ADVERTISEMENT

ಧರ್ಮಸ್ಥಳ ಪ್ರಕರಣದ ತನಿಖೆ ಎನ್‌ಐಎಗೆ ವಹಿಸಿ: ಕೆ.ಎಸ್.ಈಶ್ವರಪ್ಪ ಆಗ್ರಹ

-

​ಪ್ರಜಾವಾಣಿ ವಾರ್ತೆ
Published 26 ಆಗಸ್ಟ್ 2025, 5:29 IST
Last Updated 26 ಆಗಸ್ಟ್ 2025, 5:29 IST
ಕೆ.ಎಸ್.ಈಶ್ವರಪ್ಪ
ಕೆ.ಎಸ್.ಈಶ್ವರಪ್ಪ   

ಶಿವಮೊಗ್ಗ: ಧರ್ಮಸ್ಥಳ ಪ್ರಕರಣದ ತನಿಖೆಯನ್ನು ಎಸ್‌ಐಟಿ ಬದಲಿಗೆ ರಾಷ್ಟ್ರೀಯ ತನಿಖಾದಳಕ್ಕೆ (ಎನ್‌ಐಎ) ವಹಿಸಬೇಕು ಎಂದು ರಾಷ್ಟ್ರಭಕ್ತರ ಬಳಗದ ಸಂಚಾಲಕ ಕೆ.ಎಸ್. ಈಶ್ವರಪ್ಪ ಒತ್ತಾಯಿಸಿದರು.

ನಗರದಲ್ಲಿ ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ‘ಧರ್ಮಸ್ಥಳ ಪ್ರಕರಣಕ್ಕೆ ಸಂಬಂಧಿಸಿದಂತೆ ಇದ್ದ ಹಲವು ಅನುಮಾನ, ಗೊಂದಲ ಈಗ ಕೊನೆಗೊಂಡಿವೆ. ಅದರ ಹಿಂದೆ ಷಡ್ಯಂತ್ರ ಇದ್ದದ್ದು ಈಗ ಬಯಲಾಗಿದೆ. ಬುರುಡೆಗಳ ಮುಖವಾಡಗಳೆಲ್ಲ ಕಳಚಿಬಿದ್ದಿವೆ. ಪಾತ್ರಧಾರಿಗಳೆಲ್ಲ ಪತ್ತೆಯಾಗಿದ್ದಾರೆ. ಈಗ ಸೂತ್ರಧಾರರ ಪತ್ತೆ ಹಚ್ಚಬೇಕಾಗಿದೆ’ ಎಂದರು.

‘ಧರ್ಮಸ್ಥಳಕ್ಕೆ ಹಾಗೂ ಹಿಂದೂ ಧರ್ಮಕ್ಕೆ ಕೆಟ್ಟ ಹೆಸರು ತರಬೇಕೆಂಬ ಕೊಳಕು ನಿರ್ಧಾರಗಳೆಲ್ಲ ಕಳಚಿಬಿದ್ದಿವೆ. ಎಸ್‌ಐಟಿ ಒಳ್ಳೆಯ ಕೆಲಸವನ್ನೇ ಮಾಡಿದೆ. ಆದರೆ, ಇದೊಂದು ರಾಷ್ಟ್ರಮಟ್ಟದ ಸುದ್ದಿಯಾಗಿದ್ದರಿಂದ ಮತ್ತು ರಾಷ್ಟ್ರೀಯ ಹಾಗೂ ಅಂತರರಾಷ್ಟ್ರೀಯ ಸಂಘಟನೆಗಳ ಪಿತೂರಿಯೂ ಇದರ ಹಿಂದೆ ಇರುವ ಶಂಕೆ ಇದೆ. ಹೀಗಾಗಿ ಅದನ್ನು ಎನ್‌ಐಎ ತನಿಖೆಗೆ ಒಳಪಡಿಸಬೇಕು’ ಎಂದು ಆಗ್ರಹಿಸಿದರು. ಪ್ರಕರಣದಲ್ಲಿ ಎಲ್ಲ ಸುಳ್ಳು ಆರೋಪಿಗಳನ್ನು ಮಂಪರು ಪರೀಕ್ಷೆಗೆ ಗುರಿಪಡಿಸಬೇಕು ಎಂದು ಒತ್ತಾಯಿಸಿದರು.

ADVERTISEMENT

ಪತ್ರಿಕಾಗೋಷ್ಠಿಯಲ್ಲಿ ಪ್ರಮುಖರಾದ ಮಹಾಲಿಂಗ ಶಾಸ್ತ್ರಿ, ಈ. ವಿಶ್ವಾಸ್, ಕಾಚಿನಕಟ್ಟೆ ಸತ್ಯನಾರಾಯಣ, ಲೋಕೇಶ್, ವಾಗೀಶ್, ಕುಬೇರ, ಮೋಹನ್, ಶಿವಾಜಿ ಇದ್ದರು. 

ಲೇಖಕಿ ಬಾನು ಮುಷ್ತಾಕ್‌ ಚಾಮುಂಡಿ ದೇವಿಗೆ ಮನಸಾರೆ ಪೂಜೆ ಸಲ್ಲಿಸುವುದಾಗಿ ಒಪ್ಪಿದರೆ ನಮ್ಮ ಅಭ್ಯಂತರವಿಲ್ಲ. ಆದರೆ ಪೂಜೆ ಮಾಡಲು ಒಪ್ಪದಿದ್ದರೆ ಅದಕ್ಕೆ ನಮ್ಮ ವಿರೋಧವಿದೆ
ಕೆ.ಎಸ್.ಈಶ್ವರಪ್ಪ ಮಾಜಿ ಡಿಸಿಎಂ

ಸೆ. 2ಕ್ಕೆ ಧರ್ಮಸ್ಥಳಕ್ಕೆ ತುಂಗೆಯ ನೀರು

ಬುರುಡೆ ಪ್ರಕರಣದಿಂದ ಧರ್ಮಸ್ಥಳವೇ ಅಶುದ್ಧಗೊಂಡಿದೆ. ಆದ್ದರಿಂದ ಶಿವಮೊಗ್ಗದ ರಾಷ್ಟ್ರಭಕ್ತರ ಬಳಗ ಹಾಗೂ ಧರ್ಮಸ್ಥಳ ಭಕ್ತರಿಂದ ಸೆ. 2ರಂದು ತುಂಗಾ ನದಿ ನೀರು ತೆಗೆದುಕೊಂಡು ಹೋಗಿ ಧರ್ಮಸ್ಥಳದ ಬೀದಿಗಳಲ್ಲಿ ಪ್ರೋಕ್ಷಣೆ ಮಾಡಿ ಶುದ್ಧೀಕರಣಗೊಳಿಸಲಾಗುವುದು. ಅಂದು ಬೆಳಿಗ್ಗೆ 8 ಗಂಟೆಗೆ ಶಿವಮೊಗ್ಗದಿಂದ ನೂರಾರು ವಾಹನಗಳಲ್ಲಿ ಧರ್ಮಸ್ಥಳಕ್ಕೆ ತೆರಳುತ್ತಿದ್ದೇವೆ ಎಂದು ರಾಷ್ಟ್ರಭಕ್ತ ಬಳಗದ ಕೆ.ಈ.ಕಾಂತೇಶ್ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.