ADVERTISEMENT

ಆರಂಭವಾಗದ ವಿಐಎಸ್ಎಲ್ ಆಮ್ಲಜನಕ ಘಟಕ

ಸಚಿವರು, ಜಿಲ್ಲಾಡಳಿತದಿಂದ ಸಿಗುವುದೇ ಹಸಿರು ನಿಶಾನೆ; ನಿರೀಕ್ಷೆಯಲ್ಲಿ ಜನರು

​ಪ್ರಜಾವಾಣಿ ವಾರ್ತೆ
Published 27 ಸೆಪ್ಟೆಂಬರ್ 2021, 6:52 IST
Last Updated 27 ಸೆಪ್ಟೆಂಬರ್ 2021, 6:52 IST
ಭದ್ರಾವತಿ ವಿಐಎಸ್ಎಲ್‌ ಕಾರ್ಖಾನೆ ಎಂಎಸ್‌ಐಎಲ್ ಘಟಕದಲ್ಲಿ ತಯಾರಾದ ಆಮ್ಲಜನಕದ ಸಿಲಿಂಡರ್ (ಸಂಗ್ರಹ ಚಿತ್ರ)
ಭದ್ರಾವತಿ ವಿಐಎಸ್ಎಲ್‌ ಕಾರ್ಖಾನೆ ಎಂಎಸ್‌ಐಎಲ್ ಘಟಕದಲ್ಲಿ ತಯಾರಾದ ಆಮ್ಲಜನಕದ ಸಿಲಿಂಡರ್ (ಸಂಗ್ರಹ ಚಿತ್ರ)   

ಭದ್ರಾವತಿ: ಕೋವಿಡ್ ಎರಡನೇ ಅಲೆಯಲ್ಲಿ ಉಂಟಾಗಿದ್ದ ಆಮ್ಲಜನಕ ಕೊರತೆ ನಿವಾರಿಸುವ ಸಲುವಾಗಿ ಆಮ್ಲಜನಕ ಘಟಕ ಆರಂಭಿಸಲು ಸಿದ್ಧತೆ ನಡೆದಿತ್ತು. ಆದರೆ ಅದು ಇನ್ನೂ ಆರಂಭವಾಗುವ ಮುನ್ಸೂಚನೆ ಕಾಣುತ್ತಿಲ್ಲ.

ಕೋವಿಡ್ ಎರಡನೇ ಆಲೆಯಲ್ಲಿ ಆಮ್ಲಜನಕ ಕೊರತೆ ಹೆಚ್ಚಾದಾಗ ಜಿಲ್ಲಾಡಳಿತ ವಿಐಎಸ್ಎಲ್ ಕಾರ್ಖಾನೆ ಎಂಎಸ್‌ಐಎಲ್ ಆಮ್ಲಜನಕ ಘಟಕದ ಸಹಕಾರದಿಂದ ಸಿಲಿಂಡರ್ ಫಿಲ್ಲಿಂಗ್ ಕೇಂದ್ರ ಆರಂಭಿಸಲಾಗಿತ್ತು. ಇದು ಶಿವಮೊಗ್ಗ, ಚಿಕ್ಕಮಗಳೂರು ಹಾಗೂ ದಾವಣಗೆರೆ ಜಿಲ್ಲೆಗೆ ಸಹಕಾರಿಯಾಗಿತ್ತು.

ಮೂರು ತಿಂಗಳು ನಡೆದ ಈ ಆಮ್ಲಜನಕ ಫಿಲ್ಲಿಂಗ್ ಕೆಲಸದಿಂದಾಗಿ ಸುಮಾರು 9,800 ಸಿಲಿಂಡರ್ ಫಿಲ್ಲಿಂಗ್ ಮಾಡಿ ಅಗತ್ಯ ಇರುವ ಸರ್ಕಾರಿ ಆಸ್ಪತ್ರೆಗಳಿಗೆ ಸರಬರಾಜು ಮಾಡಲಾಯಿತು. ಇದರಿಂದ ಜಿಲ್ಲಾಸ್ಪತ್ರೆಗಳ ಮೇಲಿದ್ದ ಹೆಚ್ಚಿದ್ದ ಒತ್ತಡ ಕಡಿಮೆಯಾಗಿ ಆಮ್ಲಜನಕ ಕೊರತೆ ನೀಗಿಸಲಾಗಿತ್ತು.

ADVERTISEMENT

ಸಂಭಾವ್ಯ ಕೋವಿಡ್‌ ಮೂರನೇ ಅಲೆ ತಡೆಗೆ ಆಮ್ಲಜನಕ ಘಟಕದ ನೆರವು ಸಿಗಬಹುದೇ ಎಂಬ ಪ್ರಶ್ನೆಗೆ ಯಾವುದೇ ಮುಂಜಾಗ್ರತೆ ಕ್ರಮ ನಡೆದಿಲ್ಲ ಎನ್ನುತ್ತಾರೆ ಅಧಿಕಾರಿಗಳು.

ಲಿಕ್ವಿಡ್ ಆಮ್ಲಜನಕ ಸಿದ್ಧತೆ ಕುರಿತಾಗಿ ಸರ್ಕಾರದಿಂದ ಪತ್ರಗಳು ಬಂದಿದ್ದರೂ ಆ ರೀತಿಯ ಸೌಲಭ್ಯ ವಿಐಎಸ್ಎಲ್ ಕಾರ್ಖಾನೆ ಎಂಎಸ್‌ಐಎಲ್ ಘಟಕದಲ್ಲಿ ಇಲ್ಲದ ಕಾರಣ ಅದರ ಕುರಿತ ಯೋಚನೆ ನಡೆದಿಲ್ಲ ಎನ್ನುತ್ತಾರೆ ಎಂಎಸ್‌ಐಎಲ್ ಸಿಬ್ಬಂದಿ.

‘ವಿಐಎಸ್ಎಲ್ ಆಮ್ಲಜನಕ ಘಟಕ ಕುರಿತು ಜಿಲ್ಲಾಡಳಿತ ನಿರ್ಧಾರ ತೆಗೆದುಕೊಳ್ಳಲಿದೆ. ಸಾರ್ವಜನಿಕ ಆಸ್ಪತ್ರೆಯಲ್ಲಿ ಆಮ್ಲಜನಕ ಘಟಕ ಸಿವಿಲ್ ಕಾಮಗಾರಿ ಮುಗಿದಿದೆ. ಇನ್ನು ಕೆಲವೇ ದಿನದಲ್ಲಿ ಸಿಲಿಂಡರ್ ಅಳವಡಿಸಿ ಮುಂದಿನ ನಿರ್ವಹಣೆ ಮಾಡಲಾಗುವುದು’ ಎಂದು ತಾಲ್ಲೂಕು ವೈದ್ಯಾಧಿಕಾರಿ ಡಾ. ಅಶೋಕ್ ತಿಳಿಸಿದರು.

‘ಸದ್ಯ ವಿಐಎಸ್ಎಲ್ ಕಾರ್ಖಾನೆ ಆಮ್ಲಜನಕ ಘಟಕ ನಿರ್ವಹಣೆಯನ್ನು ಖಾಸಗಿ ಕಂಪನಿ ಮಾಡುತ್ತಿತ್ತು. ಎರಡನೇ ಆಲೆಯಲ್ಲಿ ಜಿಲ್ಲಾಡಳಿತದ ಮೂಲಕ ಅದನ್ನು ನಿಯಂತ್ರಿಸುವ ಕೆಲಸ ನಡೆದಿತ್ತು. ಆದರೆ ಈಗ ಆ ಕಂಪನಿ ಜತೆ ಯಾವುದೇ ಸಂಬಂಧ ಇಲ್ಲ ಎಂಬ ಮಾತು ವಿಐಎಸ್ಎಲ್ ಆಡಳಿತದಿಂದ ಕೇಳಿಬಂದಿದ್ದು, ಇದು ಕೇಂದ್ರ ಸರ್ಕಾರಕ್ಕೆ ಸಂಬಂಧಿಸಿದ ವಿಷಯವಾಗಿದೆ. ಜಿಲ್ಲಾಡಳಿತ ಹಾಗೂ ಸಚಿವರು ಈ ಕುರಿತು ಕ್ರಮ ವಹಿಸಲಿದ್ದಾರೆ’ ಎಂದು ತಹಶೀಲ್ದಾರ್ ಪ್ರದೀಪ್ ಹೇಳಿದರು.

‘ಸಾರ್ವಜನಿಕ ಆಸ್ಪತ್ರೆಯಲ್ಲಿ ಈಗಾಗಲೇ 50 ಹಾಸಿಗೆಗಳಿಗೆ ಆಮ್ಲಜನಕ ಸೌಲಭ್ಯ ಒದಗಿಸಲಾಗಿದ್ದು, ಇನ್ನು 50 ಹಾಸಿಗೆಗೆ ಅಳವಡಿಕೆ ಮಾಡುವ ಕೆಲಸ ಮುಗಿದಿದ್ದು, ಅಧಿಕೃತ ಆದೇಶ ಆಗಬೇಕಿದೆ. ಇದು ಕಾರ್ಯಾರಂಭ ಮಾಡಿದರೆ 100 ಆಮ್ಲಜನಕ ಹಾಸಿಗೆಗಳು ಸಾರ್ವಜನಿಕ ಆಸ್ಪತ್ರೆಗೆ ಸಿಕ್ಕಂತಾಗುತ್ತದೆ’ ಎಂದು ಹೇಳಿದರು.

ಹೊಳೆಹೊನ್ನೂರು ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೂ ಆಮ್ಲಜನಕ ‌ಘಟಕ ಕಲ್ಪಿಸುವ ಸಂಬಂಧ ಸಿವಿಲ್ ಕೆಲಸ ನಡೆದಿದೆ. ಇದಲ್ಲದೆ ಭದ್ರಾವತಿ ಎಂಪಿಎಂ ಕಲ್ಯಾಣ ಮಂಟಪ ಹಾಗೂ ವಿಐಎಸ್ಎಲ್ ಆಸ್ಪತ್ರೆಯಲ್ಲಿನ ಕೋವಿಡ್ ಕೇಂದ್ರ ಇನ್ನು ಮುಚ್ಚಿಲ್ಲ. ಅದನ್ನು ಹಾಗೆಯೇ ನಿರ್ವಹಣೆ ಮಾಡಿಟ್ಟುಕೊಂಡಿದ್ದೇವೆ’ ಎಂದು ಹೇಳಿದರು.

ಒಟ್ಟಿನಲ್ಲಿ ವಿಐಎಸ್ಎಲ್ ಕಾರ್ಖಾನೆ ಎಂಎಸ್‌ಐಎಲ್ ಘಟಕದ ಆಮ್ಲಜನಕ ಘಟಕ ಸ್ಥಗಿತವಾಗಿದ್ದು, ಇದರ ಆರಂಭದ ಕುರಿತು ನಿರ್ಧಾರ ತೆಗೆದುಕೊಳ್ಳುವ ಅಧಿಕಾರ ಜಿಲ್ಲಾಡಳಿತ ಮತ್ತು ಸಚಿವರಿಗೆ ಸೇರಿದೆ. ಇಲ್ಲಿವರೆಗೆ ಯಾವುದೇ ಪ್ರಕ್ರಿಯೆ ಆರಂಭವಾಗಿಲ್ಲದಿರುವುದು ಜನರಲ್ಲಿ ಅಸಮಾಧಾನ ಮೂಡಿಸಿದೆ.

ಸಾರ್ವಜನಿಕ ಆಸ್ಪತ್ರೆಯಲ್ಲಿ ಆಮ್ಲಜನಕ ಘಟಕದ ಸಿವಿಲ್ ಕಾಮಗಾರಿ ಮುಗಿದಿದೆ. ಇನ್ನು ಕೆಲವೇ ದಿನಗಳಲ್ಲಿ ಸಿಲಿಂಡರ್ ಅಳವಡಿಕೆ ಕೆಲಸ ನಡೆಯಲಿದೆ.
–ಡಾ. ಅಶೋಕ್, ತಾಲ್ಲೂಕು ವೈದ್ಯಾಧಿಕಾರಿ

ವಿಐಎಸ್ಎಲ್ ಸೈಲ್ ವ್ಯಾಪ್ತಿಗೆ ಸೇರಿದ್ದು, ಕೇಂದ್ರ ಸರ್ಕಾರ ಸ್ವಾಮ್ಯದ್ದಾಗಿದೆ. ಆಮ್ಲಜನಕ ಉತ್ಪಾದನೆ ಆರಂಭದ ವಿಷಯ ಜಿಲ್ಲಾ ಮಟ್ಟದ ಸಭೆಯಲ್ಲಿ ತೀರ್ಮಾನವಾಗಲಿದೆ. ಈ ಹಿಂದೆ ಮೂರು ತಿಂಗಳ ಕಾಲ ಆಮ್ಲಜನಕ ಉತ್ಪಾದನೆ ಮಾಡಲಾಗಿತ್ತು.

–ಪ್ರದೀಪ್, ತಹಶೀಲ್ದಾರ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.