ADVERTISEMENT

ಹಿಂದುಳಿದವರ ಅಭಿವೃದ್ಧಿಗೆ ಶ್ರಮಿಸದ ಕಾಂಗ್ರೆಸ್‌ಗೆ ಜ್ಞಾನೋದಯ: ಈಶ್ವರಪ್ಪ ಟೀಕೆ

​ಪ್ರಜಾವಾಣಿ ವಾರ್ತೆ
Published 29 ಜುಲೈ 2025, 6:55 IST
Last Updated 29 ಜುಲೈ 2025, 6:55 IST
ಕೆ.ಎಸ್.ಈಶ್ವರಪ್ಪ
ಕೆ.ಎಸ್.ಈಶ್ವರಪ್ಪ   

ಶಿವಮೊಗ್ಗ: ‘ಹಿಂದುಳಿದ ವರ್ಗಗಳ ಅಭಿವೃದ್ಧಿಗಾಗಿ ಕಾಂಗ್ರೆಸ್ ಏನನ್ನೂ ಮಾಡಿಲ್ಲ ಎಂಬುದನ್ನು ಆ ಪಕ್ಷದ ಅಗ್ರ ನಾಯಕ ರಾಹುಲ್‌ ಗಾಂಧಿಯವರೇ ಒಪ್ಪಿಕೊಂಡಿದ್ದಾರೆ’ ಎಂದು ಮಾಜಿ ಡಿಸಿಎಂ ಕೆ.ಎಸ್.ಈಶ್ವರಪ್ಪ ಹೇಳಿದರು. 

ನಗರದಲ್ಲಿ ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಹಿಂದುಳಿದ ವರ್ಗಗಳ ಕಲ್ಯಾಣಕ್ಕಾಗಿ ನಾವೂ ಏನೂ ಮಾಡಲಿಲ್ಲ, ಅವರ ಪರಿಸ್ಥಿತಿ ಅರ್ಥಮಾಡಿಕೊಳ್ಳುವಲ್ಲಿ ವಿಫಲರಾಗಿದ್ದೇವೆ. ಅರ್ಥಮಾಡಿಕೊಂಡಿದ್ದರೆ ಮತ್ತಷ್ಟು ಅಭಿವೃದ್ಧಿಯನ್ನು ಹಿಂದುಳಿದ ವರ್ಗಗಳಿಗಾಗಿ ಮಾಡಬಹುದಿತ್ತು ಎಂದು ರಾಹುಲ್‌ಗಾಂಧಿ ಹೇಳಿದ್ದಾರೆ. ಅವರಿಗೆ ಈಗಲಾದರೂ ಜ್ಞಾನೋದಯವಾಗಿದೆ ಎಂದು ಛೇಡಿಸಿದರು. 

ರಾಹುಲ್‌ಗಾಂಧಿ ಹಿಂದುಳಿದ ವರ್ಗಗಳ ಹರಿಕಾರ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳುವುದನ್ನು ನೋಡಿದರೆ ಆಶ್ಚರ್ಯವಾಗುತ್ತದೆ. ತಾವು ಮುಖ್ಯಮಂತ್ರಿಯಾಗಿ ಮುಂದುವರಿಯಬೇಕು ಎಂಬ ಕಾರಣಕ್ಕಾಗಿ ಬಕೆಟ್ ಹಿಡಿಯುವ ಕೆಲಸ ಮಾಡುತ್ತಿದ್ದಾರೆ ಎಂದು ಟೀಕಿಸಿದರು. 

ADVERTISEMENT

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪರಿಶಿಷ್ಟರಿಗೂ ದ್ರೋಹ ಬಗೆಯುತ್ತಿದ್ದಾರೆ. ಅವರ ಕಲ್ಯಾಣಕ್ಕೆ ಮೀಸಲಿಟ್ಟಿದ್ದ ಸಾವಿರಾರು ಕೋಟಿ ಅನುದಾನವನ್ನು ಗ್ಯಾರಂಟಿ ಯೋಜನೆಗಳ ಅನುಷ್ಠಾನಕ್ಕಾಗಿ ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಕಳೆದ ಮೂರು ವರ್ಷಗಳಲ್ಲಿ ಪರಿಶಿಷ್ಟರಿಗಾಗಿ ಮೀಸಲಿಟ್ಟಿದ್ದ ₹37,000 ಕೋಟಿ ಅನುದಾನವನ್ನು ಗ್ಯಾರಂಟಿ ಯೋಜನೆಗಳಿಗಾಗಿ ಬಳಸಿಕೊಳ್ಳಲಾಗುತ್ತಿದೆ. ಇದು ಪರಿಶಿಷ್ಟರಿಗೆ ಮಾಡಿದ ದ್ರೋಹವಲ್ಲದೆ ಮತ್ತೇನೂ ಅಲ್ಲ. ಆಗಸ್ಟ್ 5ರಂದು ಇದಕ್ಕಾಗಿ ಒಂದು ವಿಶೇಷ ಸಭೆ ಕೂಡ ಕರೆದಿದ್ದಾರೆ. ಈಗ ಈ ಹಣವನ್ನು ಎಲ್ಲಿಂದ ಹೇಗೆ ತುಂಬಿಕೊಡುತ್ತಾರೆ ಎಂಬುದೇ ದೊಡ್ಡ ಪ್ರಶ್ನೆಯಾಗಿದೆ ಎಂದರು. 

ರಸಗೊಬ್ಬರದ ಕೊರತೆ ಪರಿಹರಿಸುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕೇಂದ್ರಕ್ಕೆ ಪತ್ರ ಬರೆಯುತ್ತಾರೆ. ಆದರೆ ಕೃಷಿ ಸಚಿವ ಚೆಲುವರಾಯಸ್ವಾಮಿ ಅವರು ರಾಜ್ಯದಲ್ಲಿ ರಸಗೊಬ್ಬರ ಸಮಸ್ಯೆ ಇಲ್ಲ ಎಂದು ಹೇಳುತ್ತಾರೆ. ಈ ವಿರೋಧಾಭಾಸದ ಹೇಳಿಕೆಗಳು ಏಕೆ ಎಂಬುದೇ ಅರ್ಥವಾಗುತ್ತಿಲ್ಲ. ಕೇಂದ್ರ ಸರ್ಕಾರದ ಮೇಲೆ ವಿನಾಕಾರಣ ದೂರು ಕೊಡುವ ಬದಲು ಕೇಂದ್ರವೇ ಹೇಳಿದಂತೆ, ರಸಗೊಬ್ಬರವನ್ನು ದಾಸ್ತಾನು ಮಾಡಬಹುದಾಗಿತ್ತಲ್ಲವೇ ಎಂದು ಪ್ರಶ್ನೆ ಮಾಡಿದರು. 

ಪ್ರಮುಖರಾದ ಈ. ವಿಶ್ವಾಸ್, ಬಾಲು, ಮೋಹನ್ ಜಾಧವ್, ಶಿವಾಜಿ, ಕುಬೇರಪ್ಪ, ವಿನಯ್, ಕಾಚಿನಕಟ್ಟೆ ಸತ್ಯನಾರಾಯಣ್, ಗುರುರಾಜ್  ಶೇಟ್ ಇದ್ದರು.

‘ಗೊಂದಲ ಪರಿಹಾರ; ಅಭಿನಂದನೆ’

‘ದೈವಜ್ಞ ಬ್ರಾಹ್ಮಣ ಸಮುದಾಯದ ಜಾತಿ ಪ್ರಮಾಣಪತ್ರಕ್ಕೆ ಸಂಬಂಧಿಸಿದ ಗೊಂದಲಗಳನ್ನು ಪರಿಹರಿಸುವಂತೆ ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ ಸಚಿವ ಮಧು ಬಂಗಾರಪ್ಪ ಅವರಿಗೆ ಕೋರಲಾಗಿತ್ತು. ತಕ್ಷಣವೇ ಅದಕ್ಕೆ ಸ್ಪಂದಿಸಿದ ಸಚಿವರು ಸಮಸ್ಯೆ ಬಗೆಹರಿಸಿದ್ದಾರೆ. ಅವರಿಗೆ ಅಭಿನಂದನೆ ಸಲ್ಲಿಸುವೆ’ ಎಂದು ಕೆ.ಎಸ್. ಈಶ್ವರಪ್ಪ ತಿಳಿಸಿದರು.

‘ದೈವಜ್ಞ ಬ್ರಾಹ್ಮಣ ಸಮುದಾಯದವರು ಮೊದಲಿನಿಂದಲೂ ‘2ಎ’ನಲ್ಲಿ ಇದ್ದರು. ಆದರೆ ಅವರನ್ನು ಸಾಮಾನ್ಯವರ್ಗಕ್ಕೆ ಸೇರಿಸಲಾಗಿತ್ತು. ಇದರಿಂದ ಸಮುದಾಯದ ವಿದ್ಯಾರ್ಥಿಗಳಿಗೆ ತೊಂದರೆ ಆಗಿತ್ತು. ಆ ಬಗ್ಗೆ ಸಮುದಾಯದ ಮುಖಂಡರು ಗಮನ ಸೆಳೆದಿದ್ದರು. ತಕ್ಷಣವೇ ಸಚಿವ ಮಧು ಬಂಗಾರಪ್ಪ ಅವರಿಗೂ ವಿಷಯ ತಿಳಿಸಿದೆ. ಅವರೂ ತಕ್ಷಣವೇ ಸ್ಪಂದಿಸಿದರು. ಇಲಾಖೆಯ ಆಯುಕ್ತರಿಗೆ ಹೇಳಿ, ಎರಡೇ ದಿನದಲ್ಲಿ ಸಮಸ್ಯೆ ಬಗೆಹರಿಸಿದ್ದಾರೆ’ ಎಂದರು.

ದೈವಜ್ಞ ಸಮಾಜದ ಮುಖಂಡ ಗುರುರಾಜ್ ಎಂ.ಶೇಟ್ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.