ADVERTISEMENT

ಶಿವಮೊಗ್ಗ | ಅಡಿಕೆ ಸಿಪ್ಪೆ ಬರೀ ತ್ಯಾಜ್ಯವಲ್ಲ, ಚಿನ್ನದಂತಹ ಗೊಬ್ಬರ: ಪ್ರೊ.ನಾಗರಾಜ

ಕೃಷಿ ವಿವಿಯ ಸೂಕ್ಷ್ಮಾಣು ಮಿಶ್ರಣದ ನೆರವು: ಬೇಗ ಕೊಳೆಯುವ ಸಿಪ್ಪೆ

ವೆಂಕಟೇಶ ಜಿ.ಎಚ್.
Published 10 ನವೆಂಬರ್ 2025, 5:36 IST
Last Updated 10 ನವೆಂಬರ್ 2025, 5:36 IST
ಶಿವಮೊಗ್ಗದ ಕೃಷಿ ಮೇಳದಲ್ಲಿ ಅಡಿಕೆ ಸಿಪ್ಪೆ ಬಹಳ ಬೇಗ ಕೊಳೆತು ಗೊಬ್ಬರವಾಗಿ ಬದಲಾಗುವ ಪ್ರಾತ್ಯಕ್ಷಿಕೆಯನ್ನು ಅಡಿಕೆ ಸಂಶೋಧನಾ ಕೇಂದ್ರದ ಮುಖ್ಯಸ್ಥ ಪ್ರೊ.ನಾಗರಾಜ ಅಡಿವೆಪ್ಪ ಆಸಕ್ತರಿಗೆ ನೀಡಿದರು
ಶಿವಮೊಗ್ಗದ ಕೃಷಿ ಮೇಳದಲ್ಲಿ ಅಡಿಕೆ ಸಿಪ್ಪೆ ಬಹಳ ಬೇಗ ಕೊಳೆತು ಗೊಬ್ಬರವಾಗಿ ಬದಲಾಗುವ ಪ್ರಾತ್ಯಕ್ಷಿಕೆಯನ್ನು ಅಡಿಕೆ ಸಂಶೋಧನಾ ಕೇಂದ್ರದ ಮುಖ್ಯಸ್ಥ ಪ್ರೊ.ನಾಗರಾಜ ಅಡಿವೆಪ್ಪ ಆಸಕ್ತರಿಗೆ ನೀಡಿದರು   

ಶಿವಮೊಗ್ಗ: ಅಡಿಕೆ ಮಾತ್ರ ಮರದ ಮೇಲಿನ ಚಿನ್ನ. ಅದರ ಸಿಪ್ಪೆ ಬರೀ ಕಸ ಎಂಬುದು ಬಹುತೇಕರ ಭಾವನೆ. ಅದರ ಪ್ರತಿಫಲ ಬೆಳೆಗಾರರು ಅಡಿಕೆಯ ಸಿಪ್ಪೆಯನ್ನು ಊರಿನ ಖಾಲಿ ಜಾಗ, ರಸ್ತೆಯ ಪಕ್ಕ, ಹೆದ್ದಾರಿಯ ಆಸುಪಾಸು, ತಿಪ್ಪೆ–ಗುಂಡಿ ಹೀಗೆ ಎಲ್ಲೆಂದರಲ್ಲಿ ಸುರಿದು, ಬೆಂಕಿ ಹಚ್ಚಿ ಪೀಡೆ ತೊಲಗಿತು ಎಂಬ ಭಾವ ಕಾಣುತ್ತೇವೆ..

ಬರೀ ಅಡಿಕೆ ಮಾತ್ರವಲ್ಲ ಅದರ ಸಿಪ್ಪೆಯೂ ಚಿನ್ನ. ಅದು ಖರ್ಚು ಇಲ್ಲದ ಅತ್ಯುತ್ತಮ ಸಾವಯವ ಗೊಬ್ಬರ ಎಂಬ ಸಂದೇಶವನ್ನು ಇಲ್ಲಿನ ಕೃಷಿ, ತೋಟಗಾರಿಕೆ ಮೇಳದಲ್ಲಿ ಹಾಕಿರುವ ‘ಅಡಿಕೆ ಅರಮನೆ’ ಹೆಸರಿನ ಮಳಿಗೆಗೆ ಬರುವ ರೈತರಿಗೆ ವಿಜ್ಞಾನಿಗಳು ಮನವರಿಕೆ ಮಾಡಿಕೊಡುತ್ತಿದ್ದಾರೆ.

ಅಡಿಕೆ ಸಿಪ್ಪೆ ಬೇಗನೇ ಕೊಳೆಯುವುದಿಲ್ಲ ಎಂಬುದೇ ಅದರ ಬಗೆಗೆ ರೈತರ ಅಸಡ್ಡೆಗೆ ಕಾರಣ ಎನ್ನುತ್ತಾರೆ ನವುಲೆಯ ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಶ್ವವಿದ್ಯಾಲಯದ ಅಡಿಕೆ ಸಂಶೋಧನಾ ಕೇಂದ್ರದ ವಿಜ್ಞಾನಿ ಪ್ರೊ.ನಾಗರಾಜ ಅಡಿವೆಪ್ಪ.

ADVERTISEMENT

ಆ ಸಮಸ್ಯೆಗೆ ಪರಿಹಾರ ಕಂಡುಕೊಂಡಿದ್ದೇವೆ. ಅಡಿಕೆ ಸಿಪ್ಪೆಯನ್ನು ಬೇಗನೇ ಕೊಳೆಸಿ ಅದನ್ನು ಉತ್ಕೃಷ್ಟ ಗೊಬ್ಬರವಾಗಿಸುವ ಸೂಕ್ಷ್ಮಾಣು ಜೀವಿಗಳ ಮಿಶ್ರಣವನ್ನು ಅಭಿವೃದ್ಧಿಪಡಿಸಿದ್ದೇವೆ ಎನ್ನುತ್ತಾರೆ.

ಅಡಿಕೆ ಸಿಪ್ಪೆ ಸ್ವಲ್ಪ ಒಣಗಿದ ಮೇಲೆ ಅದರ ಮೇಲೆ ಒಂದು ಪದರ ಮಣ್ಣು, ಸಗಣಿ–ಗಂಜಳ ಹಾಕಿ ಅದರ ಜೊತೆಗೆ ವಿಶ್ವವಿದ್ಯಾಲಯ ಅಭಿವೃದ್ಧಿಪಡಿಸಿದ ಸೂಕ್ಷ್ಮಾಣು ಜೀವಿಗಳ ಮಿಶ್ರಣವನ್ನು ಬೆರೆಸಿದರೆ ಅದು ಕೆಲವೇ ದಿನಗಳಲ್ಲಿ ಕೊಳೆಯುತ್ತದೆ. ನಂತರ ಎರೆಹುಳುವನ್ನು ಬಿಟ್ಟರೆ ಕೆಲವೇ ದಿನಗಳಲ್ಲಿ ಅದು ಅತ್ಯುತ್ತಮ ಸಾವಯವ ಗೊಬ್ಬರವಾಗಿ ರೂ‍ಪುಗೊಳ್ಳುತ್ತದೆ ಎಂದು ನಾಗರಾಜ ಅಡಿವೆಪ್ಪ ಮಾಹಿತಿ ನೀಡುತ್ತಾರೆ.

ಅಡಿಕೆ ಸುಲಿದ ನಂತರ ರೈತರು ದಯವಿಟ್ಟು ಅದನ್ನು ಬೆಂಕಿ ಹಚ್ಚಿ ಸುಡುವುದು ಬೇಡ. ಅದು ತ್ಯಾಜ್ಯ ಎಂದು ಎಲ್ಲೆಂದರಲ್ಲಿ ಎಸೆಯುವುದು ಬೇಡ. ಒಂದು ಟ್ರ್ಯಾಕ್ಟರ್ ಲೋಡ್ ಅಡಿಕೆ ಸಿಪ್ಪೆಗೆ ಎರಡು ಪ್ಯಾಕೆಟ್ ಸೂಕ್ಷ್ಮಾಣು ಮಿಶ್ರಣ ಬೆರೆಸಿದರೆ ಸಾಕು. ಅದು ಕೆಲವೇ ದಿನಗಳಲ್ಲಿ ಕೊಳೆತು ಗೊಬ್ಬರವಾಗಿ ಬದಲಾಗುತ್ತದೆ. ಇದಕ್ಕೆ ರೈತರಿಗೆ ತಗುಲುವ ವೆಚ್ಚ ₹500 ಮಾತ್ರ. ಸೂಕ್ಷ್ಮಾಣು ಮಿಶ್ರಣದ ಪ್ಯಾಕೆಟ್ ವಿಶ್ವವಿದ್ಯಾಲಯದಲ್ಲಿಯೇ ಕೊಳ್ಳಲು ಲಭ್ಯವಿದೆ. ಕೃಷಿ ಮೇಳದಲ್ಲೂ ಲಭ್ಯವಿದೆ. ಜೊತೆಗೆ ಗೊಬ್ಬರ ಮಾಡುವ ವಿಧಾನದ ಅಗತ್ಯ ಮಾಹಿತಿಯನ್ನು ರೈತರಿಗೆ ಕೊಡುತ್ತೇವೆ ಎನ್ನುತ್ತಾರೆ.

ಅಡಿಕೆ ಸಿಪ್ಪೆಯ ಗೊಬ್ಬರ ಕೂಡ ಅತ್ಯುತ್ತಮ ಪೋಷಕಾಂಶಗಳನ್ನು ಹೊಂದಿದೆ. ಕಡಿಮೆ ಖರ್ಚಿನಲ್ಲಿ ಸಿದ್ಧಪಡಿಸಿಕೊಳ್ಳಬಹುದಾದ ಈ ಸಾವಯವ ಗೊಬ್ಬರದ ಬಳಕೆ ಆರಂಭಿಸಿದರೆ ರಾಸಾಯಿಕ ಗೊಬ್ಬರಕ್ಕೆ ಮಾಡುವ ಖರ್ಚು ಕೂಡ ಉಳಿತಾಯವಾಗುತ್ತದೆ. ಎರೆಹುಳು ಮಿಶ್ರಣ ಮಾಡಿದರಂತೂ ಅತ್ಯುತ್ತಮ ಗೊಬ್ಬರವಾಗಿ ಬದಲಾಗುತ್ತದೆ ಎಂದು ಹೇಳುತ್ತಾರೆ.

ರೈತರು ಮಾಹಿತಿಗಾಗಿ ಪ್ರೊ.ನಾಗರಾಜ ಅಡಿವೆಪ್ಪ: 95352–50742 ಸಂಖ್ಯೆಗೆ ಕರೆ ಮಾಡಬಹುದು.

ಕೃಷಿ ಮೇಳ; ವೀಳ್ಯದೆಲೆ–ಅಡಿಕೆ ವೈನ್ ಆಕರ್ಷಣೆ..

ದ್ರಾಕ್ಷಿ ಚಿಕ್ಕು ಬಾಳೆಹಣ್ಣು ಹೀಗೆ ಬೇರೆ ಬೇರೆ ಹಣ್ಣುಗಳ ವೈನ್‌ನ ಮೋಡಿಯ ನಡುವೆ ಅಡಿಕೆ ಹಾಗೂ ವೀಳ್ಯದೆಲೆಯನ್ನು ಬಳಸಿ ಸಿದ್ಧಪಡಿಸಿದ ವೈನ್ ಕೃಷಿ ಮೇಳದಲ್ಲಿ ಕಾಣಸಿಕ್ಕಿತು. ಅದು ಈಗ ಮಾರುಕಟ್ಟೆಗೂ ಬಂದಿದೆ ಎಂಬ ಮಾಹಿತಿಯೂ ಅಲ್ಲಿ ತಿಳಿಯಿತು.  ಕೃಷಿ ಮೇಳದ ಅಡಿಕೆ ಅರಮನೆಯಲ್ಲಿ ಅಡಿಕೆಯೊಂದಿಗೆ ಅದರ ಜನುಮದ ಜೋಡಿ ವೀಳ್ಯದೆಲೆಯನ್ನು ಬಳಸಿ ಸಿದ್ಧಪಡಿಸಿದ್ದ ವೈನ್‌ನ ಆಕರ್ಷಕ ಬಾಟಲಿಗಳು ನೋಡುಗರ ಗಮನ ಸೆಳೆದವು. ತೀರ್ಥಹಳ್ಳಿ ತಾಲ್ಲೂಕಿನ ಮಂದಗದ್ದೆ ಬಳಿಯ ಕಿಕ್ಕೇರಿ ಫಾರ್ಮ್‌ನಲ್ಲಿ ಈ ವೈನ್ ಸಿದ್ಧಪಡಿಸಲಾಗಿದೆ. 1 ಲೀಟರ್ ಬಾಟಲಿಯ ವೈನ್‌ಗೆ ₹900 ದರ ನಿಗದಿಪಡಿಸಲಾಗಿತ್ತು. ಅಲ್ಲಿ ವೈನ್ ನೋಡಲಷ್ಟೇ ಅವಕಾಶವಿತ್ತು. ಹಣ ಕೊಟ್ಟು ಕೊಂಡು ರುಚಿ ನೋಡಲು ಕೇಳಿದವರಿಗೆ ನಿರಾಶೆ ಕಾದಿತ್ತು. ಸಂಬಂಧಿಸಿದವರ ಮೊಬೈಲ್ ಫೋನ್ ಸಂಖ್ಯೆ ಕೊಟ್ಟು ಸಂಪರ್ಕಿಸುವಂತೆ ಹೇಳಿ ಸಂಘಟಕರು ವೈನ್ ಪ್ರಿಯರನ್ನು ಸಮಾಧಾನಪಡಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.