ADVERTISEMENT

ರಸ್ತೆ ವಿಸ್ತರಣೆಗೆ ಮಲವಗೊಪ್ಪ ನಾಗರಿಕರ ಆಕ್ಷೇಪ

​ಪ್ರಜಾವಾಣಿ ವಾರ್ತೆ
Published 18 ಜುಲೈ 2019, 19:43 IST
Last Updated 18 ಜುಲೈ 2019, 19:43 IST

ಶಿವಮೊಗ್ಗ: ಮಲವಗೊಪ್ಪ ಮೂಲಕ ಹಾದುಹೋಗುವ ರಾಷ್ಟ್ರೀಯ ಹೆದ್ದಾರಿ (206) ವಿಸ್ತರಣೆ ಪ್ರಕ್ರಿಯೆ ಸ್ಥಗಿತಗೊಳಿಸಬೇಕು ಎಂದು ಒತ್ತಾಯಿಸಿ ಸ್ಥಳೀಯ ನಿವಾಸಿಗಳು ಗುರುವಾರ ಪ್ರತಿಭಟನೆ ನಡೆಸಿದರು.

ಈಗಾಗಲೇ ಮಲವಗೊಪ್ಪ ಭಾಗದಲ್ಲಿ ಚತುಷ್ಪಥ ರಸ್ತೆ ಇದೆ. ಈಗ ಮತ್ತೊಮ್ಮೆ ರಸ್ತೆ ವಿಸ್ತರಣಾ ಕಾರ್ಯ ನಡೆಯುವ ಸೂಚನೆ ಸಿಕ್ಕಿದೆ. ಹಿಂದೆ ಚತುಷ್ಪಥ ರಸ್ತೆ ನಿರ್ಮಿಸುವ ಸಮಯದಲ್ಲಿ ಮತ್ತೆ ವಿಸ್ತರಣೆ ಮಾಡುವುದಿಲ್ಲ ಎಂದು ಭರವಸೆ ನೀಡಲಾಗಿತ್ತು. ಆ ಕಾರಣಕ್ಕೆ ಆಕ್ಷೇಪಣೆ ಹಿಂದಕ್ಕೆ ಪಡೆದು ರಸ್ತೆ ಪಕ್ಕದ ಸ್ವತ್ತಿನ ಮಾಲೀಕರು ಮನೆ, ಮಳಿಗೆ ನಿರ್ಮಿಸಿಕೊಂಡು ಜೀವನ ನಡೆಸುತ್ತಿದ್ದಾರೆ. ದೇವಾಲಯದ ಮುಂಭಾಗದಲ್ಲಿ ಪುಷ್ಕರಣಿ ಸುತ್ತ ಕಾಂಪೌಂಡ್ ನಿರ್ಮಾಣ ಮಾಡಲಾಗಿದೆ. ಈಗ ಮತ್ತೆ ವಿಸ್ತರಣೆ ಭೂತ ಕಾಡುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ರಸ್ತೆಯ ಇಕ್ಕೆಲಗಳಲ್ಲಿರುವ ಆಸ್ತಿಯ ಬಹುತೇಕ ಮಾಲೀಕರು ರೈತರು. ಅವರ ಜಮೀನುಗಳು ಮಲವಗೊಪ್ಪ ಭಾಗದಲ್ಲಿ ಇವೆ. ಕೃಷಿ ಚಟುವಟಿಕೆ ನಡೆಸಲು ಅನುಕೂಲವಾಗಿದೆ. ರೈತರ ವಾಸದ ಸ್ಥಳಕ್ಕೆ ಧಕ್ಕೆಯಾದರೆ ಜೀವನಕ್ಕೆ ತೊಂದರೆಯಾಗುತ್ತದೆ ಎಂದು ದೂರಿದರು.

ADVERTISEMENT

ರಸ್ತೆ ಪಕ್ಕದಲ್ಲೇ ಎರಡು ಸರ್ಕಾರಿ ಶಾಲೆಗಳು, ದೇವಾಲಯಗಳು, ಭದ್ರಾ ‘ಕಾಡಾ’ ಕಚೇರಿ ಇದೆ. ನೀರಿನ ಟ್ಯಾಂಕ್ ಇದೆ. ಸಂಸದ ಬಿ.ವೈ. ರಾಘವೇಂದ್ರ, ಶಾಸಕ ಕೆ.ಬಿ. ಅಶೋಕ ನಾಯ್ಕ್ , ಮಾಜಿ ಶಾಸಕರಾದ ಶಾರದಾ ಪೂರ್‍ಯಾನಾಯ್ಕ ಅವರು ರಸ್ತೆ ವಿಸ್ತರಣೆ ನಡೆಸದಂತೆ ಯೋಜನಾ ನಿರ್ದೇಶಕರಿಗೆ ಸೂಚನೆ ನೀಡಿದ್ದರೂ, ಪ್ರಕ್ರಿಯೆಗೆ ಚಾಲನೆ ನೀಡಲಾಗಿದೆ.ಸ್ಥಳೀಯ ನಿವಾಸಿಗಳಿಗೆ ತೊಂದರೆಯಾಗದಂತೆ ಹೊರವಲಯ ರಸ್ತೆ ನಿರ್ಮಿಸಬೇಕು ಎಂದು ಆಗ್ರಹಿಸಿದರು.

ಸ್ಥಳೀಯ ಮುಖಂಡರಾದ ಯು.ಜಿ. ನಾಗರಾಜ್, ಮಂಜಪ್ಪ, ಸುರೇಶ್ ನಾಯ್ಕ, ಓಂಕಾರಪ್ಪ, ಗಣೇಶ ನಾಯ್ಕ್, ವಾಸು, ಸೋನಾಬಾಯಿ ಪ್ರತಿಭಟನೆಯ ನೇತೃತ್ವ ವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.