ADVERTISEMENT

ಕುಸಿದ ನಾಟಿ ಪ್ರದೇಶ; ಆಹಾರ ಬೆಳೆಗೆ ನಿರಾಸಕ್ತಿ

​ಪ್ರಜಾವಾಣಿ ವಾರ್ತೆ
Published 30 ಆಗಸ್ಟ್ 2025, 5:45 IST
Last Updated 30 ಆಗಸ್ಟ್ 2025, 5:45 IST
ತೀರ್ಥಹಳ್ಳಿ ತಾಲ್ಲೂಕಿನ ಇಕ್ಕೇರಿ-ಬೇಳೂರು ಗ್ರಾಮದಲ್ಲಿ ಮಹಿಳೆಯರು ನಾಟಿ ಕಾರ್ಯದಲ್ಲಿ ಭಾಗಿಯಾಗಿರುವುದು.
ತೀರ್ಥಹಳ್ಳಿ ತಾಲ್ಲೂಕಿನ ಇಕ್ಕೇರಿ-ಬೇಳೂರು ಗ್ರಾಮದಲ್ಲಿ ಮಹಿಳೆಯರು ನಾಟಿ ಕಾರ್ಯದಲ್ಲಿ ಭಾಗಿಯಾಗಿರುವುದು.   

ತೀರ್ಥಹಳ್ಳಿ: ವರ್ಷವಾರು ಮಲೆನಾಡು ಭಾಗದಲ್ಲಿ ಭತ್ತ ಬೆಳೆಯುವವರ ಸಂಖ್ಯೆ ಕ್ಷೀಣಿಸುತ್ತಿದೆ. 2008ರಲ್ಲಿ 16,000 ಹೆಕ್ಟೇರ್‌ ಇದ್ದ ಪ್ರದೇಶ ಈಗ 6,500 ಹೆಕ್ಟೇರ್‌ ಪ್ರದೇಶಕ್ಕೆ ಸೀಮಿತಗೊಂಡಿದೆ. ತೋಟಗಾರಿಕಾ ಬೆಳೆಯಾದ ಅಡಿಕೆ 16,447 ಹೆಕ್ಟೇರ್‌ ಪ್ರದೇಶಕ್ಕೆ ವ್ಯಾಪಿಸಿದೆ. ಶ್ರಮ ವಹಿಸಿ ಬೆಳೆದ ಭತ್ತಕ್ಕೆ ತಕ್ಕ ಬೆಲೆ ಸಿಗದ ಕಾರಣ ರೈತರು ತರಿ ಜಮೀನು ಹಾಳು ಬಿಡುವಂತಾಗಿದೆ.

ಕಳೆದ ವರ್ಷ ಕ್ಷೇತ್ರವಾರು 7,450 ಹೆಕ್ಟೇರ್‌ ಪ್ರದೇಶದಲ್ಲಿ ಭತ್ತ ಸಾಗುವಳಿ ಮಾಡಲಾಗಿತ್ತು. ಆದರೆ, ಕೇವಲ ಒಂದೇ ವರ್ಷದಲ್ಲಿ 950 ಹೆಕ್ಟೇರ್‌ ಪ್ರದೇಶದಲ್ಲಿ ಭತ್ತದ ನಾಟಿ ಆಗಿಲ್ಲ. ಕಾಡುಪ್ರಾಣಿಗಳ ಉಪಟಳ, ನೀರಿನ ಕೊರತೆ, ಅತಿಯಾದ ಮಳೆ, ಹೆಚ್ಚಿದ ತಾಪಮಾನ, ಕೃಷಿ ಕಾರ್ಮಿಕರ ವೇತನ ಹೆಚ್ಚಳ ಸೇರಿ ಅನೇಕ ಕಾರಣಗಳಿಂದ ಗದ್ದೆಗಳು ಪಾಳು ಬೀಳುತ್ತಿವೆ.

ಕೆಎಚ್‌ಬಿ 11, ಅಭಿಲಾಷ್‌, 1001, ಆರ್‌ಎನ್‌ಆರ್‌, ಉಮಾ, ಐಟಿ ಭತ್ತ, ವಾಳ್ಯ ಭತ್ತ ಸಾಗುವಳಿ ನಡೆದಿದೆ. ತೋಟಗಾರಿಕಾ ಬೆಳೆಗಳಾದ ಕರಿಮೆಣಸು ಅಥವಾ ಕಾಳುಮೆಣಸು 2,066 ಹೆಕ್ಟೇರ್‌, ತೆಂಗು 378, ಗೇರು 91, ರಬ್ಬರ್‌ 281, ಬಾಳೆ 133, ಕಾಫಿ 75, ಜಾಯಿಕಾಯಿ 29, ಕೋಕೋ 7, ಏಲಕ್ಕಿ 13, ದಾಲ್ಚಿನ್ನಿ 1, ಲವಂಗ 7 ಹೆಕ್ಟೇರ್‌ ಪ್ರದೇಶದಲ್ಲಿ ಕ್ಷೇತ್ರವಾರು ಬೆಳೆಯಲಾಗುತ್ತಿದೆ.

ADVERTISEMENT

ತುಂಗಾ, ಮಾಲತಿ ನದಿ ಪಾತ್ರದ ಪ್ರದೇಶವಾಗಿದ್ದರೂ ಮಳೆ ಪ್ರಮಾಣ ಕುಗ್ಗುತ್ತಿದ್ದಂತೆಯೇ ನೀರಿಗೆ ಪರದಾಟ ಶುರುವಾಗುತ್ತದೆ. ಡೀಸೆಲ್‌, ಪೆಟ್ರೋಲ್‌, ವಿದ್ಯುತ್‌ ಚಾಲಿತ ಮೋಟಾರ್‌ ಬಳಸಿ ಗದ್ದೆಗಳಿಗೆ ನೀರು ಹಾಯಿಸಬೇಕಾಗಿದೆ. ಇವೆಲ್ಲದರ ಜಂಜಾಟದಿಂದ ಮುಕ್ತವಾಗುವ ನಿಟ್ಟಿನಲ್ಲಿ ಭತ್ತ ಬೆಳೆಗಾರರು ಸುಲಭದ ದಾರಿ ಹಿಡಿಯುತ್ತಿದ್ದಾರೆ.

ರೈತರು ನಿರಂತರ ಬೆಳೆಯ ಸ್ಥಿತಿ ಅರಿಯಬೇಕು. ಸಂಜೆ ಹುಳು ಇರುವುದನ್ನು ಗುರುತಿಸಬಹುದು. ಹುಳುಗಳು ಇದ್ದಾಗ ಸಾರಜನಕ ಗೊಬ್ಬರ ಕೊಡಬಾರದು. ಪೊಟ್ಯಾಷ್‌ ನೀಡಬೇಕು. ಜೈವಿಕ ವಿಧಾನದಿಂದಲೂ ರೋಗ ನಿಯಂತ್ರಿಸಬಹುದು.
ಪ್ರವೀಣ್‌ ಸಹಾಯಕ ಕೃಷಿ ನಿರ್ದೇಶಕ ತೀರ್ಥಹಳ್ಳಿ

ಭತ್ತಕ್ಕೆ ವಿಪರೀತ ಕೀಟರೋಗ..  ಮಳೆಯ ಏರಿಳಿತದ ಪರಿಣಾಮ ಭತ್ತದ ಬೆಳೆಗೆ ರೋಗಬಾಧೆ ಹೆಚ್ಚಾಗುತ್ತಿದೆ. ಹವಾಮಾನ ಬದಲಾವಣೆಯು ಕೀಟ ಮತ್ತು ರೋಗ ಬಾಧೆಗೆ ಅನುಕೂಲಕರ ವಾತಾವರಣ ನಿರ್ಮಿಸುತ್ತಿದೆ. ಹಸಿರು ಬಣ್ಣದ ಮರಿಹುಳುಗಳು ಎಲೆಗಳನ್ನು ತಿನ್ನುತ್ತ ಗರಿಯ ಅಂಚುಗಳನ್ನು ಸೇರಿಸಿ ಉದ್ದಕ್ಕೆ ಒಳಗೆ ಸುತ್ತಿ ಜೀವಿಸುತ್ತಿವೆ. ಇವು ಎಲೆಯಲ್ಲಿ ಬಿಳಿ ಮಚ್ಚೆ ಸೃಷ್ಟಿಸುತ್ತಿವೆ. ಎಲೆಯ ತುದಿಯನ್ನು ಕತ್ತರಿಸಿ ಕೊಳವೆ ಮಾಡಿಕೊಂಡು ಜೀವಿಸುವ ಹುಳುಗಳು ಎಲೆಗೆ ಅಂಟಿಕೊಂಡು ಎಲೆಯ ಹರಿತ್ತನ್ನು ಕೆರೆದು ತಿನ್ನುತ್ತವೆ. ನಂತರ ಮರಿಗಳು ಬೆಳೆದು ರೆಕ್ಕೆ ಬೆಳೆದಂತೆ ಸುತ್ತಲಿನ ತಾಕು ನಾಶಪಡಿಸುತ್ತಿವೆ. ವಜ್ರಾಕಾರದ ಕಂದು ಬಣ್ಣದ ಚುಕ್ಕೆಗಳು ನಿರ್ಮಾಣವಾಗಿ ಎಲೆಗಳು ಒಣಗುತ್ತಿವೆ. ಎಲೆಯ ಕವಚದ ಮೇಲೆ ಕಂದು ಅಂಚುಳ್ಳ ಹುಲ್ಲಿನ ಬಣ್ಣದ ಮಚ್ಚೆಗಳು ಕಾಣಿಸಿಕೊಳ್ಳುತ್ತಿವೆ. ಎಲೆಸುರುಳಿ ಕೊಳವೆ ಹುಳು ಬೆಂಕಿ ರೋಗಗಳನ್ನು ಪ್ರಾರಂಭದ ಹಂತದಲ್ಲಿ ಪತ್ತೆಮಾಡಿ ತಜ್ಞರ ಸಲಹೆ ಪಡೆದು ಅವುಗಳನ್ನು ನಾಶ ಪಡಿಸಲು ಸಾಧ್ಯವಿದೆ. ಭತ್ತದ ಗದ್ದೆ ಅಲ್ಲದೆ ಅಂಚಿನಲ್ಲಿರುವ ಕಳೆಯನ್ನು ಕೀಟಗಳು ತಿನ್ನುತ್ತಿವೆ. ಔಷಧ ಸಿಂಪಡಿಸಿ ಬೆಳೆ ಉಳಿಸಿಕೊಳ್ಳಬಹುದು. ಕಾಡುಪ್ರಾಣಿ ನಿಯಂತ್ರಿಸಲು ಮಾತ್ರ ಸಾಧ್ಯವಾಗುತ್ತಿಲ್ಲ ಎಂದು ಭತ್ತ ಬೆಳೆಗಾರ ಸೌಳಿ ನಾಗರಾಜ್‌ ಹೇಳುತ್ತಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.