
ಭದ್ರಾವತಿ: ಅಧಿಕೃತ ಪತ್ರ ಬರಹಗಾರರ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಶುಕ್ರವಾರ ತಾಲ್ಲೂಕು ಪರವಾನಗಿ ಪಡೆದ (ದಸ್ತು) ಪತ್ರ ಬರಹಗಾರರ ಸಂಘದ ವತಿಯಿಂದ ನಗರದ ಚನ್ನಗಿರಿ ರಸ್ತೆಯಲ್ಲಿರುವ ಉಪ ನೋಂದಣಾಧಿಕಾರಿಗಳ ಕಚೇರಿ ಮುಂಭಾಗ ಧರಣಿ ನಡೆಸಲಾಯಿತು.
‘ಪತ್ರ ಬರಹಗಾರರಲ್ಲದ ಹಾಗೂ ಪರವಾನಗಿ ಪಡೆಯದ ವ್ಯಕ್ತಿಗಳಿಂದ ಅಧಿಕೃತ ಪತ್ರ ಬರಹಗಾರರಿಗೆ ಸಾಕಷ್ಟು ತೊಂದರೆಯಾಗುತ್ತಿದೆ. ಅಲ್ಲದೆ ದಿನದಿಂದ ದಿನಕ್ಕೆ ಈ ಸಮಸ್ಯೆ ಹೆಚ್ಚುತ್ತಿದೆ. ಇತ್ತೀಚೆಗೆ ಕಾವೇರಿ 2.0 ತಂತ್ರಾಂಶದಲ್ಲಿ ಸಿಟಿಜನ್ ಲಾಗಿನ್ ಅಳವಡಿಸಿದ್ದು, ಇದರ ಮೂಲಕವಾಗಿ ದಸ್ತಾವೇಜುಗಳ ಬಗ್ಗೆ ಯಾವುದೇ ಮಾಹಿತಿ ಇಲ್ಲದ ಅನಧಿಕೃತ ವ್ಯಕ್ತಿಗಳು ಪತ್ರಗಳನ್ನು ಅಪ್ಲೋಡ್ ಮಾಡುತ್ತಿದ್ದಾರೆ. ಇದರಿಂದ ವೃತ್ತಿಯನ್ನು ನಂಬಿ ಬುದುಕುತ್ತಿರುವ ಅಧಿಕೃತ ಪತ್ರ ಬರಹಗಾರರು ಜೀವನ ನಿರ್ವಹಣೆ ಮಾಡುವುದು ಕಷ್ಟಕರವಾಗಿದೆ. ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳಿಗೆ ಮನವಿ ಸಲ್ಲಿಸಿ ಒತ್ತಾಯಿಸಿದರೂ, ಯಾವುದೇ ಪ್ರಯೋಜನವಾಗಿಲ್ಲ’ ಎಂದು ಪ್ರತಿಭಟನಕಾರರು ಹೇಳಿದರು.
‘ಹೊರ ರಾಜ್ಯಗಳಲ್ಲಿರುವಂತೆ ರಾಜ್ಯದಲ್ಲಿಯೂ ಪತ್ರ ಬರಹಗಾರರಿಗೆ ಪ್ರತ್ಯೇಕ ಲಾಗಿನ್ ನೀಡುವುದು. ನೋಂದಣಿಯಾಗುವ ಎಲ್ಲಾ ದಸ್ತಾವೇಜುಗಳಿಗೆ ಕಡ್ಡಾಯವಾಗಿ ಅಧಿಕೃತ ಪತ್ರ ಬರಹಗಾರರ ಅಥವಾ ವಕೀಲರ ಬಿಕ್ಕಲಂ ಕಡ್ಡಾಯಗೊಳಿಸುವುದು. ಅಧಿಕೃತ ಪತ್ರ ಬರಹಗಾರರಿಗೆ ಏಕ ರೂಪದ ಅಧಿಕೃತ ಗುರುತಿನ ಚೀಟಿ ನೀಡುವುದು ಹಾಗೂ ಪತ್ರ ಬರಹಗಾರರ ಹೆಸರಿನಲ್ಲಿ ಇಲಾಖೆಗೆ ಬರುವ ಅನಧಿಕೃತ ವ್ಯಕ್ತಿಗಳಿಗೆ ಕಡಿವಾಣ ಹಾಕಬೇಕು’ ಎಂದು ಪತ್ರ ಬರಹಗಾರರು ಆಗ್ರಹಿಸಿದರು.
‘ಸರ್ಕಾರದ ಗಮನ ಸೆಳೆಯುವ ಉದ್ದೇಶದಿಂದ ಡಿ.16ರಂದು ಬೆಳಗಾವಿ ಚಲೋ ಹಾಗೂ ಸುವರ್ಣ ಸೌಧದ ಮುಂದೆ ಧರಣಿ ಸತ್ಯಾಗ್ರಹ ಹಮ್ಮಿಕೊಳ್ಳಲಾಗಿದೆ. ಮತ್ತೊಮ್ಮೆ ಸಂಬಂಧಪಟ್ಟ ಸಚಿವರಿಗೆ ಮನವಿ ಸಲ್ಲಿಸಿ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಲಾಗುವುದು’ ಎಂದರು.
ಸಂಘದ ಅಧ್ಯಕ್ಷ ಮೂರ್ತಿ ಅಧ್ಯಕ್ಷತೆ ವಹಿಸಿದ್ದು, ಉಪಾಧ್ಯಕ್ಷ ಜಿ. ಪ್ರಕಾಶ್, ಕಾರ್ಯದರ್ಶಿ ಎಂ. ಶಿವಕುಮಾರ್, ಖಜಾಂಚಿ ಅಶ್ವಥನಾರಾಯಣ, ರಾಜ್ಯ ಘಟಕದ ನಿರ್ದೇಶಕ ಎಂ. ಮುರುಡಪ್ಪ, ಜಿಲ್ಲಾ ಘಟಕದ ಉಪಾಧ್ಯಕ್ಷ ಎನ್.ಎಸ್ ಸತ್ಯನಾರಾಯಣ, ಎಂ. ಶಿವರಾಜ್ ಶ್ರೀಧರ್, ಎಂ. ಮಂಜುನಾಥ, ಈ. ಚಂದ್ರಶೇಖರ್, ನಾಗೇಂದ್ರ, ಶರ್ಮ ಮತ್ತು ಗೋವಿಂದ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.