
ಸೊರಬ: ತಾಲ್ಲೂಕಿನ ಹಾಯ ಗ್ರಾಮದ ಕಲ್ಲೇಶ್ವರ ದೇವಾಲಯದ ಬಳಿ ಮೂರು ಶಾಸನೋಕ್ತ ಗೋದಾನದ ಕಲ್ಲುಗಳು ಪತ್ತೆಯಾಗಿವೆ.
ರಾಜ್ಯ ಪುರಾತತ್ವ ಇಲಾಖೆಯ ನಿರ್ದೇಶಕ ಶೇಜೇಶ್ವರ, ಇತಿಹಾಸ ಸಂಶೋಧಕ ರಮೇಶ ಹಿರೇಜಂಬೂರು ಹಾಗೂ ಮಂಜಪ್ಪ ಚುರ್ಚಿಗುಂಡಿ ಅವರ ತಂಡ ಈಚೆಗೆ ಕ್ಷೇತ್ರಕಾರ್ಯ ಕೈಗೊಂಡಾಗ ಪತ್ತೆ ಮಾಡಿದ್ದಾರೆ.
ಗೋದಾನದ ಒಂದನೇ ಕಲ್ಲಿನಲ್ಲಿ (ಗೋಸಾಸ- 1) ನಾಲ್ಕು ಸಾಲುಗಳ ಶಾಸನ ಪಾಠವಿದ್ದು, ಸೂರ್ಯಗ್ರಹಣ ದಿನದಂದು ಚವಠಿಯ ಬಿನಾರದ ಬಡಿಯಣ್ಣನು ದಕ್ಷಿಣೆ ಸಹಿತವಾಗಿ ಕುಪ್ಪಗಡ್ಡೆಯ ಜನರಿಗೆ ಹಾಯ ಗ್ರಾಮದಲ್ಲಿ ಗೋದಾನ ನೀಡಿದ ಮಾಹಿತಿ ಇದೆ. ಆತನೊಂದಿಗೆ ಆತನ ಹೆಂಡತಿ ನಾಲಬ್ಬೆಯೂ ದಾನದಲ್ಲಿ ಪಾಲ್ಗೊಂಡಿದ್ದಾಳೆ. ಇಲ್ಲಿ ಉಲ್ಲೇಖವಾಗಿರುವ ಪ್ರದೇಶವು ಈಗಿನ ತಾಲ್ಲೂಕಿನ ಚವಟಿ ಗ್ರಾಮವಾಗಿರುವ ಸಾಧ್ಯತೆ ಇದೆ.
ಜಕ್ಕಯ್ಯ ಎಂಬುವರು ಇದನ್ನು ಉಲ್ಲೇಖಿಸಿರುವ ಮಾಹಿತಿ ಇದೆ. ಜಕ್ಕಯ್ಯ ಎಂಬ ರೂವಾರಿಯು ಉದ್ದರೆಯ ಚಾವುಂಡೋಜನ ಮಗನಾಗಿದ್ದಾನೆ. ಶಾಸನದಲ್ಲಿ ಉಲ್ಲೇಖವಿರುವ ಕುಪ್ಪಗಡ್ಡೆ ಗ್ರಾಮವು ಒಂದು ಪ್ರಾಚೀನ ಧಾರ್ಮಿಕ ನೆಲೆಯಾಗಿದ್ದು, ಶಾಸನಗಳು ಅನಾದಿ ಅಗ್ರಹಾರ ಎಂದಿವೆ.
ಎರಡನೇ ಗೋದಾನ ಕಲ್ಲಿನಲ್ಲಿ ಎಂಟು ಸಾಲಿನ ಶಾಸನ ಪಾಠವಿದ್ದು, ಕೊನೆಯ ಎರಡು ಸಾಲು ಅಳಿಸಿಹೋಗಿವೆ. ಹಾಯ ಗ್ರಾಮದ ಆಡಳಿತ ನೋಡಿಕೊಳ್ಳುತ್ತಿದ್ದ ಚಂದ್ರಾದಿತ್ಯ ಮತ್ತು ಆತನ ತಾಯಿ ಬಲುಯಬ್ಬೆಯರು ಕುಪ್ಪಗಡ್ಡೆಯ ಮಹಾಜನಗಳಿಗೆ ದಕ್ಷಿಣೆ ಸಹಿತ ಗೋದಾನ ನೀಡಿದ್ದಾರೆ. 3ನೇ ಗೋದಾನ ಕಲ್ಲಿನಲ್ಲಿ ಇರುವ ಅಂಶಗಳ ಬಗ್ಗೆ ಸ್ಪಷ್ಟ ಮಾಹಿತಿ ದೊರೆತಿಲ್ಲ.
ಈ ಮೂರು ಗೋದಾನದ ಕಲ್ಲುಗಳಲ್ಲಿ ಎರಡರಲ್ಲಿ ಶಾಸನ ಪಾಠ ಕೆತ್ತಲಾಗಿದೆ. ಬೃಹತ್ ಸಂಖ್ಯೆಯಲ್ಲಿ ಗೋವುಗಳನ್ನು ದಾನ ನೀಡಿದಾಗ ಅದರ ಸಂಕೇತವಾಗಿ ಈ ರೀತಿಯ ಕಲ್ಲುಗಳನ್ನು ನೆಡಲಾಗುತ್ತಿತ್ತು. ಈ ಗೋಸಾಸ ಕಲ್ಲುಗಳಲ್ಲಿ ಕಾಲದ ಉಲ್ಲೇಖವಿಲ್ಲ. ಲಿಪಿ ವಿನ್ಯಾಸದ ಆಧಾರದಲ್ಲಿ ಇವುಗಳು ಹತ್ತನೇ ಶತಮಾನದ ಅವಧಿಯವು ಎಂಬುದು ಸ್ಪಷ್ಟ. ಇಲ್ಲಿನ ಒಂದು ಗೋಸಾಸದಲ್ಲಿ ರಾಷ್ಟ್ರಕೂಟರ ಚಿಹ್ನೆ ನೇಗಿಲಿಗೆ ಹೂಡಿದ ಎತ್ತುಗಳು, ಮೂರು ಆಯಾಮದ ಮೀನಿನ ಚಿತ್ರ ಮತ್ತು ಕಳಸಗಳ ಸಂಕೇತಗಳಿವೆ. ಇದು ರಾಷ್ಟ್ರಕೂಟರು ಕೃಷಿಗೆ ನೀಡಿದ ಮಹತ್ವವನ್ನು ಸೂಚಿಸುತ್ತದೆ. ಗೋವುಗಳು ಕೃಷಿ ಮತ್ತು ಜೀವಂತ ಸಂಪತ್ತಿನ ಸಂಕೇತಗಳಾಗಿವೆ. ಮೀನು ನೀರಾವರಿಯ ಮತ್ತು ಕಳಸ ಸಮೃದ್ದಿಯ ಧ್ಯೋತಕವಾಗಿ ಚಿತ್ರಿಸಲ್ಪಟ್ಟಿವೆ ಎನ್ನಬಹುದು.
ರಾಷ್ಟ್ರಕೂಟರ ಅವಧಿಯಲ್ಲಿ ಗೋದಾನದ ಕಲ್ಲುಗಳು ಹೆಚ್ಚು ಕಂಡು ಬರುವುದರಿಂದ ಈ ಅವಧಿಯಲ್ಲಿ ಗ್ರಾಮಗಳನ್ನು ಗೋದಾನದ ಮೂಲಕ ಶ್ರೀಮಂತಗೊಳಿಸಿ ಕೃಷಿ ಮತ್ತು ನೀರಾವರಿಯ ಅಭಿವೃದ್ಧಿಗೆ ಪ್ರೋತ್ಸಾಹ ನೀಡಿದ್ದು ಸ್ಪಷ್ಟವಾಗುತ್ತದೆ. ಸೊರಬ ತಾಲ್ಲೂಕಿನಲ್ಲಿ ಇಂತಹ ಅನೇಕ ಗೋಸಾಸ ಕಲ್ಲುಗಳು ಕಂಡುಬರುತ್ತವೆ. ಈ ಶಾಸನಗಳ ವಿಶೇಷವೆಂದರೆ ಗೋದಾನದಲ್ಲಿ ಸ್ತ್ರೀಯರೂ ಕೈಜೋಡಿಸಿರುವುದು.
ಗೋದಾನಕ್ಕೆ ಸಂಬಂಧಿಸಿದ ಕಲ್ಲುಗಳನ್ನು ಗೋಸಾಸಗಲ್ಲುಗಳು ಎಂದು ಕರೆಯಲಾಗಿದೆ. ಕೆಲವು ಕಡೆ ಮೇಂಟಿ ಎಂದು ಉಲ್ಲೇಖಗೊಂಡಿವೆ. ಇವು ಕನ್ನಡ ಶಾಸನಗಳಲ್ಲಿಯೇ ವಿಶಿಷ್ಠವೆನಿಸಿದ್ದು, ‘ಗೋಸಹಸ್ರ’ ಸಂಸ್ಕೃತ ಪದದ ತದ್ಭವ ‘ಗೋಸಾಸ’ ವಾಗಿದೆ. ಸಾವಿರ ಗೋವುಗಳ ದಾನವೇ ಗೋಸಾಸ. ಷೋಡಶ ದಾನಗಳಲ್ಲಿ ಗೋದಾನವೂ ಪ್ರಮುಖವಾಗಿದೆ ಎನ್ನುತ್ತಾರೆ ಸಂಶೋಧಕರು.
‘ದೇಗುಲದಲ್ಲಿ ವಿಗ್ರಹಗಳ ಸಂರಕ್ಷಣೆ’
ಸೊರಬ ತಾಲ್ಲೂಕು ರಾಷ್ಟ್ರಕೂಟರ ಕಾಲದ ಅನೇಕ ಕುರುಹುಗಳನ್ನೊಳಗೊಂಡಿದೆ. ಈಗ ಹಾಯದಲ್ಲಿ ದೊರೆತಿರುವ 10ನೇ ಶತಮಾನದ ಶಾಸನಗಳು ಕೂಡ ಗಮನಿಸುವಂತಿವೆ. ಹಾಯ ಬೆಟ್ಟದ ಕೂರ್ಲಿ ಪ್ರದೇಶದಲ್ಲಿ ದೊರೆತ ಚತುರ್ವಿಂಶತಿ ತೀರ್ಥಂಕರರ ವಿಗ್ರಹ ಹಾಗೂ 6-7ನೇ ಶತಮಾನದ್ದೆನ್ನಬಹುದಾದ ಗಜಲಕ್ಷ್ಮೀ ಫಲಕ ಅಲ್ಲಿನ ಪ್ರಾಚೀನತೆಯನ್ನು ಸೂಚಿಸಿದೆ. ಪ್ರಸ್ತುತ ಈ ವಿಗ್ರಹಗಳನ್ನು ಕುಪ್ಪಗಡ್ಡೆ ರಾಮೇಶ್ವರ ದೇಗುಲದಲ್ಲಿ ಸಂರಕ್ಷಿಸಲಾಗಿದೆ ಎಂದು ಇತಿಹಾಸ ಸಂಶೋಧಕ ಶ್ರೀಪಾದ ಬಿಚ್ಚುಗತ್ತಿ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.