ಹೊಸನಗರ: ಈ ಬಾರಿ ಮಳೆ ಹೆಚ್ಚಳದಿಂದ ಮಲೆನಾಡಿನ ಅಡಿಕೆ ತೋಟಗಳಲ್ಲಿ ತೇವಾಂಶ ಹೆಚ್ಚಿದ್ದು, ಎಲೆ ಚುಕ್ಕಿ ರೋಗ ಭಾದೆಯೂ ವ್ಯಾಪಿಸುತ್ತಿದೆ. ಮಳೆಗಾಲದ ನಂತರವೂ ರೋಗ ಹೆಚ್ಚುತ್ತಿರುವುದರಿಂದ ಅದರ ತೀವ್ರತೆಗೆ ಮಲೆನಾಡಿನ ಅಡಿಕೆ ತೋಟಗಳು ಬರಿದಾಗುತ್ತಿವೆ. ಫಸಲು ನಷ್ಟ, ಇಳುವರಿ ಕುಂಠಿತದಿಂದ ಅಡಿಕೆ ಬೆಳೆಗಾರರು ಆತಂಕದಲ್ಲಿದ್ದಾರೆ.
ಎಲೆಚುಕ್ಕಿ ರೋಗ ಕಳೆದ ನಾಲ್ಕು ವರ್ಷಗಳಿಂದ ತನ್ನ ತೀವ್ರತೆ ಹೆಚ್ಚಿಸಿಕೊಳ್ಳುತ್ತಲೇ ಇದೆ. ಕಳೆದ ವರ್ಷ ಮಳೆ ಕಡಿಮೆ ಆಗಿದ್ದ ಕಾರಣ ತುಸು ಇಳಿಕೆಯಾಗಿದ್ದ ರೋಗ ಬಾಧೆ, ಡಿಸೆಂಬರ್‌ನಲ್ಲಿ ಸುರಿದ ಮಳೆಯ ಕಾರಣ ಮತ್ತೆ ಉಗ್ರರೂಪ ತಾಳಿದೆ. ಇದರಿಂದ ಕೃಷಿಯನ್ನೇ ನಂಬಿದ್ದ ರೈತರು ಚಿಂತಾಕ್ರಾಂತರಾಗಿದ್ದಾರೆ.
ಅಕ್ಟೋಬರ್ ತಿಂಗಳಿಂದ ರೋಗ ಹರಡುತ್ತಿದ್ದು ಇದೀಗ ರೋಗ ಬಾಧೆಯಿಂದ ಮರಗಳು ಸಾಯುತ್ತಿವೆ. ರೋಗ ಬಾಧೆಯಲ್ಲಿದ್ದ ಮರಗಳು ಪೋಷಣೆ ಇಲ್ಲದಂತಾಗಿ ಇಳುವರಿ ಕುಂಠಿತವಾಗಿದೆ. ಫಸಲು ಬೆಳವಣಿಗೆ ಆಗದೇ ಧರೆಗುರುಳುತ್ತಿವೆ. ಗರಿಗಳು ಸಂಪೂರ್ಣ ಒಣಗುತ್ತಿವೆ.
ಶಿವಮೊಗ್ಗ, ಉತ್ತರಕನ್ನಡ, ಉಡುಪಿ, ಚಿಕ್ಕಮಗಳೂರು, ಕೊಡಗು ಸೇರಿದಂತೆ 5 ಜಿಲ್ಲೆಗಳಲ್ಲಿ ಎಲೆಚುಕ್ಕಿ ರೋಗದ ಬಾಧೆ ಹೆಚ್ಚಾಗಿದೆ. ಒಟ್ಟಾರೆ ರಾಜ್ಯದಲ್ಲಿ 53,000 ಹೆಕ್ಟೇರ್‌ಗಿಂತಲೂ ಹೆಚ್ಚು ಪ್ರದೇಶದಲ್ಲಿ ಎಲೆಚುಕ್ಕಿ ರೋಗದಿಂದ ಹಾನಿ ಸಂಭವಿಸಿದೆ ಎಂದು 2023-2024ನೇ ಸಾಲಿನಲ್ಲಿ ಅಂದಾಜಿಸಲಾಗಿತ್ತು. ಆದರೆ ವ್ಯಾಪಿಸುವ ವೇಗ ಗಮನಿಸಿದರೆ ಎಲೆಚುಕ್ಕಿ ರೋಗ ಹೆಚ್ಚಳವಾಗುವ ಆತಂಕವಿದೆ ಎಂದು ತೋಟಗಾರಿಕೆ ಇಲಾಖೆ ಮೂಲಗಳು ಹೇಳುತ್ತವೆ.
ಎಲೆಚುಕ್ಕಿ ರೋಗ ವ್ಯಾಪಿಸಿದ್ದ ಅಡಿಕೆ ತೋಟಗಳನ್ನು ಪ್ರಾಯೋಗಿಕವಾಗಿ ಗುರುತಿಸಿ ನಿರ್ವಹಣೆ ಮಾಡುವ ಕೆಳದಿ ಶಿವಪ್ಪ ನಾಯಕ ತೋಟಗಾರಿಕೆ ವಿಶ್ವವಿದ್ಯಾಲಯದ ಕಾರ್ಯವೂ ಪ್ರಯೋಜನಕ್ಕೆ ಬಾರದಂತಾಗಿದೆ. ಎಡತೊಟ್ಲು ರೈತ ವೆಂಕಟಾಚಲ ಭಟ್ ತೋಟದ ಅಡಿಕೆ ಮರಗಳ ಕಡಿಯಲು ಮುಂದಾದ ಸಂದರ್ಭ ವಿಶ್ವವಿದ್ಯಾಲಯವೇ ಪ್ರಾಯೋಗಿಕವಾಗಿ ಆ ತೋಟದ ನಿರ್ವಹಣೆ ಕೈಗೆತ್ತಿಕೊಂಡಿತ್ತು. ಅದೇನೂ ಉಪಯೋಗವಾಗಿಲ್ಲ ರೈತ ಪುರುಷೋತ್ತಮ ಬೆಳ್ಳಕ್ಕ ಹೇಳುತ್ತಾರೆ.
2019 ರಲ್ಲಿ ಕಂಡು ಬಂದ ಎಲೆಚುಕ್ಕಿ ರೋಗ ಹತೋಟಿಗೆ ತರಲು ಸರ್ಕಾರಕ್ಕೆ ಸಾಧ್ಯವಾಗದ ಕಾರಣ ರೈತರು ವಿಶ್ವಾಸ ಕಳೆದುಕೊಳ್ಳುತ್ತಿದ್ದಾರೆ. ತಜ್ಞರ ಸಮಿತಿ ಕೊಟ್ಟ ಶಿಫಾರಸ್ಸು ಯಶಸ್ಸು ಕಂಡಿಲ್ಲ-ವೆಂಕಟಪ್ಪ ಗೌಡ ರೈತ ಕರಿಮನೆ.
ನಾಲ್ಕು ವರ್ಷದಿಂದ ಅಡಿಕೆ ಫಸಲು ಇಳಿಮುಖ ಆಗುತ್ತಿದೆ. ಈ ಬಾರಿ ಕೊಳೆರೋಗ ಮತ್ತು ಎಲೆ ಚುಕ್ಕಿ ರೋಗ ವ್ಯಾಪಕವಾಗಿದೆ. ಫಸಲು ನಷ್ಟವಾಗಿದೆ. ಅಡಿಕೆಯನ್ನೇ ನಂಬಿದ ನಮ್ಮಂತ ರೈತರ ಬದುಕು ನಿಧಾನವಾಗಿ ಬೀದಿಗೆ ಬರುತ್ತಿದೆ–ಸುರೇಶ್ ಅಡಿಕೆ ಬೆಳೆಗಾರ ಸಂಪೇಮನೆ
ಎಲೆಚುಕ್ಕಿ ರೋಗದ ಬಗ್ಗೆ ಸಮಗ್ರ ಅಧ್ಯಯನಕ್ಕಾಗಿ 7 ಜನ ತಜ್ಞರ ತಂಡವನ್ನು ಸರ್ಕಾರ ನೇಮಕ ಮಾಡಿತ್ತು. ಅಧ್ಯಯನ ತಂಡ ಸುಳ್ಯ ಉಡುಪಿ ಕಳಸ ಕೊಪ್ಪ ಶೃಂಗೇರಿ ಸಾಗರ ಸಿದ್ದಾಪುರ ಉತ್ತರಕನ್ನಡ ನಗರ ನಿಟ್ಟೂರು ಸೇರಿದಂತೆ ವಿವಿಧ ಭಾಗಕ್ಕೆ ತೆರಳಿ ಅಧ್ಯಯನ ನಡೆಸಿತ್ತು. ರೋಗಬಾಧಿತ ತೋಟಗಳಿಗೆ ಔಷಧಿ ಸಿಂಪಡಣೆ ಕಾರ್ಯಾಗಾರ ಪೋಷಕಾಂಶ ನಿರ್ವಹಣೆಗಾಗಿ ₹222 ಕೋಟಿ ಅನುದಾನ ಬಿಡುಗಡೆಗಾಗಿ ಕೇಂದ್ರದ ಕೃಷಿ ಸಚಿವಾಲಯ ರಾಜ್ಯ ಸರ್ಕಾರಕ್ಕೆ 2023 ಸೆಪ್ಟೆಂಬರ್ ತಿಂಗಳಲ್ಲಿ ಪ್ರಸ್ತಾಪ ಸಲ್ಲಿಸಿತ್ತು. ಪ್ಯಾಕೇಜ್ ಇನ್ನೂ ಬಿಡುಗಡೆಯಾಗಿಲ್ಲ ಎಂದು ತಜ್ಞರ ತಂಡದಲ್ಲಿದ್ದ ಕಾಸರಗೋಡು ಕೇಂದ್ರೀಯ ಅಡಿಕೆ ಸಂಶೋಧನಾ ಕೇಂದ್ರದ ವಿಜ್ಞಾನಿ ಡಾ.ವಿನಾಯಕ ಹೆಗಡೆ ಹೇಳುತ್ತಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.