ADVERTISEMENT

ರಾಜ್ಯದಲ್ಲಿ ಉದ್ಯೋಗ ಖಾತ್ರಿಯ ಬಾಕಿ ಸಂಪೂರ್ಣ ಚುಕ್ತಾ ಆಗಿದೆ: ಕೆ.ಎಸ್. ಈಶ್ವರಪ್ಪ 

₹ 715 ಕೋಟಿ ಹೆಚ್ಚುವರಿ ಅನುದಾನ

​ಪ್ರಜಾವಾಣಿ ವಾರ್ತೆ
Published 27 ಡಿಸೆಂಬರ್ 2021, 10:23 IST
Last Updated 27 ಡಿಸೆಂಬರ್ 2021, 10:23 IST
ಕೆ.ಎಸ್. ಈಶ್ವರಪ್ಪ 
ಕೆ.ಎಸ್. ಈಶ್ವರಪ್ಪ    

ಶಿವಮೊಗ್ಗ: ಉದ್ಯೋಗ ಖಾತ್ರಿ ಕೂಲಿ ಪಾವತಿಸಲು ಕೇಂದ್ರ ಸರ್ಕಾರ ಡಿಸೆಂಬರ್‌ನಲ್ಲಿ ₹ 661.24 ಕೋಟಿ ಅನುದಾನ ಬಿಡುಗಡೆ ಮಾಡಿದೆ. ಇಲ್ಲಿಯವರೆಗಿನ ಸಂಪೂರ್ಣ ಬಾಕಿ ಚುಕ್ತಾ ಆಗಿದೆ. ಹೆಚ್ಚುವರಿಯಾಗಿ 1.40 ಕೋಟಿ ಮಾನವ ದಿನಗಳ ಬಳಕೆಗೆ ಅವಕಾಶ ಕಲ್ಪಿಸಿದೆ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್. ಈಶ್ವರಪ್ಪ ಹೇಳಿದರು.

ಉದ್ಯೋಗ ಖಾತ್ರಿ ಯೋಜನೆಗೆ 2021 -22ನೇ ಸಾಲಿಗೆ ನೀಡಲಾಗಿದ್ದ ₹ 13 ಕೋಟಿ ಮಾನವ ದಿನಗಳ ಗುರಿ ಮೀರಿ ಇಲ್ಲಿಯವರೆಗೆ 13.4 ಕೋಟಿ ಮಾನವ ದಿನಗಳ ಉದ್ಯೋಗ ಸೃಷ್ಟಿ ಮಾಡಲಾಗಿದೆ. ರಾಜ್ಯ ಸರ್ಕಾರ ಅವಧಿಗೆ ಮುನ್ನ ನಿಗದಿತ ಗುರಿ ಪೂರ್ಣಗೊಳಿಸಿದ ಕಾರಣ ಹೆಚ್ಚುವರಿಯಾಗಿ ₹ 715 ಕೋಟಿ ಅನುದಾನ ನೀಡಿದೆ ಎಂದು ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು.

ಕೊಳೆಗೇರಿ ನಿವಾಸಿಗಳ ಹಕ್ಕುಪತ್ರ ವಿತರಣೆ, ಅಪೂರ್ಣಗೊಂಡ ಮನೆಗಳನ್ನು ತುರ್ತಾಗಿ ಪೂರ್ಣಗೊಳಿಸಲು ಸೂಚಿಸಲಾಗಿದೆ. ನಿಗದಿತ ಅವಧಿಯ ಒಳಗೆ ಪೂರ್ಣಗೊಳಿಸಲು ವಿಫಲರಾದರೆ ಗುತ್ತಿಗೆದಾರರ ಮೇಲೆ ಕ್ರಿಮಿನಲ್ ಪ್ರಕರಣ ದಾಖಲಿಸಲು ಸೂಚಿಸಲಾಗಿದೆ ಎಂದು ವಿವರ ನೀಡಿದರು.

ADVERTISEMENT

ರಾತ್ರಿ ಕರ್ಫೂ, ಜಿಲ್ಲೆಯಲ್ಲೂ ಬಿಗಿಕ್ರಮ

ಡಿ.31ರ ಬಂದ್ ಹಾಗೂ ರಾತ್ರಿ ಕರ್ಫ್ಯೂ ಅನಿವಾರ್ಯ. ಸಾರ್ವಜನಿಕರು, ವ್ಯಾಪಾರಿಗಳು ಆರೋಗ್ಯದ ದೃಷ್ಟಿಯಿಂದ ನಿಯಮ ಪಾಲಿಸಬೇಕಿದೆ. ಕೋವಿಡ್‌ ಮಾರ್ಗ ಸೂಚಿಗಳನ್ನು ಶಿವಮೊಗ್ಗದಲ್ಲೂ ಕಟ್ಟುನಿಟ್ಟಾಗಿ ಪಾಲಿಸಲು ಕ್ರಮ ಕೈಗೊಳ್ಳವಂತೆ ಸೂಚಿಸಲಾಗಿದೆ. ಯಾವುದೇ ನಿರ್ಧಾರ ತೆಗೆದುಕೊಂಡರೂ ಅಪಸ್ವರಗಳು ಬರುವುದು ಸಹಜ. ಆರೋಗ್ಯವಿ ಇದ್ದರೆ ಯಾವಾಗ ಬೇಕಾದರೂ ದುಡಿಮೆ ಮಾಡಿಕೊಳ್ಳಬಹುದು ‌ಎಂದರು.

ಮಹಾರಾಷ್ಟ್ರ ಏಕೀಕರಣ ಸಮಿತಿ(ಎಂಇಎಸ್) ನಿಷೇಧಿಸುವ ವಿಚಾರವಾಗಿ ಈಗಾಗಲೇ ಸರ್ಕಾರ ಚರ್ಚೆ ನಡೆಸಿದೆ. ರಾಜ್ಯದ ಗಡಿ, ಜಲ ವಿಚಾರದಲ್ಲಿ ರಾಜಿ ಪ್ರಶ್ನೆಯೇ ಇಲ್ಲ. ಮೇಕೆದಾಟು ಯೋಜನೆಗೆ ಕಾಂಗ್ರೆಸ್ ಕೈಗೊಂಡ ಪಾದಯಾತ್ರೆ ನಾಟಕೀಯ. ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ ಯಾಕೆ ಮಾಡಲಿಲ್ಲ? ಮೇಕೆದಾಟು ಯೋಜನೆ ಜಾರಿಗೆ ತಂದಿದ್ದೆ ಬಿಜೆಪಿ. ಕೇಂದ್ರದ ಜತೆ ರಾಜ್ಯ ಸರ್ಕಾರ ನಿರಂತರ ಸಂಪರ್ಕದಲ್ಲಿದೆ. ಜಾರಿಗೊಳಿಸಲು ಬದ್ಧವಾಗಿದೆ.ಎಂದು ಪ್ರಶ್ನಿಸಿದರು.

ಮತಾಂತರ ಕಾಯ್ದೆ ದೊಡ್ಡ ವಿಷಯವಲ್ಲ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ಧರಾಮಯ್ಯ ಅವರು ಈಗ ಹೇಳಿಕೆ ನೀಡುತ್ತಿದ್ದಾರೆ. ಕಾಯ್ದೆ ಜಾರಿಗೆ ತರಲು ಪ್ರಯತ್ನಿಸಿದ್ದೇ ಕಾಂಗ್ರೆಸ್. ಸುಮ್ಮನೆ ಸದನದ ಸಮಯ ವ್ಯರ್ಥಗೊಳಿಸಿದರು. ಉತ್ತರ ಕರ್ನಾಟಕ ಜ್ವಲಂತ ಸಮಸ್ಯೆಗಳ ಕುರಿತು ಚರ್ಚೆ ನಡೆಸುವ ಬದಲು ಮತಾಂತರ ಕಾಯ್ದೆ ಕ್ಯಾತೆ ತೆಗೆದರು. ಈಗ ಮೇಕೆದಾಟು ಯೋಜನೆಯ ಕ್ಯಾತೆ ತೆಗೆದು ಅಣ್ಣ ತಮ್ಮಂದಿರಂತೆ ಇರುವ ತಮಿಳು ಮತ್ತು ಕನ್ನಡ ಭಾಷಿಕರನ್ನು ಎತ್ತಿಕಟ್ಟುತ್ತಿದ್ದಾರೆ. ಸಮಾಜದ ಶಾಂತಿ ಕದಡುವ ಹುನ್ನಾರ ಕಾಂಗ್ರೆಸ್ ಮಾಡುತ್ತಿದೆ ಎಂದು ಆರೋಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.