ADVERTISEMENT

ಶಿಕಾರಿಪುರ: ಭರದಿಂದ ಸಾಗಿದ ಭತ್ತದ ಕಟಾವು

ಗದ್ದೆಗಳಲ್ಲಿ ಜೋರಾಗಿದೆ ಯಂತ್ರಗಳ ಸದ್ದು; ಉತ್ತಮ ಇಳುವರಿ ನಿರೀಕ್ಷೆಯಲ್ಲಿರುವ ರೈತರು

​ಪ್ರಜಾವಾಣಿ ವಾರ್ತೆ
Published 2 ಡಿಸೆಂಬರ್ 2025, 6:37 IST
Last Updated 2 ಡಿಸೆಂಬರ್ 2025, 6:37 IST
   

ಶಿಕಾರಿಪುರ: ಮುಂಗಾರು ಹಂಗಾಮಿನ ಭತ್ತದ ಕಟಾವು ಆರಂಭವಾಗಿದ್ದು, ತಾಲ್ಲೂಕಿನಲ್ಲಿರುವ ಭತ್ತದ ಗದ್ದೆಗಳಲ್ಲಿ ಯಂತ್ರಗಳ ಸದ್ದು ಜೋರಾಗಿದೆ. ಉತ್ತಮ ಇಳುವರಿ ನಿರೀಕ್ಷೆಯಲ್ಲಿರುವ ರೈತರ ಮುಖದಲ್ಲಿ ಮಂದಹಾಸ ಮೂಡಿದೆ.

ತಾಲ್ಲೂಕಿನ ಅಂಜನಾಪುರ, ಕಸಬಾ ಹೋಬಳಿಯ ಪ್ರದೇಶಕ್ಕೆ ಅಂಜನಾಪುರ, ಅಂಬ್ಲಿಗೊಳ್ಳ ಜಲಾಶಯದ ನೀರು ಹರಿಯುವ ಕಾರಣಕ್ಕೆ ಈ ಭಾಗದಲ್ಲಿ ಹೆಚ್ಚಿನ ಧಿಕ ಪ್ರಮಾಣದಲ್ಲಿ ಭತ್ತ ಬೆಳೆಯಲಾಗಿದೆ. ಉಡುಗಣಿ, ತಾಳಗುಂದ ಹೋಬಳಿ ವ್ಯಾಪ್ತಿಯಲ್ಲಿ ಕೆರೆ, ಕೊಳವೆಬಾವಿ ನೀರು ಬಳಸಿ ಭತ್ತ ಬೆಳೆಯಲಾಗಿದೆ.

ಹೊಸೂರು ಹೋಬಳಿಯೂ ಸೇರಿದಂತೆ ತಾಲ್ಲೂಕಿನಲ್ಲಿ ಒಟ್ಟು 10,000 ಹೆಕ್ಟೇರ್ ಪ್ರದೇಶದಲ್ಲಿ ಭತ್ತ ಬೆಳೆಯಲಾಗಿದ್ದು, 4 ಲಕ್ಷ ಕ್ವಿಂಟಲ್ ಭತ್ತ ಇಳುವರಿ ನಿರೀಕ್ಷಿಸಲಾಗಿದೆ. ಈ ಬಾರಿಯ ಮುಂಗಾರು ಹಂಗಾಮಿನಲ್ಲಿ ಸುರಿದ ಉತ್ತಮ ಮಳೆ ಭತ್ತದ ಬೆಳೆಗೆ ಪೂರಕವಾಗಿತ್ತು. ರೋಗ ಬಾಧೆಯೂ ಕಡಿಮೆ ಇರುವ ಕಾರಣಕ್ಕೆ ಉತ್ತಮ ಇಳುವರಿಯ ನಿರೀಕ್ಷೆಯಲ್ಲಿ ರೈತರಿದ್ದಾರೆ.

ADVERTISEMENT

ಭತ್ತದ ಡಿಸೆಂಬರ್ ಅಂತ್ಯದವರೆಗೂ ನಡೆಯುವ ನಿರೀಕ್ಷೆ ಇದೆ. ಗ್ರಾಮೀಣ ರಸ್ತೆಗಳ ಅಂಚಿನಲ್ಲಿ ಭತ್ತದ ರಾಶಿ ಹಾಕಿರುವ ಚಿತ್ರಣ ಎಲ್ಲೆಡೆ ಕಂಡು ಬರುತ್ತಿದ್ದು, ರೈತರ ಮುಖದಲ್ಲಿ ಸುಗ್ಗಿ ಸಂಭ್ರಮ ಮನೆ ಮೂಡಿದೆ.

ಭತ್ತ ಕೊಯ್ಲು ಯಂತ್ರಗಳು ಪಕ್ಕದ ತಮಿಳುನಾಡಿನಿಂದ ಬರುತ್ತವೆ. ಅಂದಾಜು 50ರಿಂದ 60 ಯಂತ್ರಗಳು ಈಗಾಗಲೇ ಬಂದಿವೆ. ಯಂತ್ರದ ಬಾಡಿಗೆ ಹೆಚ್ಚಿಸಿ ರೈತರ ಶೋಷಣೆ ಮಾಡುವುದು ಬೇಡ ಎನ್ನುವ ಕಾರಣಕ್ಕೆ ಯಂತ್ರದ ಮಾಲೀಕರು, ಏಜೆಂಟರು, ರೈತರನ್ನೊಳಗೊಂಡ ಸಭೆಯನ್ನು ತಹಶೀಲ್ದಾರ್ ನೇತೃತ್ವದಲ್ಲಿ ಕೃಷಿ ಇಲಾಖೆ ನಡೆಸಿದೆ.

ಸಭೆಯಲ್ಲಿ ಟೈರ್ ಯಂತ್ರಕ್ಕೆ ಗಂಟೆಗೆ ₹ 2,000, ಚೈನ್ ಯಂತ್ರಕ್ಕೆ ₹ 2,700, ಭತ್ತ ಪೆಂಡಿ ಕಟ್ಟುವುದಕ್ಕೆ ₹ 35 (ಒಂದು ಪೆಂಡಿಗೆ) ನಿಗದಿ ಮಾಡಲಾಗಿದೆ. ಯಂತ್ರಗಳು ಅವಘಡಕ್ಕೆ ಒಳಗಾದರೆ ರೈತರಿಗೆ ತೊಂದರೆ ಆಗದಿರಲಿ ಎನ್ನುವ ಕಾರಣಕ್ಕೆ ಎಲ್ಲ ಯಂತ್ರಗಳಿಗೂ ಆರ್‌ಸಿ, ವಿಮೆ ಕಡ್ಡಾಯ ಮಾಡಿಸಿರಬೇಕು, ಯಂತ್ರದ ಮಾಲೀಕರು ತೊಂದರೆಗೆ ಒಳಗಾಗದಂತೆ, ರೈತರು ಶೋಷಣೆಗೆ ಒಳಗಾಗದಂತೆ ಎಚ್ಚರಿಕೆ ವಹಿಸುವಂತೆ ಪೊಲೀಸ್ ಇಲಾಖೆಗೆ ಸೂಚನೆ ನೀಡಲಾಗಿದೆ ಎಂದು ಸಹಾಯಕ ಕೃಷಿ ನಿರ್ದೇಶಕ ಕಿರಣ್‌ಕುಮಾರ್ ಹರ್ತಿ ಹೇಳಿದ್ದಾರೆ. 

ಸರ್ಕಾರ ಭತ್ತಕ್ಕೆ ₹ 2,289 ಬೆಂಬಲಬೆಲೆ ಘೋಷಿಸಿದೆ. ಆದರೆ, ಮುಕ್ತ ಮಾರುಕಟ್ಟೆಯಲ್ಲೇ ₹ 2,500 ರಿಂದ ₹ 2,700 ದರ ಇದ್ದು, ರೈತರ ಮನೆ ಬಾಗಿಲಿಗೆ ಹೋಗಿ ವ್ಯಾಪಾರಸ್ಥರು ಖರೀದಿ ಮಾಡುತ್ತಿದ್ದಾರೆ. ಕೊಯ್ಲು ಪ್ರಮಾಣ ಹೆಚ್ಚಾದಂತೆ ದರ ಇಳಿಕೆ ಆಗುವ ನಿರೀಕ್ಷೆ ಇದೆ.

‘ಬೆಂಬಲಬೆಲೆ ಯೋಜನೆಯಡಿ ನೋಂದಣಿಗೆ ಸೆ. 15ಕ್ಕೆ ಕೊನೆಯ ದಿನವಾಗಿತ್ತು. ಅದನ್ನು ಡಿಸೆಂಬರ್ ಅಂತ್ಯದವರೆಗೆ ವಿಸ್ತರಿಸಿ ಆದೇಶ ಹೊರಡಿಸಲಾಗಿದೆ. ತಾಲ್ಲೂಕಿನಲ್ಲಿ ಕರ್ನಾಟಕ ಆಹಾರ ಮತ್ತು ಸರಬರಾಜು ನಿಗಮ ಖರೀದಿ ಕೇಂದ್ರ ತೆರೆದಿದೆ. ಆದರೆ, ಅಲ್ಲಿನ ನಿಯಮ ಬಿಗಿಯಾಗಿದ್ದು ಖರೀದಿ ಕೇಂದ್ರಕ್ಕೆ ರೈತರು ಹೋಗುವುದು ಅನುಮಾನ’ ಎಂದು ರೈತ ಸಂಘದ ಅಧ್ಯಕ್ಷ ಕಪ್ಪನಹಳ್ಳಿ ರವಿ ಹೇಳುತ್ತಾರೆ.

ರೈತರ ಮೇಲಿನ ಶೋಷಣೆ ತಪ್ಪಿಸಲು ಭತ್ತ ಕೊಯ್ಲು ಯಂತ್ರಕ್ಕೆ ದರ ನಿಗದಿ ಮಾಡಲಾಗಿದೆ. ಯಾವುದೇ ಸಮಸ್ಯೆ ಎದುರಾದರೂ, ರೈತರು ಕೃಷಿ ಇಲಾಖೆ ಅಧಿಕಾರಿಗಳನ್ನು ಸಂಪರ್ಕಿಸಿದರೆ ಪರಿಹಾರ ಕಲ್ಪಿಸಲಾಗುವುದು
ಮಂಜುಳಾ ಭಜಂತ್ರಿ, ತಹಶೀಲ್ದಾರ್, ಶಿಕಾರಿಪುರ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.