ADVERTISEMENT

ಬದುಕುವ ಹಕ್ಕಿಗೆ ಆಗ್ರಹಿಸಿ ಜನಾಗ್ರಹ ಆಂದೋಲನ: ತಟ್ಟೆ, ಖಾಲಿ ಚೀಲ ಪ್ರದರ್ಶನ

​ಪ್ರಜಾವಾಣಿ ವಾರ್ತೆ
Published 24 ಮೇ 2021, 13:54 IST
Last Updated 24 ಮೇ 2021, 13:54 IST
ಜನಾಗ್ರಹ ಆಂದೋಲನ
ಜನಾಗ್ರಹ ಆಂದೋಲನ   

ಶಿವಮೊಗ್ಗ: ಜನರ ಜೀವ ಉಳಿಸಲು, ಜೀವನೋಪಾಯಕ್ಕೆ ನೆರವಾಗಲು ಆಗ್ರಹಿಸಿ ಜನಾಗ್ರಹ ಆಂದೋಲನದ ಕರೆಯ ಮೇರೆಗೆ ಜನರು ಮುಂಜಾನೆ ಮನೆಯಿಂದ ಹೊರಬಂದು ಖಾಲಿ ತಟ್ಟೆ, ಖಾಲಿ ಚೀಲ ಪ್ರದರ್ಶಿಸಿ ‘ನಾವೂ ಬದುಕಬೇಕು’ ಪ್ರತಿಭಟನೆ ನಡೆಸಿದರು.

’ಕೋವಿಡ್‌ ಜೀವವನ್ನು ಅನಿಶ್ಚಿತಗೊಳಿಸಿದೆ. ಲಾಕ್‌ಡೌನ್‌ ಬದುಕನ್ನು ಅತಂತ್ರಗೊಳಿಸಿದೆ. ದುಡಿಮೆಯೂ ಇಲ್ಲ. ದುಡ್ಡೂ ಇಲ್ಲ. ತಲೆಯ ಮೇಲೆ ಸಾಲದ ಹೊರೆ ಇದೆ. ಆಸ್ಪತ್ರೆಯಲ್ಲಿ ಹಾಸಿಗೆ ಇಲ್ಲ. ಸ್ಮಾಶನದಲ್ಲೂ ಜಾಗವಿಲ್ಲ. ಖಾಸಗಿ ಆಸ್ಪತ್ರೆಗಳು ಸುಲಿಗೆ ಮಾಡುತ್ತಿವೆ. ಸರ್ಕಾರ ಕಣ್ಣುಮುಚ್ಚಿ ಕುಳಿತಿದೆ. ಜನ ಸಾಮಾನ್ಯರು ಬದುಕುವುದೇ ಕಷ್ಟವಾಗಿದೆ. ತಕ್ಷಣ ನೆರವಾಗಬೇಕು’ ಎಂದು ಆಗ್ರಹಿಸಿದರು.

ಕೋವಿಡ್‌ ಪೀಡಿತ ಎಲ್ಲಾ ಜನ ಸಾಮಾನ್ಯರಿಗೂ ಉಚಿತ ಚಿಕಿತ್ಸೆ ಸಿಗಬೇಕು. ಎಲ್ಲ ವಯೋಮಾನದವರಿಗೂ ಲಸಿಕೆ ನೀಡಬೇಕು. ಕೊರೊನಾ ಪರೀಕ್ಷೆ ನಡೆದ 24 ತಾಸಿನ ಒಳಗೆ ಫಲಿತಾಂಶ ಕೊಡಬೇಕು. ಬಿಪಿಎಲ್‌ ಕುಟುಂಬಗಳಿಗೆ ಅಕ್ಕಿಯ ಜತೆ ಬೇಳೆ, ಎಣ್ಣೆ ಒಳಗೊಂಡ ದಿನಸಿ ವಿತರಿಸಬೇಕು. ಪ್ರತಿ ತಿಂಗಳು ₹ 5 ಸಾವಿರ ಆರ್ಥಿಕ ನೆರವು ನೀಡಬೇಕು. ಕೋವಿಡ್‌ನಿಂದ ಪೋಷಕರನ್ನು ಕಳೆದುಕೊಂಡು ಅನಾಥರಾದ ಕುಟುಂಬಗಳಿಗೆ ತಲಾ ₹ 5 ಲಕ್ಷ ಪರಿಹಾರ ನೀಡಬೇಕು. ಹೂವು, ಹಣ್ಣು, ತರಕಾರಿ ಬೆಳೆಗಾರರಿಗೆ ಎಕರೆಗೆ ₹ 25 ಸಾವಿರ ನೀಡಬೇಕು. ತಕ್ಷಣ ಭತ್ತ ಖರೀದಿ ಕೇಂದ್ರ ತೆರೆಯಬೇಕು. ಗ್ರಾಮೀಣ ಭಾಗದಲ್ಲೂ ಕೋವಿಡ್‌ ಚಿಕಿತ್ಸಾ ಕೇಂದ್ರಗಳನ್ನು ತೆರೆಯಬೇಕು. ಹೆಚ್ಚುತ್ತಿರುವ ಸೋಂಕು ತಡೆಯಬೇಕು ಎಂದು ಒತ್ತಾಯಿಸಿದರು.

ADVERTISEMENT

‘ಕೋವಿಡ್‌ ಭಯ, ಲಾಕ್‌ಡೌನ್ ಮಧ್ಯೆಯೂ ರಾಜ್ಯದ 31 ಜಿಲ್ಲೆಗಳ 102 ತಾಲ್ಲೂಕುಗಳಲ್ಲಿ ಜನರು ಬೀದಿಗೆ ಬಂದು ಪ್ರತಿಭಟನೆ ನಡೆಸಿದ್ದಾರೆ. ಮುಖ್ಯಮಂತ್ರಿ, ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ. ಜನರ ಸಂಕಷ್ಟ ನಿರ್ಲಕ್ಷಿಸಿದರೆ ತಕ್ಕ ಬೆಲೆ ತೆರಬೇಕಾಗುತ್ತದೆ’ ಎಂದು ಜನಾಗ್ರಹ ಆಂದೋಲನದ ಸಂಚಾಲಕ ಕೆ.ಎಲ್‌.ಅಶೋಕ್‌ ಪ್ರತಿಕ್ರಿಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.