ADVERTISEMENT

ರಾಜಕೀಯ ಪಕ್ಷಗಳು ಕಾರ್ಪೊರೇಟ್ ಕಂಪನಿಗಳ ಅಡಿಯಾಳು: ಕೋಡಿಹಳ್ಳಿ ಚಂದ್ರಶೇಖರ್

ರೈತ ಸಂಘದ ರಾಜ್ಯ ಘಟಕ ಅಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ಆರೋಪ

​ಪ್ರಜಾವಾಣಿ ವಾರ್ತೆ
Published 2 ಮಾರ್ಚ್ 2025, 16:15 IST
Last Updated 2 ಮಾರ್ಚ್ 2025, 16:15 IST
ಶಿವಮೊಗ್ಗದ ಅಂಬೇಡ್ಕರ್ ಭವನದಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮವನ್ನು ರೈತ ಸಂಘದ ರಾಜ್ಯ ಘಟಕದ ಅಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ಉದ್ಘಾಟಿಸಿದರು
ಶಿವಮೊಗ್ಗದ ಅಂಬೇಡ್ಕರ್ ಭವನದಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮವನ್ನು ರೈತ ಸಂಘದ ರಾಜ್ಯ ಘಟಕದ ಅಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ಉದ್ಘಾಟಿಸಿದರು    

ಶಿವಮೊಗ್ಗ: ಆಡಳಿತ ಹಾಗೂ ವಿರೋಧ ಪಕ್ಷಗಳು ಹೊಂದಾಣಿಕೆ ರಾಜಕಾರಣ ಮಾಡುತ್ತಿವೆ. ಇಲ್ಲಿ ಹಣ, ಹೆಂಡ, ಜಾತಿ–ಧರ್ಮಗಳನ್ನು ಮುಂದಿಟ್ಟುಕೊಂಡು ಅಧಿಕಾರ ಹಿಡಿಯಲು ಅಜೆಂಡಾ ಸಿದ್ಧಪಡಿಸುತ್ತಿವೆ ಎಂದು ರೈತ ಸಂಘದ ರಾಜ್ಯ ಘಟಕದ ಅಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ಆರೋಪಿಸಿದರು. 

ರಾಷ್ಟ್ರೀಯ ಪಕ್ಷಗಳು ಭ್ರಷ್ಟಾಚಾರದ ದಂಧೆಯಲ್ಲಿ ಮುಳುಗಿವೆ. ಕಾರ್ಪೊರೇಟ್ ಕಂಪನಿಗಳ ಅಡಿಯಾಳಾಗಿ ವರ್ತಿಸುತ್ತಿವೆ. ಇಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್ ಪಕ್ಷದ ಅಜೆಂಡಾ ಏನೆಂಬುದೇ ತಿಳಿಯುತ್ತಿಲ್ಲ ಎಂದು ಇಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ದೇಶದಲ್ಲಿ ಕಾಂಗ್ರೆಸ್‌ಗೆ 150 ವರ್ಷಗಳ ಇತಿಹಾಸ ಇದೆ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳುತ್ತಾರೆ. 1977ರಲ್ಲಿ ರೈತ ಚಳುವಳಿಯಲ್ಲಿ ಪಾಲ್ಗೊಂಡು ಕಾಂಗ್ರೆಸ್ ವಿರುದ್ಧ ದಿಕ್ಕಾರ ಕೂಗಿದ್ದ ಸಿದ್ದರಾಮಯ್ಯ ಅವರು, ಇಂದು ರಾಜ್ಯದ ಮುಖ್ಯಮಂತ್ರಿಯಾಗಿದ್ದಾರೆ. ಇದು ಅಧಿಕಾರ ಹಿಡಿಯಲು ಹೂಡಿದ ಪಿತೂರಿಯಾಗಿದೆ. 2028ರ ವೇಳೆಗೆ ಜನರಿಗೆ ಧ್ವನಿಯಾಗುವ ಪ್ರದೇಶಿಕ ಪಕ್ಷ ಸ್ಥಾಪಿಸಲಾಗುವುದು ಎಂದರು.

ADVERTISEMENT

ಜೆಡಿಎಸ್ ನಾಯಕ ದೇವೇಗೌಡ ಅವರು ದೇಶದ ಪ್ರಧಾನಿಯಾಗಿದ್ದರೂ ರಾಜ್ಯಕ್ಕೆ ಪೂರಕವಾದ ಯಾವುದೇ ಯೋಜನೆ ಜಾರಿಗೊಳಿಸಲಿಲ್ಲ. ಇದೀಗ ಮುಪ್ಪಿನಲ್ಲೂ ತಮ್ಮ ಮಕ್ಕಳು, ಮೊಮ್ಮಕ್ಕಳಿಗೆ ಅಧಿಕಾರ ಕೊಡಿಸುವ ಬಗ್ಗೆ ಚಿಂತನೆ ನಡೆಸುತ್ತಿದ್ದಾರೆ. ಇದು ರಾಜಕೀಯದ ಆರೋಗ್ಯಕರ ಬೆಳವಣಿಕೆ ಅಲ್ಲ. ಹೊಸ ತಲೆಮಾರಿನವರು ರಾಜಕಾರಣ ಪ್ರವೇಶ ಮಾಡುವ ಅಗತ್ಯವಿದೆ ಎಂದರು.

ರಾಜ್ಯದಲ್ಲಿ ಪ್ರಾದೇಶಿಕ ಪಕ್ಷವು ಅಧಿಕಾರಕ್ಕೆ ಬಂದರೆ ಭ್ರಷ್ಟಾಚಾರ ಮುಕ್ತ ಆಡಳಿತ ನಡೆಸಲಾಗುವುದು. ಕೇಂದ್ರದಿಂದ ಸಿಗಬೇಕಾದ ಅನುದಾನ, ರೈತರಿಗೆ ಸಿಗಬೇಕಾದ ಸೌಲಭ್ಯಗಳ ಬಗ್ಗೆ ಹೆಚ್ಚಿನ ಒತ್ತು ನೀಡಲಾಗುವುದು. ಸ್ವಾವಲಂಬಿ ರಾಜ್ಯದ ಕಲ್ಪನೆ ಹೊಂದಲಾಗಿದೆ ಎಂದರು. 

ರಾಜ್ಯದಿಂದ ಅತಿ ಹೆಚ್ಚು ತೆರಿಗೆ ಪಾವತಿಸಲಾಗುತ್ತಿದೆ. ಆದರೂ ಸೌಲಭ್ಯಗಳು ಸಿಗುತ್ತಿಲ್ಲ. ಶಿಕ್ಷಣ, ಆರೋಗ್ಯ ಕ್ಷೇತ್ರದಲ್ಲಿ ಭ್ರಷ್ಟಾಚಾರವೇ ತುಂಬಿದ್ದು, ಇದಕ್ಕೆ ಉತ್ತರ ಕಂಡುಕೊಳ್ಳುವ ನಿಟ್ಟಿನಲ್ಲಿ ಪ್ರಾದೇಶಿಕ ಪಕ್ಷ ಸ್ಥಾಪನೆಗೆ ಅಡಿಗಲ್ಲು ಇಡಲಾಗಿದೆ ಎಂದು ಆಲ್ ಇಂಡಿಯಾ ಬಿಎಸ್‌ಪಿ ರಾಷ್ಟ್ರೀಯ ಸಂಯೋಜಕ ಎಂ.ಗೋಪಿನಾಥ್ ಹೇಳಿದರು. 

ಪ್ರಮುಖರಾದ ಪುಟ್ಟರಾಜ್, ಮಂಜುನಾಥ ಪಾಟೀಲ್, ಉಮೇಶ್ ಪಾಟೀಲ್, ಎಂ.ಮೂರ್ತಿ, ಗುತ್ತ್ಯಪ್ಪ ಗಾಮ, ಲೋಕೇಶ್, ಎ.ಡಿ.ಶಿವಪ್ಪ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.