ಶಿವಮೊಗ್ಗ: ಎಸ್ಸೆಸ್ಸೆಲ್ಸಿ ಪರೀಕ್ಷಾ ವೇಳಾಪಟ್ಟಿ ವಿಷಯವಾಗಿ ಸಾಮಾಜಿಕ ಜಾಲತಾಣದ ಮೂಲಕ ಜನರಲ್ಲಿ ಧಾರ್ಮಿಕ ಭಾವನೆ ಕೆರಳಿಸಿದ ಆರೋಪದ ಮೇಲೆ ಭಾಷಣಕಾರ ಚಕ್ರವರ್ತಿ ಸೂಲಿಬೆಲೆ ವಿರುದ್ಧ ಬುಧವಾರ ಎನ್‌ಎಸ್‌ಯುಐ ಸಂಘಟನೆ ಇಲ್ಲಿನ ಜಯನಗರ ಠಾಣೆಯಲ್ಲಿ ದೂರು ದಾಖಲಿಸಿದೆ.
ಸರ್ಕಾರ ಈ ಬಾರಿಯ ಎಸ್ಸೆಸ್ಸೆಲ್ಸಿ ಪೂರ್ವ ಸಿದ್ಧತಾ ಪರೀಕ್ಷಾ ವೇಳಾಪಟ್ಟಿ ಹೊರಡಿಸಿದೆ. ಈ ಪಟ್ಟಿಯಲ್ಲಿ ಮಾರ್ಚ್ 1ರ ಶುಕ್ರವಾರ ಮಧ್ಯಾಹ್ನ 2ಕ್ಕೆ ವಿಜ್ಞಾನ ವಿಷಯದ ಪರೀಕ್ಷೆ ನಿಗದಿಪಡಿಸಲಾಗಿದೆ. ಆ ದಿನ ಪಿಯುಸಿ ಅಂತಿಮ ಪರೀಕ್ಷೆ ಆರಂಭವಾಗುತ್ತಿದೆ. ಬೆಳಿಗ್ಗೆ ಸಮಯದಲ್ಲಿ ಪರೀಕ್ಷೆ ಇರುವ ಕಾರಣ ಎಸ್ಸೆಸ್ಸೆಲ್ಸಿ ಪರೀಕ್ಷೆಯನ್ನು ಮಧ್ಯಾಹ್ನಕ್ಕೆ ಬದಲಿಸಿದ್ದು, ಉಳಿದ ಎಲ್ಲ ಪರೀಕ್ಷೆಗಳು ಬೆಳಿಗ್ಗೆ ನಡೆಯಲಿವೆ.
‘ಚಕ್ರವರ್ತಿ ಸೂಲಿಬೆಲೆ ಶುಕ್ರವಾರ ಪರೀಕ್ಷಾ ದಿನ ಎದ್ದುಕಾಣುವಂತೆ ಮಾಡಿ, ಈ ವೇಳಪಟ್ಟಿಯ ಮೇಲ್ಬಾಗದಲ್ಲಿ ಇಂಗ್ಲಿಷ್‌ನಲ್ಲಿ 10ನೇ ತರಗತಿ ಎಲ್ಲಾ ಪರೀಕ್ಷೆಗಳ ವೇಳಾಪಟ್ಟಿ ಬೆಳಗಿನ ಹೊತ್ತು ಇದೆ. ಶುಕ್ರವಾರದ ವೇಳಾಪಟ್ಟಿ ಮಾತ್ರ ನಮಾಜ್ ಇರುವ ಕಾರಣ ಬದಲಾಯಿಸಲಾಗಿದೆ ಎಂದು ಬೇರೆ ಧರ್ಮದವರಿಗೆ ನೋವಾಗುವಂತೆ ಬರೆದು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾರೆ. ಹೀಗಾಗಿ ಸೂಲಿಬೆಲೆ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು’ ಎಂದು ದೂರುದಾರರು ಆಗ್ರಹಿಸಿದ್ದಾರೆ.
ಎನ್‌ಎಸ್‌ಯುಐನ ವಿಜಯ್‌ಕುಮಾರ್, ಹರ್ಷಿತ್, ಚರಣ್, ರವಿಕುಮಾರ್, ಪ್ರಮುಖರಾದ ಜಿ.ಡಿ.ಮಂಜುನಾಥ್, ಚೇತನ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.