ಸೊರಬ: ಕರ್ನಾಟಕ ರಾಜ್ಯ ಗ್ರಾಮ ಅಡಳಿತ ಅಧಿಕಾರಿಗಳ ಸಂಘ ತಾಲ್ಲೂಕು ಶಾಖೆ ವತಿಯಿಂದ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ತಾಲ್ಲೂಕು ಕಚೇರಿ ಮುಂಭಾಗ ಕಪ್ಪು ಪಟ್ಟಿ ಧರಿಸಿ ಪ್ರತಿಭಟನೆ ನಡೆಸಿ ತಹಶೀಲ್ದಾರ್ ಮಂಜುಳಾ ಹೆಗಡಾಳ್ ಅವರಿಗೆ ಮನವಿ ಸಲ್ಲಿಸಲಾಯಿತು.
ಕಂದಾಯ ಇಲಾಖೆಯಿಂದ ಅಭಿವೃದ್ಧಿಪಡಿಸಿರುವ ತಂತ್ರಾಂಶಗಳಿಗೆ ಯಾವುದೇ ಮೂಲ ಸೌಕರ್ಯ ಒದಗಿಸಿಲ್ಲ. ಸಿ ವೃಂದದ ನೌಕರರು ಹೆಚ್ಚು ಕೆಲಸ ನಿರ್ವಹಿಸುತ್ತಿದ್ದು, ತಾಂತ್ರಿಕ ಹುದ್ದೆಗೆ ನೀಡುವ ವೇತನ ಶ್ರೇಣಿ ನೀಡಬೇಕು. ಅಂತರ್ ಜಿಲ್ಲಾ ವರ್ಗಾವಣೆಗೆ ಅವಕಾಶ ನೀಡಬೇಕು ಎಂದು ಗ್ರಾಮ ಅಡಳಿತ ಅಧಿಕಾರಿಗಳ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ಯಶವಂತ್ ತಿಳಿಸಿದರು.
ಅಂಗವಿಕಲರು, ಅನಾರೋಗ್ಯ ಸಮಸ್ಯೆ ಇರುವವರಿಗೆ ನಿಯೋಜನೆಗಳನ್ನು ಕೌನ್ಸಿಲಿಂಗ್ ಮೂಲಕ ನೀಡಬೇಕು, ಪದೋನ್ನತಿ, ಆಪತ್ತಿನ ಭತ್ಯೆ ನೀಡಬೇಕು. ಪ್ರಯಾಣ ಭತ್ಯೆಯನ್ನು ₹ 500 ರಿಂದ ₹ 3,000ಕ್ಕೆ ಹೆಚ್ಚಿಸಬೇಕು. ಬೇಡಿಕೆ ಈಡೇರದಿದ್ದರೆ ಜಿಲ್ಲಾ ಹಾಗೂ ರಾಜ್ಯ ಮಟ್ಟದಲ್ಲಿ ಬೃಹತ್ ಪ್ರತಿಭಟನೆ ನಡೆಸಲಾಗುವುದು. ಹೋರಾಟಕ್ಕೆ ಕಂದಾಯ ನೌಕರರು, ಸರ್ಕಾರಿ ನೌಕರರ ಸಂಘ ಮತ್ತು ಗ್ರಾಮ ಸಹಾಯಕರ ಸಂಘಗಳು ಬೆಂಬಲ ಸೂಚಿಸಿವೆ ಎಂದರು.
ಸಮೀರ್, ವೀರೇಂದ್ರ, ವಿನಯ್, ಉಮೇಶ್, ಭಾರತಿ ಪಾಟೀಲ್, ಮಂಜಪ್ಪ, ಜಂಗಪ್ಪಗೌಡ, ಶ್ರೀಶೈಲಾ, ಸುಪ್ರಿಯಾ, ಸಂಗೀತಾ, ವೇದಮೂರ್ತಿ, ಉಮೇಶ್, ಭರತ್ ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.