ನಿತ್ಯ ನಸುಕು ಹರಿಯುತ್ತಲೇ ರಸ್ತೆ, ಬೀದಿ, ಓಣಿ, ಕೇರಿಗಳ ಮನೆಯ ಮುಂದೆ ಅನುರಣಿಸುವ ಸೈಕಲ್‌ನ ಟ್ರಿಣ್ ಟ್ರಿಣ್ ಸದ್ದು ಹಲವರನ್ನು ನಿದ್ರೆಯಿಂದ ಎಬ್ಬಿಸುತ್ತದೆ. ಗೇಟ್, ಬಾಗಿಲ ಬಳಿಯ ಸದ್ದು ಮನೆಯ ಅಂಗಳಕ್ಕೆ ದಿನಪತ್ರಿಕೆ ತಲುಪಿದ ಕ್ಷಣಕ್ಕೆ ಸಾಕ್ಷಿಯಾಗುತ್ತದೆ. ಚುಮು ಚುಮು ಚಳಿ, ಎಡಬಿಡದೇ ಸುರಿವ ಮಳೆ, ಆಹ್ಲಾದಕ ಮುಂಜಾವು ಹೀಗೆ ಎಲ್ಲ ಹೊತ್ತಿನಲ್ಲೂ ಕಾಲಾತೀತವಾಗಿ ಎದುರಾಗುತ್ತಾ, ಪತ್ರಿಕೆ– ಓದುಗರ ನಡುವೆ ಸಂವಾದಿಯಾಗುತ್ತಾ ನಿತ್ಯದ ಅಕ್ಷರ ಕೃಷಿಗೆ ಸೇತುವಾಗುವ ಪತ್ರಿಕಾ ವಿತರಕರು, ಜಗದ ಸುದ್ದಿಯನ್ನು ಓದುಗರ ಕೈಗೆ ತಲುಪಿಸಿ ತಾವು ಮಾತ್ರ ಸದ್ದಿಲ್ಲದೇ, ಸುದ್ದಿಯೂ ಆಗದೇ ನೇಪಥ್ಯದಲ್ಲಿ ಉಳಿಯುತ್ತಾರೆ. ಈ ಸುದ್ದಿ ಪರಿಚಾರಕರಿಗೊಂದು ನಾಗರಿಕ ಪ್ರಪಂಚ ಕೃತಜ್ಞತೆ ಹೇಳುವ ಹೊತ್ತು ಈ ಪತ್ರಿಕಾ ವಿತರಕರ ದಿನ. ಅವರಿಗೆ ಶುಭಾಶಯ ಹೇಳುತ್ತಲೇ ಕೆಲವರನ್ನು ಓದುಗರಿಗೆ ಪರಿಚಯಿಸುವ ಪುಟ್ಟ ಪ್ರಯತ್ನ ಇದು..
ಶಿವಮೊಗ್ಗ: ಓದಿದ್ದ ಊರು ಎಂಬ ಅಪ್ಯಾಯತೆಗೆ ಕಡೂರಿನಿಂದ 1996ರಲ್ಲಿ ಶಿವಮೊಗ್ಗಕ್ಕೆ ಬದುಕು ಕಟ್ಟಿಕೊಳ್ಳಲು ಬಂದವರು ನವುಲೆಯ ಪೇಪರ್ ಶಿವಣ್ಣ (ಡಿ.ಶಿವಪ್ಪ). ಆರಂಭದಲ್ಲಿ ಜೆಎನ್‌ಎನ್‌ಸಿಯಲ್ಲಿ ದಿನಗೂಲಿ ನೌಕರಿ. ದಿನಕ್ಕೆ ₹ 25 ಗಳಿಕೆ. ಆದರೆ, ಅದು ಕುಟುಂಬದ ನಿರ್ವಹಣೆಗೆ ಸಾಲದಾಗದೇ ತಿಲಕ್ ನಗರದ ಶ್ರೀನಿವಾಸ್ ಎಂಬುವವರ ಬಳಿ ಪೇಪರ್ ಹಾಕುವ ಕೆಲಸಕ್ಕೆ ಸೇರಿಕೊಂಡರು.
ನಂತರ ಉಷಾ ನರ್ಸಿಂಗ್ ಹೋಂ ಬಳಿ ಭಟ್ಟರ ಬಳಿ ಕೆಲಸ ಮಾಡಿದ್ದರು. ಮುಂದೆ 15 ಪತ್ರಿಕೆಯಿಂದ ಏಜೆನ್ಸಿ ಆರಂಭಿಸಿ ಸುಭದ್ರ ಬದುಕು ಕಟ್ಟಿಕೊಂಡ ಶಿವಣ್ಣ ಅವರ ಕೆಲಸವೂ ಜೆಎನ್‌ಎನ್‌ಸಿಯಲ್ಲಿ ಕಾಯಂ ಅಗಿ ಲ್ಯಾಬ್ ಟೆಕ್ನೀಷಿಯನ್ ಆಗಿ ಕೆಲಸ ಮಾಡಿ ನಿವೃತ್ತರಾಗಿದ್ದಾರೆ. ಈಗ ನಿತ್ಯವೂ ಉಷಾ ನರ್ಸಿಂಗ್ ಹೋಂನಿಂದ ಅಬ್ಬಲಗೆರೆವರೆಗೂ ಪತ್ರಿಕೆಗಳ ವಿತರಣೆಯ ಜವಾಬ್ದಾರಿ ಹೊತ್ತಿದ್ದಾರೆ. ಬಹಳಷ್ಟು ಹುಡುಗರಿಗೆ ಕೆಲಸ ಕೊಟ್ಟಿದ್ದಾರೆ.
ವೃತ್ತಿ ಹಾಗೂ ಪ್ರವೃತ್ತಿಯಿಂದ ಬಂದ ಹಣದಲ್ಲಿ ಇಬ್ಬರು ಮಕ್ಕಳನ್ನು ಓದಿಸಿ ಪೊಲೀಸ್ ಸೇವೆಗೆ ಸೇರಿಸಿದ್ದಾರೆ. ವಿಶೇಷವೆಂದರೆ ಶಿವಣ್ಣ ಅವರ ಇಬ್ಬರೂ ಸೊಸೆಯಂದಿರೂ ಸೇರಿದಂತೆ ಕುಟುಂಬದ ನಾಲ್ವರು ಪೊಲೀಸ್ ಇಲಾಖೆಯಲ್ಲಿ ಕೆಲಸದಲ್ಲಿದ್ದಾರೆ.
‘ಆರಂಭದ ದಿನಗಳಲ್ಲಿ ಮಕ್ಕಳಿಗೆ ಶಾಲೆಗೆ ತಿಂಡಿ ಕಟ್ಟಿಕೊಡಲು ಕಷ್ಟವಾಗಿತ್ತು. ಈ ಸಂದರ್ಭ ಶಿವಮೊಗ್ಗದಲ್ಲಿ ಬದುಕು ನೆಲೆಗೊಳ್ಳಲು ನೆರವಾಗಿದ್ದು ಈ ಪತ್ರಿಕೆ ವಿತರಣೆಯ ಕೆಲಸ. ಈಗ ಮಕ್ಕಳು ಚೆನ್ನಾಗಿ ದುಡಿಯುತ್ತಿದ್ದಾರೆ. ಪತ್ನಿ ಲಕ್ಷ್ಮಮ್ಮ ಕೂಡ ಜೆಎನ್‌ಎನ್‌ಸಿಯಲ್ಲಿ ಕೆಲಸ ಮಾಡುತ್ತಿದ್ದಾರೆ. ಮೂರು ದಶಕಗಳ ಹೋರಾಟದ ಫಲ ಈಗ ಬದುಕು ಸುಭದ್ರವಾಗಿದೆ. ಹೀಗಾಗಿ ಪತ್ರಿಕೆ ವಿತರಣೆ ಕೆಲಸ ಬಿಡುವಂತೆ ಮನೆಯವರೂ ಹೇಳುತ್ತಿದ್ದಾರೆ. ಆದರೆ ನಾನು ಒಪ್ಪುತ್ತಿಲ್ಲ. ಅನ್ನ ಕೊಟ್ಟ ವೃತ್ತಿ ಇದು. ಮುಂದುವರಿಸುವೆ’ ಎಂದು ಶಿವಣ್ಣ ಅಭಿಮಾನದಿಂದ ಹೇಳುತ್ತಾರೆ.
ಶಿಕಾರಿಪುರದ ಪತ್ರಿಕಾ ವಿತರಕ ಗಿಡ್ಡೇಶ್ ಚೋರಡಿ ಪ್ರಜಾವಾಣಿ ಪತ್ರಿಕೆ ಮನೆಗೆ ಹಾಕುತ್ತಿರುವುದು
ಶಿಕಾರಿಪುರ: ಪಟ್ಟಣದ ದೊಡ್ಡಕೇರಿ ನಿವಾಸಿ ಪೇಪರ್ ಗಿಡ್ಡಪ್ಪ ಎಂದರೆ ಸಾಕು ಇಡೀ ಪಟ್ಟಣದಲ್ಲಿ ಚಿರಪರಿಚಿತ ಹೆಸರು, ನಿತ್ಯ ಮನೆ ಮನೆಗೆ ಪ್ರಜಾವಾಣಿ ಸೇರಿದಂತೆ ಇನ್ನಿತರ ಪತ್ರಿಕೆ ತಲುಪಿಸುವ ಕಾಯಕವನ್ನು ಶ್ರದ್ಧೆಯಿಂದ ಮಾಡುವ ಕಾರಣಕ್ಕೆ ಚೋರಡಿ ಗಿಡ್ಡಪ್ಪ ಎನ್ನುವ ಹೆಸರು ಪೇಪರ್ ಗಿಡ್ಡಪ್ಪ ಎಂದು ಜನಜನಿತವಾಗಿದೆ.
ಕುರುಬ ಸಮುದಾಯದ ಆರಾಧ್ಯ ದೈವ ಬೀರಪ್ಪ ಪಟ್ಟಣದ ದೊಡ್ಡಕೇರಿಯಲ್ಲಿ ಗಿಡ್ಡೇಶ್ವರನಾಗಿ ನೆಲೆಸಿದ್ದಾನೆ. ದೇವಸ್ಥಾನದಲ್ಲಿ ದಸರಾ, ದೀಪಾವಳಿ ಸೇರಿ ಯಾವುದೇ ಉತ್ಸವ ನಡೆದರೂ ದೇವರ ಸೇವಕರಾಗಿ ಸೇವೆ ಮಾಡುತ್ತಾರೆ. ಅಲ್ಲದೆ ದೇವಸ್ಥಾನ ಸಮಿತಿಯಲ್ಲೂ ಕಾರ್ಯನಿರ್ವಹಿಸುತ್ತಿದ್ದಾರೆ ಕುರುಬ ಸಮಾಜದ ಯಾವುದೇ ಕೆಲಸ ಕಾರ್ಯ ಇದ್ದರೂ ಅದರಲ್ಲಿ ತೊಡಗಿಸಿಕೊಂಡಿರುತ್ತಾರೆ.
ಕನಕ ಕ್ರೆಡಿಟ್ ಕೋ ಆಪರೇಟಿವ್ ಬ್ಯಾಂಕ್ ಅದ್ಯಕ್ಷರಾಗಿ, ನಿರ್ದೇಶಕರಾಗಿ ಜನಪರ ಆಡಳಿತ ನೀಡಿ ಅಲ್ಲಿಯೂ ಸೈ ಎನಿಸಿಕೊಂಡಿದ್ದಾರೆ.
ಪ್ರತಿವರ್ಷ ನಡೆಯುವ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಏನಾದರೊಂದು ಜವಾಬ್ದಾರಿ ಹೊತ್ತು ಕನ್ನಡ ಸೇವೆ ಮಾಡುತ್ತಾ ಬಂದಿರುವ ಕಾರಣಕ್ಕೆ ಸಂಘಟನೆಯಲ್ಲಿ ಹಲವು ವರ್ಷ ಪದಾಧಿಕಾರಿಯಾಗಿ, ಒಂದು ವರ್ಷ ಅಧ್ಯಕ್ಷರಾಗಿ ಕನ್ನಡದ ಸೇವೆ ಮಾಡಿದ್ದಾರೆ ಯಾವುದೆ ಹುದ್ದೆ ಇಲ್ಲದಿದ್ದರೂ ಕನ್ನಡ ಸೇವೆ ಮಾಡುವ ಗುಣ ಹೊಂದಿದ್ದಾರೆ.
ಸೊರಬ: ಸೂರ್ಯ ಉದಯಿಸುವ ಮೊದಲೇ ಬಹುತೇಕ ಓದುಗರಿಗೆ ಬಿಸಿಬಿಸಿ ಚಹಾದೊಂದಿಗೆ ದಿನಪತ್ರಿಕೆ ತಲುಪಿಸಬೇಕು. ಇದು ಸುಲಭದ ಕೆಲಸವಲ್ಲದಿದ್ದರೂ, ಪತ್ರಿಕೆ ಮುಟ್ಟಿಸುವ ಕಾಯಕವನ್ನು ಚಾಚೂ ತಪ್ಪದೆ ನಡೆಸುತ್ತಿರುವ ಸಮುದಾಯವೆ ಪತ್ರಿಕಾ ವಿತರಕ ಸಮುದಾಯ.
ತಾಲ್ಲೂಕಿನ ಹಲವು ಭಾಗಗಳಲ್ಲಿ ಪತ್ರಿಕೆ ವಿತರಕರ ಜವಾಬ್ದಾರಿ ಹೆಚ್ಚಿದೆ. ಇಬ್ಬನಿಯ ಹನಿ ಇನ್ನೂ ನಿಲ್ಲದ ಹೊತ್ತಿನಲ್ಲಿ ಚುಮು ಚುಮು ಚಳಿ, ಮಳೆ–ಗಾಳಿ, ಬೀದಿ ನಾಯಿಗಳ ಹಾವಳಿ ಸೇರಿದಂತೆ ಹಲವು ಸವಾಲುಗಳನ್ನು ಮೆಟ್ಟಿ ಪತ್ರಿಕೆ ತಲುಪಿಸುವ ವಿತರಕರು, ನಮ್ಮ ನಡುವಣ ಕಾಯಕಯೋಗಿಗಳು.
ತಾಲ್ಲೂಕಿನ ಉಳವಿ ಗ್ರಾಮದ ಡಿ.ಆರ್ ಗಣಪತಿ ಅವರು 1994 ರಿಂದ ಸತತ 31 ವರ್ಷಗಳ ಕಾಲ ಪತ್ರಿಕೆ ವಿತರಣೆ ಮಾಡುತ್ತಿದ್ದಾರೆ. ಕೃಷಿಕರಾದ ಅವರಿಗೆ ಪತ್ರಿಕೆ ಬಗ್ಗೆ ಬಹಳ ಒಲವು. ಕೃಷಿ ಕಾಯಕದ ಜೊತೆ ಪತ್ರಿಕೆ ವಿತರಣೆ ಅದೇನೋ ಉತ್ಸಾಹ. ವಯಸ್ಸು 70 ಆದರೂ ಪತ್ರಿಕೆ ವಿತರಣೆ ಬಗ್ಗೆ ಎಂದೂ ಮೂಗು ಮುರಿದವರಲ್ಲ. ಸತತ 20 ವರ್ಷಗಳ ಕಾಲ ಸೈಕಲ್ ಮೂಲಕ ಪತ್ರಿಕೆ ವಿತರಣೆ ಮಾಡಿದ್ದರು. ಆದರೂ ಅವರು ಉತ್ಸಾಹ ಕಡಿಮೆಯಾಗಿಲ್ಲ..
ತಾಲ್ಲೂಕಿನ ಕುಪ್ಪಗಡ್ಡೆ ಗ್ರಾಮದ ಪ್ರಶಾಂತ್ ಎಂ. ಭಟ್ ಕೂಡ 1ನೇ ತರಗತಿಯಿಂದ ಪತ್ರಿಕಾ ವಿತರಣೆ ಮಾಡುತ್ತಿರುವುದು ವಿಶೇಷ. ತಂದೆ ಎಂ.ಪಿ ಭಟ್ ಅವರು 1984 ರಿಂದ ಪತ್ರಿಕೆ ವಿತರಿಸುತ್ತಿದ್ದರು. ಅದರಿಂದ ಪ್ರೇರಿತಗೊಂಡ ಪ್ರಶಾಂತ ತಮ್ಮ 6ನೇ ವಯಸ್ಸಿನಲ್ಲೇ ಸೈಕಲ್ ಮೂಲಕ ಹೋಬಳಿಯ ಪ್ರತಿ ಹಳ್ಳಿಗೂ ಪತ್ರಿಕೆ ವಿತರಣೆ ಮಾಡುತ್ತಿದ್ದು, ಇಂದಿಗೂ ತಮ್ಮ ಕಾಯಕದಲ್ಲಿ ತೊಡಗಿದ್ದಾರೆ. ಸಣ್ಣ ಕಿರಾಣಿ ಅಂಗಡಿಯಲ್ಲಿ ಜೀವನ ನಡೆಸುವ ಪ್ರಶಾಂತ್ ಇಂದಿಗೂ ಪ್ರತಿ ಹಳ್ಳಿಯಲ್ಲೂ ಚಿರಪರಿಚಿತ.
‘ಪತ್ರಿಕೆ ವಿತರಣೆ ಕೆಲಸ ಪವಿತ್ರವಾದುದು. ಬೆಳಿಗ್ಗೆಯೇ ಎದ್ದು ಮನೆ ಮನೆಗೆ ಪೇಪರ್ ಹಾಕುವ ಕೆಲಸವು ನನ್ನನ್ನು ದೈಹಿಕವಾಗಿಯಷ್ಟೇ ಅಲ್ಲದೆ ಮಾನಸಿಕವಾಗಿಯೂ ಚನ್ನಾಗಿಟ್ಟಿದೆ’ ಎನ್ನುತ್ತಾರೆ ಪತ್ರಿಕಾ ವಿತರಕ ಪ್ರಶಾಂತ್ ಎಂ. ಭಟ್ ಕುಪ್ಪಗಡ್ಡೆ.
‘ನಾಡಿನ ಸಾಕ್ಷಿಪ್ರಜ್ಞೆಯಾಗಿರುವ ‘ಪ್ರಜಾವಾಣಿ’ ಜೊತೆಗಿನ ನನ್ನ ನಂಟು ಶುರುವಾಗಿ 31 ವರ್ಷಗಳಾಗಿವೆ. ಜನರನ್ನು ಬೌದ್ಧಿಕವಾಗಿ ಶ್ರೀಮಂತರನ್ನಾಗಿಸುವ ಹಾಗೂ ಚಿಂತನೆಗೆ ಹಚ್ಚುವ ಈ ಪತ್ರಿಕೆಯ ವಿತರಣೆ ಕೆಲಸ ಮಾಡುತ್ತಿರುವುದಕ್ಕೆ ಹೆಮ್ಮೆಯ ಜೊತೆಗೆ ತೃಪ್ತಿಯ ಭಾವವಿದೆ’ ಎಂದು ಪತ್ರಿಕಾ ವಿತರಕ ಡಿ.ಆರ್ ಗಣಪತಿ ಉಳವಿ ತಮ್ಮ ಅನುಭವ ಹಂಚಿಕೊಂಡಿದ್ದಾರೆ.
ಕಾರ್ಗಲ್: ಶರಾವತಿ ಕೊಳ್ಳದ ಜೋಗ ಜಲಪಾತ ಪ್ರದೇಶದ ಸುತ್ತಮುತ್ತಲಿನ ಪ್ರದೇಶದ ನಿವಾಸಿಗಳಿಗೆ ಮುಂಜಾನೆಯಾಗುತ್ತಿದ್ದಂತೆ ಹಾಲು ತಪ್ಪಿದರೂ, ನಿತ್ಯ ‘ಪ್ರಜಾವಾಣಿ’ ದಿನಪತ್ರಿಕೆ ಮಾತ್ರ ತಪ್ಪದಂತೆ ತಲುಪಿಸುವ ಅಪರೂಪದ ಪೇಪರ್ ವಿತರಕ ಕೇಶವ ಜನರ ಅಚ್ಚುಮೆಚ್ಚಿನವರಾಗಿದ್ದಾರೆ.
ಪೇಪರ್ ವಿತರಣೆಯ ಜೊತೆಗೆ ಉಪ ಕಾಯಕವಾಗಿ ನಂದಿನ ಹಾಲಿನ ವಿತರಣೆಯ ಜವಾಬ್ದಾರಿಯನ್ನೂ ಹೊತ್ತಿರುವ ಇವರು ಓದುಗರಿಗೆ ಅಗತ್ಯವಾದ ದಿನ ಪತ್ರಿಕೆಗಳನ್ನು ಸಕಾಲಕ್ಕೆ ತಲುಪಿಸುವ ಬಗ್ಗೆ ವಿಶೇಷ ಕಾಳಜಿಯನ್ನು ವಹಿಸುತ್ತಾರೆ. ಬೆಳಿಗ್ಗೆ 5 ಗಂಟೆಯಾಗುತ್ತಿದ್ದಂತೆ ಗುಡ್ಡಗಾಡು ಪ್ರದೇಶಗಳನ್ನು ಲೆಕ್ಕಿಸದೇ ಪತ್ರಿಕೆಗಳನ್ನು ಮನೆ ಮನೆಗೆ ತಲುಪಿಸುವ ಕೇಶವ, ಓದುಗರ ದೊಡ್ಡ ಬಳಗವನ್ನೇ ಸಂಪಾದಿಸಿ ಬಿಟ್ಟಿದ್ದಾರೆ.
ಇಷ್ಟೊಂದು ಆಸಕ್ತಿ ವಹಿಸುವ ಕೇಶವ ಅವರ ಬಳಿ ಹೀಗ್ಯಾಕೆ ವಿಶೇಷ ಕಾಳಜಿ ಎಂದು ಪ್ರಶ್ನೆ ಮಾಡಿದರೆ, ‘ಹಾಲು ಎಷ್ಟು ದಿನ ಬೇಕಾದರೂ ಪ್ರಿಡ್ಜ್‌ನಲ್ಲಿ ಇಡಬಹುದು. ಆದರೆ, ಇಂದಿನ ಸಾಮಾಜಿಕ ಮಾಧ್ಯಮಗಳ ಸವಾಲಿನ ನಡುವೆ ಪತ್ರಿಕೆಗಳು ಬೆಳಿಗ್ಗೆ ಸಮಯ ತಪ್ಪಿ ಹೋದರೆ ಮತ್ತೆ ಅದಕ್ಕೆ ಮಹತ್ವ ಇರಲ್ಲ. ಹಾಗಾಗಿ ಓದುಗರು ಏಳುವುದರ ಒಳಗಾಗಿ ಮನೆ ಬಾಗಿಲಿಗೆ ಪೇಪರ್ ತಲುಪಿಸುವ ಜವಾಬ್ದಾರಿಯನ್ನು ಹೊತ್ತಿದ್ದೇನೆ. ಇದರಿಂದ ಲಾಭ ಕಡಿಮೆ ಆದರೂ, ಆತ್ಮತೃಪ್ತಿ ನನಗಿದೆ’ ಎಂದು ಅವರು ಭಾವನಾತ್ಮಕವಾಗಿ ಹೇಳುತ್ತಾರೆ.
ಅಪ್ಪ, ಅಮ್ಮ, ಹೆಂಡತಿ ಮಕ್ಕಳೊಂದಿಗೆ ತುಂಬು ಸಂಸಾರ ನಡೆಸುತ್ತಿರುವ ಇವರು 55ರ ಪ್ರಾಯದಲ್ಲಿಯೂ ಯಾವುದೇ ರೀತಿಯಲ್ಲಿ ಹಿಂದೇಟು ಹಾಕದೇ ನಿತ್ಯ ತನ್ನ ಕಾಯಕವನ್ನು ಮುಂದುವರಿಸಿದ್ದಾರೆ.
ಸಾಗರ: ಇಲ್ಲಿನ ನೆಹರು ನಗರ ನಿವಾಸಿ ರಮೇಶ್ ಎನ್. 35 ವರ್ಷಗಳಿಂದ ಪತ್ರಿಕಾ ವಿತರಣೆ ವೃತ್ತಿಯಲ್ಲಿದ್ದು, ಆ ಮೂಲಕವೇ ತಮ್ಮ ಬದುಕನ್ನು ಕಟ್ಟಿಕೊಂಡಿದ್ದಾರೆ.
ಬಿ.ಕಾಂ ಪದವೀಧರರಾಗಿರುವ ರಮೇಶ್ 9ನೇ ತರಗತಿಯಲ್ಲಿದ್ದಾಗಲೇ ಅಂದಿನ ‘ಪ್ರಜಾವಾಣಿ’ ವಿತರಕ ಕೆ.ಜಿ. ಶಿವಪ್ಪ ಅವರ ಬಳಿ ಪತ್ರಿಕೆ ವಿತರಿಸುವ ಕಾಯಕ ಆರಂಭಿಸಿದ್ದರು. ‘ಆರಂಭದಲ್ಲಿ ಸೈಕಲ್‌ನಲ್ಲಿ ಪ್ರತಿದಿನ 150 ಮನೆಗಳಿಗೆ ಪತ್ರಿಕೆ ವಿತರಿಸುತ್ತಿದ್ದೆ. ಆಗ ಪ್ರಜಾವಾಣಿ ಬೆಲೆ 70 ಪೈಸೆ ಇತ್ತು. ನನಗೆ ₹ 135 ಮಾಸಿಕ ಸಂಬಳ ಬರುತ್ತಿತ್ತು’ ಎಂಬುದನ್ನು ರಮೇಶ್ ನೆನಪಿಸಿಕೊಳ್ಳುತ್ತಾರೆ.
ಪತ್ರಿಕಾ ವೃತ್ತಿಯ ಜೊತೆಗೆ ಕ್ರೀಡೆಯಲ್ಲೂ ರಮೇಶ್ ಗಮನಾರ್ಹ ಸಾಧನೆ ಮಾಡಿದ್ದಾರೆ. ಪವರ್ ಲಿಫ್ಟಿಂಗ್ 69 ಕೆ.ಜಿ. ವಿಭಾಗದಲ್ಲಿ ರಾಜ್ಯಮಟ್ಟದಲ್ಲಿ ಚಿನ್ನದ ಪದಕವನ್ನು ಗೆದ್ದಿರುವ ರಮೇಶ್ ಅಖಿಲ ಭಾರತ ಮಟ್ಟದ ವಿಶ್ವವಿದ್ಯಾಲಯ ಕ್ರೀಡೆಯ ಪವರ್ ಲಿಫ್ಟಿಂಗ್ ಸ್ಪರ್ಧೆಯಲ್ಲಿ ಕುವೆಂಪು ವಿಶ್ವವಿದ್ಯಾಲಯವನ್ನು ಪ್ರತಿನಿಧಿಸಿದ್ದಾರೆ.
ರಮೇಶ್ ಅವರ ಪತ್ನಿ ಪುಷ್ಪಾ ಕೂಡ ಅಂತರರಾಷ್ಟ್ರೀಯ ಮಟ್ಟದ ಪವರ್ ಲಿಫ್ಟಿಂಗ್‌ನಲ್ಲಿ ಹೆಸರು ಮಾಡಿದ್ದಾರೆ. ರಾಷ್ಟ್ರಮಟ್ಟದ ಪವರ್ ಲಿಫ್ಟಿಂಗ್ ಸ್ಪರ್ಧೆಯಲ್ಲಿ ಚಿನ್ನದ ಪದಕ ಗಳಿಸಿ 2004ರಲ್ಲಿ ಉಜ್ಬೇಕಿಸ್ತಾನದಲ್ಲಿ ನಡೆದ ಅಂತರರಾಷ್ಟ್ರೀಯ ಪವರ್ ಲಿಫ್ಟಿಂಗ್ ಸ್ಪರ್ಧೆಯಲ್ಲಿ ಭಾರತ ತಂಡವನ್ನು ಪ್ರತಿನಿಧಿಸಿ ಪುಷ್ಪಾ ಅವರು ಕಂಚಿನ ಪದಕ ಗೆದ್ದುಕೊಂಡಿದ್ದಾರೆ.
ಪತ್ರಿಕೆ ಹಂಚುವ ಕೆಲಸದಿಂದ ಪತ್ರಿಕಾ ವಿತರಕರಾಗುವವರೆಗೆ ಇದೇ ಕ್ಷೇತ್ರದಲ್ಲಿ ತಮ್ಮನ್ನು ತೊಡಗಿಸಿಕೊಂಡಿರುವ ರಮೇಶ್ ವಿವಿಧ ಸಂಘ ಸಂಸ್ಥೆಗಳ ಮೂಲಕ ಸಾಮಾಜಿಕವಾಗಿಯೂ ಕ್ರಿಯಾಶೀಲರಾಗಿದ್ದಾರೆ.
ಹೊಸನಗರ: ಸತತ ಓದು, ಅಧ್ಯಯನ, ಪಾಠ ಪ್ರವಚನದ ನಡುವೆ ಪತ್ರಿಕಾ ವಿತರಣೆ ಕಾಯಕವನ್ನು ಗೌರವದಿಂದ ಕಂಡು ಮೈಗೂಡಿಸಿಕೊಂಡು ಬಂದವರು ಕಾರಗಡಿ ಕೆ. ಮಹೇಶ್.
ವೃತ್ತಿಯಲ್ಲಿ ಅತಿಥಿ ಉಪನ್ಯಾಸಕರಾಗಿರುವ ಕಾರಗಡಿ ಊರಿನ ‘ಪ್ರಜಾವಾಣಿ’ ಪ್ರತಿನಿಧಿ ಕೆ. ಮಹೇಶ್ ಅವರು 25 ವರ್ಷಗಳಿಂದ ಪತ್ರಿಕೆ ವಿತರಣೆ ಮಾಡುವ ಕಾಯಕದಲ್ಲಿ ನಿರತರಾಗಿದ್ದಾರೆ. ಪತ್ರಿಕೆ ಹಂಚುವ ಕೆಲಸದಲ್ಲಿ ನಿಷ್ಠೆ ಮೆರೆದು ಅದರಲ್ಲೇ ಸಂತಸ ಕಂಡಿದ್ದಾರೆ. ಬದುಕನ್ನೂ ಕಟ್ಟಿಕೊಂಡಿದ್ದಾರೆ.
ಕೆ. ಮಹೇಶ್ ಕಷ್ಟಕಾಲದಲ್ಲೂ ಪತ್ರಿಕೆಯನ್ನು ಸರಿಯಾದ ಸಮಯಕ್ಕೆ ಮನೆ, ಮನೆಗೆ ಹಂಚುವ ಕೆಲಸವನ್ನು ಮೆಚ್ಚಲೇಬೇಕು.
ಕಾರಗಡಿ ವರ್ತಕ ಕೆ. ಕೃಷ್ಣಮೂರ್ತಿ ಹಾಗೂ ಗುಲಾಬಿ ದಂಪತಿ ಹಿರಿಯ ಪುತ್ರರಾದ ಕೆ. ಮಹೇಶ್ ಅವರು ಚಿಕ್ಕ ವಯಸ್ಸಿನಲ್ಲೇ ಪತ್ರಿಕಾ ವಿತರಣೆ ಕಾರ್ಯದಲ್ಲಿ ತೊಡಗಿಕೊಂಡವರು. ಪ್ರಾಥಮಿಕ ವಿದ್ಯಾಭ್ಯಾಸದ ಜೊತೆ ಜೊತೆಗೆ ಮನೆ ಮನೆಗೆ ಪತ್ರಿಕೆ ಹಂಚುವ ಗುರುತರ ಜವಾಬ್ದಾರಿಯನ್ನು ಹೊತ್ತು, ಇದನ್ನೇ ಪ್ರವೃತ್ತಿಯಾಗಿ ಸ್ವೀಕರಿಸಿ ಪತ್ರಿಕಾ ಪ್ರತಿನಿಧಿಯಾಗಿ ಯಶಸ್ಸು ಕಂಡವರು.
ಪ್ರಸ್ತುತ ಸಾಗರದ ಇಂದಿರಾಗಾಂಧಿ ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಪದವಿ ಕಾಲೇಜಿನಲ್ಲಿ ಅತಿಥಿ ಉಪನ್ಯಾಸಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ಬದುಕು ಕಟ್ಟಿಕೊಳ್ಳಲು ಸಹಕಾರಿ: ‘ನಾನು 7ನೇ ತರಗತಿ ಓದುತ್ತಿರುವಾಗ ತಂದೆಯವರು ಪತ್ರಿಕಾ ಏಜೆಂಟ್ ಆದರು. ಅಂದಿನಿಂದ ಇಂದಿನವರೆಗೂ ಪತ್ರಿಕೆ ಹಂಚುವ ಕೆಲಸವನ್ನು ಪ್ರಾಮಾಣಿಕವಾಗಿ ಮಾಡಿದ್ದೇವೆ. ಆ ಕಷ್ಟ ಕಾಲದಲ್ಲಿ ಪತ್ರಿಕೆ ನಮ್ಮನ್ನು ಕೈ ಹಿಡಿದು ನಡೆಸಿದೆ. ಪತ್ರಿಕೆಗಳ ಕಮೀಷನ್ ಹಣ ಜೀವನಕ್ಕೆ ಆಸರೆಯಾಗಿದೆ. ನನ್ನ ಹಾಗೂ ನನ್ನ ತಮ್ಮಂದಿರ ಓದಿಗೆ ಪತ್ರಿಕೆ ಸಹಕಾರಿ ಆಗಿದೆ. ಮಾತ್ರವಲ್ಲ ನಮ್ಮ ಬದುಕು ಕಟ್ಟಿಕೊಟ್ಟಿದೆ’ ಎನ್ನುತ್ತಾರೆ ಕೆ. ಮಹೇಶ್.
ಪತ್ರಿಕೆ ಹಂಚುವ ಕೆಲಸದಲ್ಲಿ ತೃಪ್ತಿ ಕಂಡಿದ್ದೇನೆ. ಈ ಕೆಲಸ ನಿಜವಾಗಿಯೂ ಖುಷಿ ಕೊಟ್ಟಿದೆ ಎಂದ ಅವರು 'ಪ್ರಜಾವಾಣಿ’ ಪತ್ರಿಕೆ ನನಗಿಷ್ಟವಾದ ಪತ್ರಿಕೆ. ಪತ್ರಿಕೆಗೆ ನನ್ನ ತುಂಬು ಮನದ ನಮನಗಳು' ಎನ್ನುತ್ತಾರೆ.
ತೀರ್ಥಹಳ್ಳಿ: ಎಲೆಕ್ಟ್ರಿಕಲ್ ಡಿಪ್ಲೊಮಾ ಓದಿರುವ ನಾಗಭೂಷಣ್ ಟಿ.ಜಿ. 19 ವರ್ಷಗಳಿಂದ ‘ಪ್ರಜಾವಾಣಿ’ ಮತ್ತು ‘ಡೆಕ್ಕನ್ ಹೆರಾಲ್ಡ್’ ಪತ್ರಿಕೆ ವಿತರಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
ಪ್ರಮುಖ ವೃತ್ತಿಯಾಗಿ ಸೊಪ್ಪುಗುಡ್ಡೆಯಲ್ಲಿ ಎಲೆಕ್ಟ್ರಿಕಲ್ ಶಾಪ್ ಹೊಂದಿರುವ ಇವರು, ಪತ್ರಿಕೆ ವಿತರಣೆಯ ಮೂಲಕ ಸಾರ್ವಜನಿಕರ ನಿಕಟ ಸಂಪರ್ಕ ಸಾಧಿಸಿದ್ದಾರೆ.
‘ಪತ್ರಿಕೆ ವಿತರಣೆಯ ಏಜೆನ್ಸಿ ಪಡೆಯುವಾಗ ಆತಂಕ ಇತ್ತು. ಆಗ ಸುದ್ದಿಗಳಿಗಾಗಿ ಜನರು ಕಾದು ಕುಳಿತಿರುತ್ತಿದ್ದರು. ತಡವಾದರೆ ಯಾಕೆ ಎಂಬ ಪ್ರಶ್ನೆಗಳು ಕೇಳುತ್ತಿದ್ದವು. ಅದೇ ಓದುಗರ ಬಳಗ ಕೂಡ ಇಂದಿಗೂ ಪತ್ರಿಕೆ ಕೊಳ್ಳುತ್ತಿದ್ದಾರೆ. ಇದರಿಂದ ವಿತರಣೆಗೂ ಸಹಕಾರಿಯಾಗಿದೆ’ ಎಂದು ಹೇಳುತ್ತಾರೆ.
‘ಏಜೆನ್ಸಿ ಪಡೆದಿರುವುದರಿಂದ ಮಕ್ಕಳಿಗೆ ಉನ್ನತ ಶಿಕ್ಷಣಕ್ಕೂ ಸಹಕಾರಿಯಾಗಿದೆ. ಸಾರ್ವಜನಿಕರಿಂದ ಗೌರವವೂ ಸಿಕ್ಕಿದೆ’ ಎಂದು ನೆನಪಿಸಿಕೊಳ್ಳುವ ಇವರಿಗೆ ಪತ್ನಿ ಹೇಮಲತಾ, ಬಿಇ ಓದುತ್ತಿರುವ ಪುತ್ರ ಪ್ರತೀಕ್ ಮತ್ತು ಪುತ್ರಿ ಭೂಮಿಕಾ ನೆರವಾಗಿದ್ದಾರೆ.
ಭದ್ರಾವತಿ: ತಾಲ್ಲೂಕಿನಲ್ಲಿ ಸುಮಾರು 18ರಿಂದ 20 ಪತ್ರಿಕಾ ಏಜೆಂಟರಿದ್ದು, ನೂರಾರು ಯುವಜನ ಓದಿನೊಂದಿಗೆ ಇತರೆ ಕೆಲಸ ಕಾರ್ಯಗಳೊಂದಿಗೆ ಪತ್ರಿಕಾ ವಿತರಣೆ ಕಾರ್ಯ ಮಾಡುತ್ತಿದ್ದಾರೆ. ಮಹಿಳೆಯರು ಯಾವುದರಲ್ಲೂ ಕಡಿಮೆ ಇಲ್ಲ ಎಂದು ಪತ್ರಿಕಾ ವಿತರಣೆ ಕಾರ್ಯದಲ್ಲಿ ಬಿಳಕಿ ನಿವಾಸಿ ಶಿವಮೂರ್ತಿಯವರಿಗೆ ಇಬ್ಬರು ಪುತ್ರಿಯರು ಕೈ ಜೋಡಿಸಿದ್ದಾರೆ.
ಪ್ರತಿದಿನ 2,000ಕ್ಕೂ ಅಧಿಕ ಪತ್ರಿಕೆಗಳು ವಿತರಣೆಗೊಳ್ಳುತ್ತಿದ್ದು, ಶಿವಮೂರ್ತಿ ಅವರ ಮೊದಲ ಪುತ್ರಿ ಶಿವಾನಿ ಅವರು ಬಿಬಿಎ ತೃತೀಯ ವರ್ಷದಲ್ಲಿ ಓದುತ್ತಿದ್ದು, ಪ್ರತಿದಿನ ಮುಂಜಾನೆ ತಮ್ಮ ಸ್ಕೂಟಿಯಲ್ಲಿ 12 ಕಿ.ಮೀ.ಗೂ ಹೆಚ್ಚು ಅಂತರ ಕ್ರಮಿಸಿ 200 ಪತ್ರಿಕೆಗಳನ್ನು ಮನೆ ಬಾಗಿಲಿಗೆ ತಲುಪಿಸುತ್ತಿದ್ದಾರೆ.
ದ್ವಿತೀಯ ಪುತ್ರಿ ಸೃಷ್ಟಿ ಬಿಬಿಎ ದ್ವಿತೀಯ ವರ್ಷದ ವಿದ್ಯಾರ್ಥಿನಿಯಾಗಿದ್ದು, ಪ್ರತಿದಿನ ಬೆಳಗ್ಗೆ ತಮ್ಮ ತಂದೆಯ ಟಿವಿಎಸ್ ದ್ವಿಚಕ್ರ ವಾಹನದಲ್ಲಿ ಸುಮಾರು 7 ಕಿಲೋಮೀಟರ್‌ವರೆಗೆ ಸಂಚರಿಸಿ 60ರಿಂದ 70 ಪತ್ರಿಕೆಗಳನ್ನು ಮನೆಮನೆಗೆ ಹಂಚುತ್ತಾರೆ.
‘32 ವರ್ಷಗಳಿಂದ ನಿತ್ಯ ಬೆಳಿಗ್ಗೆ 4ರಿಂದಲೇ ಪತ್ರಿಕೆ ವಿತರಣೆಯ ಕಾಯಕದಲ್ಲಿ ತೊಡಗಿರುವುದನ್ನು ನಮ್ಮ ಹೆಣ್ಣು ಮಕ್ಕಳು ಗಮನಿಸಿ ನನಗೆ ಸಹಾಯ ಮಾಡಲು ಮುಂದಾಗಿದ್ದಾರೆ. ಇವರೊಂದಿಗೆ ನಾನೂ ನಿತ್ಯ 800ರಿಂದ 900 ಪತ್ರಿಕೆಗಳನ್ನು ಹಂಚುತ್ತೇನೆ’ ಎಂದು ಪತ್ರಿಕಾ ವಿತರಕ ಶಿವಮೂರ್ತಿ ತಿಳಿಸಿದರು.
‘ಏನೇ ಕಷ್ಟವಿದ್ದರೂ ಪ್ರತಿದಿನ ಓದುಗರ ಮನೆ ಬಾಗಿಲಿಗೆ ತಪ್ಪದೇ ಪತ್ರಿಕೆ ವಿತರಿಸಲಾಗುತ್ತಿದೆ. 1,200 ಪ್ರತಿಗಳನ್ನು ನಗರ ಭಾಗಗಳಲ್ಲಿ ವಿತರಿಸಲಾಗುತ್ತಿದೆ. ನಾಲ್ಕು ಜನ ಯುವಕರು ಸಹಾಯಕರಾಗಿದ್ದು, ಸುಮಾರು 10 ವರ್ಷಗಳಿಂದ ಪತ್ರಿಕಾ ವಿತರಣಾ ಕಾರ್ಯ ನಡೆಸುತ್ತಿದ್ದೇನೆ’ ಎನ್ನುತ್ತಾರೆ ಹುತ್ತಾ ಕಾಲೊನಿಯ ವಿತರಕ ಮಾಧವ್.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.