
ಶಿವಮೊಗ್ಗ: ನಗರದ ಜೆ.ಎನ್.ಎನ್ ಎಂಜಿನಿಯರಿಂಗ್ ಕಾಲೇಜಿನ ವಿದ್ಯಾರ್ಥಿನಿ ಪಾರ್ವತಿ ಸಾಲೇರ ಅವರು ಬೆಳಗಾವಿಯ ವಿಶ್ವೇಶ್ವರಾಯ ತಾಂತ್ರಿಕ ವಿಶ್ವವಿದ್ಯಾಲಯದ (ವಿಟಿಯು) ವ್ಯಾಪ್ತಿಯ ಎಂಬಿಎ ವಿಭಾಗದಲ್ಲಿ ರಾಜ್ಯಕ್ಕೆ ಪ್ರಥಮ ರ‍್ಯಾಂಕ್ ಪಡೆದು ನಾಲ್ಕು ಚಿನ್ನದ ಪದಕಗಳ ಪಡೆದಿದ್ದಾರೆ. ವಿದ್ಯಾರ್ಥಿ ಎಂ.ವಿ.ಸಂಜಯ್ ಎಂಟೆಕ್ ಕಂಪ್ಯೂಟರ್ ಸೈನ್ಸ್ ವಿಭಾಗದಲ್ಲಿ ರಾಜ್ಯಕ್ಕೆ ಎಂಟನೇ ರ‍್ಯಾಂಕ್ ಗಳಿಸಿದ್ದಾರೆ ಎಂದು ರಾಷ್ಟ್ರೀಯ ಶಿಕ್ಷಣ ಸಮಿತಿ (ಎನ್ಇಎಸ್) ಅಧ್ಯಕ್ಷ ಜಿ.ಎಸ್. ನಾರಾಯಣರಾವ್ ಹೇಳಿದರು.
ವಿಟಿಯು ವತಿಯಿಂದ ಬೆಳಗಾವಿಯಲ್ಲಿ ಆಯೋಜಿಸಿದ್ದ 25ನೇ ಘಟಿಕೋತ್ಸವದಲ್ಲಿ ರಾಜ್ಯಪಾಲರು ವಿದ್ಯಾರ್ಥಿಗಳಿಗೆ ಪದವಿ ಪ್ರಮಾಣ ಪತ್ರ ಮತ್ತು ಬಂಗಾರದ ಪದಕ ನೀಡಿದ್ದಾರೆ ಎಂದು ನಗರದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಎನ್ಇಎಸ್ ಚಿನ್ನದ ಪದಕದ ಗರಿ: ಪಾರ್ವತಿ ಸಾಲೇರ ಅವರಿಗೆ ಸಂಸ್ಥೆಯ ಅಮೃತ ಮಹೋತ್ಸವದ ಸ್ಮರಣಾರ್ಥ ಚಿನ್ನದ ಪದಕ ನೀಡಲಾಗುವುದು. ಫೆಬ್ರುವರಿ ಕೊನೆಯ ವಾರದಲ್ಲಿ ನಡೆಯುವ ಐಡಿಯಾ ಲ್ಯಾಬ್ ಉದ್ಘಾಟನಾ ಸಮಾರಂಭದಲ್ಲಿ ರ‍್ಯಾಂಕ್ ವಿಜೇತರನ್ನು ಆಡಳಿತ ಮಂಡಳಿಯಿಂದ ಅಭಿನಂದಿಸಲಾಗುವುದು ಎಂದು ತಿಳಿಸಿದರು.
ಎನ್ಇಎಸ್ ಕಾರ್ಯದರ್ಶಿ ಎಸ್.ಎನ್. ನಾಗರಾಜ ಮಾತನಾಡಿ, ‘ಕಾಲೇಜಿನಲ್ಲಿ ನಾವೀನ್ಯತೆ ಹಾಗೂ ಸಂಶೋಧನಾ ಚಟುವಟಿಕೆಗಳಿಗೆ ಹೆಚ್ಚಿನ ಒತ್ತು ನೀಡಲಾಗುತ್ತಿದೆ. ಟಿಸಿಎಸ್, ಐಬಿಎಂ ನಂತಹ ಕಂಪನಿಗಳು ಉದ್ಯೋಗವಕಾಶ ನೀಡುವಂತಹ ಚಟುವಟಿಕೆ ನಿರಂತರವಾಗಿ ಮಾಡುತ್ತಿವೆ. ದೈನಂದಿನ ತರಗತಿ ಜೊತೆಯಲ್ಲಿ ಪ್ರಾಯೋಗಿಕ ಆಧಾರಿತ ಕಲಿಕೆಗೆ ಹೆಚ್ಚು ಒತ್ತು ನೀಡುತ್ತಿದ್ದೇವೆ’ ಎಂದು ವಿವರಿಸಿದರು.
ಕಾಲೇಜಿನ ಪ್ರಾಂಶುಪಾಲ ವೈ.ವಿಜಯಕುಮಾರ್ ಮಾತನಾಡಿ, ‘ನ್ಯೂಜೆನ್ ಐಇಡಿಸಿ ಮೂಲಕ ವಿದ್ಯಾರ್ಥಿಗಳ ನಾವೀನ್ಯಯುತ ಯೋಚನೆಗಳನ್ನು, ಯೋಜನೆಯಾಗಿ ರೂಪಿಸಿ ಸ್ವಂತ ಕಂಪನಿಗಳನ್ನು ಸ್ಥಾಪಿಸುವಂತೆ ಪ್ರೇರಣೆ ನೀಡಲಾಗುತ್ತಿದೆ’ ಎಂದು ಹೇಳಿದರು.
ಎನ್ಇಎಸ್ ಸಹ ಕಾರ್ಯದರ್ಶಿ ಡಾ.ಪಿ.ನಾರಾಯಣ್, ಸಂಶೋಧನಾ ಡೀನ್ ಎಸ್.ವಿ.ಸತ್ಯನಾರಾಯಣ, ಎಂಬಿಎ ವಿಭಾಗದ ಮುಖ್ಯಸ್ಥ ಶ್ರೀಕಾಂತ್, ಕಂಪ್ಯೂಟರ್ ಸೈನ್ಸ್ ಎಂಜಿನಿಯರಿಂಗ್ ವಿಭಾಗದ ಮುಖ್ಯಸ್ಥ ಜಲೇಶ್ ಕುಮಾರ್, ಪಾರ್ವತಿ ಸಾಲೇರ, ಪೋಷಕರಾದ ಜ್ಯೋತಿ ಸಾಲೇರ, ಐಶ್ವರ್ಯ ಸಾಲೇರ, ಸಾರ್ವಜನಿಕ ಸಂಪರ್ಕಾಧಿಕಾರಿ ಸಿ.ಎಂ.ನೃಪತುಂಗ, ಸುಭದ್ರ, ಸಂತೋಷ್ ಶಾನಭಾಗ್ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.