ADVERTISEMENT

ರಾಘವೇಂದ್ರ ವಿರುದ್ಧ ಮಾತನಾಡುವ ನೈತಿಕತೆ ಇಲ್ಲ: ಟಿ.ಡಿ. ಮೇಘರಾಜ್

ತೀ.ನಾ.ಶ್ರೀನಿವಾಸ್ ಹೇಳಿಕೆಗೆ ತಿರುಗೇಟು

​ಪ್ರಜಾವಾಣಿ ವಾರ್ತೆ
Published 28 ನವೆಂಬರ್ 2020, 16:57 IST
Last Updated 28 ನವೆಂಬರ್ 2020, 16:57 IST

ಶಿವಮೊಗ್ಗ: ಜಿಲ್ಲಾ ಕಾಂಗ್ರೆಸ್ ಮಾಜಿ ಅಧ್ಯಕ್ಷ ತೀ.ನಾ. ಶ್ರೀನಿವಾಸ್ ಅವರಿಗೆ ಸಂಸದ ಬಿ.ವೈ. ರಾಘವೇಂದ್ರ ಅವರ ವಿರುದ್ಧ ಮಾತನಾಡುವ ನೈತಿಕತೆ ಇಲ್ಲ ಎಂದು ಜಿಲ್ಲಾ ಬಿಜೆಪಿ ಅಧ್ಯಕ್ಷ ಟಿ.ಡಿ. ಮೇಘರಾಜ್ ಹೇಳಿದರು.

‘ರೈಲ್ವೆ ಕೋಚಿಂಗ್ ಟರ್ಮಿನಲ್‍ಗೆ ಸಂಬಂಧಿಸಿದಂತೆ ತೀ.ನಾ. ಶ್ರೀನಿವಾಸ್ ಅವರು ಸಂಸದ ರಾಘವೇಂದ್ರ ಅವರನ್ನು ಟೀಕಿಸಿದ್ದು, ಅಲ್ಲದೇ ಅವರ ಬಗ್ಗೆ ಲಘುವಾಗಿ ಮಾತನಾಡಿದ್ದಾರೆ. ರೈಲ್ವೆ ಅಭಿವೃದ್ದಿಗೆ ಸಂಬಂಧಿಸಿದಂತೆ ಸಂಸದರು ಮಾಡಿರುವ ಕೆಲಸವನ್ನು ಅವರು ಮರೆತಂತೆ ಕಾಣುತ್ತದೆ’ ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ತಿರುಗೇಟು ನೀಡಿದರು.

ಕಾಂಗ್ರೆಸ್ ಸರ್ಕಾರ ಅಧಿಕಾರದಲ್ಲಿದ್ದಾಗ ತಾಳಗುಪ್ಪ–ಶಿವಮೊಗ್ಗದ ನಡುವೆ ಬ್ರಾಡ್‍ಗೇಜನ್ನು ಮಾಡುವ ಬದಲು ರೈಲ್ವೆ ಹಳಿಯನ್ನೇ ತೆಗೆಯಲು ಹೊರಟಿದ್ದರು. ಬಿಜೆಪಿ ಅಧಿಕಾರಕ್ಕೆ ಬಂದ ನಂತರ ಬಿ.ವೈ. ರಾಘವೇಂದ್ರ ಅವರ ಇಚ್ಛಾಶಕ್ತಿಯಿಂದಾಗಿ ಬ್ರಾಡ್‍ಗೇಜ್ ಆಯಿತು. ಇದು ಶ್ರೀನಿವಾಸ್ ಅವರಿಗೆ ತಿಳಿದಿಲ್ಲ ಎಂದು ಕುಟುಕಿದರು.

ADVERTISEMENT

ತಾಳಗುಪ್ಪದಲ್ಲಿ ತಾಂತ್ರಿಕ ಕಾರಣದಿಂದ ಕೋಚಿಂಗ್ ಟರ್ಮಿನಲ್ ಸ್ಥಾಪನೆಯಾಗುತ್ತಿಲ್ಲ. ಅದರ ಬದಲು ಶಿವಮೊಗ್ಗದಲ್ಲಿ ಆಗುತ್ತದೆ. ಅದೂ ಕೂಡ ತೀ.ನಾ. ಶ್ರೀನಿವಾಸ್‌ಗೆ ಗೊತ್ತಿಲ್ಲ. ಶಿವಮೊಗ್ಗ–ರಾಣೆಬೆನ್ನೂರು ರೈಲ್ವೆ ಸಂಚಾರ ಆರಂಭವಾದರೆ, ಇಲ್ಲಿ ಬರುವ ರೈಲುಗಳು ತಾಳಗುಪ್ಪಕ್ಕೆ ಹೋಗಿಬರಲು ಆಗುವುದಿಲ್ಲ ಎಂದು ರೈಲ್ವೆ ಅಧಿಕಾರಿಗಳು ಈಗಾಗಲೇ ವರದಿ ನೀಡಿದ್ದಾರೆ. ಈ ಎಲ್ಲ ಕಾರಣದಿಂದ ಸಾಗರದಿಂದ ಕೋಟೆಗಂಗೂರಿಗೆ ಅದು ಶಿಫ್ಟ್ ಆಗಿದೆ. ಇದರ ಅರಿವು ಇಲ್ಲದ ಅವರು ಸಂಸದರ ಬಗ್ಗೆ ಲಘುವಾಗಿ ಮಾತನಾಡಿದ್ದಾರೆ ಎಂದು ಟೀಕಿಸಿದರು.

‘ಮಂಕಿಪಾರ್ಕ್‌ ಸಂಬಂಧ ಶ್ರೀವಾಸ್ ದಡ್ಡರಂತೆ ಮಾತನಾಡಿದ್ದಾರೆ.ವೈಜ್ಞಾನಿಕ ವರದಿ ಆಧಾರದ ಮೇಲೆ ಮಂಕಿಪಾರ್ಕ್ ಸ್ಥಾಪನೆ ಮಾಡಲು ಸಂಸದ ರಾಘವೇಂದ್ರ ಅವರು ಪ್ರಯತ್ನ ನಡೆಸುತ್ತಿದ್ದಾರೆ. ಯಾವ ವಿಷಯವೂ ಸಿಗದೇ ಅವರು ಪ್ರಚಾರಕ್ಕಾಗಿ ಏನೇನೋ ಬಡಬಡಿಸುತ್ತಿದ್ದಾರೆ’ ಎಂದು ಲೇವಡಿ ಮಾಡಿದರು.

ಸುದ್ದಿಗೋಷ್ಠಿಯಲ್ಲಿ ಎಸ್.ಎಸ್. ಜ್ಯೋತಿಪ್ರಕಾಶ್, ಶಿವರಾಜ್, ರಾಮು, ಬಿ.ಕೆ. ಶ್ರೀನಾಥ್, ಎನ್.ಜೆ. ಸತೀಶ್, ಸುನೀತಾ ಅಣ್ಣಪ್ಪ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.