ADVERTISEMENT

ಶಿವಮೊಗ್ಗದ ಮೆಗ್ಗಾನ್‌ ಆಸ್ಪತ್ರೆಯಲ್ಲಿ ಅಂಗಾಂಗ ದಾನ, ನೋಂದಣಿಗೆ ಅವಕಾಶ

​ಪ್ರಜಾವಾಣಿ ವಾರ್ತೆ
Published 5 ಸೆಪ್ಟೆಂಬರ್ 2025, 5:48 IST
Last Updated 5 ಸೆಪ್ಟೆಂಬರ್ 2025, 5:48 IST
ಡಾ.ಟಿ.ಡಿ.ತಿಮ್ಮಪ್ಪ
ಡಾ.ಟಿ.ಡಿ.ತಿಮ್ಮಪ್ಪ   

ಶಿವಮೊಗ್ಗ: ಮಧ್ಯ ಕರ್ನಾಟಕ ಭಾಗದಲ್ಲಿ ಅಂಗಾಂಗ ಕಸಿಯ ಅಗತ್ಯವಿದ್ದವರು ಹಾಗೂ ಅಂಗಾಂಗ ದಾನಿಗಳು ನೋಂದಣಿ ಮಾಡಿಸಲು ಹಾಗೂ ದಾನ ಪ್ರಕ್ರಿಯೆಗೆ ಇನ್ನು ಮುಂದೆ ಬೆಂಗಳೂರಿನ ವಿಕ್ಟೊರಿಯಾ ಆಸ್ಪತ್ರೆಗೆ ಹೋಗಬೇಕಿಲ್ಲ. ಬದಲಿಗೆ ಶಿವಮೊಗ್ಗದ ಮೆಗ್ಗಾನ್ ಬೋಧನಾ ಆಸ್ಪತ್ರೆಗೆ ಬಂದರೆ ಸಾಕು.

ಅಂಗಾಂಗ ಕಸಿಗೆ ಹೆಚ್ಚುತ್ತಿರುವ ಬೇಡಿಕೆ ಹಾಗೂ ಮನೆಯ ಬಾಗಿಲಲ್ಲೇ ಚಿಕಿತ್ಸೆಗೆ ಅವಕಾಶ ಕಲ್ಪಿಸುವ ನಿಟ್ಟಿನಲ್ಲಿ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಯಲ್ಲಿ ಕಸಿ ಮಾಡದ ಮಾನವ ಅಂಗಾಂಗ ಮರುಪಡೆಯುವಿಕೆ ಕೇಂದ್ರ ಹಾಗೂ ಮೆದುಳಿನ ಕಾಂಡದ ಮರಣ ಪ್ರಮಾಣೀಕರಣಕ್ಕಾಗಿ ತಜ್ಞರ ಸಮಿತಿ ರಚನೆಗೆ ರಾಜ್ಯ ಸರ್ಕಾರ ಅನುಮತಿ ನೀಡಿದೆ. 

ಎನ್‌ಟಿಎಚ್ಒಆರ್‌ಸಿ ಮೂಲಕ ಸಂಗ್ರಹಿಸಲಾದ ಅಂಗಾಂಗಳನ್ನು ಸಂರಕ್ಷಿಸಿ ಇಡಲು ಹಾಗೂ ಕಸಿ ಮಾಡುವ ಮುನ್ನ ದಾನಿ ಹಾಗೂ ದಾನ ಪಡೆಯುವವರ ರಕ್ತದ ಹೋಲಿಕೆ ಮತ್ತಿತರ ಅಂಶಗಳ ಪರೀಕ್ಷೆಗೆ ಇಲ್ಲಿ ಎಚ್‌ಎಲ್‌ಎ ಲ್ಯಾಬ್ ಕೂಡ ₹ 2 ಕೋಟಿ ವೆಚ್ಚದಲ್ಲಿ ಸಿದ್ಧವಾಗಲಿದೆ. ಆರಂಭಿಕವಾಗಿ 5 ವರ್ಷಕ್ಕೆ ಸೀಮಿತಗೊಂಡು ಈ ಕೇಂದ್ರ ಕೆಲಸ ಮಾಡಲಿದೆ. ಮುಂದಿನ ದಿನಗಳಲ್ಲಿ ನವೀಕರಣಕ್ಕೂ ಅವಕಾಶ ಕಲ್ಪಿಸಲಾಗಿದೆ.

ADVERTISEMENT

‘ಅಂಗಾಂಗ ಕಸಿಗೆ ಈಗ ಬಹಳಷ್ಟು ಬೇಡಿಕೆ ಇದೆ. ಜನರಿಗೆ ಅದರ ಬಗ್ಗೆ ಸೂಕ್ತ ಮಾಹಿತಿ ಮತ್ತು ತಿಳಿವಳಿಕೆ ನೀಡುವ ಅಗತ್ಯವಿದೆ. ಈಗ ಕಣ್ಣು, ಕಿಡ್ನಿ, ಲಿವರ್‌ ದಾನದ ಜೊತೆಗೆ ವಿಶೇಷವಾಗಿ ಅಸ್ತಿಮಜ್ಜೆ (ಬೋನ್‌ ಮ್ಯಾರೊ), ಚರ್ಮ ದಾನಕ್ಕೂ ಬೇಡಿಕೆ ಇದೆ. ಹೀಗಾಗಿ ಸತತ ಆರು ತಿಂಗಳು ನಮ್ಮ ಪ್ರಯತ್ನದ ಫಲವಾಗಿ ಸರ್ಕಾರ ಶಿವಮೊಗ್ಗದಲ್ಲಿ ಈ ಕೇಂದ್ರಕ್ಕೆ ಅವಕಾಶ ಮಾಡಿಕೊಟ್ಟಿದೆ’ ಎಂದು ಮೆಗ್ಗಾನ್ ಆಸ್ಪತ್ರೆಯ ಮುಖ್ಯಸ್ಥ ಡಾ.ತಿಮ್ಮಪ್ಪ ಹೇಳುತ್ತಾರೆ.

‘ದೊಡ್ಡ ಮಟ್ಟದಲ್ಲಿ ಸ್ಟ್ರೋಕ್ ಆದವರು, ಮೆದುಳಿನಲ್ಲಿ ರಕ್ತಸ್ರಾವ ಹಾಗೂ ಅಪಘಾತದ ವೇಳೆ ಮೆದುಳು ನಿಷ್ಕ್ರಿಯಗೊಂಡರೆ (ಬ್ರೇನ್ ಡೆಡ್‌) ಅಂತಹವರ ಅಂಗಾಂಗವು ದಾನ ನೀಡುವುದಕ್ಕೆ ಹೆಚ್ಚು ಸೂಕ್ತ. ಅಂತಹ ವ್ಯಕ್ತಿಗಳನ್ನು ಪರಿಶೀಲಿಸಿ ಸಂಬಂಧಿಕರಿಗೆ ಅವರ ಸ್ಥಿತಿ ಮನವರಿಕೆ ಮಾಡಕೊಟ್ಟು ಮರಣ ಘೋಷಣೆಯ ಶಿಫಾರಸು ಮಾಡುವ ಸಮಿತಿ ಈ ಮೊದಲು ಶಿವಮೊಗ್ಗದಲ್ಲಿ ಅಸ್ತಿತ್ವದಲ್ಲಿ ಇರಲಿಲ್ಲ. ಈಗ ಸರ್ಕಾರ ಸಮಿತಿ ರಚಿಸಿ ಆದೇಶ ಹೊರಡಿಸಿದೆ. ಸಮಿತಿಗೆ ಶೀಘ್ರ ನೋಡಲ್ ಅಧಿಕಾರಿಯನ್ನು ನೇಮಕ ಮಾಡಲಾಗುವುದು ಎನ್ನುತ್ತಾರೆ.

ಕಸಿಯ ವೇಳೆ ದಾನಿ ಹಾಗೂ ದಾನ ಪಡೆಯುವವರ ರಕ್ತ, ಅಂಗಾಗಗಳ ಮ್ಯಾಚಿಂಗ್ ಮಾಡಲು ಈ ಲ್ಯಾಬ್ ನೆರವಾಗಲಿದೆ. ಇಲ್ಲಿಯೇ ನೋಂದಣಿಗೆ ಅವಕಾಶ ಮಾಡಿಕೊಡಲಾಗುತ್ತಿದ್ದು. ಸಿಬ್ಬಂದಿಗೆ ತರಬೇತಿ ನೀಡಲಿದ್ದೇವೆ ಎಂದು ಡಾ.ತಿಮ್ಮಪ್ಪ ತಿಳಿಸಿದರು.

ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಯ ನೋಟ

ಶಿವಮೊಗ್ಗದ ಮೆಗ್ಗಾನ್‌ ಹಾಗೂ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗಳಲ್ಲಿ ಅಂಗಾಂಗ ಕಸಿಗೆ ಸಂಬಂಧಿಸಿದಂತೆ ಸರ್ಕಾರ ಈ ಸವಲತ್ತು ಕಲ್ಪಿಸಿದೆ. ನೋಂದಣಿ ಸೇರಿದಂತೆ ಎಲ್ಲ ಪ್ರಕ್ರಿಯೆ ಡಿಸೆಂಬರ್‌ನಿಂದ ಇಲ್ಲಿಯೇ ಲಭ್ಯವಾಗಲಿದೆ. ಡಾ.ಟಿ.ಡಿ.ತಿಮ್ಮಪ್ಪ ಶಿವಮೊಗ್ಗ ಮೆಗ್ಗಾನ್ ಆಸ್ಪತ್ರೆ ಅಧೀಕ್ಷಕ

ಏಳು ಜನ ತಜ್ಞರ ಸಮಿತಿ ರಚನೆ ಮೆಗ್ಗಾನ್ ಆಸ್ಪತ್ರೆಯಲ್ಲಿ NTHORC ಹಾಗೂ BSD ಪ್ರಮಾಣೀಕರಣಕ್ಕಾಗಿ ಏಳು ಜನ ತಜ್ಞರ ಸಮಿತಿ ರಚಿಸಿ ಸರ್ಕಾರ ಗುರುವಾರ ಆದೇಶ ಹೊರಡಿಸಿದೆ. ನ್ಯುರಾಲಜಿ ವಿಭಾಗದ ಡಾ.ಎಂ.ಎನ್. ಕುಮಾರ್ ಅನಸ್ತೇಶಿಯಾ ವಿಭಾಗದ ಡಾ.ಪಿ.ಟಿ. ಶಿವಾನಂದ ಜನರಲ್ ಮೆಡಿಸಿನ್ ವಿಭಾಗದ ಡಾ.ಸಿ.ಎಲ್. ಅರವಿಂದ ಜನರಲ್ ಸರ್ಜರಿ ವಿಭಾಗದ ಡಾ.ಮೊಹಮ್ಮದ್ ಆರಿಫ್ ಕಾರ್ಡಿಯಾಲಜಿಯ ಡಾ.ಎಸ್.ಪರಮೇಶ್ವರ್ ಇಎನ್‌ಟಿಯ ಡಾ.ಟಿ.ಡಿ. ತಿಮ್ಮಪ್ಪ ಹಾಗೂ ಅಪ್ತಮೊಲಾಜಿಯ ಡಾ.ಸಿದ್ಧನಗೌಡ ಪಾಟೀಲ ಸಮಿತಿಯಲ್ಲಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.