ADVERTISEMENT

ಶಿವಮೊಗ್ಗ | ನರೇಗಾ ಯೋಜನೆಯ ಲೋಪ ಸರಿಪಡಿಸಿ: ಸಂಸದ ಬಿ.ವೈ.ರಾಘವೇಂದ್ರ

​ಪ್ರಜಾವಾಣಿ ವಾರ್ತೆ
Published 17 ಸೆಪ್ಟೆಂಬರ್ 2025, 7:01 IST
Last Updated 17 ಸೆಪ್ಟೆಂಬರ್ 2025, 7:01 IST
ಶಿವಮೊಗ್ಗ ಸಂಸದ ಬಿ.ವೈ. ರಾಘವೇಂದ್ರ ಅವರ ಅಧ್ಯಕ್ಷತೆಯಲ್ಲಿ ಮಂಗಳವಾರ ದಿಶಾ ಸಮಿತಿಯ ‘ಪ್ರಗತಿ ಪರಿಶೀಲನಾ ಸಭೆ’ ನಡೆಯಿತು
ಶಿವಮೊಗ್ಗ ಸಂಸದ ಬಿ.ವೈ. ರಾಘವೇಂದ್ರ ಅವರ ಅಧ್ಯಕ್ಷತೆಯಲ್ಲಿ ಮಂಗಳವಾರ ದಿಶಾ ಸಮಿತಿಯ ‘ಪ್ರಗತಿ ಪರಿಶೀಲನಾ ಸಭೆ’ ನಡೆಯಿತು   

ಶಿವಮೊಗ್ಗ: ‘ಜಿಲ್ಲೆಯಲ್ಲಿ ನರೇಗಾ ಯೋಜನೆಯ ವ್ಯವಸ್ಥಿತ ಅನುಷ್ಠಾನದಲ್ಲಿ ಅನೇಕ ಲೋಪಗಳಿವೆ. ಅವುಗಳನ್ನು ಸರಿಪಡಿಸುವಲ್ಲಿ ವಿಶೇಷ ಗಮನಹರಿಸಬೇಕು’ ಎಂದು ಸಂಸದ ಬಿ.ವೈ. ರಾಘವೇಂದ್ರ ಅವರು ಹೇಳಿದರು.

ಜಿಲ್ಲಾ ಮಟ್ಟದ ಅಭಿವೃದ್ಧಿ ಸಮನ್ವಯತೆ ಹಾಗೂ ಮೇಲ್ವಿಚಾರಣಾ ಸಮಿತಿಯಿಂದ ಇಲ್ಲಿನ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಮಂಗಳವಾರ ಆಯೋಜಿಸಿದ್ದ ‘ಪ್ರಗತಿ ಪರಿಶೀಲನಾ ಸಭೆ’ಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ನರೇಗಾ ಯೋಜನೆಯಡಿ ಉದ್ಯೋಗ ಚೀಟಿ ಪಡೆದವರಿಗೆ ಪಾವತಿಸುವ ಹಣದಲ್ಲಿ ಅಕ್ರಮ ನಡೆದಿರುವುದನ್ನು ಸಮಿತಿಯ ಸದಸ್ಯರು ಗಮನಕ್ಕೆ ತಂದಿದ್ದಾರೆ. ಸಂಬಂಧಪಟ್ಟ ಅಧಿಕಾರಿ ಈ ಬಗ್ಗೆ ಪರಿಶೀಲಿಸಿ ಕ್ರಮ ಕೈಗೊಳ್ಳಬೇಕು. ಜೊತೆಗೆ ಕ್ರಿಯಾ ಯೋಜನೆಯ ಲೋಪಗಳನ್ನು ಸರಿಪಡಿಸಿಕೊಳ್ಳಬೇಕು ಎಂದರು. 

ADVERTISEMENT

ಜಿಲ್ಲೆಯಲ್ಲಿ ಅಮೃತ್ 2.0 ಯೋಜನೆಯಡಿ ನೀರು ಸರಬರಾಜು ಕಲ್ಪಿಸುವ ಕಾಮಗಾರಿ ಕೈಗೊಳ್ಳಲಾಗುವುದು. ಇಲ್ಲಿ ಅನುಷ್ಠಾನದಲ್ಲಿರುವ ₹ 1,000 ಕೋಟಿ ವೆಚ್ಚದ ಯುಜಿಡಿ ಯೋಜನೆ ಬಗ್ಗೆ ದೂರು ಬರುತ್ತಿದ್ದು, ಅದನ್ನು ಸರಿಪಡಿಸಬೇಕು ಎಂದು ಸೂಚಿಸಿದರು.

‘ಶಿಕಾರಿಪುರ, ಹಾನಗಲ್ ಮಾರ್ಗವಾದ ಟೋಲ್‌ಗೇಟ್ ಸಂಬಂಧಿಸಿದಂತೆ ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಮಾತನಾಡಿ, ಟೋಲ್ ಗೇಟ್ ವಿರೋಧಿಸಿ ಪ್ರತಿಭಟನೆ ಮಾಡಿದ ಬೆನ್ನಲ್ಲೇ ಸಚಿವರ ಮಟ್ಟದಲ್ಲಿ ಸಭೆ ಮಾಡಲಾಗಿದೆ. ಹಾಗೂ ಸರ್ಕಾರಕ್ಕೂ ಪತ್ರ ಬರೆದಿದ್ದೇವೆ. ಇದು ಸರ್ಕಾರ ಮಟ್ಟದಲ್ಲಿ ಚರ್ಚೆಯಾಗಿ ನಿರ್ಧಾರ ಕೈಗೊಳ್ಳಬೇಕಿದೆ ಎಂದರು.

ಮಲವಗೊಪ್ಪ ಸಮೀಪದ ದುಮ್ಮಳ್ಳಿ ರಸ್ತೆಯ ಇಕ್ಕೆಲಗಳಲ್ಲಿ ಹಲವು ದಶಕಗಳಿಂದ ವಾಸವಿರುವ ನಿವಾಸಿಗಳಿಗೆ ಮೂಲ ಸೌಲಭ್ಯ ಕಲ್ಪಿಸಿಕೊಟ್ಟು, ಬೇರೆಡೆಗೆ ಸ್ಥಳಾಂತರಕ್ಕೆ ಕ್ರಮ ಕೈಗೊಳ್ಳಬೇಕು ಎಂದು ಶಾಸಕ ಎಸ್.ಎನ್. ಚನ್ನಬಸಪ್ಪ ತಿಳಿಸಿದರು. 

ಚನ್ನಗಿರಿ ರಸ್ತೆ ರಾಷ್ಟ್ರೀಯ ಹೆದ್ದಾರಿಯಲ್ಲಿ ಬರುವ ಗ್ರಾಮಗಳ ರಸ್ತೆಯ ಇಕ್ಕೆಲಗಳಲ್ಲಿ ಚರಂಡಿ ವ್ಯವಸ್ಥೆ ಕಲ್ಪಿಸಬೇಕು. ಈ ಕುರಿತ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಬೇಕು ಎಂದರು.

ಜಿಲ್ಲಾ ಪಂಚಾಯಿತಿ ಸಿಇಒ ಎನ್.ಹೇಮಂತ್‌, ಜಿಲ್ಲಾ ಪೊಲೀಸ್‌  ವರಿಷ್ಠಾಧಿಕಾರಿ ಜಿ.ಕೆ. ಮಿಥುನ್‌ ಕುಮಾರ್‌, ಶಾಸಕರಾದ ಎಸ್.ಎನ್.ಚನ್ನಬಸಪ್ಪ, ಬಲ್ಕೀಸ್‌ ಬಾನು, ಡಾ. ಧನಂಜಯ ಸರ್ಜಿ, ದಿಶಾ ಸಮಿತಿಯ ಸದಸ್ಯರು ಇದ್ದರು.  

ಭದ್ರಾವತಿಯಲ್ಲಿ ಅಪರಾಧ ಚಟುಚಟಿಕೆಗಳು ಹೆಚ್ಚುತ್ತಿವೆ. ಇದಕ್ಕೆ ಕಡಿವಾಣ ಹಾಕಲೇ ಬೇಕು.
ಬಿ.ವೈ.ರಾಘವೇಂದ್ರ ಸಂಸದ

ಟೋಲ್‌ ಗೇಟ್ ತೆರವುಗೊಳಿಸಿ ‘ಶಿವಮೊಗ್ಗ–ಆನವಟ್ಟಿ ಮಾರ್ಗದಲ್ಲಿ ಸವಳಂಗ ಮತ್ತು ಕುಟ್ರಳ್ಳಿ ಸಮೀಪ ರಾಜ್ಯ ಹೆದ್ದಾರಿ 57ರಲ್ಲಿ ಅಳವಡಿಸಿರುವ ಟೋಲ್‌ ಗೇಟುಗಳು ಅವೈಜ್ಞಾನಿಕವಾಗಿದ್ದು ಇಲ್ಲಿ ಸಾರ್ವಜನಿಕರ ಶೋಷಣೆ ನಡೆಯುತ್ತಿದೆ. ಇವುಗಳನ್ನು ತ್ವರಿತವಾಗಿ ತೆರೆವುಗೊಳಿಸಬೇಕು’ ಎಂದು ದಿಶಾ ಸಮಿತಿ ಸದಸ್ಯ ಕೆ.ಎಸ್. ಗುರುಮೂರ್ತಿ ಒತ್ತಾಯಿಸಿದರು.

ಡಬ್ಬಲ್ ಅಟೆಂಡೆನ್ಸ್ ನಿಂದ ನರೇಗಾಗೆ ಹಿನ್ನಡೆ ನರೇಗಾ ಯೋಜನೆಯಲ್ಲಿ ಎರಡು ಬಾರಿ ಹಾಜರಾತಿ ಹಾಕುವ ಕ್ರಮ ಜಾರಿಗೊಳಿಸಲಾಗಿದೆ. ಇದು ಸರಿಯಲ್ಲ. ಈ ಹಿಂದೆ ಕೆಲಸಕ್ಕೆ ಆಗಮಿಸಿ ಬೆಳಿಗ್ಗೆ 7 ಗಂಟೆಗೆ ಒಮ್ಮೆ ಹಾಜರಾತಿ ಹಾಕಿದರೆ ಸಾಕಿತ್ತು. ಈಗ ಎರಡನೇ ಹಾಜರಾತಿ ಕೆಲಸಕ್ಕೆ ಹಾಜರಾಗಿ ನಾಲ್ಕು ಗಂಟೆಯ ಬಳಿಕ ಮತ್ತೊಮ್ಮೆ ಹಾಕಬೇಕು. ಇಲ್ಲಿ ಕೂಲಿ ಕಾರ್ಮಿಕರು ಬೇರೆ ಕೆಲಸ ಮಾಡಿಕೊಳ್ಳಲು ಸಮಸ್ಯೆ ಆಗಿದೆ. ಆದ್ದರಿಂದ ನರೇಗಾ ಯೋಜನೆಯಲ್ಲಿ ಗುರಿ ಸಾಧಿಸಲು ಹಿನ್ನಡೆ ಆಗಿದೆ ಎಂದು ದಿಶಾ ಸಮಿತಿಯ ಸದಸ್ಯ ಮಲ್ಲಿಕಾರ್ಜುನ ಹಕ್ರೆ ತಿಳಿಸಿದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.