ADVERTISEMENT

ದೇವಸ್ಥಾನಕ್ಕೆ ತೆರಳಿದ್ದ ಪರಿಶಿಷ್ಟ ವರ್ಗದ ಬಾಲಕನ ಕುಟುಂಬಕ್ಕೆ ದಂಡ: ಪ್ರತಿಭಟನೆ

ಹನುಮಸಾಗರದಲ್ಲಿ ನಡೆದ ಘಟನೆ ಖಂಡಿಸಿದ ದಸಂಸ

​ಪ್ರಜಾವಾಣಿ ವಾರ್ತೆ
Published 24 ಸೆಪ್ಟೆಂಬರ್ 2021, 6:45 IST
Last Updated 24 ಸೆಪ್ಟೆಂಬರ್ 2021, 6:45 IST
ಸಾಗರದಲ್ಲಿ ದಲಿತ ಸಂಘರ್ಷ ಸಮಿತಿ (ಪ್ರೊ.ಬಿ.ಕೃಷ್ಣಪ್ಪ ಬಣ) ಕಾರ್ಯಕರ್ತರು ಗುರುವಾರ ಪ್ರತಿಭಟನೆ ನಡೆಸಿದರು.
ಸಾಗರದಲ್ಲಿ ದಲಿತ ಸಂಘರ್ಷ ಸಮಿತಿ (ಪ್ರೊ.ಬಿ.ಕೃಷ್ಣಪ್ಪ ಬಣ) ಕಾರ್ಯಕರ್ತರು ಗುರುವಾರ ಪ್ರತಿಭಟನೆ ನಡೆಸಿದರು.   

ಸಾಗರ: ಇಲ್ಲಿನ ದಲಿತ ಸಂಘರ್ಷ ಸಮಿತಿ (ಪ್ರೊ.ಬಿ. ಕೃಷ್ಣಪ್ಪ ಬಣ) ಕಾರ್ಯಕರ್ತರು ಕೊಪ್ಪಳ ಜಿಲ್ಲೆಯ ಹನುಮಸಾಗರ ತಾಲ್ಲೂಕಿನ ಮಿಯಾಪುರ ಗ್ರಾಮದಲ್ಲಿ ದೇವಸ್ಥಾನಕ್ಕೆ ತೆರಳಿದ್ದ ಪರಿಶಿಷ್ಟ ವರ್ಗದ ಬಾಲಕನ ಕುಟುಂಬಕ್ಕೆ ದಂಡ ವಿಧಿಸಿರುವುದನ್ನು ಖಂಡಿಸಿ ಗುರುವಾರ ಪ್ರತಿಭಟನೆ ನಡೆಸಿದರು.

ಬಾಲಕ ದೇವಸ್ಥಾನ ಪ್ರವೇಶಿಸಿದ ಕಾರಣಕ್ಕೆ ದೇವಸ್ಥಾನವನ್ನು ಶುದ್ಧೀಕರಿಸುವ ಕಾರ್ಯಕ್ಕೆ ತಗಲುವ ವೆಚ್ಚವನ್ನು ಅವನ ಕುಟುಂಬದವರು ಭರಿಸಬೇಕು ಎಂದು ತಾಕೀತು ಮಾಡಿರುವುದು ಅಮಾನವೀಯ ಎಂದು ಪ್ರತಿಭಟನಕಾರರು ಖಂಡಿಸಿದರು.

ದಸಂಸ ತಾಲ್ಲೂಕು ಸಂಚಾಲಕ ಎಸ್. ಲಕ್ಷ್ಮಣ್ ಸಾಗರ್, ‘ದಲಿತ ಸಮುದಾಯದ ಬಾಲಕ ದೇವಸ್ಥಾನ ಪ್ರವೇಶಿಸಿದ್ದಕ್ಕೆ ದಂಡ ಹಾಕಿರುವ ಘಟನೆಯಿಂದ ನಾಗರಿಕ ಸಮಾಜದ ತಲೆ ತಗ್ಗಿಸುವಂತಾಗಿದೆ. ಈ ಕಾಲದಲ್ಲೂ ಅಸ್ಪೃಶ್ಯತೆಯ ಮನೋಭಾವ ನಮ್ಮ ಸಮಾಜದಲ್ಲಿ ಯಾವ ರೀತಿ ಬೇರೂರಿದೆ ಎನ್ನುವುದಕ್ಕೆ ಇದು ಸಾಕ್ಷಿ’ ಎಂದರು.

ADVERTISEMENT

ಮುಖಂಡ ರಾಜೇಂದ್ರ ಬಂದಗದ್ದೆ, ‘ದಲಿತರು ದೇವಸ್ಥಾನ ಪ್ರವೇಶಿಸುವುದು ಅಪರಾಧಕ್ಕೆ ಸಮ ಎಂದು ಭಾವಿಸುವ ಮನೋಭಾವ ಅಪಾಯಕಾರಿಯಾದದ್ದು. ದಲಿತ ಕುಟುಂಬಕ್ಕೆ ದಂಡ ವಿಧಿಸಿದ ವ್ಯಕ್ತಿಗಳನ್ನು ಕೂಡಲೇ ಬಂಧಿಸಿ ಕಾನೂನು ಕ್ರಮ ಕೈಗೊಳ್ಳಬೇಕು’ ಎಂದು ಒತ್ತಾಯಿಸಿದರು.

ಪ್ರಮುಖರಾದ ಸತ್ಯನಾರಾಯಣ, ಸುರೇಶ್ ಮಂಡ್ಯ, ರವಿ ಜಂಬಗಾರು, ಎ.ಎ. ಶೇಖ್, ಉಮೇಶ್ ಗೌತಮಪುರ, ಮಂಜಪ್ಪ, ನಾಗರಾಜ ಬಂದಗದ್ದೆ, ಚಂದ್ರಪ್ಪ, ರಾಘವೇಂದ್ರ ಆವಿನಹಳ್ಳಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.