ADVERTISEMENT

ತೀರ್ಥಹಳ್ಳಿ: ಶಿಕ್ಷಣ ಕ್ಷೇತ್ರದ ಸೇವೆಗೆ ರಾಜ್ಯೋತ್ಸವ ಪ್ರಶಸ್ತಿ

​ಪ್ರಜಾವಾಣಿ ವಾರ್ತೆ
Published 1 ನವೆಂಬರ್ 2021, 6:31 IST
Last Updated 1 ನವೆಂಬರ್ 2021, 6:31 IST
ಪಿ.ವಿ. ಕೃಷ್ಣಭಟ್
ಪಿ.ವಿ. ಕೃಷ್ಣಭಟ್   

ತೀರ್ಥಹಳ್ಳಿ: ಶಿಕ್ಷಣ ಕ್ಷೇತ್ರದಲ್ಲಿ ಗಣನೀಯ ಸೇವೆ ಸಲ್ಲಿಸಿರುವ ಅವರು ಪಿ.ವಿ. ಕೃಷ್ಣಭಟ್ ಅವರು ಈ ಸಾಲಿನ ರಾಜ್ಯೋತ್ಸವ ಪ್ರಶಸ್ತಿಗೆ ಭಾಜನರಾಗಿದ್ದಾರೆ.

1940ರಲ್ಲಿ ತೀರ್ಥಹಳ್ಳಿ ತಾಲ್ಲೂಕು ಹೇರಂಭಾಪುರ ಗ್ರಾಮದ ಪಟ್ಲಮನೆಯ ವೆಂಕಟಸುಬ್ಬ ಭಟ್ಟ, ಗಂಗಮ್ಮ ದಂಪತಿಯ ಮುದ್ದಿನ ಮಗನಾಗಿ ಜನಿಸಿದ ಪಿ.ವಿ. ಕೃಷ್ಣಭಟ್ಬಾಲ್ಯದಿಂದಲೇ ಶಿಕ್ಷಣ ಕ್ಷೇತ್ರದಲ್ಲಿ ಆಸಕ್ತಿ ಬೆಳೆಸಿಕೊಂಡಿದ್ದರು. ಹೇರಂಭಾಪುರದಲ್ಲಿ ಪ್ರಾಥಮಿಕ ಶಿಕ್ಷಣ ನಂತರ ಶಿವಮೊಗ್ಗದ ಸಹ್ಯಾದ್ರಿ ಕಾಲೇಜು, ಬೆಂಗಳೂರು ಸೆಂಟ್ರಲ್ ಕಾಲೇಜಿನಲ್ಲಿ ಸಮಾಜಶಾಸ್ತ್ರದಲ್ಲಿ ಎಂ.ಎ. ಪದವಿ ಪಡೆದುಕೊಂಡರು.

1965ರಿಂದ ಡಿವಿಎಸ್ ಕಾಲೇಜಿನಲ್ಲಿ ಶಿಕ್ಷಕರಾಗಿ ವೃತ್ತಿಜೀವನ ಆರಂಭಿಸಿದ ಅವರು ಪ್ರಾಧ್ಯಾಪಕ, ಉಪನ್ಯಾಸಕ ಹಾಗೂ 1996ರಿಂದ 97ರ ವರೆಗೆ ಪ್ರಾಂಶುಪಾಲರಾಗಿ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿದ್ದಾರೆ.

ADVERTISEMENT

ಕಾಲೇಜು ದಿನಗಳಲ್ಲಿಯೇ ಅಖಿಲ ಭಾರತ ವಿದ್ಯಾರ್ಥಿ ಪರಿಷತ್ತಿನಲ್ಲಿ ಗುರುತಿಸಿಕೊಂಡಿದ್ದ ಯುವಕ ಮುಂದೊಂದು ದಿನ ಅದೇ ಸಂಸ್ಥೆಯ ಅಧ್ಯಕ್ಷರಾಗುತ್ತಾರೆ ಎಂಬ ಅರಿವು ಕುಟುಂಬಸ್ಥರಿಗಿರಲಿಲ್ಲ. ಸುಮಾರು 10 ವರ್ಷ ಎಬಿವಿಪಿ ಉಪಾಧ್ಯಕ್ಷರಾಗಿ 3 ವರ್ಷ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ ಕೀರ್ತಿ ಭಟ್ಟರಿಗೆ ಸಲ್ಲುತ್ತದೆ. ಅವರಿಗೆ ಮೈಸೂರು ವಿಶ್ವವಿದ್ಯಾಲಯ
ದಿಂದ ಗೌರವ ಡಾಕ್ಟರೇಟ್ ನೀಡಿ ಗೌರವಿಸಲಾಗಿದೆ.

2000ರಲ್ಲಿ ಭಾರತದ ಶಿಕ್ಷಣ ಕ್ಷೇತ್ರದಲ್ಲಿ ಬದಲಾವಣೆ ತರುವ ಉದ್ದೇಶದಲ್ಲಿ ಭಾರತ ಸರ್ಕಾರ ‘ನ್ಯಾಷನಲ್ ಅರ್ಗನೈಸಿಂಗ್ ಕಮಿಟಿ ಫಾರ್ ಎಜುಕೇಷನ್’ ಸಂಯೋಜಕರಾಗಿ ನೇಮಕ ಮಾಡಿದೆ. 2003ರಲ್ಲಿ ಎಜುಕೇಷನ್ ಟಾಸ್ಕ್‌ಫೋರ್ಸ್ ಸದಸ್ಯರು, 2001ರಿಂದ 2004ರ ವರೆಗೆ ನ್ಯಾಕ್ ಕಾರ್ಯನಿರ್ವಾಹಕ ಸದಸ್ಯರಾಗಿ ಸೇವೆ ಅವಿಸ್ಮರಣೀಯ.

ಅವರ ಶೈಕ್ಷಣಿಕ ಸೇವೆಯನ್ನು ಪರಿಗಣಿಸಿ 2010ರಲ್ಲಿ ಕರ್ನಾಟಕ ಸರ್ಕಾರ ವಿಧಾನಪರಿಷತ್ ಸದಸ್ಯರನ್ನಾಗಿ ನಾಮನಿರ್ದೇಶನ ಮಾಡಿದೆ.

ಪ್ರಸ್ತುತ ಒಡಿಶಾ ಕೇಂದ್ರ ವಿಶ್ವವಿದ್ಯಾಲಯದ ಕುಲಪತಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.