ADVERTISEMENT

ಘನತ್ಯಾಜ್ಯ ನಿರ್ವಹಣೆ; ಆಮೂಲಾಗ್ರ ಬದಲಾವಣೆಗೆ ತಾಕೀತು

ನಗರದ ಅಭಿವೃದ್ಧಿ ಕುರಿತ ಸಭೆಯಲ್ಲಿ ಜಿಲ್ಲಾಧಿಕಾರಿ ಶಿವಕುಮಾರ್

​ಪ್ರಜಾವಾಣಿ ವಾರ್ತೆ
Published 18 ಅಕ್ಟೋಬರ್ 2019, 14:23 IST
Last Updated 18 ಅಕ್ಟೋಬರ್ 2019, 14:23 IST
ಶಿವಮೊಗ್ಗ ಪಾಲಿಕೆ ಸಭಾಂಗಣದಲ್ಲಿ ಶುಕ್ರವಾರ ನಡೆದ ಅಧಿಕಾರಿಗಳ ಸಭೆಯಲ್ಲಿ ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ್ ಮಾತನಾಡಿದರು.
ಶಿವಮೊಗ್ಗ ಪಾಲಿಕೆ ಸಭಾಂಗಣದಲ್ಲಿ ಶುಕ್ರವಾರ ನಡೆದ ಅಧಿಕಾರಿಗಳ ಸಭೆಯಲ್ಲಿ ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ್ ಮಾತನಾಡಿದರು.   

ಶಿವಮೊಗ್ಗ: ನಗರ ಪಾಲಿಕೆ ವ್ಯಾಪ್ತಿಯಲ್ಲಿ ಕಸ ವಿಲೇವಾರಿ ಪ್ರಕ್ರಿಯೆ ಸಮರ್ಪಕವಾಗಿ ನಡೆಯುತ್ತಿಲ್ಲ. ಸ್ವಚ್ಛತೆ ನಿರ್ವಾಹಣೆ ವಿಚಾರದಲ್ಲಿ ಆಮೂಲಾಗ್ರ ಬದಲಾವಣೆಯಾಗಬೇಕು ಎಂದು ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ್ ಅಧಿಕಾರಿಗಳಿಗೆ ಸೂಚಿಸಿದರು.

ಪಾಲಿಕೆ ಸಭಾಂಗಣದಲ್ಲಿ ಶುಕ್ರವಾರ ನಡೆದ ಪಾಲಿಕೆ ಅಧಿಕಾರಿಗಳ ಸಭೆಯಲ್ಲಿ ಅವರು ಮಾತನಾಡಿದರು.

ಮನೆಗಳಲ್ಲಿಯೇ ಒಣಕಸ, ಹಸಿಕಸ ವಿಂಗಡಣೆ ಮಾಡಲು ಜಾಗೃತಿ ಮೂಡಿಸಬೇಕು. ಪಾಲಿಕೆ ವ್ಯಾಪ್ತಿಯ ಎಲ್ಲೂ ಕಸ ವಿಂಗಡಣೆ ಮಾಡುತ್ತಿಲ್ಲ. ಪ್ರಥಮ ಹಂತದಲ್ಲಿ ಕನಿಷ್ಠ 10ವಾರ್ಡ್‌ಗಳಲ್ಲಿ ಮೂಲದಲ್ಲಿ ಕಸ ವಿಂಗಡಣೆ ಕಾರ್ಯ ಕೈಗೊಳ್ಳಬೇಕು. ಎರಡು ತಿಂಗಳಲ್ಲಿ ಎಲ್ಲಾ ವಾರ್ಡ್‌ಗಳಿಗೂ ವಿಸ್ತರಿಸಬೇಕು ಎಂದರು.

ADVERTISEMENT

ವ್ಯಾಪಾರಿಗಳು, ರಸ್ತೆಬದಿ ವ್ಯಾಪಾರಿಗಳು ಕಸವನ್ನು ರಸ್ತೆಗೆ ಸುರಿಯುತ್ತಿದ್ದಾರೆ. ಅಂತಹ ವ್ಯಾಪಾರಿಗಳಿಗೆ ಸೂಕ್ತ ಎಚ್ಚರಿಕೆ ನೀಡಬೇಕು. ದಂಡ ವಿಧಿಸಬೇಕು. ಚೆನ್ನಾಗಿ ಕೆಲಸ ನಿರ್ವಹಿಸುವ ಪೌರಕಾರ್ಮಿಕರಿಗೆ ಉತ್ತೇಜನ ಬಹುಮಾನ ನೀಡಬೇಕು. ಕೆಲಸ ಮಾಡದವರ ವಿರುದ್ಧ ಶಿಸ್ತುಕ್ರಮ ಜರುಗಿಸಬೇಕು. ಪೌರಕಾರ್ಮಿಕರ ಜತೆ ಆರೋಗ್ಯ ನಿರೀಕ್ಷಕರು ಕಡ್ಡಾಯವಾಗಿ ತಿರುಗಾಟ ನಡೆಸಬೇಕು ಎಂದು ತಾಕೀತು ಮಾಡಿದರು.

ಪಾಲಿಕೆಯಲ್ಲಿ ಪೌರಕಾರ್ಮಿಕರ ಹಲವು ಹುದ್ದೆಗಳು ಖಾಲಿ ಇವೆ. 9 ಲಾರಿ, 20 ಟಿಪ್ಪರ್‌ಗಳಿವೆ. ಇನ್ನೂ 51 ಟಿಪ್ಪರ್‌ಗಳ ಅಗತ್ಯವಿದೆ ಎಂದು ಮಹಾನಗರ ಪಾಲಿಕೆ ಆಯುಕ್ತ ಚಿದಾನಂದ ವಟಾರೆ ತಿಳಿಸಿದರು.

ಉದ್ಯಾನಗಳ ಅಭಿವೃದ್ಧಿ: ಪಾಲಿಕೆ ವ್ಯಾಪ್ತಿಯಲ್ಲಿರುವ ಅಧಿಸೂಚಿತ ಎಲ್ಲಾ ಉದ್ಯಾನಗಳಿಗೆ ಗಡಿಯನ್ನು ಗುರುತಿಸಬೇಕು. ಆವರಣ ನಿರ್ಮಿಸಬೇಕು. ಒತ್ತುವರಿಯಾಗದಂತೆ ಕ್ರಮ ಕೈಗೊಳ್ಳಬೇಕು. ಈಗಾಗಲೇ ಒತ್ತುವರಿಯಾಗಿರುವ ಉದ್ಯಾನಗಳನ್ನು ಗುರುತಿಸಲು ಸರ್ವೆ ನಡೆಸಬೇಕು. ನಗರದ ಗಾಂಧೀ ಪಾರ್ಕ್ ಅಭಿವೃದ್ಧಿಗೆ ಕೈಗೊಳ್ಳಬೇಕಾದ ಕಾಮಗಾರಿಗಳ ಅಂದಾಜುಪಟ್ಟಿ ಸೋಮವಾರದ ಒಳಗೆ ಸಲ್ಲಿಸಬೇಕು ಎಂದು ಸೂಚಿಸಿದರು.

ಪಾಲಿಕೆ ವ್ಯಾಪ್ತಿಯಲ್ಲಿ 399 ಉದ್ಯಾನಗಳು, 38 ಕೆರೆಗಳಿವೆ. 28 ಕೆರೆಗಳು ಒತ್ತುವರಿಯಾಗಿವೆ. 35 ಜಿಲ್ಲಾ ಪಂಚಾಯತ್ ಹಾಗೂ 2 ಸಣ್ಣ ನೀರಾವರಿ ಇಲಾಖೆ ಅಧೀನದಲ್ಲಿವೆ ಎಂದು ಆಯುಕ್ತರು ಮಾಹಿತಿ ನೀಡಿದರು.

ಮೇಯರ್ ಲತಾ ಗಣೇಶ್, ಉಪ ಮೇಯರ್ ಎಸ್‌.ಎನ್‌.ಚನ್ನಬಸಪ್ಪ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.