸಾಮಾಜಿಕ ಕಾರ್ಯಗಳಲ್ಲಿ ತೊಡಗಿದ್ದು, ಈಶ್ವರಪ್ಪ ಅವರ ನಿದ್ದೆಗೆಡಿಸಿತ್ತು. ಅವರು ಬಿಜೆಪಿಗೆ ಸೇರ್ಪಡೆ ಆಗುತ್ತಿದ್ದಂತೆಯೇ ಈಶ್ವರಪ್ಪ ನಿರಾಳರಾಗಿದ್ದರು.

‘ಸಂಘ ಪರಿವಾರದ ಸಂಪರ್ಕ, ಸಾಮಾಜಿಕ ಕಾರ್ಯ, ಜನ ಬಳಕೆ, ಕೌಟುಂಬಿಕ ಹಿನ್ನೆಲೆ, ಪಕ್ಷದೊಂದಿಗೆ ಒಡನಾಟ ಸ್ಪರ್ಧಿಸಲು ನನಗೆ ಪೂರಕವಾಗಿವೆ. ಟಿಕೆಟ್ ವಿಚಾರದಲ್ಲಿ ಪಕ್ಷ ಹಾಗೂ ಸಂಘಟನೆಯ ಹಿರಿಯರು ಕೈಗೊಳ್ಳುವ ತೀರ್ಮಾನಕ್ಕೆ ನಾನು ಬದ್ಧನಾಗಿರಲಿದ್ದೇನೆ’ ಎಂದು ಡಾ.ಧನಂಜಯ ಸರ್ಜಿ ಪ್ರತಿಕ್ರಿಯಿಸಿದರು.

‘ಜನರ ಸೇವೆ ಮಾಡಬೇಕು ಎಂಬ ಆಶಯದೊಂದಿಗೆ ರಾಜಕೀಯಕ್ಕೆ ಬರುತ್ತಿದ್ದೇನೆ. ಹೀಗಾಗಿ
ಈಶ್ವರಪ್ಪ ಅವರು ಇಲ್ಲದಿದ್ದರೆ ನಾನು ಪ್ರಬಲ ಆಕಾಂಕ್ಷಿ’ ಎನ್ನುತ್ತಾರೆ.

‘ಪಕ್ಷ ನಿಷ್ಠೆ ಕೈ ಹಿಡಿಯಲಿದೆ’

ಶಿವಮೊಗ್ಗದ ಬಸವೇಶ್ವರ ವೀರಶೈವ ಸಮಾಜದ ಅಧ್ಯಕ್ಷ ಜ್ಯೋತಿಪ್ರಕಾಶ್ ಲಿಂಗಾಯತ ಗಾಣಿಗ ಸಮಾಜದವರು. ಬಿಜೆಪಿಯಲ್ಲಿ ಸಕ್ರಿಯರಾಗಿದ್ದು, ಎರಡು ಬಾರಿ ಎಪಿಎಂಸಿ ಅಧ್ಯಕ್ಷ, ಸೂಡಾ ಅಧ್ಯಕ್ಷರಾಗಿ ಕೆಲಸ ಮಾಡಿದ್ದಾರೆ.

‘ಯಾವುದೇ ಕಪ್ಪು ಚುಕ್ಕೆ ಇಲ್ಲದೇ ರಾಜಕೀಯ ಬದುಕಿನಲ್ಲಿ ಕೆಲಸ ಮಾಡಿದ್ದೇನೆ. ಎಲ್ಲರೊಂದಿಗೂ ವಿಶ್ವಾಸದಿಂದ ವರ್ತಿಸಿ ಜನರ ಸಮಸ್ಯೆಗಳಿಗೆ ದನಿಯಾಗಿದ್ದೇನೆ.
ಈ ಹಿಂದೆ ಕಾಂಗ್ರೆಸ್ ಟಿಕೆಟ್ ಕೊಡುವುದಾಗಿ ಎಸ್.ಎಂ. ಕೃಷ್ಣ, ಬಂಗಾರಪ್ಪ ಅವರು ಕರೆದಿದ್ದರು. ನಾನು ಹೋಗಿಲ್ಲ. ಮೂರು ದಶಕಗಳಿಂದ ವೀರಶೈವ ಸಮಾಜವನ್ನು ಸಂಘಟಿಸಿದ್ದೇನೆ’ ಎಂದು ಜ್ಯೋತಿ ಪ್ರಕಾಶ್ ತಿಳಿಸಿದರು.

‘ಎಲ್ಲ ಸಮಾಜಗಳನ್ನು ಒಟ್ಟಾಗಿ ತೆಗೆದುಕೊಂಡು ಹೋಗುವ ಶಕ್ತಿ ನನಗೆ ಇದೆ. ವಿಶ್ವಾಸದಿಂದ ವರ್ತಿಸಿದ್ದೇನೆ. ಪಕ್ಷದ ಮೇಲಿನ ನಿರಂತರ ನಿಷ್ಠೆ, ಸಂಘಟನೆ ನನ್ನ ಕೈ ಹಿಡಿಯಲಿದೆ. ಟಿಕೆಟ್ ಸಿಗಲಿದೆ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.