ADVERTISEMENT

ನಿರಂತರ ಮಳೆಯಿಂದ ಸಂಚಾರಕ್ಕೆ ಹರಸಾಹಸ; ಗ್ರಾಮಸ್ಥರಿಂದಲೇ ದುರಸ್ತಿಯಾಯಿತು ರಸ್ತೆ

​ಪ್ರಜಾವಾಣಿ ವಾರ್ತೆ
Published 12 ಜುಲೈ 2022, 4:50 IST
Last Updated 12 ಜುಲೈ 2022, 4:50 IST
ಕೋಣಂದೂರು ಸಮೀಪದ ಮಾದಲ ಮನೆ ರಸ್ತೆಯನ್ನು ದುರಸ್ತಿಗೊಳಿಸುತ್ತಿರುವ ಗ್ರಾಮಸ್ಥರು
ಕೋಣಂದೂರು ಸಮೀಪದ ಮಾದಲ ಮನೆ ರಸ್ತೆಯನ್ನು ದುರಸ್ತಿಗೊಳಿಸುತ್ತಿರುವ ಗ್ರಾಮಸ್ಥರು   

ಕೋಣಂದೂರು: ಹುಂಚದಕಟ್ಟೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹುತ್ತಳ್ಳಿಯಿಂದ ಮಾದಲಮನೆಗೆ ಹೋಗುವ 3 ಕಿ.ಮೀ. ಮಣ್ಣಿನ ರಸ್ತೆ ಸಂಪೂರ್ಣ ಕೆಸರು ಗದ್ದೆಯಂತಾಗಿದ್ದು, ಗ್ರಾಮಸ್ಥರೇ ಈ ರಸ್ತೆಗೆ ಕಲ್ಲು, ಮಣ್ಣು ಹಾಕಿ ದುರಸ್ತಿ ಮಾಡಿದ್ದಾರೆ.

ನಿರಂತರ ಸುರಿಯುತ್ತಿರುವ ಮಳೆಯಿಂದಾಗಿ ಸಂಚಾರ ಕಷ್ಟವಾಗುತ್ತಿತ್ತು. ಪಾದಚಾರಿಗಳು, ವಾಹನ ಸವಾರರು ಒಡಾಡಲು ಹರಸಾಹಸ ಪಡುತ್ತಿದ್ದರು. ಈ ರಸ್ತೆ ಹುತ್ತಳ್ಳಿ, ಮಾದಲಮನೆ, ಸಣ್ಣಮನೆ, ಉಂಬ್ಳೆಬೈಲಿನ ಸುಮಾರು 30 ಮನೆಗಳನ್ನು ಸಂಪರ್ಕಿಸುವ ರಸ್ತೆ ಆಗಿದೆ.

‘ಈ ರಸ್ತೆ ದುರಸ್ತಿ ಮಾಡುವಂತೆ ಗ್ರಾಮ ಪಂಚಾಯಿತಿಗೆ, ಶಾಸಕರಿಗೆ ಹಲವು ಬಾರಿ ಮನವಿ ಮಾಡಿದ್ದರೂ ಸ್ಪಂದಿಸಲಿಲ್ಲ. ಮಳೆಗಾಲ ಬಂತೆಂದರೆ ಪ್ರತಿ ವರ್ಷ ಇದೇ ಸಮಸ್ಯೆ ಉಂಟಾಗುತ್ತದೆ. ಶಾಲೆ ಕಾಲೇಜಿಗೆ ಹೋಗುವ ವಿದ್ಯಾರ್ಥಿಗಳು ಮುಖ್ಯರಸ್ತೆಗೆ ಸಂಪರ್ಕಿಸಲು ಹರಸಾಹಸ ಪಡಬೇಕಿದೆ. ಗ್ರಾಮ ಪಂಚಾಯಿತಿ ಕೆಲಸ ಕಾರ್ಯಗಳಿಗೆ, ನ್ಯಾಯಬೆಲೆ ಅಂಗಡಿಗೆ ಹೋಗಲು ಇದೇ ಮಾರ್ಗವನ್ನು ಆಶ್ರಯಿಸಿದ್ದೇವೆ. ಪಕ್ಕಾ ರಸ್ತೆಯನ್ನು ನಿರ್ಮಿಸಿಕೊಡಬೇಕು ಎಂಬುದು ಈ ಭಾಗದ ಗ್ರಾಮಸ್ಥರ ಬಹುದಿನದ ಬೇಡಿಕೆ’ ಎಂದು ಗ್ರಾಮದಸಂಜಯ್ ಹೇಳಿದರು.

ADVERTISEMENT

‘ಗ್ರಾಮಸ್ಥರೆಲ್ಲ ಒಗ್ಗೂಡಿ ತಮ್ಮ ಮನೆಯ ಟ್ರ್ಯಾಕ್ಟರ್, ಟಿಲ್ಲರ್ ಸಹಾಯದಿಂದ ಜೆಂಬಿಟ್ಟಿಗೆ ಕಲ್ಲು, ಕಲ್ಲು ಗೊಚ್ಚು ತಂದು ಹಾಕುವ ಮೂಲಕ ರಸ್ತೆಯನ್ನು ತಾತ್ಕಾಲಿಕವಾಗಿ ಸರಿ ಪಡಿಸುವ ಕಾರ್ಯವನ್ನು ಮಾಡುತ್ತಿದ್ದೇವೆ. ಜನಪ್ರತಿನಿಧಿಗಳನ್ನು ನಂಬಿ ಕೂತರೆ ಮನೆಯಲ್ಲಿಯೇ ಕೂತಿರಬೇಕಾಗುತ್ತದೆ’ ಎಂದು ಅಸಮಾಧಾನವನ್ನು ಹೊರ ಹಾಕುತ್ತಾರೆ ಮಾದಲ ಮನೆ ಗಣೇಶ್.

ಅಣ್ಣಪ್ಪ, ದೇವರಾಜ, ಪ್ರಭಾಕರ, ಪ್ರಕಾಶ್, ಚೂಡಾಮಣಿ, ರವಿಕಿರಣ್ ಹಾಗೂ ಸುಮಾರು 15 ಜನ ರಸ್ತೆ ದುರಸ್ತಿ ಕಾರ್ಯದಲ್ಲಿ ತೊಡಗಿಕೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.