ಸಚಿವ ಎಲ್.ಮುರುಗನ್. ಸಂಸದ ರಾಘವೇಂದ್ರ
ಶಿವಮೊಗ್ಗ: ದೇಶದ ಎಲ್ಲ ಸಾರ್ವಜನಿಕ ಉದ್ಯಾನಗಳಲ್ಲಿ ರೇಡಿಯೊ ಟ್ರಾನ್ಸಿಸ್ಟರ್ ಗಳ ಅಳವಡಿಸಲು ನಿರ್ಧರಿಸಿದ್ದು, ಪ್ರಾಯೋಗಿಕವಾಗಿ ಮೊದಲ ಹಂತದಲ್ಲಿ ಶಿವಮೊಗ್ಗ ಜಿಲ್ಲೆಯ ಎಲ್ಲ ಉದ್ಯಾನವನಗಳಲ್ಲಿ ರೇಡಿಯೊ ಟ್ರಾನ್ಸಿಸ್ಟರ್ ಗಳ ಅಳವಡಿಸಲಾಗುವುದು ಎಂದು ಕೇಂದ್ರ ಮಾಹಿತಿ ಮತ್ತು ಪ್ರಸಾರ ಹಾಗೂ ಸಂಸದೀಯ ವ್ಯವಹಾರಗಳ ಸಚಿವ ಎಲ್.ಮುರುಗನ್ ಹೇಳಿದರು.
ಇಲ್ಲಿನ ವಿದ್ಯಾನಗರದಲ್ಲಿ ಆಕಾಶವಾಣಿ ಭದ್ರಾವತಿ ಕೇಂದ್ರದ 10 ಕಿಲೋ ವ್ಯಾಟ್ ಸಾಮರ್ಥ್ಯದ ಟ್ರಾನ್ಸ್ ಮೀಟರನ್ನು (ಪ್ರೇಷಕ) ಗುರುವಾರ ಉದ್ಘಾಟಿಸಿ ಅವರು ಮಾತನಾಡಿದರು.
ಈ ಹೊಸ ಟ್ರಾನ್ಸ್ ಮೀಟರ್ ಅಳವಡಿಕೆಯಿಂದ ಆಕಾಶವಾಣಿ ಭದ್ರಾವತಿ ಎಫ್.ಎಂ ಪ್ರೇಷಕ ಕೇಂದ್ರದ ಪ್ರಸರಣ ಸಾಮರ್ಥ್ಯ 3,500 ಚದರ ಕಿ.ಮೀ ವ್ಯಾಪ್ತಿಗೆ ಹೆಚ್ಚಳಗೊಳ್ಳಲಿದೆ ಎಂದು ಸಚಿವ ಮುರುಗನ್ ತಿಳಿಸಿದರು.
ಪ್ರಸಾರ ಭಾರತಿಯ ಮೂಲಸೌಕರ್ಯ ಅಭಿವೃದ್ಧಿ, ಕಾರ್ಯಕ್ರಮ ಗುಣಮಟ್ಟ ಹೆಚ್ಚಳ ಹಾಗೂ ಡಿಜಿಟಲೀಕರಣ ಕಾರ್ಯಕ್ಕೆ ಕೇಂದ್ರ ಸರ್ಕಾರ ಕಳೆದ ವರ್ಷ ₹2,500 ಕೋಟಿ ಹಣ ಖರ್ಚು ಮಾಡಿದೆ. ಅದರ ಭಾಗವಾಗಿ ಭದ್ರಾವತಿ ಆಕಾಶವಾಣಿ ಕೇಂದ್ರದ ಎಫ್.ಎಂ ಕೇಂದ್ರದ ಸಾಮರ್ಥ್ಯ ಹೆಚ್ಚಿಸಲಾಗಿದೆ ಎಂದರು.
ಆಲ್ ಇಂಡಿಯಾ ರೇಡಿಯೊ ಕಾರ್ಯ ಚಟುವಟಿಕೆಯನ್ನು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಕನಸಿನಂತೆ ಆಲ್ ಇಂಡಿಯಾ ಎಫ್ ಎಂ ಕೇಂದ್ರಗಳಾಗಿ ಬದಲಾಯಿಸಲಾಗುತ್ತಿದೆ ಎಂದು ತಿಳಿಸಿದರು.
ಸಂಸದ ಬಿ.ವೈ.ರಾಘವೇಂದ್ರ, ಶಿವಮೊಗ್ಗ ಶಾಸಕ ಎಸ್.ಎನ್.ಚನ್ನಬಸಪ್ಪ, ವಿಧಾನಪರಿಷತ್ ಸದಸ್ಯ ಡಾ.ಧನಂಜಯ ಸರ್ಜಿ, ಜಿಲ್ಲಾಧಿಕಾರಿ ಪ್ರಭುಲಿಂಗ ಕವಳಿಕಟ್ಟಿ, ಎಸ್ಪಿ ಬಿ.ನಿಖಿಲ್, ಮಾಜಿ ಶಾಸಕ ಕೆ.ಜಿ.ಕುಮಾರಸ್ವಾಮಿ ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.