ADVERTISEMENT

ಹಾನಿಗೊಳಗಾದವರಿಗೆ ಸೂಕ್ತ ಪರಿಹಾರ ನೀಡಿ

ಬೆಳೆಹಾನಿ ಪ್ರದೇಶಗಳಿಗೆ ಭೇಟಿ ನೀಡಿದ್ದ ಮಧು ಬಂಗಾರಪ್ಪ ಆಗ್ರಹ

​ಪ್ರಜಾವಾಣಿ ವಾರ್ತೆ
Published 22 ಮೇ 2022, 2:53 IST
Last Updated 22 ಮೇ 2022, 2:53 IST
ಸೊರಬ ತಾಲ್ಲೂಕಿನ ಚಿಕ್ಕಾವಲಿ ಗ್ರಾಮದಲ್ಲಿ ಕಟಾವು ಮಾಡಿದ ಮುಸುಕಿನ ಜೋಳದ ಬೆಳೆ ಮಳೆಯಿಂದ ಮೊಳಕೆಯೊಡೆದಿರುವುದನ್ನು ಕೆಪಿಸಿಸಿ ಉಪಾಧ್ಯಕ್ಷ ಎಸ್. ಮಧು ಬಂಗಾರಪ್ಪ ಪರಿಶೀಲಿಸಿದರು.
ಸೊರಬ ತಾಲ್ಲೂಕಿನ ಚಿಕ್ಕಾವಲಿ ಗ್ರಾಮದಲ್ಲಿ ಕಟಾವು ಮಾಡಿದ ಮುಸುಕಿನ ಜೋಳದ ಬೆಳೆ ಮಳೆಯಿಂದ ಮೊಳಕೆಯೊಡೆದಿರುವುದನ್ನು ಕೆಪಿಸಿಸಿ ಉಪಾಧ್ಯಕ್ಷ ಎಸ್. ಮಧು ಬಂಗಾರಪ್ಪ ಪರಿಶೀಲಿಸಿದರು.   

ಸೊರಬ: ತಾಲ್ಲೂಕಿನಲ್ಲಿ ಎಡಬಿಡದೇ ಸುರಿಯುತ್ತಿರುವ ಕುಂಭದ್ರೋಣ ಮಳೆಯಿಂದ ಕ್ಷೇತ್ರದಲ್ಲಿ ಸಾಕಷ್ಟು ಪ್ರಮಾಣದಲ್ಲಿ ಬೆಳೆ ನಷ್ಟವಾಗಿದ್ದು, ಕೂಡಲೇ ಸರ್ಕಾರ ರೈತರ ನೆರವಿಗೆ ಧಾವಿಸುವ ಜೊತೆಗೆ ಸೂಕ್ತ ಪರಿಹಾರವನ್ನು ಒದಗಿಸಬೇಕು ಎಂದು ಕೆಪಿಸಿಸಿ ಉಪಾಧ್ಯಕ್ಷ ಎಸ್. ಮಧು ಬಂಗಾರಪ್ಪ ಒತ್ತಾಯಿಸಿದರು.

ತಾಲ್ಲೂಕಿನ ಚಿಕ್ಕಾವಲಿ ಗ್ರಾಮದಲ್ಲಿ ಕಟಾವು ಮಾಡಿದ ಮುಸುಕಿನ ಜೋಳದ ಬೆಳೆ ಮಳೆಯಿಂದ ಮೊಳಕೆ ಒಡೆದಿರುವುದನ್ನು ಪರಿಶೀಲಿಸಿ ಸುದ್ದಿಗಾರರ ಜೊತೆ ಮಾತನಾಡಿದರು.

‘ರಾಜ್ಯದಲ್ಲಿ ಮೂರು ದಿನಗಳಿಂದ ನಿರಂತರವಾಗಿ ಮಳೆ ಸುರಿದಿದ್ದು, ರೈತರ ಕೈ ಸೇರುವ ಹೊಸ್ತಿಲಲ್ಲಿದ್ದ ಭತ್ತ, ಮೆಕ್ಕೆಜೋಳ ಮೊಳಕೆಯೊಡೆಯುತ್ತಿವೆ. ಕಟಾವಿಗೆ ಬಂದಿದ್ದ ಭತ್ತ ಧರೆಗೆ ಉರುಳಿ ಸಂಪೂರ್ಣ ಹಾಳಾಗಿರುವುದು ಕ್ಷೇತ್ರ ಪ್ರವಾಸದ ಸಂದರ್ಭದಲ್ಲಿ ಕಂಡಿದ್ದೇನೆ. ಜೊತೆಗೆ ತೋಟಗಾರಿಕೆ ಬೆಳೆಗಳಾದ ಬಾಳೆ, ಅಡಿಕೆ ಸೇರಿ ಅನೇಕ ಬೆಳೆಗಳು ಮಳೆಯಿಂದ ಹಾನಿಗೀಡಾಗಿದ್ದು, ಸರ್ಕಾರ ರೈತರ ನೆರವಿಗೆ ಧಾವಿಸಬೇಕು’ ಎಂದು ತಿಳಿಸಿದರು.

ADVERTISEMENT

ತಾಲೂಕಿನಲ್ಲಿ ₹ 2.73 ಕೋಟಿ ಬೆಳೆ ನಷ್ಟವಾಗಿದೆ. ರೈತರು ಅತಿವೃಷ್ಟಿ-ಅನಾವೃಷ್ಟಿಯಿಂದ ಸಾಕಷ್ಟು ಆರ್ಥಿಕ ನಷ್ಟು ಅನುಭವಿಸಿದ್ದಾರೆ. ಜವಾಬ್ದಾರಿಯುತ ಸರ್ಕಾರಗಳು ರೈತರ ನೆರವಿಗೆ ಧಾವಿಸಿ ಕೂಡಲೇ ಸೂಕ್ತ ಪರಿಹಾರವನ್ನು ಮಂಜೂರು ಮಾಡಬೇಕು ಎಂದು ಆಗ್ರಹಿಸಿದರು.

ಕುಪ್ಪಗಡ್ಡೆ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಎಲ್.ಜಿ. ರಾಜಶೇಖರ್ ಸೇರಿ ಸ್ಥಳೀಯ ಮುಖಂಡರು ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.